ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Friday, June 20, 2014

ಬೆಂಗಳೂರು ಮಾಫಿಯಾ


ಅದೆಷ್ಟೋ ವರ್ಷಗಳಿಂದ ಭೇಟಿಯಾಗಿರದಿದ್ದ ಕೊಳ್ಳೇಗಾಲದ ಕಾಲೇಜು ಗೆಳೆಯ ಬಸವರಾಜಪ್ಪ ಏಕಾಏಕಿ ಬಂದು ಎದುರಿಗೆ ನಿಂತಾಗ ನನಗೆ ಗುರುತೇ ಹತ್ತಲಿಲ್ಲ.
ಕನ್ನಡದಲ್ಲಿ ಕಥೆ ಬರೆಯುವ ಗೀಳು ಹತ್ತಿಸಿಕೊಂಡಿದ್ದರೂ ಕರ್ನಾಟಕದಿಂದ ಹೊರಗೇ ಓಡಾಡಿಕೊಂಡಿರುವ ಕಾರಣದಿಂದಾಗಿ ಸಾಹಿತ್ಯ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುವುದೇ ಅಪರೂಪ.  ನನ್ನ ಪುಸ್ತಕ ಬಿಡುಗಡೆ ಸಮಾರಂಭಗಳಿಗೂ ಹೋಗಲಾಗಿರಲಿಲ್ಲ.  ಪ್ರಕಟಿಸಿದ ತಪ್ಪಿಗೆ ಎಲ್ಲವನ್ನೂ ಪ್ರಕಾಶಕರೇ ಮಾಡಿ ಮುಗಿಸಿ ನನಗೂ ಒಂದಷ್ಟು ಪ್ರತಿಗಳನ್ನು ಕಳುಹಿಸುತ್ತಿದ್ದರು.  ಆದರೆ ಈ ಸಲ ನಾನಿಲ್ಲದೇ ಅಗುವುದೇ ಇಲ್ಲವೆಂದು ಅವರು ಹಠ ಹಿಡಿದಾಗ, ಅದಕ್ಕೆ ಸರಿಯಾಗಿ ಮಗನಿಗೂ ಛಳಿಗಾಲದ ರಜೆಯಿದ್ದ ಕಾರಣ ಮೂವರೂ ಮೈಸೂರಿಗೆ ಹೊರಟೆವು.  ಗಿರಿಜೆಯನ್ನೂ, ಪುಟ್ಟುವನ್ನೂ ಮೈಸೂರಲ್ಲಿ ಬಿಟ್ಟು ಮಾರನೆಯ ಬೆಳಿಗ್ಗೆಬೆಳಿಗ್ಗೆಯೇ ಅಕ್ಕನ ಕಾರ್ ತೆಗೆದುಕೊಂಡು ಬೆಂಗಳೂರಿಗೆ ಹೊರಟು ಒಂಬತ್ತಕ್ಕೆಲ್ಲ ಪ್ರಕಾಶಕರ ಮನೆ ತಲುಪಿದೆ.  ಅಲ್ಲೇ ಅವರ ಜತೆಯೇ ತಿಂಡಿ ಮುಗಿಸಿ ಅವರು ಹೊರಟಾಗ ಹಿಂಬಾಲಿಸಿ ಸಭಾಂಗಣ ಸೇರಿ ವೇದಿಕೆಯ ಮೇಲೆ ಕೂತಾಗ ಯಾವುದೋ ಬೇರೆ ಲೋಕಕ್ಕೆ ಬಂದಂತಾಗಿತ್ತು.  ಎಲ್ಲ ಒಂಥರಾ ಕನಸಿನ ಹಾಗೆ.
ನನ್ನ ಪುಸ್ತಕದ ಜತೆ ಮತ್ತೆ ಬೇರೆ ಬೇರೆ ಲೇಖಕರ ಮೂರು ನಾಲ್ಕು ಪುಸ್ತಕಗಳು ಬಿಡುಗಡೆಗಿದ್ದವು.  ಭಾಷಣಗಳಿಗೆ ಚಪ್ಪಾಳೆ ತಟ್ಟಿ, ಕುಂದಾಪುರದಿಂದ ಬಂದಿದ್ದ ಹಿರಿಯ ಸಾಹಿತಿಯೊಬ್ಬರು ನನ್ನ ಕಥಾಸಂಕಲನದ ಬಗ್ಗೆ ಆಡಿದ ಮೆಚ್ಚುಗೆಯ ಮಾತುಗಳಿಂದ ಬೆನ್ನು ತಟ್ಟಿಸಿಕೊಂಡು ಬೀಗುತ್ತಾ ವೇದಿಕೆಯಿಂದ ಕೆಳಗಿಳಿದಾಗ ನನಗೇ ಕಾದಿದ್ದವನಂತೆ ಜನರನ್ನು ತಳ್ಳಿಕೊಂಡು ಓಡಿಬಂದು ಭುಜಗಳ ಸುತ್ತ ಕೈ ಹಾಕಿ “ನನ್ನ ನೆನಪಿದೆಯಾ?” ಅಂತ ಅವನು ಬಾಯಿ ತುಂಬಾ ಕೇಳಿದಾಗ ಕ್ಷಣ ಗಲಿಬಿಲಿಯಾದರೂ ಮರುಕ್ಷಣ ಅವನ ಗುರುತು ಹತ್ತಿ “ಬಸವಣ್ಣಾ!  ನೀನಾ!” ಎನ್ನುತ್ತಾ ನಾನೂ ಅವನ ಭುಜಗಳ ಮೇಲೆ ಕೈಯಿಟ್ಟೆ.  “ಅಹ್ಹಾ, ನನ್ನನ್ನ ಮರೆತಿಲ್ಲ ನೀನು!” ಎನ್ನುತ್ತಾ ಬಿಗಿಯಾಗಿ ತಬ್ಬಿಕೊಂಡೇಬಿಟ್ಟ.
ಅವನನ್ನು ಮರೆಯುವುದಾದರೂ ಹೇಗೆ?
ಕೊಳ್ಳೇಗಾಲದ ಎಂಜಿಎಸ್‌ವಿ ಜ್ಯೂನಿಯರ್ ಕಾಲೇಜಿನಲ್ಲಿ ಪಿಯುಸಿಗೆ ಸೇರಿದಾಗಿನಿಂದ ಮಹದೇಶ್ವರ ಕಾಲೇಜಿನಲ್ಲಿ ಬಿಎ ಮುಗಿಸುವವರೆಗೆ ಇಡೀ ಐದುವರ್ಷ ಪಕ್ಕದಲ್ಲಿ ಕೂತ ಸಹಪಾಠಿ; ನಗುತ್ತಾ, ಛೇಡಿಸುತ್ತಾ, ಬೈಯುತ್ತಾ, ತಿದ್ದುತ್ತಾ ಜಗತ್ತಿನ ಬಣ್ಣಗಳನ್ನು ಗುರುತಿಸಲು ಕಲಿಸಿದ ಗುರುವಿನಂಥ ಗೆಳೆಯ.
ಕೊಳ್ಳೇಗಾಲದಲ್ಲಿ ಬಿಎ ಮುಗಿದ ಮೇಲೆ ನಮ್ಮ ಬದುಕಿನ ದಾರಿಗಳು ಕವಲಾಗಿಹೋದವು.  ಅವನು ಗಂಗೋತ್ರಿಯಲ್ಲಿ ಇಂಗ್ಲಿಷ್ ಎಂಎಗೆ ಸೇರಿದರೆ ನಾನು ಅಕ್ಕನ ಆಹ್ವಾನವನ್ನು ಖುಷಿಯಿಂದ ಒಪ್ಪಿಕೊಂಡು ದೆಹಲಿ ಸೇರಿದೆ.  ಒಂದೆರಡು ವರ್ಷಗಳವರೆಗೆ ಪತ್ರವ್ಯವಹಾರ, ಎರಡುಮೂರು ವರ್ಷಗಳಿಗೊಮ್ಮೆ ಕೆಲನಿಮಿಷಗಳ ಭೇಟಿ...  ಹದಿನೈದು - ಹದಿನಾರು ವರ್ಷಗಳಿಂದ ಅದೂ ಇಲ್ಲ.  ಅವನು ಎಲ್ಲಿಗೆ ಹೋದ ಏನಾದ ಎನ್ನುವ ಸುದ್ಧಿಯೂ ತಿಳಿಯಲಿಲ್ಲ.  ಆಗೊಮ್ಮೆ ಈಗೊಮ್ಮೆ ಅವನ ನೆನಪಾದರೂ ಅದು ಕ್ಷಣಿಕವಾಗಿರುತ್ತಿತ್ತು.
ಪುಸ್ತಕ ಕೊಂಡ ಒಂದಿಬ್ಬರು ನನ್ನ ಸಹಿಗಾಗಿ ಹತ್ತಿರ ಬಂದಾಗ ಬಸವಣ್ಣ ಪಕ್ಕಕ್ಕೆ ಸರಿದು ನಿಂತ.  ಹತ್ತಿರ ಬಂದ ಪ್ರಕಾಶಕರು “ಈಗಿನ್ನೂ ಹನ್ನೆರಡೂವರೆ.  ಸಣ್ಣಪುಟ್ಟ ಶಾಪಿಂಗು ಗೀಪಿಂಗು ಅಂಥದೇನಾದ್ರೂ ಇದ್ರೆ ಮುಗಿಸ್ಕೊಂಡು ಒಂದೂವರೆ-ಎರಡಕ್ಕೆಲ್ಲಾ ಮನೆಗೆ ಬಂದುಬಿಡಿ.  ಅಷ್ಟೊತ್ತಿಗೆ ನಾನೂ ಇಲ್ಲಿನ ಕೆಲವು ರಗಳೆಗಳನ್ನ ಮುಗಿಸ್ಕೊಂಡು ಬಂದಿರ್ತೀನಿ.  ಒಟ್ಟಿಗೆ ಊಟ ಮಾಡೋಣ” ಅಂದರು.  “ಊಟ ಗೀಟ ಏನೂ ಬೇಡ ಸರ್.  ಮೈಸೂರಿಗೆ ಹೊರಟುಬಿಡ್ತೀನಿ” ಅಂದೆ.  ಅವರಿಗೆ ಕೇಳಿಸಲಿಲ್ಲವೆನಿಸುತ್ತದೆ.  ಜೇಬಿನಲ್ಲಿ ಮೊಳಗಿದ ಫೋನೆತ್ತಿ ಕಿವಿಗಿಟ್ಟುಕೊಂಡು “ಹ್ಞೂಂ ಹೇಳ್ರೀ” ಎನ್ನುತ್ತಲೇ ಮತ್ಯಾರದೋ ತೋಳು ಹಿಡಿದುಕೊಂಡು ಅತ್ತ ಹೋದಾಗ ನನ್ನ ಕಡೆ ಕೀಟಲೆಯ ನಗೆ ಬೀರಿದ ಬಸವಣ್ಣ.  “ಯಾವ ಸೀಮೆ ಶಾಪಿಂಗು ಬಿಡು.  ನಿಮ್ಮ ಆ ಡೆಲ್ಲೀಲಿ ಸಿಗದ್ದು ಇಲ್ಲೇನು ಸಿಗುತ್ತೆ!  ನಡೆ ಮನೆಗೆ” ಎನ್ನುತ್ತಾ ತೋಳು ಹಿಡಿದ.
ಅಲ್ಲಿದ್ದ ಬೇರಾರೂ ನನಗೆ ಪರಿಚಯ ಇರಲಿಲ್ಲ.  ಹೆಚ್ಚಿನ ಜನ ಹೊರಟುಹೋಗಿ ಉಳಿದವರು ಅಲ್ಲಲ್ಲಿ ಪುಟ್ಟಪುಟ್ಟ ಗುಂಪುಗಟ್ಟಿಕೊಂಡು ನಿಂತಿದ್ದರು.  ಖುಶಿಯಿಂದಲೇ ಬಸವಣ್ಣನ ಜತೆ ಹೆಜ್ಜೆ ಹಾಕಿದೆ.  ಹೊರಗೆ ಬಿಸಿಲಲ್ಲಿ ನಿಂತಿದ್ದ ಅವನ ಬೈಕ್ ತಲುಪುವುದರಲ್ಲಿ ಮೈಸೂರು, ಚಾಮರಾಜನಗರ, ಸಿರಗುಪ್ಪಾ, ಮುಳಬಾಗಲುಗಳ ಪಾಳಿ ಮುಗಿಸಿ ಎಂಟು ತಿಂಗಳ ಹಿಂದೆ ಬೆಂಗಳೂರಿನ ಕಾಲೇಜಿಗೆ ವರ್ಗವಾದದ್ದನ್ನು ಚುಟುಕಾಗಿ ಆದರೆ ಅದೇ ಹಿಂದಿನ ಗಟ್ಟಿದನಿಯಲ್ಲಿ ಹೇಳಿದ.
"ಹತ್ತೋ ಹತ್ತೋ" ಎನ್ನುತ್ತಾ ಅವನು ಬೈಕ್ ಸ್ಟಾರ್ಟ್ ಮಾಡಿದಾಗ “ನಿನ್ನನ್ನ ಫಾಲೋ ಮಾಡ್ತೀನಿ” ಎನ್ನುತ್ತಾ ನನ್ನ ಕಾರ್‌ನತ್ತ ಬೆರಳು ತೋರಿದೆ.  ಕ್ಷಣ ಪೆಚ್ಚಾದವನು ಮರುಕ್ಷಣ ಚೇತರಿಸಿಕೊಂಡು “ಇಲ್ಲೇ ಇರಲಿ ಬಿಡೋ.  ಹೇಗೋ ಅದಕ್ಕೆ ಪಾರ್ಕಿಂಗ್‌ಗೆ ಭರ್ಜರಿ ಜಾಗಾನೇ ಸಿಕ್ಕಿದೆ.  ನಮ್ಮನೆ ಬೀದೀಗೆ ಹೋದ್ರೆ ಹಿಂದಕ್ಕೂ ಬರಕ್ಕಾಗಲ್ಲ, ಮುಂದಕ್ಕೂ ಹೋಗಕ್ಕಾಗಲ್ಲ.  ಅದ್ಯಾಕೆ ಆ ಫಜೀತಿ!  ಅದನ್ನ ಇಲ್ಲೇ ಬಿಟ್ಟು ಹತ್ತು ನನ್ ಬೈಕ್‌ನ.  ಆಮೇಲೆ ಇಲ್ಲಿಗೇ ಕರಕೊಂಡು ಬಂದು ಬಿಡ್ತೀನಿ.  ಸಾಯಂಕಾಲ ಇಲ್ಲಿ ಮತ್ತೊಂದು ಪ್ರಹಸನ ಇದೆ.  ಅದರಲ್ಲಿ ನನ್ನದು ವಿದೂಷಕನ ಪಾತ್ರ” ಅಂದ.  ಅರ್ಥವಾಗದೇ ಹುಬ್ಬೇರಿಸಿದೆ.  “ಇನ್ನೊಂದು ಪುಸ್ತಕ ಬಿಡುಗಡೆ ಸಮಾರಂಭ ಅಷ್ಟೇ.  ಪುಸ್ತಕ ಪರಿಚಯ ಮಾಡೋ ಕರ್ಮ ನಂದು” ಎನ್ನುತ್ತಾ ಗಹಗಹಿಸಿ ಬುಲೆಟ್ಟನ್ನು ಘುಡುಗುಟ್ಟಿಸಿದ.  ಮಾತಿಲ್ಲದೇ ಪಿಲಿಯನ್ ಏರಿದೆ.  ಮುಖ್ಯರಸ್ತೆಗಳನ್ನು ದಾಟಿ ಕಿರಿದಾದ ರಸ್ತೆಗಿಳಿಯುತ್ತಿದ್ದಂತೇ ಬುಲೆಟ್‌ನ ಢಮಢಮವನ್ನೂ ಮೀರಿಸಿ ದನಿ ತೆಗೆದ: “ನೀನೂ ಕಥೆ ಬರೀತೀಯಾ ಅಂತ ನಂಗೆ ಗೊತ್ತಾದದ್ದೇ ಇತ್ತೀಚೆಗೆ ಕಣೋ.  ನಾಕೈದು ಕಥೆಗಳಲ್ಲಿ ಕೊಳ್ಳೇಗಾಲದ ಪ್ರಸ್ತಾಪ ಮತ್ತೆಮತ್ತೆ ಬಂದದ್ದನ್ನ ನೋಡಿ ಕುತೂಹಲವಾಗಿ ಹೆಸರಿನ ಮೇಲೆ ಕಣ್ಣು ನೆಟ್ಟು ತಲೆ ಕೆರೆದುಕೊಂಡೆ.  ನಂಗೆ ನಂಬಿಕೆಯೇ ಆಗ್ಲಿಲ್ಲ.  ಪಾಠದ ಪುಸ್ತಕ ಬಿಟ್ಟು ಬೇರೆ ಒಂದು ಹಾಳೇನೂ ಮುಟ್ಟದ ನೀನು ಕಥೆ ಬರೆಯೋಕೆ ಶುರು ಮಾಡಿದ್ದು ಹ್ಯಾಗೆ ಅಂತ ನಂಗಂತೂ ಆಶ್ಚರ್ಯ.  ಅನುಮಾನ ಸಹಾ.  ಆ ಆನುಮಾನದ ಪರಿಹಾರಕ್ಕಾಗೇ ಈವತ್ತು ಫಂಕ್ಷನ್‌ಗೆ ಬಂದದ್ದು ನಾನು.”  ಮುಂದಕ್ಕೆ ಮೈ ಬಾಗಿಸಿಕೊಂಡು ನಕ್ಕ.  “ನಾನು ಕಥೆ ಬರೆಯೋಕೆ ಶುರು ಮಾಡಿದ್ದೇ ಇತ್ತೀಚೆಗೆ ಮಾರಾಯಾ” ಅಂದೆ ನಗುತ್ತಾ.  “ಅಂಯ್ಞ್!” ಅಂದ.  “ನನ್ನಲ್ಲೂ ಕಥೆಗಳಿವೆ ಅಂತ ಕಾಲೇಜಿನಲ್ಲಿದ್ದಾಗಲೇ ನಂಗೆ ಅನುಮಾನ ಆಗಿತ್ತು.  ಸಂಕೋಚದಲ್ಲಿ ನನ್ನೊಳಗೇ ಇಟ್ಕೊಂಡೆ.  ಆಮೇಲೆ ಏನೇನೋ ಒತ್ತಡ, ಗಡಿಬಿಡಿಯಲ್ಲಿ ಎಷ್ಟೋ ವರ್ಷ ಅವನ್ನೆಲ್ಲಾ ಬರೀಲಿಕ್ಕೇ ಆಗಲೇ ಇಲ್ಲ.  ಒಂಥರಾ ನಿರಾಸಕ್ತಿ ಅಂದರೂ ಸರಿಯೇ.  ಕೊನೆಗೆ ಹೆಂಡತಿಯ ಕಾಟ ತಡೆಯಲಾರದೇ ಐದಾರು ವರ್ಷಗಳ ಹಿಂದೆ ಒಂದೆರಡು ಕಥೆ ಬರೆದೆ.  ಡಿಟಿಪಿ ಮಾಡಿ ಪತ್ರಿಕೆಗಳಿಗೆ ಕಳಿಸಿದ್ದೂ ಆವಳೇ.  ಏನೋ ಅದೃಷ್ಟ, ಕಣ್ಣುಮುಚ್ಚಿ ತೆರೆಯೋವಷ್ಟರಲ್ಲಿ ಅವು ಪ್ರಕಟವಾಗಿ ಒಂದಷ್ಟು ಜನ ಮೆಚ್ಚಿಕೊಂಡಾಗ ಬರೆಯೋ ಉತ್ಸಾಹ ನಂಗೂ ಬಂತು.  ಆವಾಗ್ನಿಂದ ನಿಲ್ಲಿಸಿಯೇ ಇಲ್ಲ.  ನಿಲ್ಲಿಸೋಕೆ ಆಗ್ತಾನೂ ಇಲ್ಲ” ಎನ್ನುತ್ತಾ ಮತ್ತೊಮ್ಮೆ ನಕ್ಕೆ.  “ನಿಜ ನಿಜಾ.  ಎರಡಕ್ಕೇ ಹೋಗೋದನ್ನೂ ತಡಿಬೋದು.  ಬರಿಯೋದನ್ನ ಒಂದು ಗಳಿಗೇನೂ ತಡೆಯೋಕಾಗಲ್ಲ” ಎನ್ನುತ್ತಾ ಗಹಗಹಿಸಿದ.  “ನನ್ನ ವಿಮರ್ಶೆಗಳನ್ನ ಓದ್ತಿದೀಯೇನೋ?” ಅಂದವನು ನಾನು ಯೋಚಿಸುವುದಕ್ಕೂ ಮೊದಲೇ “ವಿಮರ್ಶೆ ನಿಂಗೆ ಒಂಚೂರೂ ಅರ್ಥ ಆಗ್ತಾ ಇರ್ಲಿಲ್ಲ.  ಈಗ ಒಂದಷ್ಟು ಇಂಪ್ರೂವ್ ಆಗಿದ್ದೀಯಾ ಅನ್ನೋ ನಂಬಿಕೆ ನಂಗಿಲ್ಲ” ಅಂದವನು ಗಕ್ಕನೆ ಬ್ರೇಕ್ ಹಾಕಿ “ಮನೆ ಬಂತು ಕಣೋ” ಅಂದ.  ಒಂದೆರಡು ಸಲ "ಕೀಂಯ್ ಕೀಂಯಾ" ಎಂದು ಕರ್ಕಶವಾಗಿ ಹಾರ್ನ್ ಬಾರಿಸಿ ತನ್ನ ಆಗಮನವನ್ನು ಇಡೀ ಬಡಾವಣೆಗೇ ಸಾರಿದ.  ಹಿಂದಿನ ಅದೇ ಉತ್ಸಾಹ, ಉಮೇದು, ಆತುರ.
“ಕಥೆ ಬರೆಯೋದು ಬಿಟ್ಟು ಲಿಟರೇಚರ್ ಬಗ್ಗೆ ಮತ್ತೇನೂ ನಂಗೆ ಗೊತ್ತಿಲ್ಲ ಬಸವಣ್ಣಾ.  ನನ್ನ ಕಥೆಗಳ ವಿಮರ್ಶೆ ಮಾಡು ಅಂದ್ರೂ ನನ್ ಕೈಲಾಗಲ್ಲ.  ನೀವು ವಿಮರ್ಶಕರು ಉಪಯೋಗಿಸೋ ಜಾರ್ಗನ್ಸ್, ಯಾವುದನ್ನ ಯಾವುದಕ್ಕೋ ತಳುಕುಹಾಕೋ ಉದ್ದುದ್ದದ ಸೆಂಟೆನ್ಸ್ ನಂಗೆ ಈಗಲೂ ತಲೆನೋವು ತಂದ್ಬಿಡುತ್ತೆ” ಎನ್ನುತ್ತಾ ಅವನನ್ನು ಹಿಂಬಾಲಿಸಿ ಮನೆಯೊಳಗೆ ಕಾಲಿಟ್ಟೆ.
ಅಲ್ಲಾಗಲೇ ಒಬ್ಬರು ಕುಳಿತಿದ್ದರು.  ಜೀನ್ಸ್ ಪ್ಯಾಂಟ್, ಜುಬ್ಬಾದಲ್ಲಿದ್ದ ಗುಂಡುಗುಂಡನೆಯ ಮಧ್ಯವಯಸ್ಕ.  ಬಸವಣ್ಣನನ್ನು ನೋಡಿ ದಢಕ್ಕನೆದ್ದು ನಿಂತು “ಹೆಹ್ಹೆಹ್ಹೇ” ಎನ್ನುತ್ತಾ ನಕ್ಕರು.  “ನಿಮ್ ಕೆಲಸ ಆಗಿದೇರಿ.  ಒಂದ್ನಿಮಿಷ ಕೂರಿ” ಎಂದು ಹೇಳಿ ಒಂದೆರಡು ಪದಗಳಲ್ಲಿ ನನ್ನ ಪರಿಚಯ ಮಾಡಿ ಕೈಲಿದ್ದ ನನ್ನ ಪುಸ್ತಕವನ್ನು ಅವರಿಗೆ ಕೊಟ್ಟು ಒಳಗೆ ಹೋದ ಬಸವಣ್ಣ.
ಅತ್ಯಂತ ವಿನಯದಿಂದ ಮುಂದೆ ಬಾಗಿ ಕೈನೀಡಿದ ಆತ ತಾನೊಬ್ಬ ಪ್ರಕಾಶಕ ಎಂದು ಪರಿಚಯಿಸಿಕೊಂಡು ಹೆಸರು ಹೇಳಿದಾಗ ನಾನು ದಂಗಾಗಿಹೋದೆ.  ಪ್ರತಿಷ್ಟಿತ ಪ್ರಕಾಶಕರು ಅವರು.  ಅವರ ಲಾಂಛನದಲ್ಲಿ ತಮ್ಮದೊಂದು ಕೃತಿ ಪ್ರಕಟವಾಗಬೇಕೆಂದು ನನಗೆ ಪರಿಚಯವಿದ್ದ ಹಲವರು ಬರಹಗಾರರು ನನ್ನಲ್ಲಿ ಹೇಳಿಕೊಂಡಿದ್ದುಂಟು.  ತಾವು ನಡೆಸಿದ ಕಾದಂಬರಿ ಸ್ಪರ್ಧೆಯೊಂದರ ತೀರ್ಪುಗಾರನನ್ನಾಗಿ ನಮ್ಮ ಬಸವಣ್ಣನನ್ನು ಹಿಡಿದಿದ್ದರು ಆತ.  ಆಯ್ಕೆಪಟ್ಟಿಯನ್ನು ಬಸವಣ್ಣ ಇಂದು ಕೊಡಬೇಕಾಗಿತ್ತಂತೆ.
“ನಿಮ್ಮ ಕಥಾಸಂಕಲನವಾ!  ಇಂದು ರಿಲೀಸ್ ಆದದ್ದೇನು?” ಎನ್ನುತ್ತಲೇ ಪುಸ್ತಕದ ಪುಟ ಮಗುಚಿದರು ಆ ಪ್ರಕಾಶಕರು.  “ಹೌದು ಸರ್” ಅಂದೆ ತುಸು ಹೆಮ್ಮೆಯಿಂದಲೇ.  ಪ್ರತಿಕ್ರಿಯೆಯಾಗಿ ಪ್ರಕಾಶಕ ಮಹಾಶಯರು ಲೊಚಗುಟ್ಟಿದರು: “ಮೊದಲ ಕಥೆಯನ್ನ ಮೊನ್ನೆ ತಾನೆ ಯಾವುದೋ ಮ್ಯಾಗಜೀನ್‌ಲಿ ಓದಿದೆ ಇವರೆ...”  ಚಣ ತಡೆದು ಮುಂದುವರೆಸಿದರು: “ಇಷ್ಟ ಆಗ್ಲಿಲ್ಲ.  ಅಲ್ಲಾ, ಈ ಪಾಲಿಟಿಕ್ಸೂ, ಟೆರರಿಸಮ್ಮು ಇದನ್ನೆಲ್ಲಾ ಕಥೆ ಯಾಕೆ ಮಾಡ್ತೀರಿ?  ನಾಕು ದಿನ ನಿಲ್ಲಲ್ಲ ಸಾರ್ ಇಂಥಾ ಕಥೆಗಳು.  ನೆಲದ ನೋವಿನ ಬಗ್ಗೆ ಬರೀರಿ ಸಾರ್.  ಸಂಪ್ರದಾಯ, ಸುಡುಗಾಡು, ರಿಲಿಜನ್ನು, ವಿಚಾರವಾದ ಅನ್ನೋವೆಲ್ಲಾ ಎಲ್ಲರಿಗೂ ಎಲ್ಲಾ ಕಾಲಕ್ಕೂ ಮುಖ್ಯ ಆಗೋದಿಲ್ಲ.  ಅದನ್ನೆಲ್ಲಾ ಅತ್ತ ಎಸೆದು ಹಸಿವಿನ ಬಗ್ಗೆ ಬರೀರಿ.  ಹಸಿವನ್ನ ಬಗೆಬಗೆಯಾಗಿ ಅನುಭವಿಸೋ ಪಾತ್ರಗಳ ಚಿತ್ರಣ ಕೊಡಿ.  ಅದು ಮಾತ್ರ ಶಾಶ್ವತ.  ಅಂಥಾ ಕಥೆಗಳು ಮಾತ್ರ ಶಾಶ್ವತ...”
“ಅಂದ್ರೆ ನಿಮ್ಮ ಅಭಿಪ್ರಾಯದಲ್ಲಿ ‘ಸಂಸ್ಕಾರ’ದ ಅತ್ಯಂತ ಅರ್ಥಪೂರ್ಣ ಪಾತ್ರ ದಾಸಾಚಾರ್ಯನದು!  ಅವನೇ ಅದರ ನಾಯಕ!  ಅವನ ಮುಂದೆ ಪ್ರಾಣೇಶಾಚಾರ್ಯರನ್ನ ನೀವಾಳಿಸಿ ಒಗೀಬೇಕು!”
ಬಸವಣ್ಣನ ದನಿ ಕೇಳಿ ಅತ್ತ ತಿರುಗಿದೆ.  ಪ್ರಕಾಶಕರು “ಹೆಹ್ಹೆಹ್ಹೇ” ಅಂದರು.  ಕರವಸ್ತ್ರದಿಂದ ಕೈಒರೆಸಿಕೊಳ್ಳುತ್ತಾ ಬಂದ ಬಸವಣ್ಣ ಮತ್ತೊಂದು ಕೋಣೆಗೆ ನುಗ್ಗಿದ.  ಅವನು ಹಿಂತಿರುಗುವವರೆಗೆ ಹಾಲ್‌ನಲ್ಲಿ ಮೌನವಿತ್ತು.  ಪ್ರಕಾಶಕರು ಸೂರಿಗೆ ತಲೆಯೆತ್ತಿದ್ದರು.  ನಾನು ಗೊಂದಲದಲ್ಲಿದ್ದೆ.
“ಏನು ಬರೀತಾರೋ ಸುಡುಗಾಡು.  ಯಾವ್ದಾದ್ರೂ ಒಂದನ್ನ ಸೆಲೆಕ್ಟ್ ಮಾಡಿ ಅಂತ ನೀವು ಉಡ ಹಿಡಿದ ಹಾಗೆ ಹಿಡಿದುಬಿಟ್ಟದ್ದಕ್ಕೆ ಏನೋ ಮಾಡಬೇಕಾಯ್ತು.  ತಗೊಳ್ಳಿ” ಎನ್ನುತ್ತಾ ಸ್ಟೇಪಲ್ ಮಾಡಿದ್ದ ಒಂದೆರಡು ಹಾಳೆಗಳನ್ನೂ ಹತ್ತಾರು ಹಸ್ತಪ್ರತಿಗಳನ್ನೂ ತಂದು ಟೀಪಾಯ್ ಮೇಲಿಟ್ಟ ಬಸವಣ್ಣ.  “ಹೆಹೆಹೇ.  ಥ್ಯಾಂಕ್ಯೂ ಥ್ಯಾಂಕ್ಯೂ ಸಾರ್” ಎನ್ನುತ್ತಾ ಆತುರಾತುರವಾಗಿ ಹಾಳೆಗಳನ್ನೆತ್ತಿಕೊಂಡು ಕಣ್ಣಾಡಿಸಿದ ಪ್ರಕಾಶಕರ ಮುಖ ಖುಶಿಯಿಂದ ಅರಳಿತು.  ಹಾಳೆಗಳನ್ನು ಮಡಿಸಿ ಹಸ್ತಪ್ರತಿಯೊಂದರೊಳಗಿಟ್ಟು ಅದನ್ನೂ ಉಳಿದ ಹಸ್ತಪ್ರತಿಗಳನ್ನೂ ಬ್ಯಾಗಿಗೆ ಸೇರಿಸುತ್ತಾ ಎದ್ದು ನಿಂತರು.  “ನಿಮ್ಮ ಮಾತುಗಳನ್ನ ಬಹುಮಾನಿತ ಕೃತಿಗೆ ಮುನ್ನುಡಿಯಾಗಿ ಬಳಸಿಕೊಳ್ತೀನಿ.  ಮೊದ್ಲೇ ಹೇಳಿದ್ದೀನಿ ಅಲ್ವಾ?  ಸಂಕ್ರಾಂತಿಗೆ ಬುಕ್ ರಿಲೀಸ್, ಪ್ರೈಸ್ ಡಿಸ್ಟ್ರಿಬ್ಯೂಷನ್ ಫಂಕ್ಷನ್ ಇಟ್ಕೊಳ್ಳೋಣ.  ಡೇಟು ಟೈಮು ಮುಂದಾಗಿಯೇ ತಿಳಿಸ್ತೀನಿ” ಎನ್ನುತ್ತಾ ಬಾಗಿಲತ್ತ ತಿರುಗಿದರು.
ಅವರು ಹೋದಮೇಲೆ ಬಸವಣ್ಣ “ಹೋಯ್” ಎಂದು ಕೂಗು ಹಾಕಿದವನು ಛಕ್ಕನೆ ದನಿ ತಗ್ಗಿಸಿ ಮುಖವರಳಿಸಿ “ನಲ್ಲೇ ಎಲ್ಲಿರುವೇ?  ಮನವ ಕಾಡುವ ರೂಪಸಿಯೇ” ಎಂದು ರಾಗವಾಗಿ ಹಾಡಿದ.  ಎರಡು ದಶಕಗಳ ಹಿಂದಿನ ಒಂದು ಸಂಜೆ ಕಾಲೇಜು ಸಹಪಾಠಿ ಸೀತಾಲಕ್ಷ್ಮಿಯ ಹಿಂದೆ ಇದೇ ಹಾಡು ಹೇಳುತ್ತಾ ಹೋಗುತ್ತಿದ್ದ ಅವನ ಚಿತ್ರ ಛಕ್ಕನೆ ಕಣ್ಣಮುಂದೆ ಬಂದು ನನ್ನ ಮುಖದಲ್ಲೂ ನಗೆ ಹರಡಿಕೊಳ್ಳುತ್ತಿದ್ದಂತೇ ಒಳಬಾಗಿಲಲ್ಲಿ ಅವನ ಹೆಂಡತಿ ಕಾಣಿಸಿಕೊಂಡಳು.
ಅವಳು ಬೆಳ್ಳಗಿದ್ದಳು.  ನಮ್ಮ ಜಾತಿಯವಳಲ್ಲ ಅನಿಸಿತು.  ಅವನಿಗಿಂತ ಬಹಳ ಚಿಕ್ಕವಳು ಅಂತಲೂ ಅನಿಸಿತು.
"ನಿನಗೆ ಹೇಳ್ತಾ ಇದ್ದೆನಲ್ಲಾ, ನಮ್ಮೂರಿನ ದೋಸ್ತ್, ಈಗೆಲ್ಲೋ ಮಾಯವಾಗಿಬಿಟ್ಟಿದ್ದಾನೆ ಅಂತ, ಅವನೇ ಇವನು" ಎನ್ನುತ್ತಾ ನನ್ನನ್ನು ಆಕೆಗೆ ಪರಿಚಯಿಸಿದ.  ಸ್ನೇಹಯುತ ನಗೆಯರಳಿಸಿ ಕೈಮುಗಿದವಳ ಭುಜದ ಮೇಲೆ ಕೈಹಾಕಿ "ಇವಳು ನನ್ ಸ್ಟೂಡೆಂಟ್ ಕಣೋ.  ನಿಮ್ಮನ್ನೇ ಮದುವೆಯಾಗ್ತೀನಿ ಅಂತ ಹಿಂದೆ ಬಿದ್ಲು.  ಏನೋ ಬಡಪಾಯಿ ಬದುಕ್ಕೊಳ್ಲಿ ಅಂತ ತಾಳಿ ಕಟ್ಟಿಬಿಟ್ಟೆ" ಎನ್ನುತ್ತಾ ನಗೆಯಾಡಿದ.  ಅವಳು ಬಿಡಲಿಲ್ಲ.  "ಹಂಗೇನೂ ಇಲ್ಲಾ ಇವರೇ.  ನಿಮ್ ಲೇಖನ ಚೆನ್ನಾಗಿದೆ ಸಾರ್ ಅಂತ ಏನೋ ಬಾಯಿ ತಪ್ಪಿ ಒಂದ್ಸಲ ಹೇಳಿದ್ದೇ ಇವ್ರು ನನ್ನ ಬೆನ್ನುಹತ್ತಿಬಿಡೋದಾ!  ಬರೆದದ್ದನ್ನೆಲ್ಲಾ ತಂದು ನನ್ ಮುಂದೆ ಗುಡ್ಡೆ ಹಾಕಿ ಓದು ಓದು ಅಂತ ಪೀಡಿಸೋಕೆ ಶುರು ಮಾಡಿಬಿಟ್ರ್ರು.  ಎರಡು ಓದೋವಷ್ಟರಲ್ಲಿ ಇನ್ನೂ ಹತ್ತು ತಂದು ಮುಂದೆ ಹಿಡೀತಿದ್ರು.  ಇದನ್ನೆಲ್ಲಾ ಓದಬೇಕಾದ್ರೆ ಹಗಲೂ ರಾತ್ರಿ ಇವರ ಮನೇಲೇ ಇವರ ಜತೇಲಿ ಇದ್ರೆ ಮಾತ್ರ ಸಾಧ್ಯ ಅನಿಸಿಬಿಡ್ತು" ಎನ್ನುತ್ತಾ ಆಕೆ ನಗತೊಡಗಿದಳು.  ನನಗೂ ನಗೆ ಉಕ್ಕಿ ಬಂದು ಮನಸ್ಸು ನಿರಾಳವಾಯಿತು.
"ಇವಳೂ ಸೊಗಸಾಗಿ ಕಥೆ ಬರೀತಾಳೆ ಕಣೋ.  ಮೊನ್ನೆ ಒಂದು ದೀಪಾವಳಿ ಕಥಾಸ್ಪರ್ಧೆನಲ್ಲಿ ಇವಳ ಕಥೆಗೆ ಪ್ರೈಸ್ ಬಂತು."   ಹೆಂಡತಿಯ ಬೆನ್ನು ತಟ್ಟಿದ.
"ಹೌದಾ?  ರಿಯಲಿ ನೈಸ್.  ಕಂಗ್ರಾಟ್ಸ್ ಮೇಡಂ" ಅಂದೆ.  ಆಕೆ ಸಂಕೋಚ ಪಟ್ಟುಕೊಂಡಳು.  "ಅಂಥಾ ದೊಡ್ಡ ಪ್ರೈಸ್ ಏನೂ ಇಲ್ಲಾರೀ.  ಮೂರನೇ ಪ್ರೈಸ್ ಅಷ್ಟೇ.  ಇವ್ರು ಅದನ್ನೇ ದೊಡ್ಡದು ಅಂತ ಮನೆಗೆ ಬಂದೋರಿಗೆಲ್ಲಾ ಹೇಳ್ತಾರೆ."
"ಹೇಳಿಕೊಳ್ಳಬಾರದೇನು?  ನಾನು ಕೈ ಆಡಿಸಿದ್ದರಿಂದ ತಾನೆ ಅದಕ್ಕೆ ಥರ್ಡ್ ಪ್ರೈಸ್ ಬಂದದ್ದು?"  ಬಸವಣ್ಣ ಹೆಮ್ಮೆಯಿಂದ ಹೇಳಿದ.  ಮರುಕ್ಷಣ ದನಿ ತಗ್ಗಿಸಿ "ನಾನು ಕೈ ಹಾಕದೇ ಹೋಗಿದ್ರೆ ಅದಕ್ಕೆ ಫಸ್ಟ್ ಪ್ರೈಸೇ ಬರ್ತಿತ್ತು ಕಣೋ" ಅಂದ.  ಪೆಚ್ಚಾಗಿ ಅವನತ್ತಲೇ ನೋಡಿದ ನನ್ನ ಭುಜದ ಮೇಲೆ ತಟ್ಟುತ್ತಾ ಕೇಕೆ ಹಾಕಿದ.  “ಅರ್ಧರ್ಧ ಚಾಯ್ ಮಾಡೇ ಅರ್ಧಾಂಗೀ” ಎಂದಾಕೆಗೆ ಹೇಳಿ ನನ್ನನ್ನು ತೋಳು ಹಿಡಿದು ಪಕ್ಕದ ಕೋಣೆಯೊಳಗೆ ಎಳೆದುಕೊಂಡೇ ಹೋದ.
ಕೋಣೆಯ ತುಂಬಾ ಎಲ್ಲೆಲ್ಲೂ ಪುಸ್ತಕಗಳು, ನಿಯತಕಾಲಿಕಗಳು ತುಂಬಿಕೊಂಡಿದ್ದವು.  ಧೂಳು ಸಹಾ.  ಕೂರಲು ಸರಿಯಾದ ಜಾಗವೇ ಇರಲಿಲ್ಲ.  ಮಂಚದ ಮೇಲೆ ಹರಡಿದ್ದ ಪುಸ್ತಕಗಳನ್ನು ಅತ್ತಿತ್ತ ಸರಿಸಿ “ನೀನು ಆರಾಮವಾಗಿ ಕೂರು” ಎಂದು ನನಗೆ ಹೇಳಿ ತಾನು ಕೈಯಿಂದ ಸ್ಟೂಲೊಂದರ ಧೂಳು ಬಡಿದು ಕೂತ.  ಅಗಲದ ದಪ್ಪ ಪುಸ್ತಕವೊಂದನ್ನೆಳೆದು “ನೋಡೋ ನನ್ನ ಲೇಖನ ಬಂದಿದೆ” ಎಂದು ಪುಟ ತೆರೆದು ಮುಂದೆ ಹಿಡಿದ.
ಅವನ ಆಸಕ್ತಿಯ ಮಾಮೂಲಿನಂತೆ ಸಾಹಿತ್ಯವಿಮರ್ಶೆಗೆ ಸಂಬಂಧಿಸಿದ ಲೇಖನ.  ನನಗಂತೂ ಅರ್ಥವಾಗುವಂಥದ್ದಲ್ಲ.  ಸುಮ್ಮನೆ ಅಲ್ಲಲ್ಲಿ ಕಣ್ಣಾಡಿಸಿದೆ.  “ಹೇಗೆ ತೊಳೆದಿದ್ದೀನಿ ಅಲ್ವಾ?” ಅಂದ.  ನನ್ನ ಪೆಚ್ಚುನಗೆ ಕಂಡು ಪುಸ್ತಕ ಕಿತ್ತು ಪಕ್ಕಕ್ಕಿಟ್ಟ.  “ಅದೆಷ್ಟು ಅ ರೆಬೆಲ್ಲೋ, ಆಪರಂಜಿ, ಕಪೂರ್, ಮಹಾಜನ್ ಅಂತ ಓದ್ತೀಯೋ?  ನಮ್ಮ ದೇವ್ನೂರ್ ಮಾದೇವಣ್ಣ, ತೇಜಸ್ವಿ, ಲಂಕೇಶ, ಅನಂತ್ಮೂರ್ತಿ ಮೇಷ್ಟ್ರು ಅವರ ಲೇಖನಗಳನ್ನ ಓದೋ ಮಡ್ಡೀತಲೇ ಅಂತ ನೂರೊಂದ್ಸಲಾ ಹೇಳಿದ್ದೆ ನಿಂಗೆ.  ಯಾವತ್ತು ಕೇಳಿದ್ದೆ ನನ್ ಮಾತ್ನ!  ಎಲ್ಲೂ ಹೋಗಿ ನಿಂಗೆ ತೋರಿಸ್ತಿದೀನಲ್ಲಾ” ಎಂದು ಗೊಣಗಿ ಬಾಗಿಲತ್ತ ತಿರುಗಿ “ಚಾಯ್ ಆಯ್ತಾ ಛಾಯಾದೇವೀ?” ಎಂದು ಕೂಗಿದ.  ನನ್ನತ್ತ ತಿರುಗಿ “ಅಲ್ಲಾ, ನಾ ಏನು ಬರೆದಿದ್ದೀನಿ ಅಂದ್ರೆ, ಐ ಮೀನ್ ಕನ್ನಡ ಸಾಹಿತ್ಯಲೋಕದಲ್ಲಿ ಈವತ್ತು ಏನು ನಡೀತಾ ಇದೆಯಪ್ಪಾ ಅಂದ್ರೆ...” ಎಂದು ಶುರು ಮಾಡಿದವನು ಹೆಂಡತಿ ತಂದ ಚಾಯ್ ಲೋಟ ಎತ್ತಿಕೊಳ್ಳುತ್ತಲೇ ಮುಂದುವರೆಸಿದ: “ಇದೊಂಥರಾ ಮಾಫಿಯಾ ಕಣೋ.  ಬೆಂಗಳೂರು ಮಾಫಿಯಾ ಅನ್ನಬೋದು ಇದನ್ನ.  ಬೇರೆಬೇರೆ ಕಡೆಗಳಿಂದ ಬೆಂಗಳೂರಿಗೆ ಬಂದು ಸೇರಿಕೊಂಡಿರೋ ಕಥೆಗಾರರೆಲ್ಲಾ ಸೇರಿ ತಮ್ಮದೇ ಒಂದು ಗುಂಪು ಮಾಡ್ಕೊಂಡಿದ್ದಾರೆ.  ‘ನಿನ್ನ ಬೆನ್ನನ್ನ ನಾನು ಕೆರೀತೀನಿ, ನನ್ನ ಬೆನ್ನನ್ನ ನೀನು ಕೆರೀ’ ಅನ್ನೋದು ಈ ಗುಂಪಿನ ಧ್ಯೇಯವಾಕ್ಯ.  ಎಲ್ರೂ ಸೇರಿ ತಂತಮ್ಮ ಪುಸ್ತಕಗಳನ್ನ ಅದ್ದೂರಿ ಸಮಾರಂಭಗಳಲ್ಲಿ ಬಿಡುಗಡೆ ಮಾಡಿಕೊಳ್ತಾರೆ.  ನಾಕು ಜನ ಪುಟ ತಿರುಗಿಸಿ ನೋಡೋ ಮೊದಲೇ ಇವನ ಪುಸ್ತಕವನ್ನ ಅವನು, ಅವನ ಪುಸ್ತಕವನ್ನ ಇವನು ಹೊಗಳಿ ವಿಮರ್ಶೆ ಅಂತ ಬರೀತಾರೆ.  ಪುಸ್ತಕ ಬಿಡುಗಡೆ ಆಗೋ ದಿನವೇ ವಿಮರ್ಶೇನೂ ಬಂದದ್ದುಂಟು ಕಣಯ್ಯ, ಶುಕ್ರವಾರದ ಸಿನಿಮಾ ರಿಲೀಸ್‌ಗಳ ಹಾಗೆ.  ಇದೊಂಥರಾ ಕೆಟ್ಟ ಲಿಟರರಿ ಪಾಲಿಟಿಕ್ಸ್.  ಹೊಲಸು ರಾಜಕೀಯ.  ಈ ಡ್ರಾಮಾಗಳಿಗೆಲ್ಲಾ ಪ್ರಚಾರ ನೀಡೋ ಪತ್ರಿಕೆಗಳೇ ಇವೆ.  ಐದು ಕಾಪಿ ಮಾರಾಟವಾದ್ರೂ ‘ಟಾಪ್ ಟೆನ್’ ಅಂತ ಒಂದು ಹಸೀಹಸೀ ಬುರುಡೆ ಕಾಲಂನಲ್ಲಿ ಹಾಕಿಬಿಡ್ತವೆ.  ಹೊರ ಊರಿನಲ್ಲಿದ್ದುಕೊಂಡೂ ಇವರ ಗುಂಪಿಗೆ ಎಂಟ್ರೀ ಪಡೀಬೇಕಾದ್ರೆ ನೀನು ಒಂದೋ ಇವರಲ್ಲೊಬ್ಬನ ಹುಟ್ಟಿದೂರಿನ ಕಡೆಯವನಾಗಿರಬೇಕು ಅಥವಾ ಸೀರೆ ಸುತ್ಕೊಂಡಿರೋ ಹೆಂಗಸಾಗಿರಬೇಕು.  ಹುಟ್ಟಿದೂರಿನವರೂ ಆಗಿ ಜತೆಗೆ ಹೆಂಗಸೂ ಆಗಿದ್ರೆ ತತ್ಕಾಲ್‌ನಲ್ಲಿ ಎಂಟ್ರಿ ಟಿಕೆಟ್ ಸಿಕ್ಕಿಬಿಡತ್ತೆ...”
“ಅಪರೂಪಕ್ಕೆ ಬಂದಿದ್ದಾರೆ.  ಅವರ ಜತೆಗೆಲ್ಲಾ ಇದೇನು?  ಬೇರೇನಾದ್ರೂ ಮಾತಾಡಿ.”  ಆಕೆ ಸಣ್ಣಗೆ ದನಿ ಎಳೆದು ಅವನ ಮಾತಿಗೆ ಕಡಿವಾಣ ಹಾಕಲು ನೋಡಿದಳು.  “ಅಯ್ ಸುಮ್ನಿರು.  ನನ್ ದೋಸ್ತ್ ಇಂವ” ಎಂದು ಆಕೆಯತ್ತ ಕೈಯಾಡಿಸಿ “ಇದು ನಿನ್ನ ಎಷ್ಟನೆಯ ಕಥಾಸಂಕಲಾನೋ?” ಅಂದ ನನ್ನ ಕಥಾಸಂಕಲನದಿಂದಲೇ ನನ್ನ ಮಂಡಿಯ ಮೇಲೆ ಬಡಿಯುತ್ತಾ.  “ಆರನೇದು” ಅಂದೆ.  “ಹಹ್ಹಾ!” ಅಂದ ಏನೋ ವಿಜಯ ಸಾಧಿಸಿದವನಂತೆ.  “ಆರು ಕಥಾಸಂಕಲನಗಳನ್ನ ಪ್ರಕಟಿಸೀದಿಯ.  ನಿನ್ನ ಕಥೆಗಳನ್ನ ಓದಿದ್ದೀನಿ.  ಚೆನ್ನಾಗಿ ಬರೀತಿದೆ ಗೂಸಲು ಅಂತ ಖುಷಿ ಪಟ್ಟಿದ್ದೀನಿ.  ನಿನ್ನ ಬಗ್ಗೆ, ಐ ಮೀನ್ ನಿನ್ನ ಕಥೆಗಳ ಬಗ್ಗೆ ಅಲ್ಲಲ್ಲಿ ಬರೆದೂ ಇದ್ದೀನಿ.  ನೀನಂತೂ ಅದನ್ನ ನೋಡಿರಲ್ಲ.  ಇರಲಿ, ವಿಷಯ ಅದಲ್ಲ.  ನನ್ನ ಹೊರತಾಗಿ ಇನ್ಯಾವ ಹಿರಿಕಿರೀ ವಿಮರ್ಶಕನೂ ಈ ಕಾಲದ ಸಣ್ಣಕಥೆಗಳ ಬಗ್ಗೆ ಬರೆವಾಗ ನಿನ್ನ ಒಂದಾದರೂ ಕಥೆಯ ಪ್ರಸ್ತಾಪ ಮಾಡಲ್ಲ!  ಯಾಕೆ?  ಯಾಕಪ್ಪಾ ಅಂದ್ರೆ ಈ ಬೆಂಗ್ಲೂರು, ಧಾರವಾಡ ಅಂಥಾ ಕಡೆ ದಿನಬೆಳಗಾದ್ರೆ ಇವರ ಕೈಗೆ ಕಾಲಿಗೆ ನೀನು ತೊಡರೋದಿಲ್ಲ ಅದಕ್ಕೆ.  ಒಬ್ಬ ಕಥೆಗಾರನಾಗಿ ನೀನಿದನ್ನ ಸೀರಿಯಸ್ ಆಗಿ ತಗೋಳ್ಳೋದಿಲ್ಲ ಅಂದ್ರೆ ಈ ಫೀಲ್ಡ್‌ನಲ್ಲಿ ನಿಂಗೆ ಭವಿಷ್ಯ ಇಲ್ಲ” ಅಂದವನು ಪುಸ್ತಕವನ್ನು ಹೆಂಡತಿಯ ಮಡಿಲಿಗೆ ಹಾಕಿದ.  ನಾನು ಗಲಿಬಿಲಿಯಲ್ಲಿ ಕಣ್ಣುಕಣ್ಣುಬಿಡುತ್ತಿದ್ದಂತೇ “ಈವತ್ತೇನೋ ನಿನ್ ಪ್ರೋಗ್ರಾಮೂ?  ಇಲ್ಲೇ ಇರು.  ಇಲ್ಲೇ ಊಟ ಮಾಡು.  ನಿನ್ನನ್ನ ಹೋಗೋಕೆ ಬಿಡೋರ್‍ಯಾರು!  ಸಾಯಂಕಾಲ ಒಂದು ಫಂಕ್ಷನ್ ಇದೆ.  ಲಿಟರರಿ ಫಂಕ್ಷನ್ನೂ.  ಆವಾಗ್ಲೇ ಹೇಳಿದ್ನಲ್ಲ ಅದೇ.  ಕರಕೊಂಡು ಹೋಗ್ತೀನಿ.  ಊಟಾನೂ ಇದೆಯಂತೆ.  ಅದೆಲ್ಲಾ ಆದಮೇಲೆ ಮೈಸೂರಿಗೆ ಹೊರಡೋವಂತೆ.  ನಿನ್ನ ಕಾರು ಅಲ್ಲೇ ಇದೆಯಲ್ಲ” ಎಂದು ಬಡಬಡ ಒದರಿದ.  ಮೈಸೂರಿನಲ್ಲಿ ನನಗೇನೂ ರಾಜಕಾರ್ಯ ಕಾದುಕೊಂಡಿರದಿದ್ದರೂ ಕತ್ತಲಾದ ಮೇಲೆ ಡ್ರೈವ್ ಮಾಡುವ ಬಗ್ಗೆ ಎದೆಯಂಚಿನಲ್ಲಿ ಅಧೀರತೆ ಚಿಮ್ಮಿತು.  ಉತ್ತರಕ್ಕಾಗಿ ಅವನ ಕಣ್ಣರೆಪ್ಪೆಗಳು ಫಡಫಡಿಸಿದವು.
ಸಾಹಿತ್ಯ ಅವನ ಉಸಿರು ಎನ್ನುವುದು ನನಗಂತೂ ಚೆನ್ನಾಗಿಯೇ ಗೊತ್ತಿದ್ದ ವಿಷಯ.  ಆದರೆ ಅದರ ಬಗ್ಗೆ ಅವನು ಆಡುವ ಮಾತುಗಳು, ಅವನನ್ನು ಉದ್ರೇಕಿಸುವ ಪ್ರಸಂಗಗಳು ಹಿಂದೆಯೂ ನನಗೆ ಅರ್ಥವಾಗುತ್ತಿರಲಿಲ್ಲ.  ಅದು ಇಂದಿಗೂ ನಿಜವಲ್ಲವಾ ಅನಿಸಿ ಒಂದು ಕ್ಷಣ ಅಳುಕಾಯಿತು.  ಇಷ್ಟಾಗಿಯೂ ಅವನ ಮಾತುಗಳಿಗಂಟಿರುತ್ತಿದ್ದ ಅರ್ಥವಾಗದ ಸೆಳೆತ ಇಂದಿಗೂ ಹಾಗೇ ಉಳಿದಿರುವುದು ಗುರುತಿಗೆ ಹತ್ತಿ ಒಂದುಬಗೆಯ ಸಮಾಧಾನವಾಗಿ ಅದು ಆರುವ ಮೊದಲೇ “ಫ್ರೀಯಾಗೇ ಇದೀನಿ.  ಮೈಸೂರಿಗೆ ಎಷ್ಟೊತ್ತಿಗೆ ಹೊರಟರೂ ಆಯ್ತು.  ಅರ್ಜೆಂಟೇನಿಲ್ಲ” ಅಂದೆ.  “ಒಂದ್ನಿಮಿಷ ಇರು” ಎಂದು ಹೇಳಿ ಮೊಬೈಲ್ ಹೊರತೆಗೆದು ಅಕ್ಕನ ನಂಬರ್ ಒತ್ತಿದೆ.  ಎತ್ತಿಕೊಂಡವಳು ಗಿರಿಜೆ.  ಮೈಸೂರಿಗೆ ತಕ್ಷಣ ಹೊರಡುತ್ತಿಲ್ಲವೆಂದೂ, ಹಿಂತಿರುಗುವುದು ರಾತ್ರಿಯಾಗಬಹುದೆಂದೂ ಹೇಳಿದೆ.  ಅವಳ ಕುತೂಹಲದ ಪ್ರಶ್ನೆಗಳಿಗೆ ಉತ್ತರವಾಗಿ ಬಸವಣ್ಣನ ಬಗ್ಗೆ ಚುಟುಕಾಗಿ ಹೇಳಿ “ಪುಟ್ಟು ಜೋಪಾನ.  ಸರಿಯಾಗಿ ಊಟ ಮಾಡೋಕೆ ಹೇಳು ಅವನಿಗೆ” ಎಂದು ಮಾತು ಮುಗಿಸಿ ಲೈನ್ ಕತ್ತರಿಸಿದೆ.  ಬಾಯಿ ತೆರೆಯುತ್ತಿದ್ದ ಬಸವಣ್ಣನನ್ನು ತಡೆದು ಅವನ ಹೆಂಡತಿ “ಪುಟ್ಟು ಅಂದ್ರೆ?  ಮಗನಾ?  ಎಷ್ಟು ವಯಸ್ಸು?” ಅಂದಳು ಕೈಲಿದ್ದ ನನ್ನ ಕಥಾಸಂಕಲನವನ್ನು ತೊಡೆಯ ಮೇಲೆ ಬೋರಲಾಗಿ ಮಲಗಿಸಿಕೊಂಡು.  ಈಯಮ್ಮನ ಹೆಸರೇ ಗೊತ್ತಾಗಲಿಲ್ಲವಲ್ಲಾ ಎಂದು ಫಕ್ಕನೆ ಅನಿಸಿ, ಅದನ್ನು ಅದುಮಿ “ಹ್ಞೂಂ, ಪ್ಲಸ್ ಟೂಲಿದಾನೆ” ಅಂದೆ.  “ನಮ್ಮ ನಿತಿನ್ ಸೆವೆನ್ತ್‌ಲಿದಾನೆ” ಅಂದಳು.  ಇಷ್ಟೊತ್ತಿನವರೆಗೆ ಇವರ ಮಕ್ಕಳುಮರಿ ಬಗ್ಗೆ ಕೇಳಬೇಕೆಂದೇ ಅನಿಸಿರಲಿಲ್ಲವಲ್ಲ ಛೆ ಅಂದುಕೊಳ್ಳುತ್ತಿದ್ದಂತೇ ಬಸವಣ್ಣ ಅವಳತ್ತ ತಿರುಗಿ “ಯಾವ ಥರಾ ಮಾಡ್ತೀಯ?  ಸ್ವಲ್ಪ ಖಾರವಾಗೇ ಮಾಡು” ಅಂದ.  “ಹ್ಞೂಂ ಅದೇ ಐಡಿಯಾ ಇಟ್ಕೊಂಡಿದೀನಿ.  ಜತೆಗೆ ಘೀ ರೈಸ್ ಮಾಡ್ತೀನಿ.  ಸರಿಯಲ್ವಾ?” ಅಂದವಳತ್ತ ಖುಷಿಯಿಂದ ತಲೆಯಾಡಿಸಿ ನನ್ನತ್ತ ತಿರುಗಿದ ಬಸವಣ್ಣ: “ಮಟನ್ ತಿಂತೀಯಲ್ಲ?  ಅಥವಾ ಓದಿ ದೊಡ್ಡಮನುಷ್ಯ ಆಗಿಬಿಟ್ಟ ಕೂಡ್ಲೆ ಸ್ಯಾನ್ಸ್‌ಕ್ರಿಟೈಜೇಶನ್ ಗಾಳಿ ಬೀಸಿ ಬಾಡು ಮರೆತು ಸತ್ಯನಾರಾಯಣ ಪೂಜೆ ಪ್ರಸಾದ ನೆಕ್ಕೊಂಡು ಕೂತಿದೀಯಾ ಹ್ಯಾಗೆ?” ಅಂದ.  ನಗುಬಂತು.  ಉತ್ತರಿಸಲು ಬಾಯಿ ತೆರೆಯುವ ಮೊದಲೇ “ನಮ್ಮನೇಲಿ ಸಂಸ್ಕಾರ ಉಲ್ಟಾ ಆಗಿದೆ ಕಣೋ.  ಇವಳು ನಾರಣಪ್ಪ, ನಾನು ಚಂದ್ರೀ ಪಾರ್ಟು ಮಾಡ್ತಿದೀವಿ” ಅಂದ.  ಅರ್ಥವಾಗದೇ ಆವನನ್ನೇ ನೋಡಿದೆ.  ಅವನು ಗಹಗಹಿಸಿದ.  “ಇವ್ಳು ಬ್ರಾಮಿನ್ ಕಣೋ.  ನಾನು... ಗೊತ್ತೇ ಇದೆಯಲ್ಲ?  ಇವ್ಳು ನನ್ನನ್ನ ಮದ್ವೆ ಮಾಡ್ಕೋತೀನಿ ಅಂದಾಗ ಎಲ್ಲಿ ಖಾರಡಿಗೆ ಬಾಡಿಗೆ ಎಳ್ಳುನೀರು ಬಿಡಿಸಿಬಿಡ್ತಾಳೋ, ಬಂತಲ್ಲಾ ಗ್ರಹಚಾರ ಅಂತ ಹೆದರಿಬಿಟ್ಟಿದ್ದೆ.  ಮನೇಲೇನೂ ಮಾಡೋದು ಬ್ಯಾಡ.  ನಂಗೆ ಬೇಕು ಅನಿಸ್ದಾಗ ಹೊರಗೆಲ್ಲಾದ್ರೂ ತಿಂದ್ಕೊಂಡು ಬರ್ತೀನಿ ಅಂತ ಕುಂಯ್‌ಗುಟ್ದೆ.  ಆಮೇಲೆ ತಿಳೀತು ಇವ್ಳು ತನ್ನ ತವರುಮನೇಯ ಮಡಿಮೈಲಿಗೆ ನೇಮನಿಷ್ಟೇ ರಗಳೆರಾದ್ದಾಂತಗಳನ್ನೆಲ್ಲಾ ಧಿಕ್ಕರಿಸಿ ರೆಬೆಲ್ ಆಗಿರೋಳು ಅಂತ.  ಆ ರೆಬೆಲ್ಲಿಯನ್‌ನ ಕ್ಲೈಮ್ಯಾಕ್ಸೇ ನನ್ ಹಿಂದೆ ಬಿದ್ದದ್ದು ಅಂತ ಗೊತ್ತಾದಾಗ ಎಷ್ಟು ಖುಷಿಯಾಯ್ತು ಗೊತ್ತಾ?  ಇಬ್ರೂ ‘ಇಂಕಿಲಾಬ್ ಜಿಂದಾಬಾದ್’ ಅಂತ ಕೂಗ್ತಾನೇ ಆ ಗಂಗೋತ್ರಿ ಗಾಂಧಿಭವನದಲ್ಲಿ ಬಿಗಿಯಾಗಿ ಕೈಕೈ ಹಿಡ್ಕೊಂಡುಬಿಟ್ವಿ ಕಣೋ.”
ಸರ್ರನೆ ಅವಳತ್ತ ತಿರುಗಿದೆ.  ಅವಳು ಕೆಳಗೆ ಬಾಗಿ ಗಂಡ ನೆಲದ ಮೇಲಿಟ್ಟಿದ್ದ ಖಾಲಿ ಕಪ್ ಎತ್ತಿಕೊಳ್ಳುತ್ತಿದ್ದಳು.
“ಎಲ್ಲಿ ಗಡ್ಕರಿ ಸಾಹೇಬರು?” ಅಂದ ಬಸವಣ್ಣ.  ಉತ್ತರವಾಗಿ ಆಕೆ “ತಿಂಡಿ ಆದಕೂಡ್ಲೇ ಬ್ಯಾಟೆತ್ಕೊಂಡು ಓಡಿದ.  ಊಟದ ಹೊತ್ತಿಗೆ ತಡಮಾಡ್ಬೇಡ ಅಂತ ಹೇಳಿದ್ದೀನಿ” ಅಂದಳು ಆಕೆ ಮೂರು ಲೋಟಗಳ ಹಿಡಿಕೆಗಳನ್ನು ಮೂರುಬೆರಳುಗಳಲ್ಲಿ ಸಿಕ್ಕಿಸಿಕೊಳ್ಳುತ್ತಾ.  ಕೆಲವೇ ನಿಮಿಷಗಳ ಹಿಂದೆ ಅವಳು ನಮ್ಮ ನಿತಿನ್ ಅಂದದ್ದಕ್ಕೂ ಈಗ ಇವನು ಗಡ್ಕರಿ ಸಾಹೇಬರು ಅಂದದ್ದಕ್ಕೂ ಸಂಬಂಧ ಹೊಳೆದು ನಗುಬಂತು.  “ಒಬ್ಬನೇ ಮಗನಾ?” ಅಂದೆ.  “ಒಬ್ನೇ ಕಣಯ್ಯ.  ಅಷ್ಟಕ್ಕೇ ಇವಳಿಗೆ ಸಾಕಾಗಿಹೋಯ್ತು.  ಜೀವ ಉಳಿದದ್ದೇ ಒಂದು ದೊಡ್ಡ ಪವಾಡ.  ಅಲ್ಲಿಗೆ ಶಪಥ ಮಾಡಿಬಿಟ್ಟೆ, ಈ ಜನ್ಮದಲ್ಲಿ ಇವಳನ್ನ ಇನ್ನೊಂದ್ಸಲ ಇಂಥಾ ಕಷ್ಟಕ್ಕೆ ಸಿಕ್ಕಿಸಬಾರದು ಅಂತ” ಅಂದ.  ದನಿಯಲ್ಲಿ ಕುಸಿತ ಕಂಡಿತ್ತು.  ಮರುಕ್ಷಣ ಮತ್ತದೇ ಕಂಚಿನ ಕಂಠ: “ಅಲ್ಲಾ, ನಿಂಗೊತ್ತೇನೋ?  ನಮ್ಮ ಗಡ್ಕರಿ ಸಾಹೇಬ ಎಲ್ಲಾ ಥರದಲ್ಲೂ ನಿನ್ನ ಹಾಗೇ ಕಣೋ.  ಪಾಠದ ಪುಸ್ತಕ ಬಿಟ್ಟು ಬೇರೆ ಒಂದು ಹರಕಲು ಹಾಳೇನೂ ಮುಟ್ಟಲ್ಲ.  ರಜಾ ಬಂದ್ರೆ ಕ್ರಿಕೆಟ್ ಬ್ಯಾಟ್ ಎತ್ಕೊಂಡು ಮಾಯವಾಗಿಬಿಡ್ತಾನೆ.  ಎಲ್ಲ ಥೇಟ್ ನೀ ಆಡ್ತಿದ್ದ ಹಾಗೇ.”
‘ಹೌದಾ!’' ಎನ್ನಬೇಕೋ ಅಥವಾ ಇನ್ನೇನಾದರೂ ಅನ್ನಬೇಕೋ ಎಂದು ಯೋಚಿಸುತ್ತಿದ್ದಂತೆ ಅವನ ಮುಖದಲ್ಲಿ ನಗೆ ಹರಡಿಕೊಂಡಿತು.  “ಒಂದು ವಿಷಯ ಹೇಳ್ತೀನಿ ಕೇಳು” ಆಂದ.  'ಹೇಳು' ಎನ್ನುವಂತೆ ನೋಡಿದೆ.
“ನಂಗೆ ಒಂದೊಂದ್ಸಲ ಅನುಮಾನ ಬರ್ತಿತ್ತು, ನೀನು ಇದ್ದೀಯೋ ಇಲ್ವೋ, ಆ ಡೆಲ್ಲಿ ಕಡೆ ಯಾವನಾದ್ರೂ ಟೆರರಿಸ್ಟ್ ಇನ್ನಾರಿಗೋ ಇಟ್ಟ ಬತ್ತಿ ನಿಂಗೆ ಗತಿ ಕಾಣಿಸಿರಬೋದೇನೋ ಅಂತ!  ನೀನೇ ನನ್ನ ಮನೇಲಿ ಪುನರ್ಜನ್ಮ ಎತ್ತಿರಬೋದು ಅಂತ.”  ಕೈಗಳನ್ನು ಹಿಂದಕ್ಕೆ ಹರಡಿ ವಿಶಾಲವಾಗಿ ನಕ್ಕ.  “ಛೆ! ಬಿಡ್ತು ಅನ್ನಿ” ಅಂದ ಅವಳು ನಗೆ ಉಕ್ಕಿದ ತನ್ನ ಮುಖವನ್ನು ನನ್ನಿಂದ ಮರೆಮಾಡಿಕೊಂಡು ಎದ್ದು ಓಡಿದಳು.  ನನಗೂ ನಗುಬಂತು.
“ನಿನ್ನ ಕಥೆಗಳನ್ನ ಓದೋದಿಕ್ಕೆ ಶುರು ಮಾಡಿದಾಗ ಇನ್ನೂ ಬದುಕಿದೆ ಪ್ರಾಣಿ ಅಂತ ನೆಮ್ಮದಿಯಾಯ್ತು.”  ಮತ್ತೊಮ್ಮೆ ನಕ್ಕು “ನಿನ್ನ ಕಥೆ ಹೇಳೋ.  ಊರು ಬಿಟ್ಟ ಮೇಲೆ ಏನೇನು ಮಾಡ್ದೆ?” ಅಂದ.  “ನನ್ನ ಕಥೆ ಏನೂ ಅಂಥಾ ದೊಡ್ಡದಲ್ಲ ಬಿಡು.  ಜೆಎನ್‌ಯುನಲ್ಲಿ ಓದು ಮುಗಿಯೋದಕ್ಕೂ ಮೊದಲೇ ಇನ್ಸ್‌ಟಿಟ್ಯೂಟ್ ಆಫ್ ಡಿಫೆನ್ಸ್ ಸ್ಟಡೀಸ್ ಆಂಡ್ ಅನ್ಯಾಲಿಸಿಸ್‌ನಲ್ಲಿ ಸ್ಟ್ರಾಟೆಜಿಕ್ ಅನ್ಯಾಲಿಸ್ಟ್ ಆಗಿ ಸೇರ್ಕೊಂಡೆ.  ಅದೇ ಒಗ್ಗಿಹೋಯ್ತು.  ಈಗ ಅಲ್ಲೇ ರೀಸರ್ಚ್ ಆಫೀಸರ್ ಆಗಿದ್ದೀನಿ.  ರೀಸರ್ಚು, ಆರ್ಟಿಕಲ್ಸು, ಸೆಮಿನಾರು ಸಿಂಪೋಸಿಯಂ ಅಂತ ಖುಷಿಯಾಗೇ ದಿನ ಕಳೀತಾ ಇದೀನಿ” ಎಂದು ಆರಂಭಿಸಿ ಗಿರಿಜ ಮತ್ತು ಪುಟ್ಟು ಬಗ್ಗೆ ಹೇಳಿದೆ.  ಅವನ ಹೆಂಡತಿ ಅಡಿಗೆಮನೆಯಿಂದಲೇ ತೂರಿದ ಒಂದೆರಡು ಪ್ರಶ್ನೆಗಳಿಗೆ ಕುಳಿತಲ್ಲಿಂದಲೇ ಅತ್ತ ತಿರುಗಿ ಉತ್ತರಿಸಿದೆ.  “ಡೆಲ್ಲೀಗೆ ವಾಪಸ್ ಹೋಗೋದ್ರ ಒಳಗೆ ಒಂದ್ಸಲ ಅವರಿಬ್ರನ್ನೂ ಮನೆಗೆ ಕರಕೊಂಡು ಬನ್ನಿ” ಅಂದ ಆಕೆ “ಸ್ವಲ್ಪ ಮಿಕ್ಸಿ ಹಾಕ್ಕೊಡಿ ಬನ್ರೀ” ಎಂದು ಗಂಡನನ್ನು ಕರೆದಳು.  “ಜೋ ಆಗ್ಯಾ ದೇವೀ” ಎಂದು ನಾಟಕೀಯವಾಗಿ ಹೇಳುತ್ತಾ ಬಸವಣ್ಣ ಎದ್ದು ಅತ್ತ ನಡೆದ.  ನಾನೂ ಹಿಂದೆ ಹೋಗಿ ಹಾಲ್‌ನಲ್ಲಿ ಕೂತೆ.
ಐದಾರು ನಿಮಿಷದಲ್ಲಿ ಮಿಕ್ಸಿಯ ಸದ್ದು ನಿಂತು ಬಸವಣ್ಣ ಬಂದು ನನ್ನ ಎದುರು ಕೂತ.  ಟೀಪಾಯ್ ಮೇಲೆ ಬೋರಲು ಬಿದ್ದಿದ್ದ ಪುಸ್ತಕವೊಂದನ್ನು ಎತ್ತಿ ನನ್ನ ಮುಂದೆ ಹಿಡಿದ: “ಇದು ಈವತ್ತು ರಿಲೀಸ್ ಅಗ್ತಿದೆ.  ಬರೆದಿರೋದು ನನ್ನ ಹಳೇ ಸ್ಟೂಡೆಂಟು.  ಮಹಾರಾಣೀಸ್‌ನಲ್ಲಿ ಲೆಕ್ಚರರ್ ಆಗಿದ್ದಾನೆ.  ಚೆನ್ನಾಗಿ ಕಥೆ ಬರೀತಾನೆ.  ಇದೇ ಮೊದಲ್ನೇ ಕಲೆಕ್ಷನ್.  ಹತ್ತು ಕಥೆಗಳನ್ನ ನಾನೇ ಸೆಲೆಕ್ಟ್ ಮಾಡ್ಕೊಟ್ಟೆ.  ಮುನ್ನುಡೀನೂ ನಾನೇ ಬರ್ದಿದೀನಿ.”
“ಬುಕ್ ರಿಲೀಸ್ ಮಾಡೋದ್ಯಾರು?”
“ಅದೇ ಬೇಜಾರಿನ ಸುದ್ದಿ.”  ಅವನು ಲೊಚಗುಟ್ಟಿದ: “ಲೀಲಾಧರ ಸಂತೇಬಾಗಿಲು ಹೆಸರು ಕೇಳಿದ್ದೀಯ?  ನೀ ಕೇಳಿರಲ್ಲ ಬಿಡು.  ಈ ಪೇಪರ್‌ದು ಮ್ಯಾಗಜೀನ್ ಎಡಿಟರ್” ಎನ್ನುತ್ತಾ ಟೀಪಾಯ್ ಮೇಲಿದ್ದ ವರ್ತಮಾನಪತ್ರಿಕೆಯ ಮೇಲೆ ಬೆರಳಿನಿಂದ ಬಡಿದ.  ಅದನ್ನೇ ಎತ್ತಿ ಗಾಳಿ ಹಾಕಿಕೊಳ್ಳುತ್ತಾ ಮುಂದುವರೆಸಿದ: “ಲೀಲಾವತಿ ಅನ್ನೋ ಹೆಸರಲ್ಲಿ ಪ್ರತೀವಾರ ಪುಸ್ತಕವಿಮರ್ಶೆ ಸಾಹಿತ್ಯನಿಮರ್ಶೆ ಅಂತ ಮಾಡ್ತಾನೆ.  ಪೇಪರ್ ಕೈಗೆ ಸಿಕ್ಕಿದೆ ಅಂತ ಏನೇನೋ ಬರೀತಾನೆ.  ಒಂದಕ್ಕೂ ಅರ್ಥ ಇರಲ್ಲ.  ಈ ವಾರ ಹೇಳಿದ್ದಕ್ಕೆ ನಾಕು ವಾರಗಳಾದ ಮೇಲೆ ತಾನೇ ಉಲ್ಟಾ ಹೊಡೀತಾನೆ.  ಈ ಸೂಕ್ಷ್ಮ ಜನಕ್ಕೆ ಗೊತ್ತಾಗಲ್ಲ.  ಪಬ್ಲಿಕ್ ಮೆಮೊರಿ ಈಸ್ ವೆರಿ ಶಾರ್ಟ್.  ಇಂವ ಅವತ್ತಾವತ್ತು ಬರೆದದ್ದನ್ನ ಅದ್ಭುತ ಅವಲೋಕನ, ಗ್ರೇಟ್ ಇನ್‌ಸೈಟ್ ಅಂತ ಫೇಸ್‌ಬುಕ್‌ನಲ್ಲಿ ಕಮೆಂಟ್ ಕೆತ್‌ತಾರೆ.  ಅವನ್ನ ನೋಡ್ಕೊಂಡು ಓದದೇ ಇರೋ ಮುಠ್ಠಾಳರೂ ಸಹಾ ಮಧ್ಯೆ ತಮ್ಮದನ್ನೂ ಸಿಕ್ಕಿಸೋಣ ಅಂಂದ್ಕೊಂಡು ಡಿಟ್ಟೋ ಅಂತ ಷರಾ ಬರೀತಾರೆ.  ಇವಂದೇ ಒಂದು ದೊಡ್ಡ ಫ್ಯಾನ್ ಗ್ರೂಪ್ ಹುಟ್ಕೊಂಡುಬಿಟ್ಟಿದೆ.  ಎಲ್ಲಾ ಸೇರಿ ಸಾಹಿತ್ಯವಿಮರ್ಶೇನ ಒಂದು ಹರಟೆ ಮಾಡ್ಬಿಟ್ಟಿದ್ದಾರೆ.  ಅದಕ್ಕೇ ಅವಂಗೆ ಹೇಳ್ದೆ.  ಬೇರೆ ಇನ್ನಾರ ಕೈಲಾದ್ರೂ ಮಾಡ್ಸು ಅಂತ.  ಆದ್ರೆ ಈ ಯಂಗ್ ರೈಟರ್‍ಸ್‌ಗೆ ಒಂದು ತೆವಲು, ನ್ಯೂಸ್‌ಪೇಪರ್ ಮಂದಿ ಕೈಲಿ ರಿಲೀಸ್ ಮಾಡ್ಸಿದ್ರೆ ಪುಕ್ಕಟೆ ಪಬ್ಲಿಸಿಟಿ ಸಿಗುತ್ತೆ ಅಂತ.  ನನ್ ಮಾತ್ನೇ ಕೇಳ್ಲಿಲ್ಲ ಅವ್ನು.”  ಕೈಲಿದ್ದ ಪತ್ರಿಕೆಯನ್ನು ಟೀಪಾಯ್ ಮೇಲೆ ರಪ್ಪನೆ ಬಡಿದ.  ಕಾಲುಗಳನ್ನು ಮೇಲೆತ್ತಿ ಅದರ ಮೇಲಿಟ್ಟ.  ಉಫ್ ಎಂದು ಎದೆಗೆ ಊದಿಕೊಂಡ.  “ಹೋಗ್ಲಿ ಬಿಡ್ರೀ” ಎಂಬ ಸಮಾಧಾನಿಸುವ ದನಿ ಅಡಿಗೆಮನೆಯಿಂದ ಬಂತು.  “ಇಟೀಸ್ ಓಕೆ” ಅಂದೆ.  “ಹಂಗಲ್ಲ.  ನಿಂಗರ್ಥ ಆಗಿಲ್ಲ” ಎನ್ನುತ್ತಾ ಎದ್ದು ಕೋಣೆಯೊಳಗೆ ಹೋಗಿ ಪುಸ್ತಕವೊಂದರ ಧೂಳು ಕೊಡವುತ್ತಾ ಹಿಂತಿರುಗಿದ.  “ಆ ಮಹಾಶಯನ ಇತ್ತೀಚಿನ ಕೃತಿರತ್ನ ಇದು” ಎನ್ನುತ್ತಾ ಪಕ್ಕ ಕೂತ.  “ಓದೋ ಇದನ್ನ” ಅಂತ ಮುಖಪುಟದ ಮಧ್ಯಕ್ಕೆ ಬೆರಳು ಮಾಡಿದ.
ಪುಸ್ತಕದ ಶಿರ್ಷಿಕೆಗಿಂತ ಚೂರೇ ಸಣ್ಣ ಅಕ್ಷರಗಳಲ್ಲಿ “ಈ ಕಥೆಗಳನ್ನು ನೀವು ಓದಿ ಮುಗಿಸುವ ಹೊತ್ತಿಗೆ ಇವ್ಯಾವುವೂ ನನ್ನವಲ್ಲ ಎಂದು ನನಗನಿಸುತ್ತಿದೆ” ಎಂದಿತ್ತು.  ಒಂದೇನೋಟಕ್ಕೆ ಅರ್ಥಹೀನವೆನಿಸಿದ ಆ ಮಾತುಗಳ ಉದ್ದೇಶವೇನಿರಬೇಕೆಂದು ಯೋಚಿಸುತ್ತಿದ್ದಂತೇ ಬಸವಣ್ಣ ಹಲ್ಲು ಕಡಿದ.
“ಗ್ರೀಕ್ ತತ್ವಜ್ಞಾನಿಗಳ ಪ್ಯಾರಡಾಕ್ಸ್‌ಗಳಿಗೆ ತನ್ನದೊಂದನ್ನ ಸೇರಿಸ್ತಿದೀನಿ ಅಂದ್ಕೊಂಡಿದಾನೆ ಅಯೋಗ್ಯ.  ಇದೆಂಥಾ ಅಪ್ರಾಮಾಣಿಕತೆ ನೋಡೋ.  ತನ್ನ ಕೃತಿಗಳ ಬಗ್ಗೇ ಓದುಗರಿಗೆ ಪ್ರಾಮಾಣಿಕವಾಗಿಲ್ಲದ ಈತ ಮತ್ತೊಬ್ಬರ ಕೃತಿ ಬಗ್ಗೆ ಪ್ರಾಮಾಣಿಕವಾಗಿ ಮಾತಾಡ್ತಾನಾ?  ಅದಕ್ಕೇ ಇಂವ ಬ್ಯಾಡಯ್ಯಾ ಅಂತ ಬಡಕೊಂಡೆ.  ಬುದ್ಧಿಮಾತನ್ನ ಯಾರು ಕೇಳ್ತಾರೆ ಈ ಕಾಲದಲ್ಲಿ!”  ಪುಸ್ತಕವನ್ನು ತಿರುಗಿಸಿ ಸಂತೇಬಾಗಿಲಿನ ಕೋಲುಮುಖದ ಮೇಲೆ ಕಣ್ಣಾಡಿಸಿದೆ.
“ಹೋಗ್ಲಿಬಿಡು.  ಏನಾದ್ರೂ ಮಾಡ್ಕೊಳ್ಲಿ.  ನೀನು ಹೋಗದಿದ್ರಾಯ್ತು” ಎಂದು ಆ ಗಳಿಗೆಯಲ್ಲಿ ಮನಸ್ಸಿಗೆ ಬಂದದ್ದನ್ನು ಹೊರಹಾಕಿದೆ.  “ನಾನೂ ವಾರದಿಂದ ಅದೇ ಹೇಳ್ತಾ ಇದೀನಿ” ಅಂದಳು ಅವನ ಹೆಂಡತಿ.
“ಅಯ್ ಅಧೆಂಗಾಯ್ತದೆ!  ಮುನ್ನುಡಿ ಬರೆದಿರೋ ತಪ್ಪಿಗೆ ನಾನೀವತ್ತು ಆ ಪುಸ್ತಕಾನ ಪರಿಚಯ ಮಾಡ್ಕೊಡಬೇಕು.  ಹಾಗಂತ ಅವನದ್ದು ಒಂದೇ ಹಠ.  ನನ್ನ ಮಾತು ಕೇಳಲ್ಲ.  ತನ್ನ ಮಾತನ್ನ ನಾನು ಕೇಳಬೇಕು ಅನ್ನೋ ದುಂಬಾಲು ಬೇರೆ.  ಥತ್!”  ಅಡಿಗೆಮನೆಯಿಂದ ಬಂದ ಘಾಟುವಾಸನೆಗೆ ಸೀನಿದೆ.  “ಫ್ಯಾನ್ ಹಾಕ್ರೀ” ಎಂದಾಕೆ ಒಳಗಿನಿಂದಲೇ ಕೂಗಿದಳು.  “ಫ್ಯಾನ್ ಬೇಡ.  ಛಳಿಯಾಗ್ತದೆ.  ನೀನೇ ಕಿಚನ್ ಬಾಗಿಲು ಹಾಕ್ಕೋ ಬಾಲನಾಗಮ್ಮಾ” ಅಂದ ಬಸವಣ್ಣ.  ಆಕೆ ಬಾಗಿಲು ಮುಚ್ಚಲಿಲ್ಲ.  ನಾನು ಹೊಂದಿಕೊಂಡೆ.  ಕಳೆದ ಒಂದುಗಂಟೆಯಿಂದ ಅವನು ಕರೆದ ಹೆಸರುಗಳಲ್ಲಿ ಅವಳದ್ದು ಯಾವುದಾಗಿರಬಹುದೆಂದುಕೊಂಡು “ನಿಮ್ಮ ಮನೆಯವರ ಹೆಸರನ್ನೇ ಹೇಳಲಿಲ್ಲವಲ್ಲ ನೀನು?” ಅಂದೆ.  “ಓ ಅದಾ!  ನಾಗವೇಣಿ ಅಂತ.  ಮರೆತೇಬಿಟ್ಟಿದ್ದೆ ನೋಡು.  ನೀನಾದ್ರೂ ಹೇಳಬಾರದಿತ್ತೇನೇ” ಅಂದ.  “ಇವ್ರು ಕರೆಯೋ ನೂರೊಂದು ಹೆಸರಲ್ಲಿ ನನ್ನದ್ಯಾವುದು ಅಂತ ಗುರುತೇ ಸಿಗೋದಿಲ್ಲಾ ಇವರೇ” ಎನ್ನುತ್ತಾ ನಕ್ಕಳು ನಾಗವೇಣಿ.
            ಘೀ ರೈಸ್ ಜತೆ ಮಟನ್ ಫ್ರೈ ನೆಂಜಿಕೊಂಡು ಹೊಟ್ಟೆತುಂಬಾ ಉಂಡು ನಾಗವೇಣಿ ಮುಂದಿಟ್ಟ ಎಲೆಅಡಿಕೆಯನ್ನು ಜಗಿಯುತ್ತಿದ್ದಂತೆ “ಒಂದರ್ಧ ಗಂಟೆ ಮಲಗ್ತೀನಿ ಕಣೋ.  ಮನೇಲಿದ್ದ ದಿನ ಮಧ್ಯಾಹ್ನ ಮಲಗೋದು ಅಭ್ಯಾಸ ಆಗ್ಬಿಟ್ಟಿದೆ” ಅಂದ ಬಸವಣ್ಣ.  ನನಗದರ ಅಭ್ಯಾಸವಿರಲಿಲ್ಲ.  “ಆಯ್ತು, ಮಲಗು” ಅಂದೆ.  ಅವನು ಫೋನ್ ಕಿವಿಗೆ ಹಚ್ಚಿ ಶಥಪಥ ಸುತ್ತುಹಾಕುತ್ತಾ “ಐದುಮುಕ್ಕಾಲಿಗೆಲ್ಲ ಬಂದುಬಿಡ್ತೀನಿ.  ನೀನು ಕಾಲ್ ಮಾಡಿ ಡಿಸ್ಟರ್ಬ್ ಮಾಡಬಾರದು ಅಂತ ನಾನೇ ಮಾಡಿ ಹೇಳಿಬಿಡ್ತಾ ಇದೀನಿ” ಎಂದು ಗಟ್ಟಿ ಗಂಟಲಿನಲ್ಲಿ ಹೇಳಿ ಉತ್ತರಕ್ಕೂ ಕಾಯದೇ ಬೆಡ್‌ರೂಮಿನ ಪರದೆ ಸರಿಸಿ ಒಳಹೋದ.  ನಾನು ನಿತಿನ್‌ನಿಂದ ಧೋನಿಯ ಸ್ಟ್ಯಾಟೆಸ್ಟಿಕ್ಸ್ ಕೇಳುತ್ತಾ ಟೀವಿಯಲ್ಲಿ ಐಪಿಎಲ್ ರಿಪ್ಲೇ ನೋಡುತ್ತಾ ಕೂತೆ.  ನಾಗವೇಣಿ ನನ್ನ ಪುಸ್ತಕ ಹಿಡಿದು ಕಿಟಕಿಯ ಪಕ್ಕದ ಆರಾಮಕುರ್ಚಿಯಲ್ಲಿ ಕೂತಳು.
*     *     *
            ಬಸವಣ್ಣ ಎದ್ದಾಗ ಐದರ ಹತ್ತಿರ ಹತ್ತಿರ.  ಅವನು ಬಾತ್‌ರೂಮಿಗೆ ಹೋಗುತ್ತಿದ್ದಂತೇ ನಾಗವೇಣಿ ಟೀ ಮಾಡಲು ಅಡಿಗೆಮನೆಗೆ ಹೋದಳು.  ಮುಖ ತೊಳೆದು ಬಂದ ಬಸವಣ್ಣ ಮೊಬೈಲ್ ಎತ್ತಿ “ಅರೆ ಇಷ್ಟೊಂದು ಮಿಸ್ ಕಾಲ್!  ಸೈಲೆಂಟ್ ಮೋಡ್‌ನಲ್ಲಿಟ್ಟಿದ್ದಕ್ಕೆ ನಿಮಗ್ಯಾರಿಗೂ ಕಿರಿಕಿರಿ ಮಾಡಿಲ್ಲ ಇದು” ಎಂದು ಉದ್ಗಾರ ತೆಗೆಯುತ್ತಿದ್ದಂತೇ ಹೊರಗೇನೋ ಗದ್ದಲವಾಯಿತು.  ಬಸವಣ್ಣ, ಅವನ ಹಿಂದೆ ನಾನು ಬಾಗಿಲಿಗೆ ಓಡಿದೆವು.  ಹದಿವಯಸ್ಸಿನ ಹುಡುಗನ ಸೈಕಲ್‌ನಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆಯ ಅಂಚಿನಲ್ಲಿ ಬಿದ್ದಿದ್ದ ವೃದ್ಧರೊಬ್ಬರನ್ನು ಇಬ್ಬರು ಎತ್ತಿ ನಿಲ್ಲಿಸುತ್ತಿದ್ದರು.  ಮುದುಕನ ಮೈಯಲ್ಲಿ ಶಕ್ತಿಯೇ ಇದ್ದಂತಿರಲಿಲ್ಲ.  ಏನೋ ಗೊಣಗಾಡಿಕೊಂಡು ನಡುಗುತ್ತಾ ಕಾಲೆಳೆದ ಆ ದಯನೀಯ ಜೀವದತ್ತ ನೋಡುತ್ತಾ ಅತೀವ ಸಂತಾಪದಲ್ಲಿ ಲೊಚಗುಟ್ಟಿದ ಬಸವಣ್ಣ.  ಅಷ್ಟರಲ್ಲಿ ಅವನ ಕೈಯಲ್ಲೇ ಇದ್ದ ಫೋನ್ ಹೊಡೆದುಕೊಂಡಿತು.  ಕಿವಿಗೆ ಹಿಡಿದ ಅವನು “ಹೌದಾ?  ಇಷ್ಟ್ ಬೇಗ!” ಎಂದು ಒಂದೆರಡು ಮಾತು ಹೇಳಿ ನನ್ನತ್ತ ತಿರುಗಿದ.  “ನಾವೆಲ್ ಕಾಂಟೆಸ್ಟ್ ರಿಸಲ್ಟ್ ಅನೌನ್ಸ್ ಮಾಡಿಬಿಟ್ಟಿದ್ದಾರಂತೆ, ಅದೇ ಬೆಳಿಗ್ಗೆ ನೋಡಿದೆಯಲ್ಲ ಆ ಪಬ್ಲಿಷರ್.  ಈವ್‌ನಿಂಗ್ ನ್ಯೂಸ್‌ಪೇಪರ್‌ಗಳಲ್ಲಿ ಬಂದಿದೆಯಂತೆ” ಎನ್ನುತ್ತಾ ಹೆಂಡತಿ ತಂದ ಚಹಾ ಲೋಟವನ್ನೆತ್ತಿಕೊಂಡ.
            ಬಸವಣ್ಣ ತಯಾರಾಗುವ ಹೊತ್ತಿಗೆ ನಾನೂ ಶಾಸ್ತ್ರಕ್ಕೆ ಅಂತ ಮುಖ ತೊಳೆದು ಕೂದಲು ಬಾಚಿಕೊಂಡು ಶರ್ಟನ್ನುಸರಿಯಾಗಿ ಇನ್‌ಸರ್ಟ್ ಮಾಡಿ ಹೊರಡಲು ತಯಾರಾದೆ.  ಅವನು ಬೈಕ್‌ನ ಕೀ ಎತ್ತಿಕೊಳ್ಳುತ್ತಿದ್ದಂತೇ ಹೊರಗೆ ಆಂಬುಲೆನ್ಸ್‌ನ ಸೈರನ್ ಕೇಳಿಸಿತು.  ಬಾಗಿಲತ್ತ ಹೆಜ್ಜೆಯಿಡುತ್ತಿದ್ದಂತೇ ಅದು ಮತ್ತಷ್ಟು ಹತ್ತಿರಾಗಿ ಗಕ್ಕನೆ ನಿಂತುಹೋಯಿತು.  ಬಾಗಿಲು ತೆರೆದ ಬಸವಣ್ಣ “ಅರೆ ಇವನಿಗೇನಾಯಿತು?” ಅಂದ ಕಣ್ಣರಳಿಸಿ.  ನಾಗವೇಣಿ ಬಾಗಿಲಿಗೆ ಓಡಿದಳು.
            ಎರಡು ಮನೆಗಳಾಚೆ ಆ ಆಂಬುಲೆನ್ಸ್ ನಿಂತಿತ್ತು.  ರೋಗಿಯಿದ್ದ ಸ್ಟ್ರೆಚರ್ ಅನ್ನು ನಾಲ್ಕು ಜನ ಹೊರತೆಗೆಯುತ್ತಿದ್ದರು.  ಬೆಳ್ಳಗೆ ಬಿಳಿಚಿಹೋಗಿದ್ದ ಇನ್ನೂ ಚಿಕ್ಕವಯಸ್ಸಿನ ವ್ಯಕ್ತಿಯ ಮುಖದಲ್ಲಿ ಯಾತನೆ ಮಡುಗಟ್ಟಿತ್ತು.
            ಬಸವಣ್ಣನ ಜೇಬಿನಿಂದ ಮೊಬೈಲ್ ಸದ್ದು ಮೊಳಗಿತು.  ಎತ್ತಿ ಕಿವಿಗೆ ಹಿಡಿದ.  “ವ್ಹಾಟ್!” ಎಂದು ಉದ್ಗರಿಸುತ್ತಾ ಮನೆಯೊಳಗೇ ಧಾಪುಗಾಲಿಟ್ಟ.  ಮುಂದಿನ ಐದಾರು ನಿಮಿಷಗಳವರೆಗೆ ನಾನೂ ನಾಗವೇಣಿಯೂ ಅವನನ್ನೇ ಬೆರಗಿನಿಂದ ನೋಡುತ್ತಾ ನಿಂತೆವು.  ಹೊರಗಿನ ಯಾವ ಶಬ್ಧವೂ ನಮ್ಮ ಕಿವಿಗೆ ಬೀಳುತ್ತಿರಲಿಲ್ಲ.  ಬಸವಣ್ಣನ “ರಿಯಲಿ!  ದಿಸ್ ಈಸ್ ಅನ್‌ಫೇರ್, ಮಗನ್ನ ಬಿಡೋದಿಲ್ಲ ನಾನು, ಹೌದಾ, ಹಾಗಿದ್ರೆ ಈಗೇನ್ಮಾಡೋದು?  ನಾನೆಂಥ ಮೂರ್ಖ...” ಎಂಬ ಮಾತುಗಳು ಹೊರಗಿನ ಬೇರೆಲ್ಲಾ ಸದ್ದುಗಳಿಗೆ ನಮ್ಮನ್ನು ಕಿವುಡಾಗಿಸಿಬಿಟ್ಟಿದ್ದವು.
ಅಚ್ಚರಿ, ಆಘಾತ, ರೋಷ, ಅಸಹಾಯಕತೆ, ಹತಾಷೆಯ ಒಂದೊಂದು ಮೆಟ್ಟಲನ್ನೂ ಇಳಿಯುತ್ತಾ ಮಾತು ಮುಗಿಸಿ ನಿರ್ವಿಣ್ಣನಾಗಿ ಸೋಫಾದಲ್ಲಿ ಕುಸಿದ ಬಸವಣ್ಣ.  ಮುಖದ ಕಳೆಯೇ ಹಾರಿಹೋಗಿತ್ತು.  “ಏನಾಯ್ತೂರೀ?” ಎನ್ನುತ್ತಾ ಗಾಬರಿಯಿಂದ ಹತ್ತಿರ ಸರಿದಳು ನಾಗವೇಣಿ.  ನಿಮಿಷದ ನಂತರ ಬಾಯಿ ತೆರೆದ ಅವನು:      ಇಂಥೋರಿಗೇ ಪ್ರಶಸ್ತಿ ಸಿಗಬೇಕು ಅಂತ ಆ ಪಬ್ಲಿಷರ್ ಬೋಳಿಮಗ ಮೊದಲೇ ಪ್ಲಾನ್ ಮಾಡಿಬಿಟ್ಟಿದ್ನಂತೆ.  ಒಳ್ಳೊಳ್ಳೆಯ ಕಾದಂಬರಿಗಳನ್ನೆಲ್ಲಾ ಕಸದಬುಟ್ಟಿಗೆ ಹಾಕಿದ್ನಂತೆ.  ತನಗೆ ಬೇಕಾದದ್ದರ ಜತೆ ಐದಾರು ಕಳಪೆ ಕಾದಂಬರಿಗಳನ್ನ ಸೇರಿಸಿ ಇಷ್ಟೇ ಬಂದಿರೋದು ಅಂತ ನಂಗೆ ಕೊಟ್ಟ.  ಅದನ್ನ ನಂಬಿದ ನಾನು ಇದ್ದದ್ರಲ್ಲಿ ಚೆನ್ನಾಗಿರೋದು ಇದೇ ಅಂತ ಅವನಿಗೆ ಬೇಕಾಗಿದ್ದನ್ನೇ ಸೆಲೆಕ್ಟ್ ಮಾಡಿದೆ.  ಈಗ ನೋಡಿದ್ರೆ ಸ್ಪರ್ಧೆಯಲ್ಲಿದ್ದವು ಅಂತ ನಾನು ನೋಡಿಯೇ ಇರದ ಕಾದಂಬರಿಗಳ ಹೆಸರುಗಳೂ ಇವೆಯಂತೆ, ತುಂಬಾ ಭರವಸೆಯ ಯುವಲೇಖಕರ ಹೆಸರುಗಳೆಲ್ಲಾ ಇವೆಯಂತೆ.  ಪಿತೂರಿ ಅವಂದು.  ಆದ್ರೆ  ಕೆಟ್ಟ ಕಾದಂಬರಿ ಸೆಲೆಕ್ಟ್ ಮಾಡಿದ ಕೆಟ್ಟ ಹೆಸರು ನನಗೆ ಅಂಟಿಕೊಂಡುಬಿಡ್ತು.”  ಹಣೆಗೆ ಕೈಒತ್ತಿದ.
            ಅದಕ್ಯಾಕೆ ಇಷ್ಟು ಚಿಂತೆ ಮಾಡ್ತೀಯ?  ಕೇಳಿದೋರಿಗೆ ಆ ಕಾದಂಬರಿಗಳು ನನ್ನ ಕೈಗೆ ಬರಲೇ ಇಲ್ಲ ಅಂತ ಹೇಳಿದ್ರಾಯ್ತು ಬಿಡು” ಅಂದೆ.  “ಹೌದು ಹೌದು” ಅಂದಳು ನಾಗವೇಣಿ.
            ಬಸವಣ್ಣ ತಲೆ ಒದರಿದ: “ಬಂದ ಎಲ್ಲ ಮೂವತ್ತೇಳು ಕಾದಂಬರಿಗಳನ್ನೂ ನಾನೇ ಕೂಲಂಕಷವಾಗಿ ಪರಿಶೀಲಿಸಿದೆ ಅಂತ ಆ ಅಯೋಗ್ಯ ಹೇಳಿಕೆ ಕೊಟ್ಟಿದ್ದಾನಂತೆ.  ಅದನ್ನ ಪಬ್ಲಿಕ್ಕಾಗಿ ನಿರಾಕರಿಸೋಕೆ ನನ್ನತ್ರ ಯಾವ ಆಧಾರವೂ ಇಲ್ಲ.  ಅಲ್ಲದೇ ಸಾಹಿತ್ಯಕ್ಷೇತ್ರದಲ್ಲಿ ಇರೋರಲ್ಲಿ ನೂರಕ್ಕೆ ತೊಂಬತ್ತು ಪಾಲು ನನ್ನ ವಿರೋಧಿಗಳೇ.  ಅವರೆಲ್ಲಾ ನಂಬೋದು ಆ ಬೋಳಿಮಗನ ಮಾತನ್ನೇ.  ಅಷ್ಟೇ ಅಲ್ಲ ಕಣಯ್ಯಾ, ಕಥೆ ಕೇಳು.  ನಾನು ಸೆಲೆಕ್ಟ್ ಮಾಡಿರೋದು, ಓದದೇ ಇರೋದು ಎಲ್ಲಾ ಕಾದಂಬರಿಗಳನ್ನೂ ಆ ಸಂತೆಬಾಗಿಲು ನನಗೂ ಮೊದಲೇ ನೋಡಿದ್ದಾನಂತೆ.  ಇದೆಲ್ಲಾ ಇಬ್ರೂ ಸೇರಿ ಮಾಡಿರೋ ಪಿತೂರಿ ಅಂತೆ.  ಇಷ್ಟು ವರ್ಷ ಕಟ್ಟಿ ಬೆಳೆಸಿಕೊಂಡು ಬಂದ ನನ್ನ ವಿಮರ್ಶಾಪ್ರಜ್ಞೆ ಇಂದು ಮಣ್ಣುಪಾಲಾಗಿಹೋಯ್ತು ಅಂತ ಹೇಳ್ತಿದಾರೆ ಪ್ರೊ. ಮಧುಸೂಧನ ರಾವ್.”  ಬಸವಣ್ಣನ ದನಿಯಲ್ಲಿ ಅತೀವ ನೋವಿತ್ತು.  ನಾನು ಕನಲಿಹೋದೆ.  ನಾಗವೇಣಿ ಮಾತು ಕಳೆದುಕೊಂಡು ನಿಂತಳು.
            ನಿಮಿಷದ ನಂತರ ಬಸವಣ್ಣ ದಢಕ್ಕನೆ ಮೇಲೆದ್ದ.  “ನಡೆ ನಡೆ, ಫಂಕ್ಷನ್‌ಗೆ ಹೊತ್ತಾಯ್ತು” ಎನ್ನುತ್ತಾ ನನ್ನ ತೋಳು ಹಿಡಿದ.  ನನಗೆ ಬೇಕಾಗಿದ್ದದ್ದೂ ಅದೇ.  ಹೆಸರಿಗೆ ಮಸಿ ಬಳಿದ ಪಿತೂರಿಯ ನೋವನ್ನು ಅವನು ಮರೆಯಬೇಕಾಗಿತ್ತು.  ನಾಗವೇಣಿ ಸಹಾ ಆತುರಾತುರವಾಗಿ ಅವನ ಮುಂದೆ ಹೆಲ್ಮೆಟ್ ಹಿಡಿದಳು.
            ಮಾತಿಲ್ಲದೇ ಹೊರಟೆವು.  ಬೆಳಿಗ್ಗೆ ಬರುವಾಗ ಕಿವಿಗೆ ಬಿದ್ದಿದ್ದ ಬಸವಣ್ಣನ ಉತ್ಸಾಹದ ಕಂಚು ಕಂಠ ಎಂದೋ ಕಳೆದುಹೋದ ಯಾವುದೋ ಯುಗದ್ದಿರಬಹುದು ಅನಿಸತೊಡಗಿ ನನ್ನ ಬಾಯನ್ನೂ ಕಟ್ಟಿಹಾಕಿಬಿಟ್ಟಿತ್ತು.
ಗಲ್ಲಿಯ ತಿರುವು ತಲುಪುತ್ತಿದ್ದಂತೇ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಶವಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಆಗಿತ್ತು.   ಅನಿವಾರ್ಯವಾಗಿ ವಾಹನವನ್ನು ನಿಲುಗಡೆಗೆ ತಂದ ಬಸವಣ್ಣ.  ಐದು ನಿಮಿಷ, ಹತ್ತು ನಿಮಿಷ...
            ಹಿಂದಕ್ಕೆ ಹೋಗೋಣ.  ಆ ಕಡೆ ಬೇರೆ ದಾರಿ ಇದೆ” ಎಂದು ಗೊಣಗಿದ ಅವನು.  ನಾನು ಮಾತಿಲ್ಲದೇ ಇಳಿದು ನಿಂತೆ. ಹಿಂದಿದ್ದ ವಾಹನಗಳ ನಡುವೆ ಹೇಗೋ ದಾರಿ ಮಾಡಿಕೊಂಡು ಬೈಕನ್ನು ತಿರುಗಿಸಿದ ಬಸವಣ್ಣ.  ಅವನ ಮನೆಯ ಸಮೀಪಕ್ಕೆ ಬರುತ್ತಿದ್ದಂತೇ ಅವನ ಪೋನ್ ಹೊಡೆದುಕೊಂಡಿತು.  ನಿರಾಸಕ್ತಿಯಿಂದಲೇ ಎತ್ತಿ ಕಿವಿಗೆ ಹಿಡಿದ.  ಅತ್ತಲಿನ ಮಾತುಗಳನ್ನು ಮೌನವಾಗಿಯೇ ಆಲಿಸಿದ.  ಅದೇ ಮೌನದಲ್ಲಿ ಫೋನನ್ನು ಜೇಬಿಗೆ ಸೇರಿಸಿ ನನಗೆ ಇಳಿಯುವಂತೆ ಸನ್ನೆ ಮಾಡಿದ.  ಬೈಕನ್ನು ಅದರ ಸ್ಥಾನಕ್ಕೆ ಸೇರಿಸಿ ನನ್ನತ್ತ ತಿರುಗಿದ: “ನನ್ನ ಅಗತ್ಯ ಆ ಫಂಕ್ಷನ್‌ಗಿಲ್ಲ.  ಹಾಗಂತ ಹೇಳ್ತಿದಾನೆ ನನ್ನ ಸ್ಟೂಡೆಂಟ್, ಅದೇ ಆ ಕಥೆಗಾರ.”
“ಏನಾಯ್ತು?” ಅಂದ್ರೆ ಗಾಬರಿಯಿಂದ.  ನನ್ನ ಗಾಬರಿ ಬಾಗಿಲಲ್ಲೇ ನಿಂತಿದ್ದ ನಾಗವೇಣಿಯ ಮುಖದಲ್ಲಿ ಪ್ರತಿಫಲಿಸಿತು.
“ವಿಮರ್ಶೆಯ ಮೌಲ್ಯಗಳ ಬಗ್ಗೆ, ಕೃತಿಗಳ ಗುಣಮಟ್ಟದ ಬಗ್ಗೆ ಈವತ್ತು ನಾನು ಆಡೋ ಮಾತುಗಳು ಯಾರ ಹೃದಯವನ್ನೂ ತಲುಪೋದಿಲ್ಲ.  ಅಷ್ಟೇ ಅಲ್ಲ, ನನ್ನನ್ನ ಪಬ್ಲಿಕ್ಕಾಗಿ ಅವಮಾನಿಸೋದಿಕ್ಕೆ ತಯಾರಿ ನಡೆಸ್ತಿದಾನಂತೆ ಆ ಸಂತೆಬಾಗಿಲು.  ಈ ಘನಂದಾರಿ ವಿಮರ್ಶಕನ ಬಂಡವಾಳ ನೋಡಿ ಅಂತ ಹೇಳೋದಿಕ್ಕೆ ತುದಿಗಾಲಲ್ಲಿ ನಿಂತಿದಾನಂತೆ.  ಇಷ್ಟು ವರ್ಷ ಅವನನ್ನ, ಅವನಂಥೋರನ್ನ ನಾನು ಇಂಚಿಂಚಾಗಿ ಕತ್ತರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳೋ ಅವಕಾಶ ಅವನಿಗೆ ಈಗ ಸಿಕ್ಕಿದೆ.”  ಬಸವಣ್ಣ ತಲೆ ತಗ್ಗಿಸಿದ.  ನಾನು ಅವನ ಭುಜ ಹಿಡಿದೆ: “ನಿನ್ನನ್ನ ನೀನು ಡಿಫೆಂಡ್ ಮಾಡ್ಕೊಳ್ಳೋದು ಕಷ್ಟ ಅಲ್ಲ.  ಇಷ್ಟು ಕಂಗೆಟ್ಟರೆ ಹೇಗೆ?”
ನನ್ನ ಮಾತುಗಳಲ್ಲಿ ನಂಬಿಕೆ ಮೂಡಿಸಿಕೊಳ್ಳಲು ನಾನೇ ಹೆಣಗುತ್ತಿದ್ದಂತೇ ಅವನು ಕೈಒದರಿದ: “ನನಗಿಂತ ಮೊದಲು ಮಾತಾಡೋನು ಆ ಸಂತೆಬಾಗಿಲೇ.  ಅವನ ಮಾತುಗಳನ್ನ ನಾನು ಖಂಡಿಸೋಕೆ ಎದ್ದುನಿಂತ್ರೆ ಜಗಳ ಆಗುತ್ತೆ, ಫಂಕ್ಷನ್ ಹಾಳಾಗುತ್ತೆ ಅನ್ನೋ ಚಿಂತೆ ಎಲ್ಲರಿಗೂ.  ಆದ್ರಿಂದ ನೀವು ದಯವಿಟ್ಟು ಬರಬೇಡಿ ಸರ್ ಅಂತ ಗೋಗರೀತಾ ಇದಾನೆ ನನ್ ಸ್ಟೂಡೆಂಟ್.  ಅವನ ಮೊದಲ ಪುಸ್ತಕದ ಬಿಡುಗಡೆ ಸಮಾರಂಭ ಹಾಳಾಗೋದು ಅವನಿಗೆ ಬೇಕಾಗಿಲ್ಲವಂತೆ.”  ಬಸವಣ್ಣನ ದನಿ ಗುಹೆಯಾಳದಿಂದ ಬಂದಂತಿತ್ತು.
ಸೋತ ಕಾಲುಗಳನ್ನು ಎತ್ತಿಹಾಕುತ್ತಾ ಮೆಟ್ಟಲೇರಿದವನ ಹಿಂದೆ ನಾನೂ ಪ್ರಯಾಸದಿಂದ ಹೆಜ್ಜೆ ಕಿತ್ತೆ.  ನಾಗವೇಣಿ ಸರಕ್ಕನೆ ಪಕ್ಕ ಸರಿದು ಅವನಿಗೆ ದಾರಿ ಮಾಡಿಕೊಟ್ಟಳು.  ಒಳಗೆ ಕತ್ತಲಿತ್ತು.
“ಈಗ ತಾನೆ ಕರೆಂಟ್ ಹೋಯ್ತು” ಅಂದಳು ನಾಗವೇಣಿ ಅಳುಕಿನಿಂದ.  ಬಸವಣ್ಣನ ಉತ್ತರ ಬರಲಿಲ್ಲ. ಕತ್ತಲೆಗೆ ಕಣ್ಣು ಹೊಂದಿಸಿಕೊಂಡು ಅವನಿಗಾಗಿ ಹುಡುಕಿದೆ.  ಅವನು ಮನೆಯಲ್ಲಿ ಮಡುಗಟ್ಟಿದ್ದ ಕತ್ತಲಲ್ಲಿ ಕರಗಿಹೋಗಿದ್ದ.
--***೦೦೦***--
 ಫೆಬ್ರವರಿ ೫, ೨೦೧೪
 ಈ ಕಥೆಯ ಬಗ್ಗೆ ಓದುಗಮಿತ್ರರೊಬ್ಬರ ಅಭಿಪ್ರಾಯ ಇಲ್ಲಿದೆ.  ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.