ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Thursday, November 9, 2017

ಕಥೆ - "ಮಾನ್ಸೂನಿನ ಮೊದಲ ಹನಿಗಳು"ಲಿಫ್ಟ್ ಒಳಗೆ ಸೇರಿ ಗ್ರೌಂಡ್ ಫ್ಲೋರ್‍‌ನ ಗುಂಡಿಯೊತ್ತುತ್ತಿದ್ದಂತೇ ನಡುವಯಸ್ಸಿನ ಅಪರಿಚಿತ ವಿದೇಶಿ ಹೆಂಗಸು ಇದ್ದಕ್ಕಿದ್ದಂತೇನಿನಗೆ ಮದುವೆಯಾಗಿದೆಯಾ?” ಎಂದಾಗ ಗಲಿಬಿಲಿಗೊಂಡೆ.  ಕಾಲೇಜಿನಲ್ಲಿ ಓದುತ್ತಿರುವ ಮಗನಿರುವ ಐವತ್ತೈದರ ನಾನು ಇವಳ ಪಕ್ಕ ನಿಂತು ಲಿಫ್ಟ್‌‍ಗಾಗಿ ಕಾದ ಒಂದು ನಿಮಿಷಕ್ಕೂ ಕಡಿಮೆ ಆವಧಿಯಲ್ಲಿ ನನ್ನ ಯಾವ ವರ್ತನೆ ಅವಳಲ್ಲಿ ಪ್ರಶ್ನೆನ್ನುಂಟುಮಾಡಿರಬಹುದೆಂಬ ಗೊಂದಲಕ್ಕೆ ಬಿದ್ದು ಉತ್ತರ ಹೊಳೆಯದೇ ತಳಮಳಿಸಿದೆ.  ಅದ್ಯಾವುದರ ಪರಿವೆಯೂ ಇಲ್ಲದೇ ಆಕೆಆಗಿದೆ ಅಂತ ತಿಳೀತೀನಿ.  ನಿನ್ನಿಂದ ನನಗೊಂದು ಪುಟ್ಟ ಸಹಾಯ ಬೇಕಾಗಿದೆ.  ಇಲ್ಲ ಅನ್ನೋದಿಲ್ಲ ನೀನು ಅಂತ ನಂಬಿಕೆ” ಎನ್ನುತ್ತಾ ಮುಚ್ಚಿಕೊಳ್ಳುತ್ತಿದ್ದ ಬಾಗಿಲತ್ತ ತಿರುಗಿ ನನ್ನ ಗೊಂದಲವನ್ನು ಮತ್ತಷ್ಟು ಏರಿಸಿದಳು.  ಬಾಗಿಲು ಮಚ್ಚಿಕೊಂಡು ಲಿಫ್ಟ್ ಒಮ್ಮೆ ಝಗ್ ಎಂದು ಅಲುಗುತ್ತಿದ್ದಂತೇ ಸರಕ್ಕನೆ ಹೊರಳಿ ನನಗೆ ಬೆನ್ನು ಮಾಡಿದಳು: “ನನ್ನ ಬ್ರೇಸಿಯರ್‍‌ನ ಹುಕ್ ಬಿಚ್ಚಿಹೋಗಿದೆ.  ಸರಿಮಾಡಿಬಿಡು, ತಕ್ಷಣ” ಎನ್ನುತ್ತಾ ಸ್ಕರ್ಟ್‌‍ಗಂಟಿದ್ದ ಬ್ಲೌಸನ್ನು ಎರಡೂ ಕೈಗಳಿಂದ ಸರಕ್ಕನೆ ಮೇಲೆತ್ತಿದಳು.  ದಿಗ್ಭ್ರಾಂತಿಯಿಂದಲೋ, ನಾಚಿಕೆಯಿಂದಲೋ ಕ್ಷಣ ಕಲ್ಲಾಗಿ ನಿಂತವನನ್ನು ಅವಳ ಆತುರದ ದನಿ ಎಚ್ಚರಿಸಿತು: “ಮುಂದಿನ ಫ್ಲೋರ್‍‌ನಲ್ಲಿ ಲಿಫ್ಟ್ ನಿಲ್ಲೋದರ ಒಳಗೆ, ಬೇಗ.”  ನನ್ನತ್ತ ಬೆನ್ನು ಸರಿಸಿದಳು.  ಕ್ವಿಕ್.”  ಅವಸರಿಸಿದಳು.

ನನ್ನದೆಗೇ ಒತ್ತುವಂತೆ ಬಂದ ಬಿಳುಪು ಬೆನ್ನಿನಲ್ಲಿ ನೇತಾಡಿದ ಕಪ್ಪುಬಣ್ಣದ ಸ್ಟ್ರ್ಯಾಪ್‌‍ಗಳಿಗೆ ನಡುಗುವ ಕೈಹೂಡಿದೆ.

“ಥ್ಯಾಂಕ್ ಯೂ.  ಸಮಯಕ್ಕೆ ಸರಿಯಾಗಿ ನಿನ್ನಂಥೋನು ಒಬ್ಬ ಸಿಕ್ಕಿದರೆ ಬದುಕು ಅದೆಷ್ಟು ಸರಾಗ!  ಭೂಮಿ ಮೇಲೆ ಇನ್ನಷ್ಟು ದಿನ ನೆಮ್ಮದಿಯಾಗಿ ಕಾಲ ಕಳೆಯಬೋದು!”  ಅವಳು ನಕ್ಕು ಬ್ಲೌಸ್ ಕೆಳಗಿಸಿಕೊಳ್ಳುತ್ತಾ ನನ್ನತ್ತ ತಿರುಗುತ್ತಿದ್ದಂತೇ ಲಿಫ್ಟ್ ಆರನೆಯ ಮಹಡಿಯನ್ನು ದಾಟಿ ಕೆಳಗಿಳಿಯಿತು.  ಐದನ್ನೂ ನಡುಗುತ್ತಾ ದಾಟಿ ನಾಲ್ಕನೆಯ ಫ್ಲೋರ್‍‌ನಲ್ಲಿ ನಿಧಾನವಾಗುತ್ತಿದ್ದಂತೇ ಮತ್ತೊಮ್ಮೆ ವಿಶಾಲವಾಗಿ ನಕ್ಕುಪೆದ್ದು ಗಂಡಸರು ಅಂದರೆ ನಂಗಿಷ್ಟ.  ಮುದ್ದು ಮಾಡಬೇಕು ಅನಿಸುತ್ತೆ.  ನೀನು ಪೆದ್ದು ಗಂಡಸು ಅನ್ನೋದು ನಿನ್ನ ಹಣೆ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆದಿದೆ” ಅಂದಳು.  ನಾನು ನಗಲು ಹೆಣಗುತ್ತಿದ್ದಂತೇಮುದ್ದು ಮಾಡೋಕೆ ಈಗ ಅವಕಾಶ ಇಲ್ಲ.  ಸಧ್ಯಕ್ಕೆ ಇಷ್ಟು ಸಾಕು” ಎನ್ನುತ್ತಾ ಛಕ್ಕನೆ ಪಕ್ಕ ಸರಿದು ಕೊರಳನ್ನು ನೀಳವಾಗಿಸಿ ಹಣೆಗೊಂದು ಮುತ್ತಿಟ್ಟಳು.”  ನನಗೆ ಮತ್ತೊಮ್ಮೆ ಗೊಂದಲ.  ಅವಳು ಕಿಲಕಿಲ ನಕ್ಕಳು.  ನಾನು ಪೆಚ್ಚುನಗೆ ಹೊರಡಿಸುವಷ್ಟರಲ್ಲಿ ಲಿಫ್ಟ್ ನಿಂತು ಬಾಗಿಲು ಸೀಳಾಯಿತು.

ಎರಡೆರಡು ಸ್ಟ್ರಾಲಿಗಳನ್ನು ಎಳೆದುಕೊಂಡು ಒಳನುಗ್ಗಿದ ಇಬ್ಬರಿಗೆ ಜಾಗ ಬಿಟ್ಟು ನಾವಿಬ್ಬರೂ ಎರಡು ಮೂಲೆಗಳಲ್ಲಿ ಮುದುರಿಕೊಂಡೆವು.  ಮೂರನೇ ಫ್ಲೋರ್‍‌ನಲ್ಲಿ ಕಾಯುತ್ತಿದ್ದ ಹಿಂಡು ಜನರಲ್ಲಿ ಮೂವರು ಮಾತ್ರ ಒಳಸೇರಿ ಜಾಗ ಮಾಡಿಕೊಂಡರು.  ಇನ್ನುಳಿದವರ ಮುಖಗಳಲ್ಲಿ ಮೂಡಿದ ನಿರಾಶೆ, ಅಸಹನೆ ನನ್ನ ಕಣ್ಣುಗಳಿಂದ ಮರೆಯಾಗುವಷ್ಟರಲ್ಲಿ ಲಿಫ್ಟ್ ಗ್ರೌಂಡ್ ಫ್ಲೋರ್‍‌ನಲ್ಲಿ ನಿಂತಾಗಿತ್ತು.  ಹೊರಹಾರಲು ಎಲ್ಲರಲ್ಲೂ ಆತುರ.  ಎರಡು ಸ್ಟ್ರಾಲಿಗಳ ನಡುವೆ ಕಾಲು ಸಿಕ್ಕಿಕೊಳ್ಳದಂತೆ ಎಚ್ಚರಿಕೆ ವಹಿಸಿ ಹೊರಗಡಿಯಿಟ್ಟು ಅತ್ತಿತ್ತ ಕಣ್ಣು ಹಾಯಿಸಿದ್ದು ಅವಳಿಗಾಗಿ ಹುಡುಕುತ್ತಾ ಎನ್ನುವುದನ್ನು ಬಲವಂತವಾಗಿ ನಿರಾಕರಿಸಲು ಹೆಣಗುತ್ತಿದ್ದಂತೇ ಮುಂದೆ ಬಾಗಿ ರಿಸೆಪ್ಷನಿಸ್ಟ್ ಜತೆ ಪಿಸುಗುಟ್ಟುತ್ತಿದ್ದ ಅವಳು ಕಾಣಿಸಿದಳು.  ಜೇಬಿಗೆ ಕೈ ಹಾಕಿ ಎರಡು ಬೆರಳುಗಳಲ್ಲಿ ಕೀ ಹೊರಗೆಳೆದು ಅತ್ತ ಹೆಜ್ಜೆ ಸರಿಸುತ್ತಿದ್ದಂತೇ ಅಗಲವಾಗಿ ನಗುತ್ತಿದ್ದ ರಿಸೆಪ್ಷನಿಸ್ಟ್‌‍ಗೆಬಾಯ್’ ಎನ್ನುತ್ತಾ ಅವಳು ನನಗೆ ಬೆನ್ನು ಹಾಕಿ ಹಾರುವಂತೆ ಬಾಗಿಲು ದಾಟಿದಾಗ ಮನದ ತುಂಬಾ ಉಕ್ಕಿದ ಏನನ್ನೋ ಕಳೆದುಕೊಂಡಂಥ ನಿರಾಶೆ ದಿನವಿಡೀ ನನ್ನನ್ನು ಕಾಡುತ್ತಲೇ ಇತ್ತು.

ಹೋಟೆಲ್‌‍ ಮೆಟ್ಟಲಿಳಿದು ನನಗಾಗಿ ಕಾಯುತ್ತಿದ್ದ ಟ್ಯಾಕ್ಸಿಗಾಗಿ ಕಣ್ಣಾಡಿಸುತ್ತಿದ್ದಂತೇ ಜೇಬಿನಲ್ಲಿದ್ದ ಮೊಬೈಲ್ ಹೊಡೆದುಕೊಂಡಿತು.  ಹೊರತೆಗೆದು ನೋಡಿದರೆ ಗಿರಿಜೆ.  ಹೋಟೆಲ್ ಕೋಣೆಯಿಂದ ಹೊರಡುವ ಮೊದಲು ಮಾತಾಡಿದ್ದೆವಲ್ಲಾ, ಮತ್ತೇನಿರಬಹುದು ಎಂದುಕೊಳ್ಳುತ್ತಾ ಕಿವಿಗೆ ಹಿಡಿದೆ.  ರೀ” ಅಂತ ಶುರು ಮಾಡಿದಳು ಮಾಮೂಲಿನಂತೆ.  ಏನು ಚಿನ್ನು?” ಅಂದೆ ಅಷ್ಟೇ ಮಾಮೂಲಿನಂತೆ.

“ಬರೆಯೋಕೇ ಆಗ್ತಿಲ್ಲಾರಿ.”  ರಾಗ ಎಳೆದಳು.  ಆವಾಗ್ಲೇ ಹೇಳಿದ್ನಲ್ಲಾ, ಲ್ಯಾಪ್‌‍ಟಾಪ್ ಬಿಚ್ಚಿಟ್ಕೊಂಡು ಕೂತಿದೀನಿ.  ಒಂದಕ್ಷರಾನೂ ಬರೆಯೋಕೆ ಆಗಿಲ್ಲ.  ಏನೂ ಹೊಳಿತಾನೇ ಇಲ್ಲರೀ.”  ಅಳುವಂತೆ ದನಿ ಮಾಡಿದಳು.   ನಗುಬಂತು.

“ತಲೆ ಕೆಡಿಸ್ಕೋಬೇಡ.  ಏನಾದ್ರೂ ಓದು.  ನನ್ ಜತೆ ಪಾಂಡಿಚೆರಿಗೆ ಬಾ ಅಂತ ಎಷ್ಟು ಸಲ ಕರೆದೆ!  ಬಂದಿದ್ರೆ ಒಂದು ನಾಕು ದಿನ ಹಾಯಾಗಿ ಕಳೀಬೋದಾಗಿತ್ತಲ್ಲ.  ಯಾರಿಗ್ಗೊತ್ತು ಒಂದಾದರೂ ಸೊಗಸಾದ ಕಥೆಗೆ ಸಾಮಗ್ರಿ ಸಿಗ್ತನೂ ಇತ್ತು.”  ಕೆಲವೇ ನಿಮಿಷಗಳ ಹಿಂದೆ ಲಿಫ್ಟ್‌‍ನಲ್ಲಿ ನಡೆದ ಪ್ರಸಂಗ ನೆನಪಾಯಿತು.

“ಹೇಗೆ ಬರೋಕೆ ಆಗ್ತಿತ್ತೂರಿ?  ಪುಟ್ಟನ ಕಾಲೇಜು?  ಎಷ್ಟ್ ಸಲ ಹೇಳಿದ್ದೀನಿ ಅದನ್ನ!” ಎಂದು ಹೇಳಹೊರಟವಳನ್ನು ತಡೆದು ವಿದೇಶಿ ಹೆಂಗಸಿನ ಬಿಚ್ಚಿಹೋದ ಬ್ರಾ ಕಥೆ ಹೇಳಿದೆ.  ಕ್ಷಣ ಮೌನವಾದವಳು ಮರುಕ್ಷಣ ಕುಲುಕುಲು ನಗತೊಡಗಿದಳು.  ನಗುತ್ತಲೇ ಮಾತು ಹೊರಹಾಕಿದಳು: “ನೀವು ಬರೀ ಬಿಚ್ಚೋದ್ರಲ್ಲಿ ಎಕ್ಸ್‌‍‍ಪರ್ಟ್ ಅಂದ್ಕೊಂಡಿದ್ದೆ!”  ಅಣಕದ ದನಿ ಮಾಡಿದಳು.    ನನ್ನ ಗುರುತು ಹಿಡಿದ ಟ್ಯಾಕ್ಸಿ ಡ್ರೈವರ್ ಎರಡು ಹೆಜ್ಜೆ ಮುಂದೆ ಬಂದು ನಗೆಬೀರಿದ.

“ಟ್ಯಾಕ್ಸಿ ರೆಡಿ ಇದೆ.  ಆಮೇಲೆ ಮಾತಾಡೋಣವಾ ಬಂಗಾರಿ?”  ಅನುನಯಿಸಿದೆ.  ಓಕೆ ರಾಜಾ” ಎಂದವಳುಜೋಪಾನಾರೀ” ಎಂದು ಮಾಮೂಲಿನ ಎಚ್ಚರಿಕೆ ಹೇಳಿ ಲೈನ್ ಕತ್ತರಿಸಿದಳು.

ಎರಡು ಲೆಕ್ಚರ್‍‌ಗಳು, ಮಧ್ಯದ ಲಂಚ್ ಬ್ರೇಕ್, ಕೊನೆಯಲ್ಲಿ ಟೀ ಮತ್ತು ಹರಟೆ, ಮಧ್ಯೆ ಎರಡು ಕಾಲ್ ಹಾಗೂ ನಾಲ್ಕೈದು ಮೆಸೇಜ್‌‍ಗಳಲ್ಲಿ ಕಥೆ ಬರೆಯಲಾಗುತ್ತಿಲ್ಲವೆಂಬ ಗಿರಿಜೆಯ ಅಳಲು, ಆಗೊಮ್ಮೆ ಈಗೊಮ್ಮೆ ಸುಳಿದುಹೋದ ವಿದೇಶೀ ಹೆಂಗಸು... ಎಲ್ಲವೂ ಮುಗಿಯುವ ಹೊತ್ತಿಗೆ ಸಂಜೆಯ ಆರುಗಂಟೆ.  ಹೋಟೆಲ್‌‍ಗೆ ವಾಪಸ್ ಬಂದಾಗ ಏಳರ ಹತ್ತಿರ ಹತ್ತಿರ.

ತಣ್ಣನೆಯ ಶವರ್ ಕೆಳಗೆ ಎರಡು ನಿಮಿಷ ನಿಂತು ನಡುವಿನಲ್ಲಿ ಟವಲ್ ಇದ್ದಂತೆಯೇ ಇಂಟರ್‍‌ಕಾಂನಲ್ಲಿ ಕಿಚನ್‌‍ ಗುಂಡಿಯೊತ್ತಿದೆ.  ಟೀಗೆ ಆರ್ಡರ್ ಮಾಡಿದ ಮೇಲೂ ಟವಲ್ ತೆಗೆದು ಜುಬ್ಬಾ ಪಾಯಿಜಾಮಾ ತೊಡಬೇಕಿನಿಸಲಿಲ್ಲ.  ಹಾಗೇ ರೂಮಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಅಡ್ಡಾಡತೊಡಗಿದೆ.  ಒಂದು ನಿಮಿಷದಲ್ಲಿ ಬೆಲ್ ಆಯಿತು.  ಕಿಚನ್‌‍ ಹುಡುಗನ ಮುಂದೆ ಟವಲ್ ಸುತ್ತಿಕೊಂಡೇ ನಿಲ್ಲುವುದು ಅಸಹಜವೇನಲ್ಲ.   ಬಾಗಿಲು ತೆರೆದೆ.  ಅವಳು ನಿಂತಿದ್ದಳು.

ನನ್ನ ಅನುಮತಿಯನ್ನೂ ಕೇಳದೆ ಒಳಗೆ ನುಗ್ಗಿದಳು.  ನನ್ನದು ಅಸಭ್ಯತನ.  ಆದರೆ ನಿನ್ನ ಜತೆ ಇದೆಲ್ಲಾ ನಡೆಯುತ್ತೆ” ಎನ್ನುತ್ತಾಹಹ್ ಹಹ್” ನಕ್ಕಳು.  ಹಾಸಿಗೆಯ ಅಂಚಿನಲ್ಲಿ ಮುದುರಿ ಬಿದ್ದಿದ್ದ ಜುಬ್ಬಾ ಪಾಯಿಜಾಮಾಗಳನ್ನು ಬಾಚಿಕೊಂಡು ಬಾತ್‌‍ರೂಮಿಗೆ ನುಗ್ಗಿದವನನ್ನು ಅವಳ ಗಹಗಹ ನಗೆ ಹಿಂಬಾಲಿಸಿತು.

 ಟೀ ಕುಡೀತೀಯಾ?” ಅಂದೆ ಅವಳತ್ತ ನೋಡದೇ.  ಯಾಕಾಗಬಾರದು?” ಎಂಬ ಉತ್ತರ ಬಂತು.  ಒಂದರ ಬದಲು ಎರಡು ಟೀ ಕಳಿಸುವಂತೆ ಕಿಚನ್‌‍ಗೆ ಹೇಳಿದೆ.  ಎರಡು ನಿಮಿಷದಲ್ಲಿ ಟೀ ಬಂತು.  ಅಷ್ಟರಲ್ಲಿ ಅವಳು ಬೆಳಗಿನಿಂದ ನಾ ಮಾಡಿದ್ದ ಕೆಲಸಗಳ ವಿವರ ಪಡೆದುಕೊಂಡಾಗಿತ್ತು.  ತನ್ನದೇನನ್ನೂ ಹೇಳಲಿಲ್ಲ.  ಟೀ ಲೋಟಕ್ಕೆ ತುಟಿಯೊತ್ತಿ ಮೌನವಾದಳು.  ಆಗ ನನಗನಿಸಿದ್ದು ನನಗೂ ಮೌನದ ಅಗತ್ಯವಿತ್ತೆಂದು.

ಖಾಲಿ ಲೋಟ ಕೆಳಗಿಡುತ್ತಲೇ ಮಾತು ಆರಂಭಿಸಿದಳು: “ನಿನ್ನ ಬರ್ತ್‌‍ಡೇ ಯಾವತ್ತು?”

ಪ್ರಶ್ನೆ ಅನಿರೀಕ್ಷಿತವಷ್ಟೇ ಅಲ್ಲ, ಅನಗತ್ಯವೂ ಸಹಾ ಅನಿಸಿಅದು ಯಾಕೆ?” ಅಂದೆ.

“ಸುಮ್ನೆ ಕೇಳಿದೆ.  ಹೇಳು, ಒತ್ತಾಯ ಮಾಡಿಸ್ಕೋಬೇಡ.”

“ಜುಲೈ ಒಂದು.”  ಮಾತು ಬೆಳೆಸುವ ಅಗತ್ಯ ನನಗೆ ಕಾಣಲಿಲ್ಲ.

ಛಕ್ಕನೆ ನನ್ನ ಭುಜ ಹಿಡಿದಳು.  ಅಂದ್ರೆ ನೀನು ಕ್ಯಾನ್ಸೇರಿಯನ್!  ಕಟಕ ರಾಶಿಯೋನು!  ಹ್ಞುಹ್!”  ಒಮ್ಮೆ ಹೂಂಕರಿಸಿ ನನ್ನ ಭುಜದಿಂದ ಕೈ ತೆಗೆದಳು.  ನನ್ನದು ಮಾರ್ಚ್ ಹದಿಮೂರು.  ನಾನು ಮೀನ ರಾಶಿಯೋಳು.  ಲಿಂಡಾ ಗುಡ್‌‍ಮನ್ ಏನು ಹೇಳ್ತಾಳೆ ಗೊತ್ತಾ?”  ಪ್ರಶ್ನಿಸಿದಳು.

“ಅದ್ಯಾರು ಅವಳು?”  ತುಸು ಅಸಹನೆಯಿಂದಲೇ ಪ್ರಶ್ನಿಸಿದೆ.  ನನ್ನ ಸಂಜೆ ಯಾಕೋ ಅಸಂಗತವಾಗುತ್ತಿದೆ.  ಗಿರಿಜೆಯ ಫೋನ್ ಬರಬಾರದೇ ಅನಿಸಿತು.  ನಾನೇ ಕಾಲ್ ಮಾಡೋಣವೆಂದರೆ ಇವಳೆದುರಿಗೆ ಫೋನ್ ಕೈಗೆತ್ತಿಕೊಳ್ಳುವುದು ಅತಿಥಿಗೆ ಅವಮಾನವೆಸಗಿದಂತೆ ಎಂಬ ಅಳುಕಾಯಿತು.

ಅವಳು ನಕ್ಕಳು.  ಲಿಂಡಾ ಗುಡ್‍ಮನ್ ಗೊತ್ತಿಲ್ಲ!  ನೀನು ಪೆದ್ದ ಅಂತ ಬೆಳಿಗ್ಗೇನೇ ಗೊತ್ತಾಯ್ತು.  ಇಷ್ಟು ಪೆದ್ದ ಆಂತ ಗೊತ್ತಿರ್ಲಿಲ್ಲ.”  ದೇಹವನ್ನು ಹಿಂದೆ ಚೆಲ್ಲಿ ನಿಡಿದಾಗಿ ನಕ್ಕಳು,  ಇಪ್ಪತ್ತನೆಯ ಶತಮಾನದ ಮಹಾನ್ ಜ್ಯೋತಿಷಿ ಅವಳು.  ಹಿಂದೆ ಹುಟ್ಟಿರೋ, ಮುಂದೆ ಹುಟ್ಟೋ ಯಾವ ಯಾವ ರಾಶಿಯವರಿಗೆ ಯಾವ ಯಾವ ತಿಕ್ಕಲುಗಳಿರ್ತವೆ ಅನ್ನೋದನ್ನೆಲ್ಲಾ ಸಾರಾಸಗಟಾಗಿ ಬರೆದಿಟ್ಟುಬಿಟ್ಟಿರೋ ಮೇಧಾವಿ.  ಯಾರ್ಯಾರಿಗೆ ಯಾರು ಜೋಡಿ ಅಂತ ಕರಾರುವಾಕ್ಕಾಗಿ ಹೇಳೊ ಮಹಾನ್ ಮ್ಯಾಚ್‌‍ಮೇಕರ್.”

ನನ್ನ ತಲೆ ತಿರುಗತೊಡಗಿತು.  ಅವಳು ಮುಂದುವರೆಸಿದಳು: “ಅವಳು ಹೇಳೋದೇನು ಅಂದ್ರೆ ಅತ್ಯಂತ ಸಮರ್ಪಕ ಜೋಡಿ ಅಂದ್ರೆ ಕಟಕ ರಾಶಿಯ ಗಂಡಸು ಮತ್ತು ಮೀನ ರಾಶಿಯ ಹೆಂಗಸು.  ಅಂದ್ರೆ ನಾನು ಮತ್ತು ನೀನು.”

ನನಗೇ ಅಚ್ಚರಿಯಾಗುವಂತೆ ನನಗೆ ನಿರಾಳ ನಗೆ ಬಂತು.  ನಗತೊಡಗಿದೆ.  ಅವಳೂ ನಕ್ಕಳು.  ನಗುತ್ತಲೇ ಹೇಳಿದಳು: “ನಗಬೇಡ ನೀನು.  ಕಟಕ ರಾಶಿಯ ಗಂಡಸು ಮತ್ತು ಮೀನ ರಾಶಿಯ ಹೆಂಗಸಿನ ಜೋಡಿ ಅಂದ್ರೆ ಅದು ಫೇರಿ ಟೇಲ್ ರೊಮಾನ್ಸ್ ಅಂತ ಡಿಕ್ಲೇರ್ ಮಾಡಿಬಿಟ್ಟಿದ್ದಾಳೆ ಲಿಂಡಾ ಗುಡ್‌‍ಮನ್.”

ನನ್ನ ನಗೆ ನಿಲ್ಲಲಿಲ್ಲ.  ನಗುತ್ತಲೇ ಗಿರಿಜೆಯ ಹುಟ್ಟಿದ ದಿನ ನೆನಪಿಸಿಕೊಂಡೆ.  ಜೂನ್ ಏಳು ನನಗೆ ಅತ್ಯಂತ ಇಷ್ಟದ, ಸಂಭ್ರಮದ ದಿನ.

“ಜೂನ್ ಏಳರಂದು ಹುಟ್ಟಿದವರು ಯಾವ ರಾಶಿ ಅಂತಾಳೆ ಲಿಂಡಾ ಗುಡ್‌‍ಮನ್?” ನಗು ತಡೆಯುತ್ತಾ ಪ್ರಶ್ನಿಸಿದೆ.

“ಜೂನ್ ಏಳು!  ಅದು ಮಿಥುನ.”  ಅವಳು ಗೊಂದಲಗೊಂಡಂತೆ ಕಂಡಳು.

“ನಿನ್ನ ಮಹಾನ್ ಜ್ಯೋತಿಷಿಗೆ ಹೇಳು, ಕಟಕ ರಾಶಿಯ ಗಂಡಸು ಮತ್ತು ಮಿಥುನ ರಾಶಿಯ ಹೆಂಗಸು ಅತ್ಯಂತ ಸಮರ್ಪಕ ಜೋಡಿ ಅಂತ.”

“ಆದರೆ ನನ್ನದು ಮಿಥುನ ರಾಶಿ ಅಲ್ಲವಲ್ಲ?”  ಅವಳು ಗಹಗಹಿಸಿದಳು.  ನಗುತ್ತಲೇ ಸೋಫಾದಲ್ಲಿ ಹಿಂದಕ್ಕೆ ಒರಗಿದಳು.  ಕಣ್ಣುಗಳು ಮುಚ್ಚಿಕೊಂಡವು.  ತುಟಿಗಳು ನಗೆ ಕಳೆದುಕೊಂಡು ಬಿಗಿದುಕೊಂಡವು.  ನಾನು ಗಲಿಬಿಲಿಗೊಂಡೆ.  ಬೆಳಗಿನ ಭೇಟಿ, ಸಂಜೆಯ ಇಡೀ ಸಂಭಾಷಣೆ ಎಲ್ಲವೂ ಮುಂದೆ ಅನಾವರಣಗೊಳ್ಳಲಿರುವ ಯಾವುದೋ ಅನೂಹ್ಯ ಗಹನ ಪ್ರಕರಣವೊಂದಕ್ಕೆ ಮುನ್ನುಡಿಯೇ ಎಂಬ ವಿಚಿತ್ರ ಯೋಚನೆ ಎಲ್ಲಿಂದಲೋ ಹಾರಿ ಬಂದು ಮನಸ್ಸಿಡೀ ತುಂಬಿಕೊಂಡು ಎದೆ ಹಿಂಡಿತು.  ದನಿಯನ್ನು ಸಹಜತೆಗೆ ತರಲು ಹೆಣಗುತ್ತಾ ಪ್ರಶ್ನೆ ಹಾಕಿದೆ: “ಅದೆಲ್ಲಾ ಇರಲಿ ಬಿಡು.  ನಮ್ಮ ಪರಿಚಯವೇ ಆಗಿಲ್ಲವಲ್ಲ?  ನೀನು ಯಾರು, ಎಲ್ಲಿಯವಳು?  ಅದನ್ನ ತಿಳಕೋಬಾರದಾ ನಾನು?”  ತೆಳ್ಳಗೆ ನಗುತ್ತಾ ಸಣ್ಣನೆಯ ದನಿಯಲ್ಲಿ ಮುಂದುವರೆಸಿದೆ: “ಅದಾದ ಮೇಲಲ್ಲವಾ ನಾವಿಬ್ಬರೂ ಒಳ್ಳೆಯ ಜೋಡಿ ಹೌದಾ ಅಲ್ಲವಾ ಅಂತ ನಿರ್ಧರಿಸೋದು.”

“ಅಹ್!  ನಿನಗೆ ಸೆನ್ಸ್ ಆಫ್ ಹ್ಯೂಮರ್ ಇದೆ!  ಲಿಂಡಾ ಗುಡ್‌‍ಮನ್ ಹೇಳೋ ಇನ್ನೊಂದು ಮಾತು ನಿಜ ಆಯ್ತು!”  ದೇಹವನ್ನು ಹಿಂದೆ ಮುಂದೆ ತೂಗಾಡಿಸಿದಳು.  ನಾನು ತಾಳ್ಮೆಯಿಂದ ಕಾದೆ.  ಅವಳು ನಿರಾಶೆಗೊಳಿಸಲಿಲ್ಲ.  ಆದರೆ ಅವಳು ಹಾಕಿದ ನಿಬಂಧನೆ ಮೊದಲು ಊಟ ಮಾಡುವುದು.  ಅವಳು ಮಧ್ಯಾಹ್ನ ಏನೂ ತಿಂದಿರಲಿಲ್ಲವಂತೆ.  ಇಬ್ಬರೂ ಒಟ್ಟಿಗೆ ಡೈನಿಂಗ್ ಹಾಲ್‌‍ಗೆ ಹೋದೆವು.  ಹಸಿದಿದ್ದಾಳೆಂದು ಅವಳಿಗಾಗಿ ನಾನು ಏನೇನೋ ಆರ್ಡರ್ ಮಾಡಲು ಹೋದರೆ ಅವಳು ನನ್ನ ಮುಂಗೈ ಹಿಡಿದು ತಡೆದಳು.  ಮೆನ್ಯೂ ಮೇಲೆ ಒಮ್ಮೆ ಮಿಂಚುಹೋಟ ಹರಿಸಿ ನನ್ನತ್ತ ತಳ್ಳಿದಳು.  ತನಗೆಂದು ಸ್ಯಾಂಡ್‌‍ವಿಚ್ ಮತ್ತು ಆರೆಂಜ್ ಜ್ಯೂಸ್‌‍ಗಷ್ಟೇ ಆರ್ಡರ್ ಮಾಡಿದಳು.  ನಾನು ಅಚ್ಚರಿಯಲ್ಲಿ ಕಣ್ಣರಳಿಸಿದರೆ ನಗೆಯರಳಿಸಿದಳು: “ನನಗೆ ನಲವತ್ತಾರಾಯ್ತು.  ನಲವತ್ತಾದ ಮೇಲೆ ಎಷ್ಟು ಕಡಿಮೆ ತಿಂದರೆ ಅಷ್ಟು ಒಳ್ಳೆಯರು.”   ಅದೆಲ್ಲವನ್ನೂ ನಾನೂ ಕೇಳಿದ್ದೆ, ಇತರರಿಗೂ ಹೇಳಿದ್ದೆ.  ಆದರೆ ಅವಳು ಮುಂದೆ ಹೇಳಿದ ಮಾತು ಮಾತ್ರ ನನಗೆ ಪೂರ್ತಿ ಹೊಸದಾಗಿತ್ತು.  ನನ್ನ ಮುಂಗೈ ಹಿಡಿದಂತೇ, ಮುಖದಲ್ಲಿ ನಗೆ ತೇಲಿಸಿಕೊಂಡೇ ನಿಧಾನವಾಗಿ ದನಿ ಹರಿಸಿದಳು: “ಕಟ್ತಾ ಇರೋ ಮನೇಗೆ ಕಲ್ಲು, ಇಟ್ಟಿಗೆ, ಗಾರೆ, ಸಿಮೆಂಟ್ ಎಲ್ಲವೂ ಸಾಕಷ್ಟು ಬೇಕು.  ಯಾವುದೊಂದು ಸ್ವಲ್ಪ ಕಡಿಮೆಯಾದ್ರೂ ಕಟ್ಟಡ ಒಂದಲ್ಲಾ ಒಂದು ಬಗೇಲಿ ಹಾನಿಗೊಳಗಾಗುತ್ತೆ.  ಕಟ್ಟಿರೋ ಮನೇಗೆ ಅಷ್ಟೆಲ್ಲಾ ಬೇಕಾಗೋದಿಲ್ಲ.  ಬರೀ ಮೇಂಟೆನನ್ಸ್ ನೋಡಿಕೊಂಡ್ರೆ ಸಾಕು.  ಮೊದಲಿನ  ಹಾಗೇ ಎಲ್ಲಾನೂ ತಂದು ಸುರಿದ್ರೆ ಅದು ಎಲ್ಲ ಕಡೆ ಅಡ್ಡಾದಿಡ್ಡಿಯಾಗಿ ಹರಡ್ಕೊಂಡು ಕಟ್ಟಡ ಇರಬೇಕಾದ ರೀತಿಲಿ ಇರದ ಹಾಗಾಗಿಬಿಡುತ್ತೆ, ಸರಿಯಾದ ಉಪಯೋಗಕ್ಕೆ ಬರದ ಹಾಗಾಗಿಬಿಡುತ್ತೆ.  ನಮ್ಮ ವಯಸ್ಸಿನವರ ಶರೀರ ಕಟ್ಟಿರೋ ಮನೇ ಹಾಗೆ.  ಸಿಕ್ಕಾಪಟ್ಟೆ ತುಂಬಿಕೊಳ್ಳಬಾರದು.  ಬರೀ ಮೇಂಟೆನೆನ್ಸ್ ಸಾಕು.  ಇಲ್ಲಾಂದ್ರೆ ಅನಗತ್ಯವಾಗಿ ತಂದು ಸುರಿದ್ದೆಲ್ಲಾ ಶರೀರದಲ್ಲಿ ಬೇಡದ ಜಾಗಗಳಲ್ಲಿ ತುಂಬಿಕೊಳ್ಳುತ್ತೆ.  ಅದರಿಂದ ಅನಾಹುತವೇ ಜಾಸ್ತಿ.”  ಏನು ಹೇಳಬೇಕೆಂದು ಗೊತ್ತಾಗಲಿಲ್ಲ.  ಸರಿ ಡಾಕ್ಟರಮ್ಮಾ” ಎಂದು ಕೈಮುಗಿದು ಎರಡು ಚಪಾತಿ ಮತ್ತು ದಾಲ್‌‍ಗಷ್ಟೇ ನನ್ನ ಆರ್ಡರ್ ಸೀಮಿತಗೊಳಿಸಿದೆ.

ಊಟದ ನಡುವೆ ಗಿರಿಜೆಯ ಕರೆ ಬಂತು.  ಕಥೆ ಬರಿತಿದೀನ್ರೀ.”  ಖುಷಿಯಿಂದ ಕೂಗಿದಳು,ಆರಂಭ ಸೊಗಸಾಗಿದೆ.”  ಉತ್ಸಾಹದ ನಗೆ.  ಆಲ್ ಬೆಸ್ಟ್” ಎಂದೆ ನಗುತ್ತಾ.

ಊಟದ ನಂತರ ಮೆಟ್ಟಲುಗಳತ್ತ ಹೊರಟ ನನ್ನ ಕೈ ಹಿಡಿದು ಅವಳು ಸ್ವಿಮಿಂಗ್ ಪೂಲ್‌‍ನತ್ತ ನಡೆಸಿದಳು.  ನಸುಬೆಳಕಿನಲ್ಲಿ ಹುಲ್ಲುಹಾಸಿನ ಮೇಲೆ ಕುಳಿತು “ಮೈ ಡಿಯರ್ ಓಲ್ಡ್ ಬಾಯ್, ಲಿಸನ್” ಎಂದು ಆರಂಭಿಸಿದಳು.

*     *     *

                ಅಮ್ಯಾಂಡಾ ಹೊರಟುಹೋದ ಮೇಲೆ ಅದೆಷ್ಟೋ ಹೊತ್ತು ನಾನು ಬೆಪ್ಪುಬಡಿದಂತೆ ಕುಳಿತಿದ್ದೆ.  ಕೊಲರ್ಯಾಡೋದ ಬೆಟ್ಟಗಳ ಸೀಮೆಯ ಬೌಲ್ಡರ್ ನಗರದ ಯಶಸ್ವಿ ವೈದ್ಯೆ, ನಲವತ್ತಾರರ ಡಾಕ್ಟರ್ ಅಮ್ಯಾಂಡಾ ಹಾರ್ವೆ ಒಮ್ಮೆ ನೇರವಾಗಿ ನೋಡುತ್ತಾ, ಒಮ್ಮೆ ನೋಟ ತಪ್ಪಿಸುತ್ತಾ, ಒಮ್ಮೆ ನಗುತ್ತಾ, ಒಮ್ಮೆ ರೆಪ್ಪೆಗಳಿಂದ ಕಣ್ಣೀರನ್ನು ಒತ್ತುತ್ತಾ, ಒಮ್ಮೆ ಮಂದವಾಗಿ ಹರಿಯುವ ನದಿಯಂತಹ ಒಮ್ಮೆ ಧೋ ಎನ್ನುವ ಜಲಪಾತದಂತಹ ದನಿಯಲ್ಲಿ ಇಡೀ ಮುಕ್ಕಾಲು ಗಂಟೆಗಳವರೆಗೆ ಹೇಳಿದ ಮಾತುಗಳನ್ನು ಅರಗಿಸಿಕೊಳ್ಳಲು ಹೆಣಗುತ್ತಿದ್ದೆ.  ಅವಳೆಲ್ಲ ಹೇಳಿ ಮುಗಿಸಿದ ಮೇಲೆ ನನ್ನಲ್ಲಿ ಯಾವ ಪ್ರಶ್ನೆಗಳೂ ಉಳಿದಿರಲಿಲ್ಲ.

                ಇಪ್ಪತ್ತೊಂದಕ್ಕೆ ಬಾಲ್ಯದ ಗೆಳೆಯನೊಡನೆ ಮದುವೆ, ಇಪ್ಪತ್ತಮೂರಕ್ಕೆ ವಿಚ್ಚೇದನ.  ನೋವನ್ನು ಮರೆಸುವಂತೆ ಬಾಳಲ್ಲಿ ಅಡಿಯಿಟ್ಟ ಜೀವದ ಗೆಳೆಯ ನೀಲ್ ಅಲೆಕ್ಸಾಂಡರ್...  ಯೆಸ್, ಅವನೊಬ್ಬ ಕ್ಯಾನ್ಸೇರಿಯನ್.  ಲಿಂಡಾ ಗುಡ್‌‍ಮನ್ ಮಾತಿನಂತೆ ಮೀನ ರಾಶಿಯ ಅವಳು ಮತ್ತು ಕಟಕ ರಾಶಿಯ ಅವನ ನಡುವಿನ ಪ್ರೇಮ ಒಂದು ಫೇರಿ ಟೇಲ್ ರೊಮ್ಯಾನ್ಸ್...  ಜೀಸಸ್‌‍ ಕರುಣೆ ಅವಳ ಮೇಲೆ ಅಪಾರವಾಗಿತ್ತು.

ಆದರೆ ಡೆವಿಲ್ ಬೇರೆಯದೇ ತಂತ್ರ ಹೂಡಿದ.

ಅಕರ್ಷಕ ವ್ಯಕ್ತಿತ್ವದ ಅವಳಿಗೆ ಗೆಳೆಯರಿಗೆ ಕೊರತೆಯಿರಲಿಲ್ಲ.  ಕೆಲವರ ಜತೆ ಅವಳ ಸ್ನೇಹ ನೀಲ್‌‍ ಮನಸ್ಸು ಕುಗ್ಗಿಸುವಷ್ಟು ಮಟ್ಟದಲ್ಲಿ.  ಬೇಸರಗೊಂಡು ಬುದ್ಧಿ ಹೇಳಿದ, ವ್ಯಗ್ರಗೊಂಡು ಬೆದರಿಸಿದ.  ಒಪ್ಪಿಕೊಂಡಳು.  ಅದು ಅವನ ನೆಮ್ಮದಿಗೆ ಮಾತ್ರ.  ಅವನನ್ನು ಕಳೆದುಕೊಳ್ಳಲು ಅವಳು ತಯಾರಿರಲಿಲ್ಲ.  ಆದರೆ ಗೆಳೆಯರನ್ನಂತೂ ದೂರೀಕರಿಸಲಿಲ್ಲ.  ಸ್ನೇಹಗಳು ಓದಿಗೆ, ಮುಂದೆ ನೌಕರಿಗೆ ಸಹಕಾರಿಯಾಗುತ್ತವೆಂಬ ಲೆಕ್ಕಾಚಾರ...  ಅದೇನು ಮರುಳೋ.

ಪರಿಣಾಮ...

ಅರೆ ಏನಾಯಿತು?  ಆಗುವುದೇ ಆಯಿತು!

ತನ್ನಿಷ್ಟ ಬಂದಂತೆ ಅವಳನ್ನು ನಿಲ್ಲಿಸಿ, ಕೂರಿಸಿ, ಮಲಗಿಸಿ ಅವನು ಅಸ್ಥೆಯಿಂದ ತೆಗೆದಿದ್ದ ಫೋಟೋಗಳಲ್ಲಿ ಕೆಲವು ಅವಳ ಮತ್ತೊಬ್ಬ ಸ್ನೇಹಿತನ ಕಂಪ್ಯೂಟರ್‍‍ನಲ್ಲಿರುವುದಾಗಿ ಇನ್ನೊಬ್ಬರಿಂದ ಅರಿತ ನೀಲ್ ಕಂಗೆಟ್ಟುಹೋದ.  ಅವಳು ವಿವರಣೆ ಕೊಡಲು ಹೋದಳು.  ಅವನಿಗದು ಬೇಕಾಗಿರಲಿಲ್ಲ.  ವಿವರಣೆಗಳ ಅಗತ್ಯ ಕಾಣಿಸಿಕೊಳ್ಳುವ ಸಂಬಂಧಗಳು ಅರ್ಥಹೀನ, ಅವುಗಳಿಗೆ ಭವಿಷ್ಯವಿಲ್ಲ ಎಂದು ನಡುಗುವ ದನಿಯಲ್ಲಿ ಹೇಳಿದ.  ಅವಳಿಗೆ ವಿದಾಯ ಹೇಳಿ ಹೊರಟುಹೋದ.

ಅವನ ಬೆಲೆ ಏನೆಂದು ಅವಳಿಗೆ ಅರಿವಾದದ್ದು ಆಮೇಲೆಯೇ.

'ಅವನು ನನಗೆಲ್ಲವನ್ನೂ ಕೊಟ್ಟಿದ್ದ, ಬದುಕುಪೂರ್ತಿ ಬಯಸಿದ್ದೆಲ್ಲವನ್ನೂ ಕೊಡಬಲ್ಲವನೂ ಆಗಿದ್ದ.  ಬದುಕಿಗೆ ಮತ್ತೊಬ್ಬ ಗಂಡಸಿನ ಅಗತ್ಯವಿರಲೇ ಇಲ್ಲ.  ಇಷ್ಟಾಗಿಯೂ ನಾನು ಬೇರೆ ಗೆಳೆತನಗಳ ಸೆಳೆತಕ್ಕೆ ಯಾಕೆ ಒಳಗಾದೆ ಎಂದು ನನಗಿನ್ನೂ ಅರ್ಥವಾಗಿಲ್ಲ.'  ಬಿಕ್ಕುಗಳ ನಡುವೆ ಅರ್ತವಾಗಿ ದನಿ ಎಳೆದಿದ್ದಳು ಅಮ್ಯಾಂಡಾ.

ಅವನನ್ನು ಪರಿಪರಿಯಾಗಿ ಬೇಡಿದಳು, ಕಾಡಿದಳು.  ಉಹ್ಞುಂ ಅವನು ಕರಗಲೇ ಇಲ್ಲ.  ಅವಳಿಂದ ಶಾಶ್ವತವಾಗಿ ದೂರವಾಗುವ ಇರಾದೆಯಿಂದಲೋ ಏನೋ ಒಂದು ದಿನ ಮಾಯವಾದ.  ಎಲ್ಲಿಗೆ ಹೋದ ಎಂದು ಅವಳಿಗೆ ತಿಳಿಯಲೇ ಇಲ್ಲ.

ಹೋಗುವವನು ತನ್ನ ಗರ್ಭದಲ್ಲಿ ಗುರುತು ಬಿಟ್ಟುಹೋಗಿರುವ ಸುಳಿವು ಅವಳಿಗೆ ಸಿಕ್ಕಿದಾಗ ಅಷ್ಟಾದರೂ ದಕ್ಕಿತಲ್ಲ ಬಾಳಿಗೆ ಎಂದವಳು ತನ್ನನ್ನೇ ತಾನು ಸಮಾಧಾನಿಸಿಕೊಂಡಳು.  ಇನ್ನು ಏಳು ತಿಂಗಳು ಕಾತರದಿಂದ ಕಾದು, ಮಡಿಲು ತುಂಬಿದ ಮಗನನ್ನು ಮುದ್ದಿನಿಂದ ಬೆಳೆಸಿದಳು.  ಮಗ ಬೋರ್ಡಿಂಗ್ ಸ್ಕೂಲ್‌‍ಗೆ ಹೊರಟುಹೋಗುತ್ತಿದ್ದಂತೇ ವೈದ್ಯಕೀಯ ಶಿಕ್ಷಣ ಪೂರ್ಣ, ವೈದ್ಯ ವೃತ್ತಿಯ ಆರಂಭ.  ಅದರ ಜತೆಗಂಟಿಬಂದ ಏಕಾಂಗಿ ಬದುಕು...  ಮಗನ ಸಾಮೀಪ್ಯ ಕ್ರಿಸ್‌‍ಮಸ್ ರಜೆಯಲ್ಲಿ ಮಾತ್ರ.

                'ಆಮೇಲೆ ನನಗೆ ಬದುಕಿನಲ್ಲಿ ಗಂಡಸಿನ ಅಗತ್ಯವಿದೆ ಅಂತೆನಿಸಲೇ ಇಲ್ಲ' ಅಂದಿದ್ದಳು ತುಂಟನಗೆ ನಗುತ್ತಾ.  ಮರುಕ್ಷಣ 'ಕಳೆದವರ್ಷದವರೆಗೆ' ಎಂದು ಪಿಸುಗಿ ಕಣ್ಣುಗಳನ್ನು ಥಟಕ್ಕನೆ ಮುಚ್ಚಿ ತಲೆತಗ್ಗಿಸಿಬಿಟ್ಟಿದ್ದಳು.

                ತಗ್ಗಿದ ತಲೆಯನ್ನು ಮೇಲೆತ್ತದೆ ಮುಂದುವರೆಸಿದ್ದಳು: 'ನನ್ನ ಮಗ ಡ್ಯಾನ್ ಹೋಗಿಬಿಟ್ಟ, ಕಳೆದ ಜುಲೈ ಒಂದರಂದು.'

ನಾನು ಅಚ್ಚರಿ, ನೋವಿನಲ್ಲಿ 'ಅಂ!  ಜುಲೈ ಒಂದು!' ಎಂದೆ.  ನನ್ನ ದನಿ ಚೀರಿದಂತಿತ್ತೆನಿಸಿ ಅವಳತ್ತ ಬಾಗಿದೆ.  ಅವಳು ನನ್ನತ್ತ ನೋಡದೇ ಮಗನ ಬಗೆಗಿನ ವಿವರಗಳನ್ನು ಬಿಡಿಬಿಡಿ ಪದಗಳಲ್ಲಿ ಹೊರಹಾಕಿಬಿಟ್ಟಿದ್ದಳು.

ಯುಎಸ್ ಏರ್‍‍ಫೋರ್ಸ್‌‍ನಲ್ಲಿ ಫೈಟರ್ ಬಾಂಬರ್‍‍ನ ಪೈಲಟ್ ಆಗಿದ್ದ ಡ್ಯಾನಿಯೆಲ್ ಅಫ್ಘಾನಿಸ್ತಾನಕ್ಕೆ ಹೋದದ್ದು ಮಾರ್ಚ್ ಹದಿಮೂರರಂದು, ಬಗ್ರಾನ್ ವಾಯುನೆಲೆಯ ಮೇಲಿನ ತಾಲಿಬಾನ್ ದಾಳಿಯಲ್ಲಿ ಅವನ ವಿಮಾನ ಅವನನ್ನೂ ಹೊತ್ತುಕೊಂಡು ಸುಟ್ಟುಹೋದದ್ದು ಜುಲೈ ಒಂದರಂದು.

ತಾಯಿಗೆ ಗುಡ್‌‍ಬೈ ಹೇಳಿ ಮಗ ನಗುಮುಖ ಹೊತ್ತು ಮತ್ಯಾರದೋ ಯುದ್ಧದಲ್ಲಿ ಕಾದಾಡಲು ದೂರದೇಶಕ್ಕೆ ಹಾರಿಹೋದದ್ದು ಅವಳ ಹುಟ್ಟಿದ ಹಬ್ಬದ ದಿನ, ದುರ್ಮರಣ ಹೊಂದಿದ್ದು ನನ್ನ ಹುಟ್ಟಿದ ಹಬ್ಬದ ದಿನ.  ಕಾಕತಾಳೀಯಗಳು ಹೀಗೂ ಇರುತ್ತವೆಯೇ?

ಕೆಲವೇ ನಿಮಿಷಗಳ ಹಿಂದೆ ನಮ್ಮಿಬ್ಬರ ಜನ್ಮದಿನಾಂಕಗಳ ಬಗ್ಗೆ ಲಹರಿಯಲ್ಲಿ ನಗುತ್ತಾ ಮಾತಾಡುತ್ತಿದ್ದಾಗ ಅವಳೆದೆಯಲ್ಲಿ ಅದೆಂತಹ ದಾವಾನಲ ಉಕ್ಕಿ ಹರಿಯುತ್ತಿದ್ದಿರಬಹುದು!

ಡ್ಯಾನ್ ಹೊರಟುಹೋದ ಮೇಲೆ ಅವಳಿಗೆ ಜಗತ್ತು ಶೂನ್ಯ.  ಅದನ್ನು ತುಂಬಲು ಪ್ರಯತ್ನಿಸಿದ್ದು ನೀಲ್‌‍ ನೆನಪು.  ಅದು ಎಷ್ಟರಮಟ್ಟಿಗೆ ಹೋಯಿತೆಂದರೆ ನೀಲ್ ಬೇಕೇಬೇಕು ಎನ್ನುವಷ್ಟು.  ಅವನಿಗಾಗಿ ಹುಡುಕಾಟ ಕೊನೆಗೂ ಫಲ ಕೊಟ್ಟಿತ್ತು.

ಬ್ರೆಜ಼ಿಲ್. ಸೌತ್ ಆಫ್ರಿಕಾ, ಇಥಿಯೋಪಿಯಾಗಳಲ್ಲಿ ಅಲೆಮಾರಿಯ ಬದುಕು ಸವೆಸಿದ ನಂತರ ನೀಲ್ ಈಗ ಆಯ್ಕೆ ಮಾಡಿಕೊಂಡಿರುವುದು ಆರೋವಿಲ್.  ಸಿಟಿ  ಆಫ್ ಡಾನ್!

ಪಾಂಡಿಚೆರಿಯ ಅರವಿಂದಾಶ್ರಮದ ಮಾತೆಯ ಕನಸಿನ ಕೂಸು, ವಿವಿಧ ರಾಷ್ಟ್ರೀಯತೆಗಳ, ಜನಾಂಗಗಳ, ಭಾಷೆಗಳ, ಧರ್ಮಗಳ ಜನ ಒಟ್ಟಾಗಿ ಬಾಳುತ್ತಿರುವ ಅಂತರರಾಷ್ಟ್ರೀಯ ಪಟ್ಟಣ, ಆಶ್ರಮಧಂಥಾ ಪ್ರಶಾಂತ ಸ್ಥಳ ಈಗ ಅಲೆಮಾರಿ ನೀಲ್‌‍ ನೆಲೆ.

'ಅವನನ್ನ ಹುಡುಕ್ಕೊಂಡು ಬಂದೆ ಇಲ್ಲಿಗೆ.  ಬೆಳಿಗ್ಗೆ ಆತುರಾತುರವಾಗಿ ಓಡಿದ್ದು ಅಲ್ಲಿಗೇ.  ಆದರೆ ಅವನು ಸಿಗಲಿಲ್ಲ.  ಅವನ ಹೆಂಡತಿ ಇದ್ದಳು.'

ನಾನು ಕಣ್ಣರಳಿಸಿದ್ದೆ.

'ಲೋಕಲ್ ಅವಳು.  ಚಂದದ ಕಪ್ಪು ಹೆಣ್ಣು.  ಸೊಗಸಾಗಿ ನಗೆ ಅರಳಿಸ್ತಾಳೆ.  ಆದರೆ...'

'..........'

'ಅವಳಿಗೆ ಇಂಗ್ಲಿಷ್ ಬರೋದಿಲ್ಲ.  ನನ್ನ ಯಾವ ಪ್ರಶ್ನೆಗಳಿಗೂ ಅವಳಿಂದ ಉತ್ತರ ಸಿಗ್ಲಿಲ್ಲ.  ತಿಳಿದದ್ದು ಇಷ್ಟೇ- ನೀಲ್ ಎಲ್ಲೋ ಹೋಗಿದ್ದಾನೆ, ಬರೋದಕ್ಕೆ ತುಂಬ ದಿನ ಆಗುತ್ತೆ.'

ಹೇಳಲು ಕೇಳಲು ಏನೂ ಇಲ್ಲದಂತಹ ಮೌನ ನಮ್ಮ ನಡುವೆ ನಿಂತು ಆಕಳಿಸಿತು.  ಅದನ್ನು ಭಂಗಿಸಿದವಳು ಅವಳೇ.

‘ನನಗೀಗ ನಿನ್ನ ಸಹಾಯ ಬೇಕಾಗಿದೆ.  ನಾಳೆ ನನ್ನ ಜತೆ ಅರೋವಿಲ್‌‍ಗೆ ಬರಬೇಕು ನೀನು.  ನಾಳೆ ಆಗಲ್ಲ ಅಂದ್ರೆ ನೀನು ಫ್ರೀ ಆಗೋವರೆಗೆ ಕಾಯ್ತೀನಿ ನಾನು.'  ನನ್ನತ್ತ ಬಾಗಿ ಯಾಚಿಸಿದ್ದಳು.  ಇಲ್ಲವೆನ್ನಲು ನನಗೆ ಆಗಲೇ ಇಲ್ಲ.  ಹೇಗೂ ನನ್ನ ಬೆಂಗಳೂರಿನ ಟಿಕೆಟ್ ಆಗಿರುವುದು ನಾಳೆ ರಾತ್ರಿಯ ಬಸ್ಸಿಗೆ

ಯೋಚಿಸಿದ್ದು ಸಾಕೆನಿಸುವ ಹೊತ್ತಿಗೆ ನಿದ್ದೆಯೂ ದೂರಾಗಿರುವ ಅರಿವು ತಟ್ಟಿತು.  ಏಕಾಏಕಿ ಗಿರಿಜೆ ನೆನಪಾದಳು.  ಅರೆ, ಅವಳಿಂದ ಕರೆ ಬಂದು ನಾಲ್ಕು ಗಂಟೆಗಳೇ ಕಳೆದುಹೋಗಿವೆಯಲ್ಲ!

ಕರೆ ಮಾಡಿದೆ.   ಒಂದು ಸ್ಟೇಜ್‌‍ನಲ್ಲಿ ಸ್ಟಕ್ ಆಗ್ಬಿಟ್ಟಿದ್ದೀನಿರೀ...”  ದನಿ ಎಳೆದಳು.

*     *     *

ಬೆಳಿಗ್ಗೆ ಏಳುವ ಹೊತ್ತಿಗೆ ನನ್ನಲ್ಲೊಂದು ಬಗೆಯ ಅಧೀರತೆ ಮನೆ ಮಾಡಿಕೊಂಡಿತ್ತು.  ಅಮ್ಯಾಂಡಾಳ ಹುಡುಕಾಟದಲ್ಲಿ ನನ್ನ ಪಾತ್ರ ಅದೆಷ್ಟರ ಮಟ್ಟಿಗೆ ಉಚಿತವೆಂಬ ಪ್ರಶ್ನೆಯುದಿಸಿ ಉತ್ತರ ಸಿಗದೇ ಗಿರಿಜೆಯ ಮುಂದೆ ತೋಡಿಕೊಂಡೆ.  ಅವಳು ಕಥೆಯ ಗುಂಗಿನಲ್ಲಿದ್ದಳು.  ಇಟೀಸ್ ಓಕೇ.  ದುಭಾಷಿಯಾಗೋದು ತಾನೆ ನಿಮ್ಮ ಪಾತ್ರ?  ಅದನ್ನ ಮಾಡಿಬಿಡ್ರೀ” ಅಂದಳು.

ಅಮ್ಯಾಂಡಾ ಬ್ರೇಕ್‌‍ಫಾಸ್ಟಿಗೇ ಜತೆಯಾದಳು.  ಬೆಳಿಗ್ಗೆಬೆಳಿಗ್ಗೆಯೇ ಆರೋವಿಲ್‌‍ಗೆ ಹೋಗೋಣವೆಂದು ರಾತ್ರಿ ನಿರ್ಧರಿಸಿದ್ದೆವು.  ಟ್ಯಾಕ್ಸಿ ಬುಕ್ ಮಾಡುವುದಾ ಎಂಬ ನನ್ನ ಪ್ರಶ್ನೆಗೆ ಮುಖವರಳಿಸಿ ತಲೆ ಅಲುಗಿಸಿಬಿಟ್ಟಿದ್ದಳು.  'ಬಸ್ಸಿನಲ್ಲಿ ಹೋಗೋಣ.  ಮೀನು ಮಾರೋ ಹೆಂಗಸರ ನಡುವೆ ನಿಂತು ಪ್ರಯಾಣ ಮಾಡೋದು ಖುಶಿ ಕೊಡ್ತು ಈವತ್ತು.  ಅವರ ಲವಲವಿಕೆ, ಜೀವನೋತ್ಸಾಹ ಅದ್ಭುತ' ಅಂದಿದ್ದಳು.  'ಬಸ್ಸಿಳಿದು ಒಂದೂವರೆ-ಎರಡು ಕಿಲೋಮೀಟರ್ ನಡೆಯಬೇಕಲ್ಲ' ಎಂದು ನಾನು ರಾಗ ಎಳೆದರೆ 'ಓಹ್, ಎಷ್ಟು ಚಂದದ ಹಾದಿ ಅದು! ತಿರುತಿರುಗಿಕೊಂಡು ಸಾಗೋ ಕಿರಿದಾದ ರಸ್ತೆ, ಎರಡೂ ಕಡೆ ಗಿಡಮರಗಳು!  ಅಲ್ಲಿ ನಡೆಯೋದು ಅಂದ್ರೆ ಚಂದದ ಅನುಭವ, ಅದರಲ್ಲೂ ನೀನು ಜತೆ ಇದ್ರೆ' ಎಂದು ನನ್ನ ಭುಜದ ಹಿಂಭಾಗಕ್ಕೆ ಹಣೆ ಒತ್ತಿದ್ದಳು.  ಈಗ ಅದೆಲ್ಲವನ್ನೂ ಮರೆತಂತೆ ಬೇರೇನೋ ವಿಷಯವೆತ್ತಿಕೊಂಡು ಗಲಗಲ ಮಾತಾಡುತ್ತಾ ನಗತೊಡಗಿದಳು.  ನನಗೂ ಹಾಯೆನಿಸಿ ಆರೋವಿಲ್ ಸುದ್ಧಿಯನ್ನು ಎತ್ತದೇ ಅವಳ ಮಾತುಗಳಿಗೆ ಮೌನ ನಗೆಯಲ್ಲಿ ಪ್ರತಿಕ್ರಿಯಿಸತೊಡಗಿದೆ.  ನಡುವೆ ನನ್ನ ಫೋನ್ ರಿಂಗಾಯಿತು.  ಪಾಂಡಿಚೆರಿಯದೇ ಯಾವುದೋ ಅಪರಿಚಿತ ಲ್ಯಾಂಡ್‌‍ಲೈನ್ ನಂಬರ್.  ಅಳುಕಿನಿಂದಲೇ ಎತ್ತಿ ಕಿವಿಗಿಡಿದರೆ ಅತ್ತಲಿಂದ ಕೇಳಿಬಂದದ್ದು ಪರಿಚಿತ ಕಾಲೇಜ್ ಪ್ರಿನ್ಸಿಪಾಲ್ ಡಾ. ವೇಲಾಯುಧನ್.  ನೀವು ಪಾಂಡಿಚೆರೀಗೆ ಬಂದಿದ್ದೀರಿ ಅಂತ ಗೊತ್ತಾಯ್ತು.  ಫ್ರೀ ಇದ್ರೆ ನಮ್ ಕಾಲೇಜಿಗೆ ಬನ್ನಿ ಸಾರ್, ಹತ್ತು-ಹತ್ತೂವರೆ ಹೊತ್ತಿಗೆ.  ಮಕ್ಕಳಿಗೆ ನಾಕು ಮಾತು ಹೇಳಿ.  ಹಾಳು ಇಸ್ಲಾಮಿಕ್ ಸ್ಟೇಟ್, ಬಾರ್ಡರ್‍‍ನಲ್ಲಿ ಪಾಕಿ ತಂಟೆ, ಸೈನೋ-ಇಂಡಿಯನ್ ಬಾರ್ಡರ್ ಪ್ರಾಬ್ಲಂ- ಎಷ್ಟೆಲ್ಲಾ ಇವೆ!  ಯಾವ್ದಾದ್ರೂ ಒಂದನ್ನ ಎತ್ಕೊಂಡು ಒಂದೆರಡು ಗಂಟೆ ಮಾತಾಡಿ” ಅಂದರು.  ನನಗೆ ಉತ್ಸಾಹವೆನಿಸಿದರೂ ಅಮ್ಯಾಂಡಾಗೆ ಕೊಟ್ಟಿದ್ದ ಮಾತು ನಾಲಿಗೆಯನ್ನು ಕಟ್ಟಿಹಾಕಿತು.  ಸ್ವಲ್ಪ ಆರೋವಿಲ್‌‍ಗೆ ಹೋಗೋದಿದೆ ಸರ್” ಎನ್ನುತ್ತಾ ದನಿ ಎಳೆದೆ.  ನನ್ನ ಮಾತು ಇಂಗ್ಲಿಷ್‌‍ನಲ್ಲಿತ್ತು.  ಅತ್ತಲಿಂದ ಉತ್ತರ ಬರುವ ಮೊದಲೇ ಅಮ್ಯಾಂಡಾ ನನ್ನ ಮುಂಗೈ ತಟ್ಟಿದಳು.  ಏನಾದ್ರೂ ಗಡ್‌‍ಬಡ್?” ಅಂದಳು.  ಒಂದು ನಿಮಿಷ” ಎಂದು ಫೋನಿಗೆ ಉಸುರಿ ಅಂಗೈಯಿಂದ ಅದನ್ನು ಮುಚ್ಚಿ ಅಮ್ಯಾಂಡಾಳತ್ತ ತಿರುಗಿದೆ.  ಕಾಲೇಜ್‌‍ನಲ್ಲಿ ಲೆಕ್ಚರ್ ಕೊಡೋಕೆ ಸಾಧ್ಯ ಆಗುತ್ತಾ ಅಂತ ಕೇಳ್ತಿದಾರೆ ಪರಿಚಿತ ಪ್ರಿನ್ಸಿಪಾಲ್ ಒಬ್ರು” ಅಂದೆ ಅರ್ಧ ಉತ್ಸಾಹದಲ್ಲಿ, ಅರ್ಧ ನಿರಾಶೆಯಲ್ಲಿ.  ಯಾವಾಗಂತೆ?”  ಮುಖ ಮುಂದೆ ತಂದು ಪಿಸುಗುಟ್ಟಿದಳು.  ಈಗ... ಹತ್ತು-ಹತ್ತೂವರೆಯ ಹೊತ್ತಿಗಂತೆ” ಅಂದೆ.  ಅವಳ ಮುಖದಲ್ಲಿ ಗಾಬರಿ.  ಅದು ಹೇಗೆ ಸಾಧ್ಯ?  ಇಷ್ಟು ತರಾತುರಿಯಲ್ಲಿ ಆಹ್ವಾನ!  ತಿಂಗಳು, ಆರು ತಿಂಗಳ ಮೊದಲೇ ಎಲ್ಲಾ...” ಅಂದವಳುಓಹ್, ಇದು ಇಂಡಿಯಾ!” ಎಂದು ಸೂರಿಗೆ ಮೊಗವೆತ್ತಿದಳು.  ಆಗಲ್ಲ ಅಂದುಬಿಡ್ತೀನಿ” ಅಂದೆ ಸಮಾಧಾನಿಸುವಂತೆ.  ಅವಳು ಸರಕ್ಕನೆ ಮೊಗವಿಳಿಸಿದಳು. “ಬೆಳಿಗ್ಗೆ ತಾನೆ?  ಒಪ್ಕೋ” ಅಂದಳು ಹತ್ತಿರ ಸರಿದು.  ನಾನು ಬೆಚ್ಚಿದೆ.  ಆರೋವಿಲ್?” ಅಂದೆ.  ಮನದಲ್ಲಿ ಗಾಬರಿಯೆನಿಸಿದರೂ ದನಿಯಲ್ಲಿ ನಿರಾಳತೆಯಿದ್ದಂತೆನಿಸಿ, ಅದು ಅವಳಿಗೆ ತಿಳಿದುಹೋದಂತೆಯೂ ಅನಿಸಿ ಎದೆಯ ಗಾಬರಿ ಮುಖಕ್ಕೆ ನುಗ್ಗಿತು.  ಏಕಾಏಕಿ ಸೆಖೆ.  ಇದಾವುದರತ್ತಲೂ ಗಮನವಿಲ್ಲದವಳಂತೆಅಲ್ಲಿಗೆ ಮಧ್ಯಾಹ್ನ ಹೋದರಾಯ್ತು” ಅಂದಳು ತಣ್ಣಗೆ.  ನನ್ನನ್ನ ಕಾದುಕೊಂಡು ನೀಲ್ ಅಲ್ಲಿ ಕೂತಿಲ್ಲವಲ್ಲ?”  ಎನ್ನುತ್ತಾ ಕುಲುಕುಲು ನಕ್ಕಳು.  ನಿರಾಳತೆಗೆ ಸುತ್ತಿಕೊಂಡ ಗೊಂದಲದಲ್ಲಿ ಅರೆಚಣ ತೊಳಲಾಡಿ ಫೋನ್‌‍ಗೆ ಮುಚ್ಚಿದ್ದ ಕೈ ತೆಗೆದೆ.

ನನ್ನ ಜತೆ ಅಮ್ಯಾಂಡಾಳೂ ಹೊರಟುನಿಂತಳು.  ಎರಡುಗಂಟೆ ಮಾತಾಡುವ ಮೂತಿಯಾ ನಿನ್ನದು ಅಂತ ಸ್ವಲ್ಪ ನೋಡಿಯೇಬಿಡುತ್ತೇನೆ, ನಡಿ” ಅಂತ ಅವಳ ವಿವರಣೆ.  ಪ್ರಿನ್ಸಿಪಾಲರು ಕಳಿಸಿದ ಕಾರಿನಲ್ಲಿ ಇಬ್ಬರೂ ಕಾಲೇಜು ಸೇರಿದೆವು.  ಖುಷಿಯಲ್ಲಿದ್ದ ವೇಲಾಯುಧನ್ ಅಮ್ಯಾಂಡಾಳನ್ನು ನೋಡಿ ಮತ್ತಷ್ಟು ಖುಷಿಯಾದರು.  ಗ್ಲಾಡ್ ಟು ಮೀಟ್ ಯು ಅಮ್ಯಾಂಡಾ ಮೇಡಂ” ಎನ್ನುತ್ತಾ ಅವಳ ಎರಡು ಕೈಗಳನ್ನು ಸೇರಿಸಿ ಹಿಡಿದು ಕುಲುಕಿದರು.  ನೆತ್ತಿಯವರೆಗೆ ಬಿಸಿ ಕಾಫಿ ತುಂಬಿದ್ದ ಸ್ಟೀಲ್ ಲೋಟವನ್ನು ಕರವಸ್ತ್ರದಲ್ಲಿ ಸುತ್ತಿ ಹಿಡಿಯಲು ಹೆಣಗುತ್ತಿದ್ದ ಅವಳಿಗೆನೀವೂ ಏನಾದ್ರೂ ಮಾತಾಡಿ” ಅಂದರು.  ನನಗೆ ನಗೆ.  ಎಲ್ಲಾ ಅರೇಂಜ್ ಆಯಿತಾ?” ಎಂದು ಯಾರನ್ನೋ ತಮಿಳಿನಲ್ಲಿ ಕೇಳುತ್ತಾ ಎದ್ದುಹೋದ ವೇಲಾಯುಧನ್‌‍ರಿಂದ ನೋಟ ಹೊರಳಿಸಿನೀನೇ ಮೊದಲು ಮಾತಾಡು” ಅಂದೆ ಅವಳತ್ತ ತುಂಟನಗೆ ನಗುತ್ತಾ.  ಅವಳು ನನ್ನತ್ತ ದುರುಗುಟ್ಟಿದಳು: “ಏನಂತ ತಿಳಿದಿದೀಯ ನನ್ನನ್ನ?  ಜನರಲ್ ಥಾಮಸ್ . ಹಾರ್ವೆ ಹೆಸರು ಕೇಳಿದೀಯ ನೀನು?”

“ಜನರಲ್ ಹಾರ್ವೆ!  ನಿಮ್ಮ ತಾತನಾ?”  ನನ್ನ ನಗೆ ದೊಡ್ಡದಾಯಿತು.

“ತಾತನ ತಾತ ಅವನು.  ಚಟ್ಟನೂಗ ಕದನದಲ್ಲಿ ಅವನದು ಮಹಾನ್ ಪಾತ್ರ.  ನಮ್ಮ ಇತಿಹಾಸದಲ್ಲಿ ದಾಖಲಾಗಿಹೋಗಿದೆ ಅವನ ಹೆಸರು.”

ಚಟ್ಟನೂಗ ಕದನ!  ಬ್ಯಾಟಲ್ ಆಫ್ ಚಟ್ಟನೂಗ!  ನೆನಪಿಸಿಕೊಳ್ಳಲು ಪ್ರಯತ್ನಿಸಿದೆ.  ಅಮೆರಿಕನ್ ಸಿವಿಲ್ ವಾರ್ ಕಥೆ ತಾನೆ ನೀನು ಹೇಳ್ತಿರೋದು?” ಅನುಮಾನದಲ್ಲಿ ಕೇಳಿದೆ.

“ಹ್ಞೂಂ” ಅಂದಳು, “ಯೂನಿಯನ್ ಕಡೆ ಅವನು ಇದ್ದದ್ದು.  ಪ್ರೆಸಿಡೆಂಟ್ ಲಿಂಕನ್‌‍ ಮಹಾ ಬೆಂಬಲಿಗ.  ಕದನವನ್ನ ಯೂನಿಯನ್ ಸೈನ್ಯ ಗೆದ್ದದ್ದೇ ಅವನಿಂದ.  ನನ್ನ ಮೈಯಲ್ಲಿ ಹರೀತಾ ಇರೋದು ವಾರ್ ಹೀರೋ ರಕ್ತ!  ನೆನಪಿಟ್ಕೋ.”

ನಾನು ಸುಸ್ತಾಗಿಹೋದೆ: “ಯುದ್ಧವೀರ ಜನರಲ್ ಹಾರ್ವೆಯ ಮರಿ ಮರಿ ಮೊಮ್ಮಗಳೇ, ಆಹಾ!  ನೀನು ಏನು ಹೇಳೋಕೆ ಪ್ರಯತ್ನಿಸ್ತಿದೀಯ ಗೊತ್ತಾಯ್ತು ಬಿಡು” ಅಂದೆ ಅಣಕಿಸುವ ದನಿಯಲ್ಲಿ.  ಮತ್ತೊಮ್ಮೆ ದುರುಗುಟ್ಟಿದಳು.  ನಾನು ಸೋಲೊಪ್ಪಲು ತಯಾರಿಲ್ಲದೇಆದರೆ, ಇಲ್ಲಿ ನಿನ್ನ ಲೆಕ್ಚರ್ ಆರುತಿಂಗಳ ಹಿಂದೆಯೇ ಫಿಕ್ಸ್ ಆಗಿಲ್ಲವಲ್ಲ?” ಎಂದು ಮತ್ತೊಂದು ಬಾಣ ಬಿಟ್ಟೆ, ತುಂಟನಗೆ ನಗುತ್ತಾ.  ಅವಳು ನನ್ನ ಭುಜಕ್ಕೆ ಬಾರಿಸಿದಳು: “ಫಟಿಂಗ ನೀನು!  ಇಂಡಿಯಾದಲ್ಲಿ ಇಂಡಿಯನ್ ಥರಾ ಇರಬೇಕು ಅನ್ನೋದನ್ನ ನನಗೆ ಕಲಿಸಬೇಡ ನೀನು.”

ನನಗೇ ಅಚ್ಚರಿಯಾಗುವಂತೆ ಮೊದಲು ಮಾತಾಡಿದವಳು ಅಮ್ಯಾಂಡಾ.  ಅಮೆರಿಕನ್ ರಾಜಕೀಯ ವ್ಯವಸ್ಥೆಯ ಬಗ್ಗೆ ಅರ್ಧಗಂಟೆ ಮಾತಾಡಿ, “ನಿರ್ದಿಷ್ಟ ಸಂದೇಹಳಿದ್ದರೆ ಪ್ರಶ್ನೆ ಕೇಳಿ, ಆಗ ನಿಮಗೆ ಉಪಯುಕ್ತ ವಿವರ ನೀಡೋದಿಕ್ಕೆ ನನಗೆ ಸಾಧ್ಯ ಆಗುತ್ತೆ” ಅಂದಳು.  ಮುಂದಿನ ಒಂದುಗಂಟೆ ಹೇಗೆ ಹಾರಿಹೋಯಿತೋ ನನಗೆ ಗೊತ್ತಾಗಲೇ ಇಲ್ಲ.  ಬಂದ ಪ್ರಶ್ನೆಗಳಿಗೆ ನಗುನಗುತ್ತಾ ಉತ್ತರಿಸಿದಳು.  ಎಲ್ಲರಿಗೂ ಇಷ್ಟವಾದದ್ದುಅಮೆರಿಕಾದಲ್ಲೇಕೆ ಮಹಿಳೆಯೊಬ್ಬಳು ರಾಷ್ಟ್ರಾಧ್ಯಕ್ಷೆ ಆಗಿಲ್ಲ?’ ಎನ್ನುವ ಪ್ರಶ್ನೆಗೆ ಅವಳು ನೀಡಿದ ಉತ್ತರ.  “...ನಾವು ಅಮೆರಿಕನ್ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಸಮಾನತೆಗಾಗಿ ಹೋರಾಡುತ್ತೇವೆ, ನಿಜ.  ಆದರೆ ರಾಜಕೀಯ ಪುರುಷನ ಕ್ಷೇತ್ರ ಅಂತ ನಮ್ಮ ನಂಬಿಕೆ.  ಇತ್ತೀಚೆಗೆ ಅದು ಬದಲಾಗುತ್ತಿರುವಂತೆ ಕಾಣುತ್ತಿದೆಯಾದರೂ ಬಗ್ಗೆ ನಮ್ಮ ಮೂಲಭೂತ ಚಿಂತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ.  ಮುಂದಿನ ಚುನಾವಣೇಲಿ ಹಿಲರಿ ಕ್ಲಿಂಟನ್ ಅಧ್ಯಕ್ಷೆ ಆಗಲಿಲ್ಲ ಅಂದರೆ ನಾವು ಅಮೆರಿಕನ್ ಹೆಂಗಸರಾರೂ ಆಕಾಶ ಬಿದ್ದುಹೋಯಿತು ಅಂತ ಗೋಳಾಡೋದಿಲ್ಲ.”

ಅವಳೊಂದಿಗೆ ಚರ್ಚೆ ನಡೆಸಲು ವಿದ್ಯಾರ್ಥಿಗಳು ತೋರಿದ ಉತ್ಸಾಹದಲ್ಲಿ ನನಗೆ ನನ್ನ ಉಪನ್ಯಾಸ ಮರೆತೇಹೋಗುವಂತಾಯಿತು.  ಬಗ್ಗೆ ಯಾವುದೇ ವ್ಯಸನವಿಲ್ಲದೇ, ತಮಿಳಿನಲ್ಲಿ ಬಂದ ಪ್ರಶ್ನೆಗಳನ್ನು ಅವಳಿಗಾಗಿ ಇಂಗ್ಲಿಷಿಗೆ ಅನುವಾದಿಸುತ್ತಾ, ಅನಿರೀಕ್ಷಿತವಾಗಿ ಬೇಗ ಆರಂಭವಾದ ನನ್ನ ದುಭಾಷಿಯ ಪಾತ್ರವನ್ನು ಖುಷಿಯಿಂದಲೇ ನಿರ್ವಹಿಸುತ್ತಾ ಸಮಯ ಕಳೆದೆ.  ನನ್ನನ್ನು ತರಾತುರಿಯಲ್ಲಿ ಆಹ್ವಾನಿಸಿದ್ದ ಕಾರಣಕ್ಕೋ ಏನೋ ಪ್ರಿನ್ಸಿಪಾಲ್ ವೇಲಾಯುಧನ್ಇದೇ ಕೊನೆಯ ಪ್ರಶ್ನೆ’ ಎಂದು ಫರ್ಮಾನು ಹೊರಡಿಸಿ, ಅದಕ್ಕೆ ಅಮ್ಯಾಂಡಾಳ ಉತ್ತರ ಮುಗಿಯುತ್ತಿದ್ದಂತೇ ನನ್ನನ್ನು ಪೋಡಿಯಂಗಟ್ಟಿದರು.

ಸಮಯವಾಗಲೇ ಹನ್ನೆರಡೂವರೆ ಸಮೀಪಿಸಿತ್ತು.  ಚೀನಾ ಜೊತೆ ಗಡಿಸಮಸ್ಯೆಯ ಬಗ್ಗೆ ಮೋದಿ ಸರ್ಕಾರದ ಮುಂದಿರುವ ಆಯ್ಕೆಗಳೇನು ಎನ್ನುವ ಬಗ್ಗೆ ಮುಕ್ಕಾಲು ಗಂಟೆ ಮಾತಾಡಿದೆ.  ಊಟದ ಸಮಯವಾಗುತ್ತಿದ್ದುದರಿಂದಲೋ ಅಥವಾ ಅಮ್ಯಾಂಡಾಳ ಮಾತುಗಳ ನಂತರ ನನ್ನದು ಅನಗತ್ಯವೆನಿಸಿತೋ ಏನೋ ವಿದ್ಯಾರ್ಥಿಗಳು ಪ್ರಶ್ನೆಗಳನ್ನೇನೂ ಕೇಳಲೇ ಇಲ್ಲ.  ಕೇಳಿ ಕೇಳಿ’ ಎಂದು ಪ್ರಿನ್ಸಿಪಾಲರು ಪುಸಲಾಯಿಸಿದರೂ ಪ್ರಯೋಜನವಾಗಲಿಲ್ಲ.  ಕೊನೆಗೆ ನನ್ನ ಮರ್ಯಾದೆ ಕಾಪಾಡುವ ಜವಾಬ್ದಾರಿ ಹೊತ್ತವರಂತೆ ಒಂದಿಬ್ಬರು ಅಧ್ಯಾಪಕರು ಏನೋ ಕೇಳಿ, ನಾನು ಉತ್ತರಿಸಿ ಉಪನ್ಯಾಸದ ನಾಟಕಕ್ಕೆ ಮಂಗಳ ಹಾಡಿದೆವು.  ನಂತರ ಪ್ರಿನ್ಸಿಪಾಲರು ನಮಗಿಬ್ಬರಿಗೂ ಒಂದೊಂದು ಶಾಲು ಹೊದಿಸಿ, ಹಿರಿಯ ಅಧ್ಯಾಪಕಿಯೊಬ್ಬರು ನನಗೂ, ಡಾ. 'ಅಮ್ಮಂಡ' ಹಾರ್ವೆಗೂ ತಂಗ್ಲಿಷ್ನಲ್ಲಿ ವಂದನೆಗಳ ಸುರಿಮಳೆಯನ್ನೇ ಸುರಿಸಿ ಅಂತೂ ಇಂತೂ ಪ್ರಹಸನಕ್ಕೆ ತೆರೆಬಿದ್ದಾಗ ಒಂದೂವರೆ.

ಪ್ರಖರ ಬಿಸಿಲು.  ಜತೆಗೇ ಏಕಾಏಕಿ ಏನೋ ಒಂದುಬಗೆಯ ಧಗೆ.  ಲಂಚ್ ಮುಗಿಸಿ ಹೋಟೆಲಿನ ಏರ್‍‌ಕಂಡೀಷನ್ಡ್ ಡೈನಿಂಗ್ ಹಾಲ್‌‍ನಿಂದ ಹೊರಬಂದಾಗ ಮುಖದಲ್ಲಿ ಕರವಸ್ತ್ರ ಒದ್ದೆಯಾಗುವಷ್ಟು ಬೆವರು.  ಅಮ್ಯಾಂಡಾಓಹ್ ಓಹ್” ಎನ್ನುತ್ತಾ ಕರವಸ್ತ್ರದಿಂದ ಪಟಪಟ ಗಾಳಿ ಹಾಕಿಕೊಳ್ಳುತ್ತಾಇದೇನಿದು, ಇದ್ದಕ್ಕಿದ್ದ ಹಾಗೆ ಇಷ್ಟು ಸೆಖೆ!  ಬೆಳಿಗ್ಗೆ ಎಷ್ಟು ಚಂದ ಇತ್ತು” ಅಂದಳು.  ಚಿಂತೆ ಬೇಡ.  ಸಾಯಂಕಾಲ ನಾಲ್ಕು ಗಂಟೆಯಾದರೆ ಸಾಕು, ಸಮುದ್ರದ ಕಡೆಯಿಂದ ತಣ್ಣನೆಯ ಗಾಳಿ ಬೀಸೋದಿಕ್ಕೆ ಶುರುವಾಗುತ್ತೆ, ಪಾಂಡಿಚೆರಿ ತಂಪಾಗಿಬಿಡುತ್ತೆ.  ಇದು ಊರಿನ ವೈಶಿಷ್ಟ್ಯ” ಅಂದೆ ಸಮಾಧಾನಿಸುವ ದನಿಯಲ್ಲಿ.  ಆದರೂ ನನಗೇ ಯಾಕೋ ಸುಸ್ತಾಗುತ್ತಿರುವಂತೆನಿಸುತ್ತಿತ್ತು, ಏನೋ ಶರೀರದ ಶಕ್ತಿಯೆಲ್ಲಾ ಸೋರಿಹೋಗುತ್ತಿರುವಂತೆ.

ಯೂನಿವರ್ಸಿಟಿ ಕಡೆಗೆ ಹೋಗುವ ಬಸ್ಸು ಹತ್ತಿ ಆರೋವಿಲ್ ರಸ್ತೆಯಲ್ಲಿ ಇಳಿದು ನಡೆಯತೊಡಗಿದೆವು.  ಒಮ್ಮೆ ಹಿಂದಕ್ಕೆ ಹೊರಳಿ ಸಮುದ್ರದತ್ತ ನೋಡಿದಾಗ ಅದು ಕಡುನೀಲಿಯಾಗಿದ್ದಂತೆ, ದಿಗಂತವೇ ಇಲ್ಲದೇ ನೀಲಗಪ್ಪು ಮುಗಿಲಾಗಸಕ್ಕೆ ಸೇರಿಹೋದಂತೆ ಕಂಡು ಸೊಗಸೆನಿಸಿತು.  ಅಮ್ಯಾಂಡಾಗೆ ತೋರಿಸಿದೆ.  ಓಹ್, ಬ್ಯೂಟಿಫುಲ್!” ಅಂದಳು.  ನನ್ನ ತೋಳು ಹಿಡಿದುತುಂಬಾ ಸೆಖೆ, ತಡೆಯೋಕಾಗ್ತಿಲ್ಲ.  ನಡೆಯೋದು ನನ್ನಿಂದಾಗಲ್ಲ ಅನ್ಸುತ್ತೆ” ಅಂದಳು.  ಚಿಂತೆ ಬೇಡ ಎನ್ನುತ್ತಾ ಆಟೋ ಸ್ಟ್ಯಾಂಡ್‌‍ನತ್ತ ಅವಳನ್ನು ನಡೆಸಿದೆ.  ನನಗೂ ಅದೇ ಬೇಕಾಗಿತ್ತು.

ಮೀಟರ್ ಕಾಣದ ಆಟೋ.  ಒಂದೂವರೆ ಕಿಲೋಮೀಟರ್‌‍ ದೂರಕ್ಕೆ ನೂರೈವತ್ತು ರೂಪಾಯಿ ಮಾತಾಯಿತು.  ಹತ್ತಿ ಕೂತೆವು.  ಹಳ್ಳಿ ದಾಟಿ ತಿರುವಿನಲ್ಲಿ ನುಸುಳಿಹೋಗಿದ್ದ ರಸ್ತೆಗಿಳಿದು ಸಾಗಿದಂತೆ ಇಡೀ ಜಗತ್ತಿನಲ್ಲಿ ನಾವು ಮಾತ್ರ ಎನ್ನುವಷ್ಟು ನಿರ್ಜನತೆ.  ಹಕ್ಕಿಗಳೂ ಮೌನವಾಗಿಬಿಟ್ಟಿದ್ದವು.  ತಲೆಯ ಮೇಲೆ ಚಾಚಿಕೊಂಡಿದ್ದ ಹಸಿರು ಕೊಂಬೆಗಳ ನೆರಳಿನಲ್ಲಿ ಆಟೋ ಓಡುತ್ತಿದ್ದರೂ ಹಬೆಯ ಸುರಂಗದೊಳಗೆ ಸಾಗುತ್ತಿರುವ ಅನುಭವ.  ಸಂಜೆ ಹೊತ್ತಿಗೆ ತಂಪಾಗಿರುತ್ತೆ ಅಲ್ವಾ?  ವಾಪಸ್ ಬರೋವಾಗ ನಡೆದುಬರೋಣ.  ಇದನ್ನ ಕಳಕೊಳ್ಳೋಕೆ ಮನಸ್ಸಾಗ್ತಿಲ್ಲ” ಅಂದಳು.  ಹ್ಞೂಂಗುಟ್ಟಿದೆ.  ಏಯ್” ಎನ್ನುತ್ತಾ ನನ್ನ ಗಮನ ಸೆಳೆದಳು.  ಕಣ್ಣುಗಳಲ್ಲಿ ತುಂಟನಗೆ.  'ಏನು?' ಅನ್ನುವಂತೆ ನೋಡಿದೆ.

:ಇಲ್ಲಿ ನಾವಿಬ್ಬರೇ ನಡೆಯೋದು ಅಂದ್ರೆ...!  ಕತ್ತಲಾಗೋದರ ಒಳಗೇ ಅದಾಗಿಬಿಡಬೇಕು.”

“ಯಾಕೆ?”  ನನಗೆ ಗೊಂದಲ.

“ಯಾಕೆ ಅಂದ್ರೆ...” ಅವಳ ಮುಖದ ತುಂಬಾ ಕೀಟಲೆಯ ನಗೆ.  ಕ್ಯಾನ್ಸೇರಿಯನ್ ಗಂಡಸೊಬ್ಬನ ಜತೆ ಹೆಣ್ಣೊಬ್ಬಳು ಕತ್ತಲೇನಲ್ಲಿ ಒಂಟಿಯಾಗಿ ಯಾವತ್ತೂ ಹೋಗಬಾರದು.”

“ಯಾರು ಹೇಳಿದ್ದು ಅದನ್ನ?   ನಿನ್ನ ಮಹಾನ್ ಜ್ಯೋತಿಷಿ?”

ಅವಳು ಪಕಪಕ ನಕ್ಕುಬಿಟ್ಟಳು.  , ಅದು ಲಿಂಡಾ ಗುಡ್‌‍ಮನ್ ಹೇಳಿದ್ದಲ್ಲ, ಮತ್ಯಾರೋ ಹೇಳಿದ್ದು.  ನೆನಪಾಗ್ತಿಲ್ಲ.  ಆದ್ರೆ...”

“ಏನು ಆದ್ರೆ...?”

“ಕ್ಯಾನ್ಸೇರಿಯನ್ ಗಂಡಸು ಸ್ವಭಾವತಃ ಶೋಧಕ ಪ್ರವೃತ್ತಿಯವನಂತೆ!  ಅದಕ್ಕೇ, ಹೆಣ್ಣೊಬ್ಬಳು ಕತ್ತಲೇನಲ್ಲಿ ಒಂಟಿಯಾಗಿ ಅವನ ಕೈಗೆ ಸಿಕ್ಕೋಬಾರದು.”

ನನಗೆ ನಗದಿರಲಾಗಲಿಲ್ಲ.  ಅವಳ ನಗೆಯೂ ಉಕ್ಕಿ ಇಬ್ಬರೂ ಮನಸಾರೆ ನಕ್ಕೆವು.

ಒಂದು ತಿರುವಿನಲ್ಲಿ ಆಟೋ ನಿಂತುಬಿಟ್ಟಿತು.  ಇಲ್ಲಿಂದಾಚೆಗೆ ಆಟೋ ಹೋಗಲ್ಲ, ಶಾರ್.  ಒಳಕ್ಕೆ ಬಿಡಲ್ಲ ಅವ್ರು.  ನಡ್ಡು ಹೋಗ್ಬಿಡಿ.  ನಾಕೆಜ್ಜೆ ಅಷ್ಟೇ” ಅಂದ ಮುಖದ ಬೆವರನ್ನು ಅಂಗೈಯಂಚಿನಿಂದಲೇ ಒರೆಸಿ ತೆಗೆಯುತ್ತಾ.  ಆಯಿತು” ಎಂದು ಕೆಳಗಿಳಿದೆವು.  ನೀನು ನನ್ನ ಕೆಲಸಕ್ಕೆ ಬಂದಿದೀಯ.  ನಾನು ದುಡ್ಡು ಕೊಡ್ತೀನಿ” ಎಂದು ಹಠ ಮಾಡಿದ ಅಮ್ಯಾಂಡಾಳನ್ನು ತಡೆದು ನಾನೇ ದುಡ್ಡುಕೊಟ್ಟೆ.  ಮುದುರಿ ಜೇಬಿಗಿಳಿಸುತ್ತಾವಾಪಸ್ ಬರೋವಾಗ ನಾನು ಬರಬೇಕಾ ಶಾರ್?  ನನ್ ಫೋನ್ ನಂಬರ್ ತಗಳ್ಳಿ, ಕಾಲ್ ಮಾಡಿದ್ರೆ ಬಂದು ಕರಕೊಂಡು ಹೋಗ್ತೀನಿ” ಅಂದ ಆಟೋ ಡ್ರೈವರ್.  ಇಲ್ಲಪ್ಪ, ನಡೆದು ಬರೋ ಪ್ಲಾನ್ ಇದೆ” ಅಂದೆ.  ಇಂದು ಮಳೆ ಬರುತ್ತೆ ಶಾರ್, ಜೋಪಾನ” ಅಂದ.  ಸರಿ” ಎಂದು ಆತುರದಲ್ಲಿ ಒದರಿ ಹತ್ತುಮಾರು ಮುಂದೆ ಹೋಗಿದ್ದ ಅಮ್ಯಾಂಡಾಳನ್ನು ಸೇರಿಕೊಂಡೆ.

ಈಗವಳು ಮೌನವಾಗಿದ್ದಳು.  ಗಲಗಲ ಮಾತು, ನಗೆ ಎಲ್ಲವೂ ನಿಂತುಹೋಗಿ ಮುಖದಲ್ಲಿ ದುಗುಡ ತುಂಬಿಕೊಂಡಿತ್ತು.  ಅವಳ ಮನಸ್ಥಿತಿಯನ್ನು ಊಹಿಸಲು ಪ್ರಯತ್ನಿಸುತ್ತಾ ತಲೆಯೆತ್ತಿ ಮೇಲೆ ನೋಡಿದೆ.  ದಿಗಂತದಲ್ಲಿ ಕಂಡಿದ್ದ ನೀಲಗಪ್ಪು ತಲೆಯ ಮೇಲೂ ಹರಡಿಕೊಳ್ಳುತ್ತಿತ್ತು.  ನನ್ನ ಮನಸ್ಸೂ ಕಪ್ಪಗಾಗಿ ಮೌನವಾಗಿಬಿಟ್ಟೆ.

“ಇದನ್ನ ಹುಡುಕೋದು ನಿನ್ನೆ ಕಷ್ಟ ಆಯ್ತು” ಎಂದು ಅಮ್ಯಾಂಡಾ ನಿಡುಸುಯ್ಯುವಂತೆ ಹೇಳಿದಾಗ ಮುಂದಿದ್ದ ಮನೆಯನ್ನು ಆಸಕ್ತಿಯಿಂದ ನಿರುಕಿಸಿದೆ.

ಎತ್ತೆತ್ತರದ ಮರಗಳ ನಡುವೆ ನಿಂತ ದೊಡ್ಡ ಗುಡಿಸಲಿನಂಥ ಮನೆ.  ಗುಮ್ಮಟಾಕಾರದ ತಾರಸಿಯ ಮೇಲೆ ಒಣಹುಲ್ಲು ಹೊದಿಸಿದಂತೆ ಕಣ್ಕಟ್ಟು.  ಗೋಡೆಗಳಿಗೆ ಒರಗಿಸಿ ನಿಲ್ಲಿಸಿದ್ದ ಒಣಮರಗಳಿಗೆ ಸುತ್ತಿಕೊಂಡು ಮೇಲೇರಿಹೋಗಿದ್ದ ಎಂಥೆಂಥದೋ ಬಳ್ಳಿಗಳು, ಮುಂದಕ್ಕೆ ಚಾಚಿಕೊಂಡಿದ್ದ ನಕಲೀ ಹುಲ್ಲು ಮಾಡಿನ ಕೆಳಗೆ ಬಾಗಿಲ ಎರಡೂ ಕಡೆ ಎರಡು ದೊಡ್ಡದೊಡ್ಡ ಅಕ್ವೇರಿಯಂಗಳು, ಮಧ್ಯಾಹ್ನದ ವಿಶ್ರಾಂತಿಯಲ್ಲಿದ್ದಂತಹ ಮೀನುಗಳು...

ಮನೆಯೊಳಗೆ ಯಾರೊಬ್ಬರ ಸುಳಿವೂ ಇದ್ದಂತಿರಲಿಲ್ಲ.  ಅಕ್ಕಪಕ್ಕದಲ್ಲಿ ಮನೆಗಳೂ ಇರಲಿಲ್ಲ.  ಎಡಕ್ಕೆ ಹೂ ಪಾತಿಗಳಾಚೆಗಿನ ದಟ್ಟ ಬೇಲಿಯ ಆಕಡೆ ಮನೆಯೊಂದು ಕಂಬಗಳ ಮೇಲೆ ಎತ್ತರಕ್ಕೆ ನಿಂತಿತ್ತು.  ಅತ್ತ ಹೋಗಬೇಕೆನ್ನುವಷ್ಟರಲ್ಲಿ ಎದುರಿನ ಕಾಲುಹಾದಿಯಲ್ಲಿ ಟಿಬೆಟನರಿಬ್ಬರು ಕಂಡರು.  ನೀಲ್ ಎಲ್ಲಿ ಗೊತ್ತೇ?” ಅಂದೆ.  ಗೊತ್ತಿಲ್ಲ” ಎಂಬ ಉತ್ತರ ಒಬ್ಬನಿಂದ ಬಂತು.  ಕನ್ನಗಿ ಸೋಪ್ ಫ್ಯಾಕ್ಟರಿಯಿಂದ ಬರ್ತಾ ಇದಾಳೆ.  ಇನ್ನೇನು ಬಂದುಬಿಡಬಹುದು, ಕಾಯಿರಿ” ಅಂದ ಮತ್ತೊಬ್ಬ ನಿಧಾನವಾಗಿ.

ಕನ್ನಗಿ!

ಹಾಗಿದ್ದರೆ ನನ್ನ ಜತೆ ಇರುವವಳು?  ಮಾಧವಿಯೇ?  ಅಲ್ಲ.

ಗಡಿಯಾರ ನೋಡಿದೆ.  ನಾಲ್ಕೂವರೆ ಸಮೀಪಿಸುತ್ತಿತ್ತು.

ಎರಡು ನಿಮಿಷಗಳಲ್ಲಿ ಅವಳು ಕಂಡಳು.  ಛಕ್ಕನೆ ಅರಳಿದ ಅಮ್ಯಾಂಡಾಳ ಮುಖದಲ್ಲಿ ಮರುಕ್ಷಣ ಪ್ರತಿಫಲಿಸಿದ ಆಕಾಶದ ನೀಲಗಪ್ಪು.  ಗಾಢನೀಲಿ ಸೀರೆ, ಸ್ವಚ್ಚಬಿಳುಪು ರವಿಕೆಯಲ್ಲಿದ್ದ ಕಪ್ಪು ನೀಳ ತೆಳುದೇಹದ ಕನ್ನಗಿಯ ಮುಖವೂ ಅರಳಿಕೊಂಡಿತು.  ಕಪ್ಪನ್ನು ಬಿಳುಪಾಗಿಸಬಲ್ಲ ನಗೆ ಅದು.  ಅಮ್ಯಾಂಡಾ ಹೇಳಿದ್ದು ನಿಜ.

“ಕೋವಲನ್ ಎಲ್ಲಿ?”  ನಗುತ್ತಾ ತಮಿಳಿನಲ್ಲಿ ಪ್ರಶ್ನಿಸಿದೆ.  ಕಪ್ಪುಮುಖ ಕೆಂಪಾಗಿಹೋಯಿತು.  ಏನು ಜೋಕ್ ಮಾಡಿದೆ?”  ಅಮ್ಯಾಂಡಾ ನನ್ನ ತೋಳು ಜಗ್ಗಿದಳು.  ಇರು’ ಎಂದವಳಿಗೆ ಹೇಳಿ ಕನ್ನಗಿಯತ್ತ ಪ್ರಶ್ನಾರ್ಥಕ ಮುಖ ಮಾಡಿದೆ.

“ಮೀನು ಹಿಡಿಯೋಕೆ ಹೋಗಿದ್ದಾರೆ.”  ಅವಳ ನಾಚಿಕೆಯ ಉತ್ತರ ನನ್ನನ್ನು ದಂಗಾಗಿಸಿತು.  ನಿನ್ನೇನೂ ಬಂದಿದ್ರು ಇವರು.  ಸ್ವಲ್ಪ ಹೊತ್ತು ಇಲ್ಲೇ ಇರಿ, ಕರಕೊಂಡು ಬರ್ತೀನಿ ಅಂತ ಹೇಳಿ ಹೋದರೆ ಬರೋವರೆಗೆ ಮಾಯವಾಗಿಬಿಟ್ಟಿದ್ರು.”   ಅಮ್ಯಾಂಡಾಳತ್ತ ಬೆರಳು ಮಾಡಿ ರಾಗದಂತಹ ತಮಿಳಿನಲ್ಲಿ ಉಲಿದು ಮತ್ತೆ ನಗೆಯರಳಿಸಿದಳು.  ನೀಲಿಸೀರೆಯ ಹಳ್ಳಿ ಸೊಬಗಿ ನೀಲ್‌‍ ಮನಗೆದ್ದುದರಲ್ಲಿ ಅಚ್ಚರಿಯಿಲ್ಲವೆನಿಸಿತು.  ಅಮ್ಯಾಂಡಾ ಮತ್ತೊಮ್ಮೆ ತೋಳು ಜಗ್ಗಿದಳು.  ಇರು’ ಎಂದು ಮತ್ತೊಮ್ಮೆ ಹೇಳಿ ಕನ್ನಗಿಯತ್ತ ತಿರುಗಿದೆ: “ನಿನ್ನೆ ನೀನು ಹೇಳಿದ್ದೇನು ಅಂತ ಇವರಿಗೆ ಅರ್ಥವೇ ಆಗಿಲ್ಲ.  ಅದಕ್ಕೇ ಈವತ್ತು ನಾನು ಜತೇಲಿ ಬಂದಿದೀನಿ.”

ಮತ್ತೊಮ್ಮೆ ಕನ್ನಗಿಯ ಮಖದ ತುಂಬಾ ನಗೆ.  ಅಮ್ಯಾ<ಡಾಳತ್ತ ತಿರುಗಿ ಸದ್ದಾಗುವಂತೇ ನಕ್ಕುಬಿಟ್ಟಳು.  ಯಾರೂ ಇವರೂ?”  ನಗುತ್ತಲೇ ಪ್ರಶ್ನಿಸಿದಳು.  ಅದೂ ರಾಗವೇ.

“ಇವರು ಅಮೆರಿಕನ್ ಕನ್ನಗಿ.  ಕೋವಲನ್ ಇಲ್ಲಿ ಯಾರೋ ಮಾಧವಿಯ ಜತೆ ಸೇರಿಬಿಟ್ಟಿದ್ದಾನೆ ಅಂತ ತಿಳಿದು ಓಡಿಬಂದಿದ್ದಾರೆ.”

ಕಪ್ಪೂ ಕಪ್ಪಾಗಬಲ್ಲದು ಎಂದು ನನಗರಿವಾದದ್ದು ಆಗ.

ನಾನು ದುಭಾಷಿಯ ಪಾತ್ರದಲ್ಲಿ ಎಲ್ಲೆ ಮೀರಿದ್ದೆ.  ಕನ್ನಗಿ ಸೊಲ್ಲಡಗಿ ನಿಂತುಬಿಟ್ಟಿದ್ದಳು. 

ಅಮ್ಯಾಂಡಾಗೆ ಏನನ್ನಿಸಿತೋ, ನಮ್ಮಿಬ್ಬರನ್ನೇ ಆತಂಕದಿಂದ ನೋಡತೊಡಗಿದಳು.  ನಾನು ಒಳಗೇ ನಾಚಿದ್ದೆ.  ಅದನ್ನು ಮರೆಮಾಡಲು ಪ್ರಶ್ನೆಯ ಮೊರೆಹೋದೆ: “ನೀಲ್ ಯಾವಾಗ ಬರ್ತಾರೆ?”

ಅವಳಿಂದ ತಕ್ಷಣ ಉತ್ತರದ ನಿರೀಕ್ಷೆ ನನಗಿರಲಿಲ್ಲ.  ಅದನ್ನವಳು ಸುಳ್ಳು ಮಾಡಿದಳು: “ಕತ್ತಲಾಗೋದರ ಒಳಗೆ.”  ಅವಳ ತುಟಿಗಳು ಮತ್ತೊಮ್ಮೆ ಅಲುಗಿದವು: “ಬೇಗ ಬರಬಹುದೇನೋ.  ಮಳೆ ಬರೋ ಹಾಗಿದೆಯಲ್ಲ.”  ಅದು ಅವಳ ದನಿಯೋ, ಸಮುದ್ರದ ಕಡೆಯ ಆಕಾಶದಿಂದ ಬಂದ ಮೆಲು ಗುಡುಗಿನ ಪ್ರತಿಧ್ವನಿಯೋ ಗೊತ್ತಾಗಲಿಲ್ಲ.  ಅವಳನ್ನೇ ನೋಡಿದೆ.  ಮಾನ್ಸೂನ್ ಆರಂಭವಾಗಬಹುದು ಇಂದು.”  ಅವಳು ಮಾತು ಪೂರ್ಣಗೊಳಿಸಿದಳು.  ಅಮ್ಯಾಂಡಾ ಮತ್ತೊಮ್ಮೆ ತೋಳು ಜಗ್ಗಿದಳು.  ನನಗೆ ಕನ್ನಗಿಯಿಂದ ಮುಖ ಹೊರಳಿಸಲು ನೆಪವೊಂದು ಬೇಕಾಗಿತ್ತು.  ಅಮ್ಯಾಂಡಾಳತ್ತ ತಿರುಗಿದೆ: “ನೀಲ್ ಮೀನು ಹಿಡಿಯೋಕೆ ಹೋಗಿದ್ದಾನಂತೆ.  ಇನ್ನೇನು ಬರಬಹುದು.”  ಅವಳ ಮುಖದಲ್ಲಿ ಕಂಡದ್ದು ಸಂತೋಷಕ್ಕಿಂತಲೂ ಮಿಗಿಲಾಗಿ ಅಚ್ಚರಿ.  ಮತ್ತೆ ನಿನ್ನೆ...”  ಅರ್ಧಕ್ಕೆ ನಿಲ್ಲಿಸಿದಳು.  ಅಗಾಧ ಬೆರಗಿನ ದನಿ.  ವಿವರಣೆ ಕೊಡಲು ಕನ್ನಗಿ ಬಿಡಲಿಲ್ಲ.  ನನ್ನತ್ತ ಯಾಚನೆಯ ನೋಟ ಹೂಡಿದಳು: “ ದೊರೆಸಾನಿ ಬಂದಿರೋದು ನನ್ನ ದೊರೆಯನ್ನ ತನ್ನ ದೇಶಕ್ಕೆ ಕರಕೊಂಡು ಹೋಗೋದಕ್ಕಾ?”

ನಾನು ಮಾತಿಲ್ಲದೇ ನಿಂತೆ.  ಅವಳು ಒಂದು ಹೆಜ್ಜೆ ಮುಂದೆ ಬಂದಳು: “ಅವರು ಈಗ ಬರೋದಿಲ್ಲ ಅಂತ ಹೇಳಿಬಿಡಿ ಈಯಮ್ಮನಿಗೆ.  ಮತ್ತೆ, ಮತ್ತೆ, ನಂಗೇ... ನಂಗೇ...” ತೊದಲಿದಳು,ಮೀನು ಹಿಡಿಯೋಕೆ ಕಡಲಿಗೆ ಹೋಗಿದ್ದಾರೆ ಅನ್ನಿ.  ಬರೋದು ನಾಳೆ ಅಥವಾ ನಾಡಿದ್ದು ಅಂದುಬಿಡಿ.”  ಆತುರಾತುರವಾಗಿ ಪದಗಳನ್ನು ಹೊರಹರಿಬಿಟ್ಟಳು.  ನಾನು ಸಮಾಧಾನಿಸುವ ಪ್ರಯತ್ನದಲ್ಲಿ ಬಾಯಿ ತೆರೆಯುತ್ತಿದ್ದಂತೇ ಅವಳು ದನಿ ಎತ್ತರಿಸಿದಳು: “ನಂಗೆ... ನಂಗೇ... ಯಾರೂ ದಿಕ್ಕಿಲ್ಲ.  ಇವರು ಬಿಟ್ಟುಹೋದ್ರೆ ನಾನು ಕಡಲಿನ ಪಾಲು.”  ಮಾತು ಮುಗಿಸಿ ಒಮ್ಮೆಲೆ ಬಿಕ್ಕಿದಳು.  ತೆಳು ದೇಹ ಹೊಯ್ದಾಡಿತು.  ಅವಳು ಕುಸಿದು ಬೀಳಬಹುದೆಂದು ನಾನು ದಿಗ್ಭ್ರಾಂತಿಗೊಳಗಾಗುತ್ತಿದ್ದಂತೇ ಸರ್ರನೆ ಮುಂದೆ ನುಗ್ಗಿದ ಅಮ್ಯಾಂಡಾ ಕನ್ನಗಿಯನ್ನು ಅವಚಿ ಹಿಡಿದಳು.  ಏನೋ ಮೃದುವಾಗಿ ಹೇಳುತ್ತಾ ಕನ್ನಗಿಯ ಬೆನ್ನು ಸವರತೊಡಗಿದಳು.  ನನ್ನತ್ತ ತಿರುಗಿನಾನು ಬಂದಿರೋದು ನೀಲ್‌‍ನನ್ನ ಸುಮ್ಮನೆ ನೋಡಿಹೋಗೋದಿಕ್ಕೆ ಅಂತ ಹೇಳು ಇವಳಿಗೆ” ಅಂದಳು.  ಪದಗಳನ್ನು ತಮಿಳಿಗೆ ಅನುವಾದಿಸಲು ನನ್ನ ಮನಸ್ಸು ಮುಷ್ಕರ ಹೂಡಿದಂತೆನಿಸಿ ನಾನು ಹತಾಷನಾಗುತ್ತಿದ್ದಂತೇ ತಲೆಯ ಮೇಲಿನ ಆಕಾಶ ಒಮ್ಮೆ ಗುಡುಗಿತು.  ಅದೂ ಅಳತೊಡಗಬಹುದೆಂಬ ಭಯದಲ್ಲಿ ಸರ್ರನೆ ಮೇಲೆ ನೋಡಿದೆ.  ಮಳೆಯೇನೂ ಬರುವ ಹಾಗಿರಲಿಲ್ಲ.  ಗುಡುಗು ನಿಲ್ಲುತ್ತಿದ್ದಂತೇ ಮೊಟಾರ್ ಬೈಕ್ ಶಬ್ಧ ಕಿವಿಗೆ ಬಿತ್ತು.  ಅವರು ಬಂದ್ರು” ಎನ್ನುತ್ತಾ ಕನ್ನಗಿ ಅಮ್ಯಾಂಡಾಳ ಆಸರೆಯಿಂದ ಬಿಡಿಸಿಕೊಂಡು ಕಾಲುದಾರಿಯತ್ತ ಸರ್ರನೆ ಓಡಿದಳು.  ಅವಳ ಹಿಂದೆಯೇ ಅಮ್ಯಾಂಡಾ ವೇಗವಾಗಿ ಹೆಜ್ಜೆ ಹಾಕಿದಳು.  ಅವಳ ಹಿಂದಿದ್ದ ನನ್ನ ಹೆಜ್ಜೆ ನಿಧಾನವಾಗಿತ್ತು.  ನಿಮಿಷದಲ್ಲಿ ಅವರು ನನ್ನಿಂದ ತುಂಬಾ ದೂರದಲ್ಲಿದ್ದರು.

ಓಡುತ್ತಾ ಹೋದ ಕನ್ನಗಿ ಬೈಕ್‌‍ನಿಂದಿಳಿದ ನೀಲ್‌‍ ಕೊರಳಿಗೆ ಜೋತುಬಿದ್ದಳು.  ಅವನು ಅವಳನ್ನು ಅಪ್ಪಿಹಿಡಿದಂತೇ ಮುಂದೆ ನೋಟ ಹೂಡಿದ.  ದೂರದಲ್ಲಿದ್ದ ಅವನ ಮುಖಭಾವವೇನೆಂದು ನನಗೆ ತಿಳಿಯುತ್ತಿರಲಿಲ್ಲ.  ಕಂಡದ್ದು ಬಿಳೀ ಹ್ಯಾಟ್ ಮಾತ್ರ.  ಅಮ್ಯಾಂಡಾಳ ಬೆನ್ನು ನನ್ನೆಡೆಗಿತ್ತು.

ನನಗೆ ಮುಂದೆ ಹೆಜ್ಜೆ ಇಡಲಾಗಲಿಲ್ಲ.  ಕಾಲುಗಳು ಹೂತುಹೋದಂತೆ ಅಲ್ಲೇ ನಿಂತವು.  ಏಕಾಏಕಿ ಗಿರಿಜೆ ನೆನಪಾದಳು.  ಜೇಬಿನಿಂದ ಮೊಬೈಲ್ ಹೊರಗೆಳೆದೆ.

ನೆಟ್‌‍ವರ್ಕ್ ಇರಲಿಲ್ಲ.

ಮೊಬೈಲ್‌‍ ಸ್ಕ್ರೀನ್‌‍ನತ್ತಲೇ ನೋಡುತ್ತಾ ನಿಂತುಬಿಟ್ಟೆ.  ಅಲ್ಲಿ ನಗುತ್ತಿದ್ದ ನನ್ನ ಗಿರಿಜೆನಾನಿಲ್ಲೇ ಇದೀನಲ್ಲರೀ” ಅನ್ನುತ್ತಿದ್ದಳು.

ಹಾಗೆ ಅದೆಷ್ಟು ಹೊತ್ತಿನವರೆಗೆ ಅವಳು ನನಗೆ ಆಶ್ವಾಸನೆ ನೀಡುತ್ತಲೇ ಇದ್ದಳೆಂದು ನನ್ನ ಅರಿವಿಗೆ ಬರಲಿಲ್ಲ.  ನನ್ನನ್ನು ಎಚ್ಚರಿಸಿದ್ದು ಅಮ್ಯಾಂಡಾಳ ದನಿ: “ಯಾವ ಲೋಕದಲ್ಲಿದೀಯ?”  ನಾನು ಬೆಚ್ಚಿದೆ.  ಅವಳು ನನ್ನ ತೋಳು ಹಿಡಿದು ನೀಲ್‌‍ಗೆ ಪರಿಚಯಿಸಿದಳು.  ನಾನು ಈಗವನನ್ನು ಸರಿಯಾಗಿ ನೋಡಿದೆ.

ವಯಸ್ಸೆಷ್ಟೆಂದು ಗುರುತಿಗೆ ಹತ್ತದ, ಬಿಸಿಲಿಗೆ ಕೆಂಪಾಗಿಹೋಗಿದ್ದ, ಗಡ್ಡಮೀಸೆ ಒಂದೂ ಇಲ್ಲದ ಕೋಲುಮುಖ.  ತಲೆಯೂ ಪೂರ್ತಿ ಬೋಳು.  ಕಣ್ಣುಗಳು ಮಾತ್ರ ಹೊಳೆಯುತ್ತಿದ್ದವು.

“ಪಾಂಡಿಚೆರಿವರೆಗೆ ನಾನು ಡ್ರಾಪ್ ಮಾಡಲೇ?”  ಅತೀ ಮೆಲ್ಲನೆಯ ದನಿಯಲ್ಲಿ ಪ್ರಶ್ನಿಸಿದ ನೀಲ್.  ಅಮ್ಯಾಂಡಾ ಕೈಯಾಡಿಸಿಬಿಟ್ಟಳು: “ನೋ, ಥ್ಯಾಂಕ್ಸ್.”  ಮುಂದೆ ಕೈ ತೋರಿದಳು: “ ರಸ್ತೆಯಲ್ಲಿ ನಡೆದುಹೋಗಬೇಕು ಅಂತ ನಿರ್ಧರಿಸಿದೀನಿ.”

ನೀಲ್ ಮತ್ತೆ ಒತ್ತಾಯಿಸಲಿಲ್ಲ.  ಕನ್ನಗಿಯತ್ತ ಸರಿದ ಅಮ್ಯಾಂಡಾ ಬಾಗಿ ಅವಳ ಕೆನ್ನೆಗೆ ಮುತ್ತಿಟ್ಟು ನೀಲ್‌‍ ಭುಜ ತಟ್ಟಿದಳು: “ಬೈ.”

ಹಿಂದೆ ತಿರುಗಿ ನನ್ನ ತೋಳು ಹಿಡಿದು ಮುಂದೆ ಹೆಜ್ಜೆಯಿಟ್ಟಳು.

ಕತ್ತಲ ಹಾದಿಯಲ್ಲಿ ಅದೆಷ್ಟೋ ಹೊತ್ತಿನವರೆಗೆ ಮೌನವಾಗಿ ಹೆಜ್ಜೆ ಸರಿಸಿದೆವು.  ತಲೆಯ ಮೇಲೋಂದು ತಣ್ಣನೆಯ ಹನಿ ಬಿದ್ದು ಬೆಚ್ಚಿಸಿತು.  ಹಿಂದೆಯೇ ಮತ್ತೆರಡು.

ಮಾನ್ಸೂನಿನ ಮೊದಲ ಹನಿಗಳು!

ಸರಕ್ಕನೆ ತಲೆಯೆತ್ತಿ ನೋಡಿದೆ.  ಆಕಾಶ ಕಡುಗಪ್ಪಾಗಿತ್ತು.  ನನ್ನ ನೋಟವನ್ನನುಸರಿಸಿದ ಅಮ್ಯಾಂಡಾ ಸಹಾ ಮೇಲೆ ನೋಡಿದಳು.  ಮಳೆ ಬರಬಹುದು ಅನ್ನೋ ಭಯವೇ?”  ಪ್ರಶ್ನಿಸಿದಳು.  ಹ್ಞೂಂಗುಟ್ಟಿದೆ.  ಯುಗಗಳ ನಂತರ ನಮ್ಮಿಬ್ಬರ ಮೊದಲ ಸಂಭಾಷಣೆ ಅದು.  ಅವಳು ನಕ್ಕುಬಿಟ್ಟಳು: “ಮಳೆ ಬರೋದಿಲ್ಲ.”  ನಿಂತು ಆಕಾಶದತ್ತ ಕೈತೋರಿದಳು: “ಅಲ್ಲಿ ನನ್ನ ಗ್ರೇಟ್ ಗ್ರೇಟ್ ಗ್ರ್ಯಾಂಡ್‌‍ಫಾದರ್ ನಕ್ಷತ್ರ ಆಗಿದ್ದಾನೆ.  ನನ್ನನ್ನ ನೋಡ್ತಿದಾನೆ ಅವನು.  ನನ್ನನ್ನ ಸುರಕ್ಷಿತ ಸ್ಥಾನಕ್ಕೆ ತಲುಪಿಸಿದ ಮೇಲೇ ಅವನು ಮಳೆ ಸುರಿಸು ಅಂತ ಮೋಡಗಳಿಗೆ ಹೇಳೋದು.  ನನ್ನ ಜತೆ ಇರೋದ್ರಿಂದ ನಿನಗೂ ಮಳೆಯ ತೊಂದರೆ ಇಲ್ಲ.”

ಏನನ್ನು ಮರೆಮಾಚಲು ಅವಳಿಂದ ಕಲ್ಪನೆಯ ಕಥೆ!  ನನಗೆ ಹೊಳೆಯಲಿಲ್ಲ.  ಆದರೆ ತಲೆಯ ಮೇಲೆ ನಾಲ್ಕನೆಯ ಹನಿ ಬೀಳಲಿಲ್ಲ.

ನಿನ್ನೆಯಿಂದ ಅದೆಷ್ಟೋ ಬಾರಿ ಮಾಡಿದ್ದಂತೆ ಅವಳು ಮುಖವರಳಿಸಿ ನನ್ನ ಭುಜ ಒತ್ತಿದಳು: “ಅವನು ಯುದ್ಧವೀರ.  ಅವನ ಬಳಿ ಈಗಲೂ ಗನ್ ಇದೆ.”

ಅವಳಿಗೆ ಹುಚ್ಚು ಹಿಡಿಯುತ್ತಿರಬಹುದೇ ಎನಿಸಿ ಬೆದರಿದೆ.  ಛಕ್ಕನೆ ಗಿರಿಜೆ ನೆನಪಾದಳು.  ಆತುರಾತುರವಾಗಿ ಫೋನ್ ಹೊರಗೆಳೆದೆ.

ತುಂಬಾ ಹೊತ್ತಿನ ಮೇಲೆ ಉತ್ತರಿಸಿದ ಗಿರಿಜೆಯ ದನಿಯಲ್ಲಿ ಅತುರವಿತ್ತು.  ತಡೀರಿ.  ನಾನೇ ಕಾಲ್ ಮಾಡ್ತೀನಿ.  ಸ್ವಲ್ಪ ಗೋಜಲಿನಲ್ಲಿದೀನಿ.  ಕಥೆ ಮುಗಿಸ್ತಿದೀನಿ ಈಗ.”  ಮುಂದಿನ ಮಾತಿಗೆ ಅವಕಾಶವಿಲ್ಲದಂತೇ ಲೈನ್ ಕತ್ತರಿಸಿದಳು.  ಬೆಪ್ಪಾಗಿ ನಿಂತವನನ್ನು ಅಮ್ಯಾಂಡಾಳ ದನಿ ಎಚ್ಚರಿಸಿತು: “ನಿನಗೆ ಒಂದು ಮಾತು ಹೇಳಿರಲಿಲ್ಲ ನಾನು.  ನನ್ನ ಪೂರ್ವಿಕ, ವಾರ್ ಹೀರೋ, ಜನರಲ್ ಥಾಮಸ್ . ಹಾರ್ವೆ ಯುದ್ಧ ಮುಗಿದ ಕೂಡಲೇ ಆತ್ಮಹತ್ಯೆ ಮಾಡಿಕೊಂಡುಬಿಟ್ಟ.  ತನ್ನ ಸರ್ವೀಸ್ ಗನ್‌‍ನಿಂದಲೇ ತಲೆಯೊಳಗೆ ಬುಲೆಟ್ ತುಂಬಿಕೊಂಡ.”

ನಾನು ಮತ್ತೊಮ್ಮೆ ಬೆಚ್ಚಿದೆ.  ಅಮ್ಯಾಂಡಾ!”  ಬೆರಗುಹತ್ತಿ ಕೂಗಿದೆ.  ಅವಳು ಮತ್ತೊಮ್ಮೆ ನನ್ನ ಭುಜ ತಟ್ಟಿದಳು: “ಹಳೆಯ ಕಥೆ ಅದು.  ನೂರೈವತ್ತು ವರ್ಷಗಳಾದವು ಅದಾಗಿ.  ನಮ್ಮ ಮನೆತನದ ಒಂದು ದುರಂತ ಅಧ್ಯಾಯ ಅದು.”

ಅವಳಿಂದ ಮತ್ತೇನನ್ನೂ ಕೇಳುವ ಚೈತನ್ಯ ನನಗಿಲ್ಲ ಅನಿಸುತ್ತಿದ್ದಂತೇ ತಿರುವಿನಾಚೆ ಮುಖ್ಯರಸ್ತೆಯಲ್ಲಿ ವಾಹನಗಳ ಹರಿದಾಟದ ಸದ್ದು ಹಿತವಾಗಿ ಕಿವಿ ತುಂಬಿ ನೆಮ್ಮದಿ ಮೂಡಿಸಿತು.  ಹಿಂದೆಯೇ ಅವಳ ಮೃದುದನಿ: “ಬಸ್ಸಿಗಾಗಿ ಕಾಯೋದು ಬೇಡ.  ರಸ್ತೆಯಲ್ಲಿ ನಿನ್ನ ಜತೆ ನಡೀಬೇಕು ಅಂತ ಆಸೆಯಾಗಿತ್ತು.  ಅದು ಪೂರ್ಣವಾಯಿತಲ್ಲ.  ಇನ್ನು ನೆಮ್ಮದಿಯಾಗಿ ಆಟೋರಿಕ್ಷಾ ಹತ್ತಿ ಹೋಟೆಲ್ ಸೇರಿಕೊಂಡುಬಿಡೋಣ.”

ನಿಡಿದಾಗಿ ಉಸಿರುಹಾಕಿ ಎದುರಿನ ಆಟೋ ಸ್ಟಾಂಡಿನತ್ತ ಅವಳನ್ನೂ ಎಳೆದುಕೊಂಡು ಧಾಪುಗಾಲು ಹಾಕಿದೆ.

ಆಟೋದಲ್ಲಿ ಕೂರುತ್ತಿದ್ದಂತೇ ಅಮ್ಯಾಂಡಾ ಬಾಯಿ ತೆರೆದು ನಗತೊಡಗಿದಳು.  ನನಗೆ ಮತ್ತೆ ಗಾಬರಿ.  ಅವಳು ನನ್ನ ಭುಜ ಒತ್ತಿದಳು: “ಕತ್ತಲೇನಲ್ಲಿ ನಾನು ಒಂಟಿಯಾಗಿ ಒಬ್ಬ ಕ್ಯಾನ್ಸೇರಿಯನ್ ಗಂಡಸಿನ ಜತೆ ನಡೆದುಬಂದೀನಿ.  ಆತ ಶೋಧಕ ಪ್ರವೃತ್ತಿಯವನಲ್ಲ ಅನ್ನೋದರ ಬಗ್ಗೆ ಅಳಲೋ ನಗಲೋ ಗೊತ್ತಾಗುತ್ತಿಲ್ಲ.”  ಅವಳ ನಗೆ ದೊಡ್ಡದಾಯಿತು.  ಅದು ನಿಲ್ಲಲೇ ಇಲ್ಲ.  ಆತಂಕದಿಂದ ಅವಳ ಮುಖವೆನ್ನೇ ನಿರುಕಿಸಿದವನಿಗೆ ರಸ್ತೆಯ ದೀಪದ ಬೆಳಕಿನಲ್ಲಿ ಕಂಡದ್ದು ಅವಳ ಕೆನ್ನೆಯ ಮೇಲೆ ಹರಿಯುತ್ತಿದ್ದ ಕಣ್ಣೀರು.

ಸರ್ರನೆ ಅವಳ ಪಕ್ಕ ಸರಿದೆ.  ಭುಜದ ಸುತ್ತಲೂ ಕೈಹಾಕಿ ಹತ್ತಿರಕ್ಕೆಳೆದುಕೊಂಡೆ.

ಹೋಟೆಲ್ ತಲುಪುವವರೆಗೂ ಅವಳೊಂದು ಪುಟ್ಟ ಹಕ್ಕಿಮರಿಯಂತೆ ನನಗೆ ಒತ್ತಿಕೊಂಡು ನನ್ನ ತೋಳೊಳಗೆ ನಿಶ್ಚಲವಾಗಿ, ಮೌನವಾಗಿ ಕುಳಿತಿದ್ದಳು.

ಆಟೋದವನಿಗೆ ದುಡ್ಡು ಕೊಟ್ಟು ವಾಚ್ ನೋಡಿದೆ.  ಎಂಟೂವರೆಯ ಹತ್ತಿರ.  ನನ್ನ ಬಸ್ಸಿರುವುದು ಇನ್ನೊಂದು ಗಂಟೆಗೆ.  ನೇರ ಡೈನಿಂಗ್ ಹಾಲ್‌‍ಗೆ ಹೋಗಿ ಊಟ ಮುಗಿಸಿಬಿಡೋಣವಾ?” ಅಂದೆ.  ನನಗೆ ಬೇಡ” ಅಂದಳು ಅವಳು.  ನನ್ನ ಮುಖದಲ್ಲಿ ಆತಂಕ ಮೂಡಿತೇನೋ, ನನ್ನ ಭುಜ ಒತ್ತಿದಳು: “ನನಗೆ ಹಸಿವಿಲ್ಲ.  ವರ್ಷವರ್ಷಗಳಿಂದ ಕಾದಿದ್ದ ವಿರಾಮ ಈಗ ಸಿಕ್ಕಿದೆ.  ನೆಮ್ಮದಿಯಾಗಿ ಮಲಗಿಬಿಡ್ತೀನಿ.  ನೀನು ಊಟ ಮಾಡಿ ನಿನ್ನ ಮನೆಗೆ ಹೊರಡು.  ಅಲ್ಲಿ ನಿನ್ನ ಹೆಂಡತಿ, ಏನವಳ ಹೆಸರು?  ಗ್ರೀಝಾ!  ಯೆಸ್, ಅವಳು ಕಾಯ್ತಿರ್ತಾಳೆ.”

ನನ್ನ ಸಾಮಾನುಗಳನ್ನೆಲ್ಲಾ ಬೆಳಿಗ್ಗೆ ಕಾಲೇಜಿಗೆ ಹೊರಡುವ ಮೊದಲೇ ಪ್ಯಾಕ್ ಮಾಡಿಟ್ಟಿದ್ದೆ.  ಊಟ ಬೇಕೆನಿಸಲಿಲ್ಲ.  ಹಾಸಿಗೆಯ ಮೇಲೆ ಧೊಪ್ಪನೆ ಕುಸಿದುಬಿದ್ದೆ.  ನಾನೂ ಸೋತುಹೋಗಿದ್ದೆ.  ಹೀಗೇ ಮಲಗಿಬಿಡುವ ಹಾಗಿದ್ದರೆ...!

ಐದು ನಿಮಿಷದಲ್ಲಿ ಗಡಬಡಿಸಿ ಮೇಲೆದ್ದೆ.  ಇಂಟರ್‍‌ಕಾಂ ಎತ್ತಿ, ಚೆಕ್‌‍ಔಟ್ ಮಾಡುತ್ತಿರುವುದಾಗಿಯೂ ಬಿಲ್ ತಯಾರಿಸಬೇಕೆಂದೂ ರಿಸೆಪ್ಷನ್‌‍ಗೆ ಸೂಚಿಸಿ ಬಾತ್‌‍ರೂಮಿನತ್ತ ಹೆಜ್ಜೆ ಹಾಕಿದೆ.

ಮುಖ ತೊಳೆದೆ, ಹಾಯೆನಿಸಿತು.  ಅಮ್ಯಾಂಡಾ ಮಲಗಿಲ್ಲದಿದ್ದರೆ ಹೊರಡುವ ಮೊದಲು ಕೊನೇ ಬಾರಿ ಒಮ್ಮೆ ನೋಡಿಬಿಡುವ ಅನಿಸಿತು.  ಸಮಯ ಎಂಟೂ ಐವತ್ತೈದು.  ಕೀ ಹಿಂತಿರುಗಿಸಿ, ಹಣ ಕಟ್ಟಿ ಹೋಟೆಲ್ ಋಣ ತೀರಿಸುವುದಕ್ಕೆ ಐದು ನಿಮಿಷ ಸಾಕು, ಆಮೇಲೆ ಆಟೋದಲ್ಲಿ ಬಸ್‌‍ಸ್ಟ್ಯಾಂಡಿಗೆ ಹೋಗಲು ಹತ್ತುನಿಮಿಷ.  ಇನ್ನುಳಿದ ಇಪ್ಪತ್ತು ನಿಮಿಷಗಳಲ್ಲಿ ಹತ್ತು, ಬೇಕೆಂದರೆ ಹದಿನೈದು ನಿಮಿಷಗಳು ಅಮ್ಯಾಂಡಾಳಿಗಾಗಿ.

ಹೆಗಲಿಗೆ ಲ್ಯಾಪ್‌‍ಟಾಪ್ ಬ್ಯಾಗ್ ಏರಿಸಿ, ಕೈಯಲ್ಲಿ ಸ್ಟ್ರೋಲಿ ಎಳೆಯುತ್ತಾ ಕಾರಿಡಾರ್‍‌ನಲ್ಲಿ ಸಾಗಿದೆ.  ಬಲಗಡೆಯ ನೀಳ ಗಾಜಿನ ಗೋಡೆಯ ಮೇಲೆ ಮಳೆಹನಿಗಳು ಚಿತ್ತಾರ ಬಿಡಿಸತೊಡಗಿದ್ದವು.

ಅಮ್ಯಾಂಡಾ ಹೇಳಿದಂತೇ ನಾವು ಸುರಕ್ಷಿತ ಸ್ಥಳ ಸೇರಿದ ನಂತರವಷ್ಟೇ ಮಳೆ ಸುರಿಸುವಂತೆ ಅವಳ ಗ್ರೇಟ್ ಗ್ರೇಟ್ ಗ್ರ್ಯಾಂಡ್ ಫಾದರ್, ವಾರ್ ಹೀರೋ ಜನರಲ್ ಥಾಮಸ್ . ಹಾರ್ವೆ ಮುಗಿಲುಗಳಿಗೆ ತಾಕೀತು ಮಾಡಿದ್ದ.  ಸಿಡಿಲು, ಗುಡುಗಿನ ಆರ್ಭಟದ ಯಾವ ಹಿನ್ನೆಲೆ ಸಂಗೀತವೂ ಇಲ್ಲದೇ ವರ್ಷದ ಮಾನ್ಸೂನ್ ತಣ್ಣಗೆ ಅಮಾಯಕವಾಗಿ ಆರಂಭವಾಗಿಬಿಟ್ಟಿತ್ತು.

ಮಿಂಚಿನ ಬೆಳಕಿನಲ್ಲಿ ಗಾಜಿನ ಗೋಡೆಯ ಮೇಲೆ ಗಳಿಗೆಗೊಂದು ಚಿತ್ತಾರ ಬಿಡಿಸುತ್ತಿದ್ದ ಮಳೆಹನಿಗಳನ್ನು ನೋಡುತ್ತಾ ನಿಧಾನವಾಗಿ ಕಾಲೆಳೆದೆ.  ಲಿಫ್ಟ್ ಬಿಟ್ಟು ಪಕ್ಕದ ಮೆಟ್ಟಲ ಸರಣಿಯೇರಿ ಅಮ್ಯಾಂಡಾಳ ಕೋಣೆಯಿದ್ದ ಮೇಲಿನ ಅಂತಸ್ತಿಗೆ ಹೋದೆ.  ಅಲ್ಲಿ ಲಿಫ್ಟ್ ಬಳಿ ಏನೋ ಗಡಿಬಿಡಿ.  ಅತ್ತ ಓರೆಗಣ್ಣಿನಲ್ಲಿ ನೋಡಿದವನಿಗೆ ಕಂಡದ್ದು ಬಾಗಿಲು ಮುಚ್ಚಿಕೊಳ್ಳುತ್ತಿದ್ದ ಲಿಫ್ಟ್, ಅದರತ್ತಲೇ ನೋಡುತ್ತಾ ನಿಂತಿದ್ದ ಒಂದಷ್ಟು ಹೋಟೆಲ್ ಕೆಲಸಗಾರರು.  ಅವರಿಗೆ ಬೆನ್ನು ಹಾಕಿ ಬಲಕ್ಕೆ ಹೊರಳಿದೆ.  ತಲೆಯೆತ್ತದೇ ಹೆಜ್ಜೆಸರಿಸಿ ಅವಳ ಕೋಣೆಯ ಮುಂದೆ ನಿಂತೆ.  ಅದರ ಬಾಗಿಲು ವಿಶಾಲವಾಗಿ ತೆರೆದಿತ್ತು.  ಒಳಗೆ ಹೋಟೆಲ್ ಮ್ಯಾನೇಜರ್, ಜತೆಗಿಬ್ಬರು ಪೋಲೀಸರು.  ನನ್ನನ್ನು ನೋಡಿದವನೇ ಮ್ಯಾನೇಜರ್ ಒದರಿದ: “ಇವರ ಜತೆನೇ ಎಂಟುಗಂಟೆ ಹೊತ್ತಿಗೆ ಎಲ್ಲಿಂದಲೋ ಬಂದ್ಲು ಆಯಮ್ಮ.”  ಪೋಲೀಸನೊಬ್ಬ ನನ್ನತ್ತ ವೇಗವಾಗಿ ಬಂದ.  ನನ್ನೆದೆ ಛಳಕ್ಕೆಂದಿತು.  ಆಮ್ಯಾಂಡಾ ಎಲ್ಲಿ?  ಏನಾಯಿತು ಅವಳಿಗೆ?”  ಆತಂಕದಿಂದ ದನಿ ತೂರಿದೆ.

ಮ್ಯಾನೇಜರ್ ದೂರದಿಂದಲೇ ಕೂಗಿದ: “ಡಾ. ಅಮ್ಯಾಂಡಾ ಹಾರ್ವೆ ಸೂಯಿಸೈಡ್ ಮಾಡಿಕೊಂಡಿದ್ದಾರೆ.  ಈಗತಾನೆ ಬಾಡೀನ ಆಸ್ಪತ್ರೆಗೆ ಕಳಿಸಿದ್ವಿ.”  ನಾನುವ್ಹಾಟ್!” ಎನ್ನುತ್ತಿದ್ದಂತೇ ಹತ್ತಿರಾದ ಪೋಲಿಸ್ ಅಧಿಕಾರಿತಲೆಗೆ ಗುಂಡು ಹೊಡಕೊಂಡುಬಿಟ್ಟಿದ್ದಾಳೆ ಅಮೆರಿಕನ್ ಹೆಂಗಸು” ಎಂದು ನಿರ್ಭಾವುಕವಾಗಿ ಹೇಳಿನಾನೇ ನಿಮ್ಮ ಹತ್ರ ಬರ್ತಾ ಇದ್ದೆ.  ಐದು ನಿಮಿಷ ಇಲ್ಲೇ ನಿಲ್ಲಿ.  ಕೆಲವು ಫಾರ್ಮಾಲಿಟೀಸ್ ಮುಗಿಸಿ ನಿಮ್ಮ ಜತೆ ಮಾತಾಡ್ತೀನಿಎಂದು ಗುರುಗುಟ್ಟಿದಂತೆ ಒದರಿ ನನಗೆ ಬೆನ್ನುಹಾಕಿದ.

ಹೊರಗೆ ಆಕಾಶ ಮೊರೆಯಿತು, ಮಳೆ ಏಕಾಏಕಿ ಅಧಿಕವಾಯಿತು.   ನಾನು ಸೋತಂತೆ ಗೋಡೆಗೊರಗಿ ನಿಂತೆ.  ಲ್ಯಾಪ್‌‍ಟಾಪ್ ಬ್ಯಾಗ್ ತನ್ನಷ್ಟಕ್ಕೆ ತಾನೇ ಕೆಳಸರಿದು ನೆಲಕ್ಕೆ ಬಿತ್ತು.  ಫೋನ್ ಹೊಡೆದುಕೊಂಡಿತು.  ನಿಶ್ಶಕ್ತ ಕೈಯನ್ನು ಜೇಬಿಗಿಳಿಸಿ ಹೊರಗೆಳೆದೆ.

ಗಿರಿಜೆಯ ಕಾಲ್.

“ಕಥೆ ಮುಗೀತೂರಿ.  ಆದ್ರೆ ಯಾಕೋ ಒಂಥರಾ ಬೇಜಾರು.  ಅಂತ್ಯ ಸರಿಯಾಗಿ ಆಗಿಲ್ಲ ಅನ್ಸುತ್ತೆ.  ಏನೋ ಒಂಥರಾ ನಿರಾಶೆ.  ಕಥೆ ಮುಗಿಸಿದ ತೃಪ್ತೀನೇ ಇಲ್ಲಾರೀ.  ಫೋನ್‌‍ನಲ್ಲಿ ನಿಮಗೆ ವಿವರಿಸೋದಿಕ್ಕೆ ಆಗಲ್ಲ...”  ಅವಳು ಹೇಳುತ್ತಲೇ ಇದ್ದಳು.  ನಾನು ಪ್ರತಿಯಾಡದೇ ಕೇಳಿಸಿಕೊಳ್ಳುತ್ತಿದ್ದೆ.

--***೦೦೦***--
ಏಪ್ರಿಲ್ 4, 2015