ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ.

ಪ್ರೇಮತಾಣದ ಹೊಸ್ತಿಲಲ್ಲಿ ಒಂದು ನಿಮಿಷ...

ನಿಮ್ಮ ಅನಿಸಿಕೆಗಳು ನನಗೆ ಅಮೂಲ್ಯ
ಇಲ್ಲಿನ ಬರಹಗಳು ನಿಮಗೆ ಹೇಗನ್ನಿಸುತ್ತೆವೆ? ಇಷ್ಟ? ಅಥವಾ ಬೇರೇನಾದರೂ...? ಏನಾದರೂ ಪ್ರಶ್ನೆ? ನನ್ನೊಡನೆ ಹಂಚಿಕೊಳ್ಳಿ. ಬರಹದ ಕೆಳಗೆ ನಿಮ್ಮ ಅನಿಸಿಕೆ ದಾಖಲಿಸಬಹುದು. ಸಾರ್ವಜನಿಕವಾಗಿ ಹೇಳಲು ಸಂಕೋಚವೇ...? ಅಥವಾ ಏನಾದರೂ ಗುಟ್ಟು? ಚಿಂತೆ ಬೇಡ. ಇದು ನನ್ನ ಇಮೇಲ್ ವಿಳಾಸ, ನಿಮಗಾಗಿ: cherryprem@gmail.com

ನನಗಿಷ್ಟವಾದ ನನ್ನ ಹದಿಮೂರು ಕಥೆಗಳು ನಿಮಗೂ ಇಷ್ಟವಾಗಬಹುದು! ಓದಿ ನೋಡಿ...
(ಓದಬೇಕೆನಿಸುವ ಕಥೆಯ ಶಿರ್ಷಿಕೆಯ ಮೇಲೆ ಕ್ಲಿಕ್ ಮಾಡಿ)
೧. ಕನ್ನಡಿ ೨. ಧೂಳುಮರಿ ೩. ಬಾಳಿಗೊಂದಿಷ್ಟು ಗಾಳಿ ೪. ಕಾಗದದ ದೋಣಿಗಳು ೫. ಕಥೆಗೊಬ್ಬಳು ನಾಯಕಿ ೬. ಪಾಸ್‍ವರ್ಡ್ ೭. ದಾರಿ ೮. ಪಾತ್ರ ೯. ಗಾಯ ೧೦. ಭೂಮಿ - ಹೆಣ್ಣು
೧೧. ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ೧೨. ಯಾನ ೧೩. ಬೆಂಗಳೂರು ಮಾಫಿಯ


ಇನ್ನು ನೀವುಂಟು, ನಿಮ್ಮ ಪ್ರೇಮತಾಣವುಂಟು...

Monday, May 28, 2012

ಯಾನ

೧.  ನಾನು - ನೀನು
ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕಾಲೂರಿ ನಿಶ್ಚಲವಾದದ್ದನ್ನು ಕಂಡೆ.
"ಯಾರು ನೀನು?" ಕೇಳಿದೆ.
ನಾ ಕೇಳಿದ್ದು ಅದನ್ನೋ ಅಥವಾ ನನ್ನನ್ನೇಯೋ ಎಂಬ ಸಂದಿಗ್ಧಕ್ಕೆ ನಾ ಬೀಳುವಷ್ಟರಲ್ಲಿ ಅದು ಮಾತಾಡಿತು.
"ನಾನು ಗಿಣಿ.  ಕಾಣುವುದಿಲ್ಲವೇ?"
ಅದರ ದನಿಯಲ್ಲಿ ಪರಿಚಯದ ನಗೆಯಿತ್ತು.  ಹಂಗಿಸುವ ಕೊಂಕಿತ್ತು.
"ಈಗಷ್ಟೇ ದೀಪವಾರಿಸಿದ್ದು ನಿನಗೆ ಕಾಣಲಿಲ್ಲವೇಈಪಾಟೀ ಕತ್ತಲಿನಲ್ಲಿ ನಿನ್ನ ಮೂತಿ ಮೋರೆ ನನಗೆ ಹೇಗೆ ತಾನೆ ಬೇರಾಗಿ ಕಾಣಬೇಕು?"  ಪ್ರತಿಬಾಣ ಒಗೆದೆ.
ಅದು ಮಾತಾಡಲಿಲ್ಲ.  ತಾನು ಹಿಂದೆಂದೂ ಮಾತಾಡಿಯೇ ಇಲ್ಲ, ಮುಂದೆಂದೂ ತುಟಿ ತೆರೆಯಲಾರೆ ಎನ್ನುವಷ್ಟು ಮೌನವಾಗಿಬಿಟ್ಟಿತು.  ನನಗದರ ಮೌನ ಸಹನೀಯವೆನಿಸಲಿಲ್ಲ.  ಅಲ್ಲದೇ ಮನೆಗೆ ಬಂದ ಅತಿಥಿಯನ್ನು ಮಾತೂ ಆಡಿಸದೆ ಮೌನವಾಗಿ ಕೂರಿಸುವ ಕ್ರೂರ ದುರಭ್ಯಾಸವನ್ನು ನಮ್ಮಮ್ಮ ನನಗೆ ಕಲಿಸಿರಲಿಲ್ಲ.
"ಹಗಲೆಲ್ಲಾ ಅಲ್ಲಿ ಇಲ್ಲಿ ಸುತ್ತಿ ರಾತ್ರಿ ಇಲ್ಲಿಗೇಕೆ ಬಂದೆನಾ ನಿನ್ನ ಒಡತಿಯಲ್ಲ.  ಮಲಗುವ ಹೊತ್ತಿನಲ್ಲಿ ನೀ ನನ್ನ ಬಳಿಗೇಕೆ ಬಂದೆನೀ ನನ್ನ ಗಂಡನಲ್ಲ" ಅಂದೆ.
ಅದು ಮಾತಾಡಲಿಲ್ಲ.
ನನ್ನೊಡನದು ಮೌನ ಮುರಿದು ಮೂರು ಮಾತಾಡುವಂತೆ ಮಾಡಲೇಬೇಕೆಂದು ಸಂಕಲ್ಪಿಸಿದೆ.
"ಹೇಳು ಹಗಲೆಲ್ಲ ಎಲ್ಲಿದ್ದೆಊರು ಮಲಗುವವರೆಗೆ ಎಲ್ಲೆಲ್ಲಿ ಅಲೆಯುತ್ತಿದ್ದೆ?"   ದನಿ ಎತ್ತರಿಸಿದೆ.
ಅದು ತುಟಿ ತೆರೆಯಿತು.
"ನಿನ್ನೆ ಮೊನ್ನೆಯವರೆಗೆ ನಿನ್ನಿರವಿನರಿವಿರಲೇ ಇಲ್ಲ ನನಗೆ.  ಅಂದು ಊರು ಕಣ್ಣ ತುಂಬಾ ಕತ್ತಲ ಕನಸ ತುಂಬಿ ಮೈಮರೆತಿದ್ದಾಗ ನೀನೆದ್ದು ನಿಂತು... ಪಶ್ಚಿಮ ಕ್ಷಿತಿಜದಲ್ಲಿ ಪ್ರಜ್ವಲಿಸುತ್ತಿದ್ದ ಅರ್ಧ ಚಂದಿರನ ಹಸಿರು ಬೆಳಕನ್ನು ಮೋಹಿಸಲು ಮೊದಲು ಮಾಡಿದಾಗ ದೇವದೂತ ಗೇಬ್ರಿಯಲ್ ನನ್ನನ್ನೆಬ್ಬಿಸಿ ಇಲ್ಲಿಗಟ್ಟಿದ.  ಹಾಗೆ ಮಾಡೆಂದು ಅವನಿಗೆ ಆಣತಿಯಾಗಿತ್ತಂತೆ.  ಅಂದಿನಿಂದ ನಾ ಇಲ್ಲಿಲ್ಲೇ ಇದ್ದೆ.  ನಿನ್ನ ಅಕ್ಕಪಕ್ಕದವರ, ದಾರಿಯಲ್ಲಿ ನೀ ನಡೆವಾಗ ನಿನ್ನತ್ತ ನೋಟ ನೆಡುವವರ, ಕಾಲೇಜಿನಲ್ಲಿ ನಿನ್ನ ಹಿಂದೆಮುಂದೆ ಸುತ್ತುವ ನಿನ್ನದೇ ನೇಹಿಗರ ನಾಲಿಗೆಯಲ್ಲಿದ್ದೆ.  ಇದ್ದು ನರ್ತಿಸುತ್ತಿದ್ದೆ.  ನರ್ತಿಸಿ ನಲಿಯುತ್ತಿದ್ದೆ."
ಸ್ವಲ್ಪ ತಡೆದು ಮತ್ತೆ ಹೇಳಿತು.
"ಈಗ ಅವರೆಲ್ಲಾ ಮಲಗಿದರು.  ನಾಳೆ ನಸುಕಿನಲ್ಲಿ ಅವರೆದ್ದು ತಂತಮ್ಮ ನಾಲಿಗೆಗಳನ್ನು ಹರಿತಗೊಳಿಸಿಕೊಳ್ಳುವವರೆಗೆ ನನಗೆ ನಿಲ್ಲಲು ನೆಲೆಯಿಲ್ಲ.  ಹೀಗಾಗಿ ನಿನ್ನ ನೆರಳಿಗೆ ಬಂದೆ.  ಈ ರಾತ್ರಿಯನ್ನು ನಿನ್ನೊಡನೆ ಕಳೆಯುತ್ತೇನೆ."
"ನೀ ನನ್ನ ಬಳಿಗೇ ಯಾಕೆ ಬರಬೇಕಿತ್ತುಹಿಂದೆಂದೂ ನಿನ್ನನ್ನು ಕಂಡ ನೆನಪು ನನಗಿಲ್ಲ.  ನಿನ್ನನ್ನೆಂದೂ ನಾ ಮೋಹಿಸಲಿಲ್ಲ.  ನಿನ್ನ ಬಗೆಗೆಂದೂ ನಾ ಹಗಲುಗನಸು ಕಂಡವಳಲ್ಲ.  ನಿನ್ನ ನೆನಪಿನಿಂದೆಂದೂ ನಾ ನಾಚಿ ನಸುನಕ್ಕವಳಲ್ಲ.  ನಿನ್ನನ್ನು ಬಯಸಿ ನನ್ನ ಮೈ ಎಂದೂ ಬೆಚ್ಚಗಾಗಲಿಲ್ಲ.  ನಿನ್ನನ್ನು ನೆನಸಿ ನಾನೆಂದೂ ಪುಳಕಗೊಳ್ಳಲಿಲ್ಲ.  ನಿನ್ನ ಬರವನ್ನೆಂದೂ ನಾ ಕಾತರದಿಂದ ಕಾಯಲಿಲ್ಲ."
ಅದು ಕಿಲಿಕಿಲಿ ನಕ್ಕುಬಿಟ್ಟಿತು.
"ನೀನಿರುವವರೆಗೆ ನಾನೂ ಇರುತ್ತೇನೆ.  ನೀ ಇಲ್ಲವಾದಾಗ ನಾನೂ ಇಲ್ಲ.  ನನ್ನಿರವನ್ನೆಂದೂ ನೀ ನಿರ್ಲಕ್ಷಿಸಬೇಡ.  ಹಾಗೇನಾದರೂ ಮಾಡಿದರೆ ನಿನಗೆ ಒಳಿತಾಗದು.  ನನ್ನನ್ನು ನಂಬು.  ನಿನ್ನನ್ನು ಉದ್ಧರಿಸುತ್ತೇನೆ."
ಯಾರೋ ಪ್ರವಾದಿಯಂತೆ ನುಡಿದು ಅದು ಮೌನವಾಯಿತು.
ನಾನು ಬೆಪ್ಪು ಬಡೆದು ದನಿ ಕಳೆದುಕೊಂಡೆ.  ನಿದಿರೆ ಕೈಬೀಸಿ ಕರೆಯಿತು.
ಕ್ಷಣಗಳ ನಂತರ ಅದು ಮಾತಾಡಿತು.
"ನಿನ್ನೊಡನೆ ಮಾತಾಡಲು ಬಂದಿರುವೆ ನಾನು."
"ನನಗೀಗ ಮಾತು ಬೇಡ.  ನಿದ್ದೆ ಬರುತ್ತಿದೆ."
"ಓಹೋ!  ಹಾಗಾದರೆ ಜೋಗುಳ ಹೇಳಲೇ?"
"ಬೇಡ.  ಜೋಗುಳ ಹಾಡಿಸಿಕೊಳ್ಳುವ ವಯಸ್ಸಲ್ಲ ನನ್ನದು.  ನಾ ಮನಸ್ಸು ಕೊಟ್ಟಾಗಲೇ ಅವನು ನನ್ನನ್ನು ಮದುವೆಯಾಗಿದ್ದರೆ ಜೋಗುಳ ಕೇಳುವ ಮಗುವೊಂದಿರುತ್ತಿತ್ತು ನನಗೆ."
ನಿದ್ರಿಸಲು ಬಿಡದೇ ಬಂದು ಕಾಡಿಸುವ ಇದರ ಬಗ್ಗೆ ನನಗೆ ಬೇಸರವೆನಿಸಿತು.  ಇದನ್ನು ಓಡಿಸಿ ನೆಮ್ಮದಿಯಿಂದ ನಿದ್ರಿಸುವುದು ಹೇಗೆಅದರ ಕಡೆ ಬೆನ್ನು ತಿರುಗಿಸಿ ಮುಸುಕು ಹೊದ್ದು ಮಲಗಿದೆ.
ಹಾಳಾದ್ದು ಅದೇ ಮಾತಾಡಿತು.
"ನಿನಗೊಂದು ಕಥೆ ಹೇಳಲೇ?"
ಕಥೆ ಎಂದೊಡನೇ ನನ್ನ ಕಿವಿ ನೆಟ್ಟಗಾಯಿತು.  ಕಥೆಗಳೆಂದರೆ ನನಗೆ ಬಲು ಇಷ್ಟ. ಪ್ರೇಮಕಥೆಯೆಂದರೆ ಅದರಲ್ಲೂ ದುರಂತ ಕಥೆಯೆಂದರೆ ನನಗೆ ಪ್ರಾಣ.  ಅದರಲ್ಲೇ ತನ್ಮಯಳಾಗಿಬಿಡುತ್ತೇನೆ.
"ಎಂಥ ಕಥೆ ಹೇಳುತ್ತಿಯ?"  ಆಸೆದುಂಬಿ ಕೇಳಿದೆ.
"ನೀನೇ ಹೇಳು ಎಂಥಾದ್ದು ಹೇಳಲಿ ಅಂತಅವರಿವರ ಕಥೆ ಹೇಳಲೇ?"
"ಬೇಡ.  ಅವರಿವರೆಂದೂ ನನ್ನವರಾಗಲಿಲ್ಲ."
"ಮತ್ತೆ...  ನನ್ನ ಕಥೆ ಹೇಳಲೇ?"
"ಓ ಬೇಡಾ.  ನಿನ್ನನ್ನೆಂದೂ ನಾ ಬಯಸಿದವಳಲ್ಲ."
"ಮತ್ತೆ... ನಿನ್ನದೇ ಕಥೆ ಹೇಳಲೇ?"
ನಾನು ಉತ್ತರಿಸಲಿಲ್ಲ.
ಅದೇ ಉತ್ಸಾಹದಿಂದ ಹೇಳಿತು.
"ಓಹೋ ಮೌನಂ ಸಮ್ಮತಿಲಕ್ಷಣಂ!  ಸರಿ ನಿನ್ನ ಕಥೆಯನ್ನೇ ಹೇಳುತ್ತೇನೆ.  ಅದು ಸರಿ, ಹೇಗೆ ಹೇಳಲಿನಾನು ನೀನಾಗಿ ಹೇಳಲೋ, ಅಥವಾ ನಾನು ಇನ್ನಾರೋ ಆಗಿ ಹೇಳಲೋ?"
"ನೀನು ನೀನೇ ಆಗಿ ಹೇಳು.  ನಾನು ನಾನೇ ಆಗಿ ಅರ್ಥೈಸಿಕೊಳ್ಳುತ್ತೇನೆ."
ಅದು ಉತ್ಸಾಹದಿಂದ ಹೇಳಲಾರಂಭಿಸಿತು.
"ವರುಷ ಇಪ್ಪತ್ತೊಂದರ ಹಿಂದೆ ಧರೆಗಿಳಿದ ಹಾಲುಗಲ್ಲದ ಪೋರಿ ಚಿಗರೆಗಣ್ಣಿನ ಚಕೋರಿಯಾಗಿ ಅರಳಿ ಹದಿನಾರರ ಆಸೆಗಳ ವಯಸ್ಸಿನಲ್ಲಿ ಋತುಮತಿಯಾಗಿ ಹದಿನೇಳರ ಜಾರುವ ನೆಲದಲ್ಲಿ ಯಾರೋ ಕಣ್ಣಲ್ಲೇ ಹೆಣೆದು ಹರಡಿದ ಬಲೆಯಲ್ಲಿ ಸಿಲುಕಿ ಕವನಗಳನ್ನು ನೇಯಲಾರಂಭಿಸಿದಳು...
*     *     *

೨.  ಉತ್ತರದ ಬೇರುಗಳು
ನಾನು ಕವನ ಬರೆಯುವುದರಲ್ಲಿ ಬಹಳ ಹೊತ್ತಿನವರೆಗೆ ಮೈಮರೆತಿದ್ದಿರಬೇಕು.  ಅವನಿಗದು ಸಹನೀಯವೆನಿಸಲಿಲ್ಲವೆಂದು ಕಾಣುತ್ತದೆ.  ನನ್ನ ಮುಂಗುರುಳುಗಳನ್ನೆಳೆದ.  ಬಹುಷಃ ಮಾತಾಡಲು ಅವನಿಗೆ ಭಯವಾಗಿರಬೇಕು.  ಅಥವಾ ಏನು ಮಾತಾಡಬೇಕೆಂದು ಅವನಿಗೆ ಹೊಳೆಯದೇ ಇದ್ದರೂ ಇರಬಹುದು.  ಅಥವಾ ಅವನಿಗೆ ಮಾತೇ ಬರುವುದಿಲ್ಲವೇನೋ.  ಇದ್ದೀತು.  ನನಗೆ ಸರಿಯಾಗಿ ಗೊತ್ತಿಲ್ಲ.
"ಹುಷ್!" ಅಂದೆ.  ಅವನ ಮುಖ ಅರಳಿಕೊಂಡಿತು.  ಕಿಲಿಕಿಲಿ ನಕ್ಕ.  ಮತ್ತೆ ಅಳುಮುಖ ಮಾಡಿದ.  ಸೊರಸೊರ ಅಂದ.  ನಾನು ಗಮನಿಸದೇ ಬರೆಯುವುದನ್ನು ಮುಂದುವರೆಸಿದೆ.  ಅವನಿಗೆ ಅವಳ ನೆನಪಾಗಿರಬೇಕು.  ಮೌನವಾಗಿ ಆಕಾಶ ನೋಡುತ್ತಾ ಕೂತ.  ಅವನ ಕಣ್ಣಳತೆಗೆ ಸಾಲುವಷ್ಟು ಆಕಾಶ ಅಲ್ಲಿತ್ತು.
ನಾನು ಕವನ ಬರೆಯುತ್ತಿರುವುದು ಅವನಿಗಾಗಿಯೇ.  ಅವನನ್ನು ಕಂಡಾಗಲೆಲ್ಲಾ ಕವನ ಬರೆಯುವ ಬಯಕೆಯಾಗುತ್ತದೆ.  ಇಲ್ಲದಿದ್ದರೆ ಮನ ಅಳುತ್ತದೆ.  ಅವನು ನನಗಿಂತಾ ಚೆನ್ನಾಗಿ ಅಳಬಲ್ಲ, ರಾಗವಾಗಿ, ಲಯಬದ್ಧವಾಗಿ.  ನಾನು ಕೂಸಾಗಿದ್ದಾಗೊಮ್ಮೆ ಹಾಗೆ ಅತ್ತಿದ್ದೆ.  ಈಗ ಹಾಗೆ ಅಳಲು ಸಾಧ್ಯವೇ ಆಗುತ್ತಿಲ್ಲ.  ಅಳಲು ಬಾಯಿ ತೆರೆದರೆ ಬೇರೆ ಯಾರ‍್ಯಾರೋ ಅಳುವಂತಹ ದನಿ ಹೊರಡುತ್ತದೆ.  ಬೇಸರವಾದಾಗ ವಯಲಿನ್‌ನ ಹರಿತ ಸದ್ದಿನಂತೆ ಅಳುತ್ತೇನೆ.  ಒಮ್ಮೊಮ್ಮೆ ಅಳುತ್ತಿರುವುದು ನಾನೋ ಅಥವಾ ಟ್ರಾನ್ಸಿಸ್ಟರೋ ಗೊತ್ತಾಗುವುದಿಲ್ಲ.
ಹೊರಗಾದಾಗ ಕವನ ಗಿವನ ಬರೆದೀಯೆ ಜೋಕೆ ಎಂದು ಯಾರೋ ಎಚ್ಚರಿಕೆ ಕೊಟ್ಟಿದ್ದರು.  ಯಾರೆಂದು ಸರಿಯಾಗಿ ನೆನಪಾಗುತ್ತಿಲ್ಲ.  ಮಮ್ಮಿ ಇರಬೇಕು.  ಬಹುಷಃ ಅವಳ ಭೂತವಿದ್ದರೂ ಇರಬಹುದು.  ಅಥವಾ ಅವಳ ದನಿಯನ್ನು ಅನುಕರಿಸಿ ಬೇರಾರೋ ಹೇಳಿರಬೇಕು.
ನಿನ್ನೆ ಸಂಜೆಯೇ ನಾನು ಮುಟ್ಟಾಗಿಬಿಟ್ಟಿದ್ದೆ.  ಮುಳುಗಿಹೋಗುತ್ತಿದ್ದ ಸಂಜೆಸೂರ್ಯನ ಕೆಂಡದಂಥಾ ಕೆಂಪುಕಿರಣಗಳಲ್ಲಿ ನನ್ನ ಅಚ್ಚ ಬಿಳಿಯ ಲಂಗ ಸೀರೆಗಳೆಲ್ಲವೂ ರಕ್ತದಲ್ಲಿ ತೋಯ್ದುಹೋಗಿದ್ದವು.  ಆಗ ಅವನು ನನ್ನ ಜತೆಯಲ್ಲಿಯೇ ಇದ್ದ.  ಪಕ್ಕದಲ್ಲಿ ಕೂತು ಅಳುತ್ತಿದ್ದ.  ನನ್ನನ್ನು ನೋಡಿ ಎಷ್ಟು ಚೆನ್ನಾಗಿದ್ದೀಯೇ, ಅವಳ ಹಾಗೆ ಎಂದು ಮುದ್ದುಗರೆದ.  ನನಗೆ ಸಂತಸವಾಯಿತು.  ನಾನು ಅವಳಾಗುತ್ತಲಿದ್ದೆ.
ಕೋಣೆಯಾಚೆ ಯಾರದೋ ಹೆಜ್ಜೆಗಳು ಇತ್ತಲೇ ಬರುತ್ತಿರುವಂತೆನಿಸಿತು.  ಮಮ್ಮಿಯೇಹೆದರಿಕೆಯಾಯಿತು.  ಒಂದುವೇಳೆ ರಕ್ತದಲ್ಲಿ ತೋಯ್ದು ಹೋಗಿರುವ ನನ್ನ ಲಂಗ ಸೀರೆಗಳನ್ನೂ, ತಿಳಿನೀಲೀ ಹಾಳೆಯ ಮೇಲೆ ಸ್ಫುಟವಾಗಿ ಮೂಡಿದ್ದ ಗುಲಾಬೀ ಅಕ್ಷರಗಳನ್ನೂ ಅವಳು ನೋಡಿಬಿಟ್ಟರೆ...!  ವಿಪರೀತ ಹೆದರಿಕೆಯಾಗಿ ಕವನ ತುಂಬಿದ್ದ ಹಾಳೆಯನ್ನು ಬಾಯೊಳಗಿಟ್ಟು ಜಗಿದು ನುಂಗಿಬಿಟ್ಟೆ.
ಎತ್ತಲಾದರೂ ಹೊರಟುಹೋಗಬೇಕು.  ಇವನನ್ನು ಮದುವೆಯಾಗಿ ಇವನೊಟ್ಟಿಗೆ ಸಂಸಾರ ಮಾಡಿ ಇವನ ಕೂಸನ್ನು ಹೆರಬೇಕು.  ಆಗ ಮುಟ್ಟಿನ ರಕ್ತದಲ್ಲಿ ತೊಯ್ದುಹೋಗಿರುವ ಲಂಗ ಸೀರೆಗಳನ್ನು ಒಗೆದುಕೊಂಡರಾಯಿತು.  ರಕ್ತವೆಲ್ಲಾ ಹೋಗಿಬಿಡುತ್ತದೆ.  ಅವು ಮತ್ತೆ ಬೆಳ್ಳಗೆ ಹೊಳೆಯಲಾರಂಭಿಸುತ್ತವೆ.
ಅದ್ಯಾಕೋ ಅಳಬೇನಿಸಿತು.  ಅಳಲಾರಂಭಿಸಿದೆ.  ಕೊನೆಗೆ ತಡೆಯಲಾರದೇ ಟ್ರಾನ್ಸಿಸ್ಟರನ್ನು ಆಫ್ ಮಾಡಿದೆ.  ದರಿದ್ರದ್ದು ಯಾವಾಗಲೂ ಬರೀ "ಹಳೇ ಪೇಪರ್, ಖಾಲೀಸೀಸಾ" ಎಂದು ಗಂಟಲು ಹರಿದುಕೊಳ್ಳುತ್ತಾ ಬೀದಿಬೀದಿ ಸುತ್ತುತ್ತಿರುತ್ತದೆ. 
ಒಳಗೆ ಬಂದವನು ಅಂಕಲ್ ಸ್ಯಾಮ್.  ಬಾಗಿಲುದ್ದಕ್ಕೂ ನಿಂತುಬಿಟ್ಟ.  ಹಲ್ಲು ಕಿರಿದ.  ಗೆರೆಗೆರೆ ಟೋಪಿ ತೆಗೆದು ಬುರುಡೆ ತೋರಿಸಿದ.  ನಿನ್ನಮ್ಮ ಬರುವುದಿಲ್ಲ ಎಂದ.  ಹೆದರಿಕೊಂಡೆಯಾ ಎಂದು ಕಕ್ಕುಲತೆ ತೋರಿದ.  ಎಲ್ಲಾ ಬರೀ ನಾಟಕ.  ಬಣ್ಣವಿಲ್ಲದ್ದು.  ನನ್ನನ್ನು ನಂಬು ಎಂದು ಗೋಗರೆದ.  ಬೇಕಾದರೆ ನೀನೇ ನೋಡು ಎಂದು ಮತ್ತೊಮ್ಮೆ ಟೋಪಿ ತೆಗೆದು ಬುರುಡೆ ಮುಂದೆ ತಂದ.  ನಿನ್ನಮ್ಮ ನಿಜವಾಗಿಯೂ ಬರುವುದಿಲ್ಲ, ಅವಳೀಗ ನಿನ್ನ ಲಂಗ ಸೀರೆಗಳನ್ನು ಒಗೆಯುತ್ತಿದ್ದಾಳೆ ಎಂದ.  ರಕ್ತದಲ್ಲಿ ನೆನೆದುಹೋಗಿರುವ ಲಂಗ ಸೀರೆಗಳು ಎಂದೂ ಸೇರಿಸಿ ಕಿಸಕ್ಕನೆ ನಕ್ಕ. 
ನಾನು ಅವನನ್ನು ನಂಬಿದೆ.
ಸ್ಯಾಮ್ ಬಂದು ನಮ್ಮಿಬ್ಬರ ಮಧ್ಯೆ ಕೂತ.  ನಾನು ಈಗ ಏನು ತಂದಿದ್ದೀನಿ ಗೊತ್ತಾ ಎಂದು ಕಣ್ಣು ಮಿಟುಕಿಸಿದ.  ಏನೂ ತಂದಿದ್ದೀಯ ಎಂದು ಅವನು ಕೇಳುತ್ತಾನೆಂದು ಸ್ಯಾಮ್ ಅಂದುಕೊಂಡಿದ್ದನೇನೋ.  ಆದರೆ ಅವನು ಸ್ಯಾಮ್‌ನ ಕಡೆ ಗಮನವನ್ನೇ ಕೊಡಲಿಲ್ಲ.  ಒಂದೇ ಸಮನೆ ಮಣಮಣ ಎದು ಗೊಣಗಿಕೊಳ್ಳುತ್ತಾ ಕೂತ.  ಅವನ ಮಣಮಣಗಳಲ್ಲಿ "ವಂದೇ ಮಾತರಮ್, ಪ್ಲೆಬಿಸೈಟ್" ಅಂತ ಏನೇನೊ ನೆರಳುಗಳು ಕುಣಿದಾಡುತ್ತಿದ್ದುದು ನನ್ನ ಅರಿವಿಗೆ ಬಂತು.  ಸ್ಯಾಮ್ ಹರಳೆಣ್ಣೆ ಕುಡಿದವನ ಹಾಗೆ ಮುಖ ಮಾಡಿಕೊಂಡು ನನ್ನೆಡೆ ತಿರುಗಿದ.
ಮಧ್ಯಾಹ್ನಧ ವಾರ್ತೆಗಳ ಸಮಯವಾಗಿತ್ತು.  ಸ್ಯಾಮ್ ತಂದಿರುವುದೇನೆಂದು ತಿಳಿಯಲು ನಾನು ನನ್ನ ಟ್ರ್ಯಾನ್ಸಿಸ್ಟರನ್ನು ಆನ್ ಮಾಡಿದೆ...
ನನಗೆ ಗೊತ್ತಾಗಿಹೋಯಿತು.  ಅವನು ತಂದಿರುವುದು ಒಂದು ಕನಸು.
ಓಹ್!  ಅದು ನನ್ನದೇ ಕನಸು!
ಅವನದನ್ನು ನನ್ನ ಉಡಿಯಿಂದ ಕದ್ದಿದ್ದಾನೆ.  ಅಥವಾ ರಕ್ತದಲ್ಲಿ ನೆನೆದುಹೋಗಿದ್ದ ನನ್ನ ರೇಶಿಮೆಯ ಲಂಗದ ನಿರಿಗೆಯೊಂದರಲ್ಲಿ ಅಡಗಿ ಕೂತು ಅಳುತ್ತಿದ್ದ ಅದನ್ನು ಜೋಪಾನವಾಗಿ ಎತ್ತಿ ಮಮ್ಮಿ ಇವನ ಕೈಲಿ ಕೊಟ್ಟು ಕಳಿಸಿರಬೇಕು.
ಅಹ್ ಎಂಥಾ ಸುಂದರ ಕನಸು ಅದು!  ನೆನಸಿಕೊಂಡಾಗಲೆಲ್ಲಾ ಮನ ಮುಮ್ಮಲ ಮರುಗುತ್ತದೆ.  ಬಿಕ್ಕಿಬಿಕ್ಕಿ ಅಳುವ ಬಯಕೆ ಕಣ್ಣುಗಳಿಗಾಗುತ್ತದೆ.  ನೀರವ ರಾತ್ರಿಯೊಂದರ ಯಾವುದೋ ಒಂದು ಗಳಿಗೆಯಲ್ಲಿ ಹೆನ್ರಿ ಡೇವಿಡ್ ಥೋರೋ ಆ ಕನಸನ್ನು ನನ್ನ ಕಣ್ಣುಗಳಾಳದಲ್ಲಿ ಬಿತ್ತಿಬಿಟ್ಟಿದ್ದ.  ಅವನ ಸ್ಫುಟ ನುಡಿಗಳು ಟೆಲಿಪ್ರಿಂಟರಿನಲ್ಲಿ ಮೂಡುವ ಅಕ್ಷರಗಳಂತೆ ಅದೆಲ್ಲಿಂದಲೋ ಓಡಿಬಂದು ನನ್ನ ಮನದಾಳದ ನೆನಪಿನ ಗರಿಯ ಮೇಲೆ ಪಟಪಟನೆ ಮೂಡಿಬಿಟ್ಟಿದ್ದವು...
...ನಾನವುಗಳನ್ನು ಮತ್ತೆ ಮತ್ತೆ ಓದಿದ್ದೆ.

I long lost a hound, a bay horse and a turtle dove and I am still on their trail.  Many of the travelers I have spoken to concerning them, describing their tracks, and what calls they answered to.  I have met one or two who have heard the hound and the tramp of the horse and had even seen the dove disappear behind a cloud and they seemed as anxious to recover them as if they had lost them themselves.
  

ಓಹ್ ನಾನೆಂತಹ ದುರದೃಷ್ಟಶಾಲಿ!  ನನ್ನ ನಾಯಿಯನ್ನು ಕಳೆದುಕೊಂಡೆ.  ನನ್ನ ಕುದುರೆಯನ್ನು ಕಳೆದುಕೊಂಡೆ.  ನನ್ನ ಪಾರಿವಾಳವನ್ನೂ ಸಹ.  ಈಗ ಈ ಪಾಪಿ ಸ್ಯಾಮ್ ನನ್ನ ಕನಸನ್ನೂ ಕಸಿದುಕೊಂಡುಬಿಟ್ಟಿದ್ದಾನೆ!  ಓಹ್ ನಾನು ಎಲ್ಲವನ್ನೂ ಕಳೆದುಕೊಂಡೆ...
ಭೋರಿಟ್ಟು ಅಳತೊಡಗಿದೆ.
"ಥತ್ ಯಾವ ಸೀಮೆ ಹೆಣ್ಣು ನೀನುಈಪಾಟೀ ಸದ್ದು!" ಎಂದು ಮುಖ ಕಿವಿಚಿ ಸ್ಯಾಮ್ ಟ್ರ್ಯಾನ್ಸಿಸ್ಟರಿನ ಕೊರಳು ಹಿಸುಕಿದ.  ನನಗೆ ಸಮಾಧಾನವಾಯಿತು.
ಸ್ಯಾಮ್ ಒಳ್ಳೆಯವನು.  ನನ್ನ ಕನಸನ್ನು ಕದ್ದರೂ ಪರವಾಗಿಲ್ಲ, ಪ್ರತಿಯಾಗಿ ನನಗೆ ಉಡಿ ತುಬಾ ಮೌನ ನೀಡಿದ.  ಬಹಳ ಆತ್ಮೀಯನಂತೆ ಕಂಡ.  ಅವನ ಭುಜಕ್ಕೆ ಮುಖವೊತ್ತಿ ಬಿಕ್ಕುತ್ತಾ ಕೇಳಿದೆ: "ಹೇಳು ಸ್ಯಾಮ್, ಯಾವ ಗಂಡಸಾದರೂ ಮತ್ತೊಬ್ಬ ಗಂಡಸಿನೆದುರು ಹೆಣ್ಣೊಬ್ಬಳು ಬೆತ್ತಲಾಗುವುದನ್ನು ಸಹಿಸುತ್ತಾನಾ?"
ಸ್ಯಾಮ್ ಗಡಬಡಿಸಿ ಎದ್ದ.  "ಇವನ ಜತೆ ಯಾವಾಗಲೂ ಕೂತಿರಬೇಡ.  ಬಾ ಹೊರಗೆ ಹೋಗೋಣ, ಹವಾ ಚೆನ್ನಾಗಿದೆ" ಎಂದು ನನ್ನನ್ನೆಬ್ಬಿಸಿ ಹೊರಗೆ ಕರೆತಂದ.
ನಾವಿಬ್ಬರೂ ಸಂಜೆಯ ಹೊಂಗಿರಣಗಳಲ್ಲಿ ನಾಚಿಕೆಯಿಲ್ಲದೇ ಬೆತ್ತಲಾಗಿ ಮಲಗಿದ್ದ ನೀಲೀ ಹೊಕ್ಕಳಿನ ರಸ್ತೆಯ ಮೇಲೆ ನಡೆಯತೊಡಗಿದೆವು.  ಬಸ್‌ಸ್ಟಾಪಿನ ಬಳಿ ಬಂದಾಗ "ಕ್ಯಾಂಪಸ್ಸಿನಿಂದ ಹೊರಗೆ ಹೋಗೋಣವಾ೬೧೫ ಹತ್ತಿ ಕನಾಟ್ ಪ್ಲೇಸಿಗೆ ಹೋಗೋಣ.  ಅಲ್ಲಿ ಕಸ್ತೂರ್ ಬಾ ಗಾಂಧಿ ಮಾರ್ಗ್‌ನಲ್ಲಿರುವ ನಿನ್ನ ಬಿಡಾರಕ್ಕೆ ಹೋಗಿ ಚಹಾ ಕುಡಿಯುವ ಬಯಕೆಯಾಗುತ್ತಿದೆ" ಎಂದೆ.  "ಬೇಡ, ಲೈಬ್ರರಿಗೆ ಹೋಗೋಣ" ಎಂದ ಸ್ಯಾಮ್.
ನಾನು ಪ್ರತಿಭಟಿಸಿದೆ.
"ಉಹ್ಞುಂ ನಾ ಬರಲ್ಲ.  ಲೈಬ್ರರಿಯಲ್ಲಿ ನೀನು ಯಾವಾಗಲೂ ಆ ಕೆಂಪು ಹೊದಿಕೆಯ ಪುಸ್ತಕ ತೋರಿಸಿ ಹೆದರಿಸುತ್ತೀಯೆ."
"ಇಲ್ಲ ಇಲ್ಲ.  ಕೆಂಪು ಹೊದಿಕೆಯ ಪುಸ್ತಕ ಈಗ ಅಲ್ಲಿಲ್ಲ.  ಅದು ಹುಳು ತಿಂದುಹೋಯಿತು.  ಈಗ ಅದನ್ನು ಯಾರೂ ಮೂಸುವುದಿಲ್ಲ.  ಕರಡಿಗಳು ಅದನ್ನು ತಿಪ್ಪೆಗೆ ಎಸೆದು ತುಂಬ ಕಾಲವಾಯಿತು.   ಮ್ಯಾಂಡರೀನ್‌ಗಳಂತೂ ಅದನ್ನು ಹರಿದು ಚಿಂದಿ ಮಾಡಿ ಹಾಳೆಗಳನ್ನು ಒಂದೊಂದಾಗಿ ಗಾಳಿಗೆ ತೂರುತ್ತಿದ್ದಾರೆ.  ಅದರ ಹೊದಿಕೆಯನ್ನು ಮಾತ್ರ ಎರಡೂ ಕೈಗಳಲ್ಲಿ ಎಲ್ಲರಿಗೂ ಕಾಣುವಂತೆ ಹಿಡಿದುಕೊಂಡಿರುತ್ತಾರೆ ಅಷ್ಟೇ.  ಒಳಗೆ ನೋಡಿದರೆ ಯಾವುದೋ ಸೂಪರ್ ಮಾರ್ಕೆಟ್‌ನ ಸಾಮಾನುಗಳ ಬೆಲೆಪಟ್ಟಿ ಇರುತ್ತದೆ.  ಇಲ್ಲಿ ನಿಮ್ಮೂರಿನ ಅ ಮೂಡಣ ಮೂಲೆಯಲ್ಲಿ ಒಂದಷ್ಟು ಬಂಗಾಳಿ ಬಾಬುಗಳು ಆಗಾಗ ಬಯಲಲ್ಲಿ ನಿಂತು ಅದರಿಂದ ಗಾಳಿ ಹಾಕಿಕೊಳ್ಳುವುದನ್ನು ಇನ್ನೂ ನಿಲ್ಲಿಸಿಲ್ಲ.  ಅವರನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಬೇಡ.  ಇನ್ನು ನಾಕು ದಿನದಲ್ಲಿ ಅವರದನ್ನು ಗಾಳಿಗೆ ತೂರದಿದ್ದರೆ ಕೇಳು.  ಎಷ್ಟಾದರೂ ಅವರು ಬಂ"ಗಾಳಿ"ಗಳಲ್ಲವೇಕೆಂಪು ಪುಸ್ತಕವನ್ನು ಮರೆತುಬಿಡು.   ಈಗ ಲೈಬ್ರರಿಯಲ್ಲೊಂದು ಹೊಸಾ ಪುಸ್ತಕ ನೋಡಿದ್ದೇನೆ.  ಹಸಿರು ಹೊದಿಕೆಯದು.  ಹೆಸರು ನೆನಪಿಲ್ಲ.  ಆದರೆ ಅದೆಲ್ಲಿದೆಯೆಂದು ಗೊತ್ತು.  ಬೆಸ್ಟ್ ಸೆಲ್ಲರ್ ಅದು.  ಕ್ರೈಮ್ ಥ್ರಿಲ್ಲರ್.  ನಾನಿನ್ನೂ ಓದಿಲ್ಲ.  ಮುಟ್ಟಲು ಭಯವಾಗುತ್ತದೆ.  ಬಹಳ ಜನ ಓದಿದ್ದಾರಂತೆ.  ಆದರೂ ಅದಿನ್ನೂ ಹೊಸದಾಗಿಯೇ ಇದೆ.  ಅದನ್ನು ನಿನಗೆ ತೋರಿಸುತ್ತೇನೆ.  ಹೇಗಾದರೂ ಅದನ್ನು ಕ್ಯಾಟಲಾಗಿನಿಂದ ಮಂಗಮಾಯ ಮಾಡಿಬಿಡೋಣ.  ಈಗ ಕನಾಟ್ ಪ್ಲೇಸಿನ ಕಡೆ ಹೋಗಿ ಮೆರವಣಿಗೆಯಾಗುವುದು ಬೇಡ.  ಯಾಕಂದರೆ ನೀನೀಗ ಪ್ಯಾಂಟ್ ಹಾಕಿಕೊಂಡಿದ್ದೀಯೇ.  ಮಮ್ಮಿ ಒಗೆದ ನಿನ್ನ ಬಿಳೀ ಲಂಗಸೀರೆಗಳು ಒಣಗಿದ ನಂತರ ಅವುಗಳನ್ನು ಹಾಕಿಕೊಳ್ಳುವೆಯಂತೆ.  ಆಗ ನಿನ್ನನ್ನು ಮನೆಗೆ ಕರೆದುಕೊಂಡು ಹೋಗಿ ಬ್ರೆಡ್ ಪಕೋಡ, ಪೆಪ್ಸಿಕೋಲ ಕೊಡಿಸುತ್ತೇನೆ.  ತಲೆ ಕೆಡಿಸಿಕೊಳ್ಳಬೇಡ.  ಣಚಿಞe ieಚಿsಥಿ  ಎಂದ ಸ್ಯಾಮ್.
ನನಗೆ ನಿರಾಸೆಯಾಯಿತು.
ನಾನು ಪ್ಯಾಂಟ್ ಹಾಕಿಕೊಂಡರೆ ಇವನಿಗೇನುನಾನು ಸೀರೆಯನ್ನೇ ಯಾಕೆ ಉಡಬೇಕುಯಾಕೆ, ಪ್ಯಾಂಟ್ ಹಾಕಿಕೊಂಡ ಹುಡುಗಿಗೆ ಮಕ್ಕಳಾಗುವುದಿಲ್ಲವೇ
ಆದರೂ ನಾನು ಅವನ ಮಾತಿಗೆ ಒಪ್ಪಿಗೆ ನೀಡಿದೆ. 
ಇದು ಇತಿಹಾಸದ ಉದ್ದಕ್ಕೂ ನಡೆದು ಬಂದ ರಿವಾಜು.  ಗಂಡಸು ಅಪ್ಪನಾಗಲೀ, ಅಣ್ಣನಾಗಲೀ, ಗಂಡನಾಗಲೀ, ಮಿಂಡನಾಗಲೀ ಅಥವಾ ಬರೀ ಫ್ರೆಂಡೇ ಆಗಿರಲಿ ಹೆಂಗಸು ಅವನ ಮಾತಿಗೆ ಒಪ್ಪಬೇಕು, ಒಪ್ಪುತ್ತಾಳೆ, ಒಪ್ಪಿದ್ದಾಳೆ.
ನಾನೂ ಹಾಗೇ ಮಾಡಿದೆ.  ಯಾಕಂದರೆ ನಾನೂ ಒಬ್ಬಳು ಹೆಣ್ಣು.  ನನಗೆ ಭಾರೀ ಬೆಟ್ಟಗಳಂಥಾ ಎರಡು ಮೊಲೆಗಳೂ, ಪಾತಾಳದಂಥಾ ಒಂದು ಯೋನಿಯೂ ಇದೆ. 
ಸ್ಯಾಮ್‌ಗೆ ಒಬ್ಬಳು ಹಳದೀ ಗೆಳತಿ ಇದ್ದಾಳೆ.  ಗೆಳತಿಯೇ ಎಂದು ಗ್ಯಾರಂಟಿಯಾಗಿ ಹೇಳಲಾರೆ.  ಯಾಕಂದರೆ ಅವಳನ್ನವನು ಒಮ್ಮೆ ಗೆಳತಿ ಎಂದರೆ ಮತ್ತೊಮ್ಮೆ ಅಮ್ಮ ಅನ್ನುತ್ತಾನೆ.  ಒಂದೆರಡು ಸಲ ಮುತ್ತಜ್ಜಿ ಅಂದದ್ದೂ ಉಂಟು.  ಇತ್ತೀಚೆಗಂತೂ ಅವಳು ಪ್ರಕೃತಿ, ನಾನು ಪುರುಷ; ಅವಳು ಯಾಂಗ್ ನಾನು ಯಿಂಗ್ ಎಂದು ನನಗರ್ಥವಾಗದ ಚೀನೀ ಭಾಷೆಯಲ್ಲಿ ಏನೇನೋ ಹೇಳುತ್ತಾನೆ.  ಇರಲಿ, ಅದರ ಬಗ್ಗೆ ಈಗ ತಲೆ ಕೆಡಿಸಿಕೊಳ್ಳುವುದು ಬೇಡ.  ಮಸಲಾ ವಿಷಯ ಏನೆಂದರೆ ಅವಳಿಗೂ ಒಂದು ಯೋನಿ ಇದೆಯಂತೆ.  ಹಾಗೆಂದು ಅವನೇ ಹೇಳಿದ್ದ.  ನಾನು ನೋಡಿಲ್ಲ.  ಅದರೊಳಗೆ ಒಂದು ಬ್ರಹ್ಮಾಂಡವೇ ಅಡಗಿ ಕೂತಿದೆ ಎಂದವನು ಹೇಳುತ್ತಾನೆ.  ನನ್ನದರೊಳಗೂ ಅಂಥಾ ಒಂದು ಬ್ರಹ್ಮಾಂಡ ಇದೆಯಾನನಗೆ ಕಾಣಲಿಕ್ಕೇ ಆಗಿಲ್ಲ.
ಅವ್ವಯ್ಯಾ ಥೂ ಎಂಥಾ ಯೋಚನೆ!
blasphemy!
ದೈವನಿಂದೆ.
ಹುಚ್ಚು!
ಒಂಥರಾ ಹುಚ್ಚು.  ಸಖತ್ ಹುಚ್ಚು.  ಹುಚ್ಚು ದೈವನಿಂದೆ.
ಹ್ಞಾಂ ಹುಚ್ಚು ದೈವನಿಂದೆ!  ಹಾಗಂದರೇನುನಿನ್ನೆಯೋ ಮೊನ್ನೆಯೋ ಯಾರ ಬಾಯಲ್ಲೋ ಆ ಮಾತು ಕೇಳಿದ್ದೆ.  ಲಾಲಿ ಇರಬೇಕು.  ನನ್ನನ್ನೇ ಉದ್ದೇಶಿಸಿ ಹೇಳಿದ್ದಳು.  ಮತ್ತೆ ಟೀವಿಯಲ್ಲಿ ಬರುತ್ತಾನಲ್ಲ ಆ ಮುದಿಯ ನನ್ನ ಕಡೆ ಕಲ್ಲು ಒಗೆದಿದ್ದ.  ಪಶ್ಚಿಮ ಏಶಿಯಾದ ಮಕ್ಕಳೆಲ್ಲಾ ಹುಚ್ಚಿ ಹುಚ್ಚಿ ಎಂದು ಕೂಗುತ್ತಾ ಸೀಳುನಾಯಿಗಳಂತೆ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದವು.  ನಾನಾಗ ನ್ಯೂಯಾರ್ಕ್‌ನಲ್ಲೋ, ವಾಷಿಂಗ್‌ಟನ್‌ನಲ್ಲೋ ವಿಮಾನಕ್ಕಾಗಿ ಕಾಯುತ್ತಾ ಏರ್‌ಪೋರ್ಟ್‌ನಲ್ಲಿ ಕೂತುಕೊಂಡಿದ್ದೆ...
*     *     *

೩.  ವರ್ತಮಾನದ ಆತೀತ
ಬೇಕು-ಬೇಡಗಳ ಸಂದಿಗ್ಧದಲ್ಲಿ ನನ್ನ ನೆನಪನ್ನು ನಾ ಕಳೆದುಕೊಂಡು ಮೈಮರೆತು ಬೆಳಗಿನ ಉಪಾಹಾರವನ್ನು ತೆಗೆದುಕೊಳ್ಳುತ್ತಿದ್ದಾಗ ಮೇಜಿನ ಆಚೆಬದಿಯಿಂದ ಡ್ಯಾಡಿ ನನ್ನೆಡೆಗೇ ನೋಡುತ್ತಿದ್ದರು.  ಡ್ಯಾಡಿ ದೊಡ್ಡ ಆಫೀಸರು.  ಲಂಚ ತೆಗೆದುಕೊಳ್ಳುವುದಿಲ್ಲ. 
ಮಮ್ಮಿ ನನ್ನ ತಲೆ ಸವರಿ ಹೇಳಿದಳು: "ಇಂದೂ ನೀನು ಕಾಲೇಜಿಗೆ ಹೋಗುವುದು ಬೇಡ ಮಗಳೇ.  ನಿನಗಿನ್ನೂ ಗುಣವಾಗಿಲ್ಲ."
ಮಮ್ಮಿಯ ಶರೀರ ಎರಡಾಗಿ ಸೀಳಿ ಆ ಎರಡು ತುಂಡುಗಳ ನಡುವಿನ ಇರುಕಿನಲ್ಲಿ ನಾನು ಅಪ್ಪಚ್ಚಿಯಾಗುವಂತೆ ಸಿಲುಕಿಕೊಂಡು ಹೊರಬರಲು ಹೆಣಗುತ್ತಿದ್ದೇನೆ ಎಂಬ ಭಯಂಕರ ನೆನಪಿನ ಕನಸು ನನ್ನನ್ನು ಇಂದಿಗೂ ಭೂತದಂತೆ ಕಾಡುತ್ತದೆ.  ಮಮ್ಮಿಯ ಬಿಳಿದಾದ ಕಿಬ್ಬೊಟ್ಟೆಯ ಆಳದಲ್ಲೆಲ್ಲೋ ನನಗೆಂದೂ ಸಿಗದೇಹೋದ ಲೆಕ್ಕಕ್ಕೆ ಮೀರಿದ ನನ್ನ ತಮ್ಮ ತಂಗಿಯರೆಲ್ಲ ಸುಖವಾಗಿ ಮಲಗಿ ನಿದ್ರಿಸುತ್ತಿದ್ದಾರೆ.  ನನ್ನಂತೆ ಕಷ್ಟ ಪಡುವುದು ಅವರಿಗೆ ಬೇಕಿಲ್ಲ. 
ನಾನು ಮಾತಾಡದೇ ದನದ ಮಾಂಸದ ತುಂಡೊಂದನ್ನು ಬಾಯಿಗೆ ಹಾಕಿಕೊಂಡೆ.  ಹಂದಿಯ ಮಾಂಸ ನಮ್ಮ ಮನೆಯಲ್ಲಿ ನಿಷಿದ್ಧ.  ಮಮ್ಮಿ ನನ್ನನ್ನೆಬ್ಬಿಸಿ ಕೋಣೆಯೊಳಗೆ ಕರೆದುಕೊಂಡು ಹೋದಳು. 
ನಾನು ಹಾಸಿಗೆಯ ಮೇಲೆ ಬೋರಲಾಗಿ ಮಲಗಿದೆ.  ಹಾಗೆ ಹಾಸಿಗೆಯ ಮೇಲೆ ಮಲಗಿದ್ದ ನನ್ನ ಗೆಳತಿಯ ಶವ ನೆನಪಿಗೆ ಬಂದು ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡೆ.  ಹಿಂದೆಯೇ ಮಮ್ಮಿ ನನ್ನ ಮುಚ್ಚಿದ ಕಣ್ಣವೆಗಳಿಗೆ ಹೊರಗಿನಿಂದ ಕಳಕ್ಕನೆ ಚಿಲಕ ಹಾಕಿಕೊಂಡು ನಿಂತಳು.  ನನಗೆ ನಿದ್ದೆಯಿಂದ ಎಚ್ಚರವಾಗುವವರೆಗೂ ಅವಳ ಏದುಸಿರು ನನ್ನೆದೆಯಲ್ಲಿ ಬಿರುಗಾಳಿಯಂತೆ ಮೊರೆಯುತ್ತಿತ್ತು. 
    
ಎಚ್ಚರವಾದಾಗ ಎದ್ದು ಹೊರಗೆ ಬಂದೆ. 
ಮಮ್ಮಿ ಎಲ್ಲೂ ಕಾಣಿಸಲಿಲ್ಲ.  ಹಜಾರದ ಗೋಡೆಯ ಮೇಲೆ ಡ್ಯಾಡಿಯ ದೊಡ್ಡ ಫೋಟೋ ಇತ್ತು.  ಅದಕ್ಕೆ ಹಾಕಿದ್ದ ಹಾರದಲ್ಲಿನ ಹೂಗಳು ಬಾಡುತ್ತಿದ್ದವು.  ಅಗರಬತ್ತಿಯ ವಾಸನೆ ಹಳತಾಗಿಹೋಗಿತ್ತು.
ಅದೇ ಸುಸಮಯವೆಂದುಕೊಂಡು ನಾನು ಚಪ್ಪಲಿ ಮೆಟ್ಟಿ ಹೊರಗೆ ಬಂದೆ. 
ಇಂದಾದರೂ ಅವನನ್ನು ಭೇಟಿಯಾಗಬೇಕು, ಸಾಧ್ಯವಾದರೆ.  ಅವನೆಲ್ಲಿದ್ದಾನೆಂದು ಯಾರೂ ಹೇಳುವುದಿಲ್ಲ.  ನಮ್ಮ ಮನೆಗೆ ಬಂದು ನನ್ನನ್ನು ನೋಡು ಎಂದು ನಾನು ಅವನಿಗೆ ಅನುದಿನವೂ ಪತ್ರ ಬರೆಯುತ್ತಿದ್ದೇನೆ. 
ಅವನ ಸುಳಿವಿಲ್ಲ.
ಅವನಿಗೆ ನನ್ನ ಮೇಲಿನ ಪ್ರೀತಿ ಇಂಗಿಹೋಯಿತೇಅರಬಸ್ತಾನದ ಮರಳುಗಾಡಿನ ನೀರವ ಗುಹೆಯಾಯಿತೇ ಹೃದಯಅಯ್ಯೋ ನಾನು ನನ್ನ ನಾಯಿ, ಕುದುರೆ, ಪಾರಿವಾಳದ ಜತೆ ಅವನನ್ನೂ ಕಳೆದುಕೊಂಡೆನೇ
"ಅಯ್ಯೋ...!"
ನಾನು ನೆಲಬಿರಿಯುವಂತೆ ಚೀರಿದೆ.  ಚೀರುತ್ತಲೇ ಇದ್ದೆ ಸ್ಯಾಮ್ ಬಂದು ನನ್ನನ್ನು ತಟ್ಟಿ ಮಲಗಿಸುವವರೆಗೂ.
ನಿದ್ದೆಯಲ್ಲಿ ಒಂದು ಕನಸು...
ಅವನು ನನ್ನ ಕುದುರೆಯ ಮೇಲೆ ಕುಳಿತುಕೊಂಡು ಹೋಗುತ್ತಿದ್ದ.  ಪಾರಿವಾಳ ಅವನ ಭುಜದ ಸನಿಹವೇ ಹಾರುತ್ತಾ ಹೋಗುತ್ತಿತ್ತು.  ನಾಯಿ ಅವನ ಬಲಬದಿಯಲ್ಲಿ ಕುದುರೆಯ ಹೆಜ್ಜೆಗೆ ಹೆಜ್ಜೆ ಕೂಡಿಸಿ ಓಡುತ್ತಿತ್ತು...
...ನಾನು ಅಂತಃರಿಕ್ಷಾದಲ್ಲಿ ಸಂಚರಿಸುತ್ತ ಅವನನ್ನು ಹಿಂಬಾಲಿಸುತ್ತಿದ್ದೆ.
ಹಾಗೆಯೇ ಅದೆಷ್ಟೋ ಯೋಜನ ಪಯಣವಾದ ನಂತರ ಇತಿಹಾಸದ ಒಂದು ತಿರುವಿನಲ್ಲಿ ಡ್ಯಾಡಿಯ ಜೀಪು ಕಾಣಿಸಿಕೊಂಡಿತು.  ಡ್ಯಾಡಿಯ ಜತೆ ಒಂದು ಹೆಬ್ಬಾವೂ, ಒಂದು ಬಾವುಟವೂ ಇದ್ದವು.
ಡ್ಯಾಡಿ ಅವನನ್ನು ಬೆನ್ನಟ್ಟಿದರು.
ಅವನು ಕುದುರೆಯ ವೇಗ ಹೆಚ್ಚಿಸಿದ.  ಅರಬ್ಬೀ ಕುದುರೆ ಅದು.  ಪುಟುಪುಟು ಓಡಿತು.  ಡ್ಯಾಡಿ ಬಿಡಲಿಲ್ಲ.  ಅವರಿಬ್ಬರನ್ನೂ ನೋಡಿ ನಾನು ಚಪ್ಪಾಳೆ ತಟ್ಟಿ ನಗತೊಡಗಿದೆ. 
ಬೆಳಗಾಗುವ ಹೊತ್ತಿಗೆ ಡ್ಯಾಡಿಯ ಜೀಪಿನಲ್ಲಿ ರಕ್ತ ಮುಗಿದುಹೋಯಿತು.  ಜೀಪು ಮುಂದೆ ಸಾಗಲಾರದೆ ಗಕ್ಕನೆ ನಿಂತುಬಿಟ್ಟಿತು.  ನನ್ನ ಕುದುರೆ ಮಾತ್ರ ಯಾವ ಆಯಾಸವೂ ಇಲ್ಲದೇ ಅವನನ್ನು ಹೊತ್ತು ಮಾಯವಾಗಿಬಿಟ್ಟಿತು.  ಡ್ಯಾಡಿಗೆ ಅದನ್ನು ಹಿಡಿಯಲಾಗಲಿಲ್ಲ.  ಅವನಂತೆ ದಯಾಮಯನೂ ಸರ್ವಶಕ್ತನೂ ಆದ ದೇವರ ಸೃಷ್ಟಿಯಾದ ಜೀವಿಯೊಂದರ ಮೇಲೆ ವಿಶ್ವಾಸವಿಡದೇ ಮನುಷ್ಯನಿರ್ಮಿತಿಯಾದ ಯಂತ್ರವೊಂದರ ಮೇಲೆ ವಿಶ್ವಾಸವಿರಿಸಿ ಡ್ಯಾಡಿ ಸೋತುಹೋದರು. 
ಎಚ್ಚರವಾದಾಗ ಅನಿಸಿತು- ಡ್ಯಾಡಿಯ ಸೋಲು ನನ್ನ ಸೋಲೂ ಸಹ.  ಅವನು ನನಗೂ ಸಿಗದೇ ಹೊರಟುಹೋಗಿದ್ದಾನೆ.  ಜತೆಗೆ ನನ್ನ ಕುದುರೆ, ನಾಯಿ, ಪಾರಿವಾಳವನ್ನು ಕೊಂಡೊಯ್ದಿದ್ದಾನೆ.
ಈ ನಾಲ್ವರಲ್ಲಿ ನನಗೆ ಒಂದು ಸಿಕ್ಕಿದರೂ ಉಳಿದ ಮೂವರನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ.
ಹಾಸಿಗೆಯಿಂದೆದ್ದು ಕಂಡ ಕನಸನ್ನು ಸ್ಯಾಮ್‌ಗೆ ಹೇಳಿದೆ.  ಅವನು ನನ್ನ ಬೆನ್ನು ಸವರುತ್ತಾ ಹೇಳಿದ: "ನಿನಗಿನ್ನೂ ನನ್ನ ಮೇಲೆ ನಂಬಿಕೆಯಾದಂತಿಲ್ಲ.  ನಿಜ ಹೇಳುತ್ತೇನೆ ಕೇಳು ನಿನಗೆ ಹುಚ್ಚು ಹಿಡಿದಿಲ್ಲ.  ನಾನು ನಿನ್ನನ್ನು ಪ್ರೀತಿಸುತ್ತಿರುವವರೆಗೂ ನೀನು ಹುಚ್ಚಿಯಲ್ಲ."
ಮೋಡಗಳಿಲ್ಲದ ಪೂರ್ಣಿಮೆಯ ರಾತ್ರಿಯಾಗಸದಲ್ಲಿ ಹಿಮಗತ್ತಲು ಮುಸುಕಿಕೊಂಡಿತ್ತು.
    
ಅವನಿಗೆ ಕೊಟ್ಟಕೊನೆಯ ಪತ್ರ ಬರೆಯತೊಡಗಿದೆ. 

ಬೆಳದಿಂಗಳು ಬೇಕೆನಿಸಿದಾಗಲೆಲ್ಲಾ ನಿನ್ನನ್ನು ನೆನಸಿಕೊಂಡವಳು ನಾನು.  ನೀ ಇಲ್ಲವಾಗುತ್ತಿದ್ದುದು ನನ್ನ ತಪ್ಪೇಚರಿತ್ರೆಯ ಬಾವಿಯ ಆಳದಲ್ಲಿ ನೆನಪುಗಳು ಹರಿದಾಡುತ್ತಿರುವಾಗ ನನ್ನ ಮೊಲೆಗಳ ತುಂಬಾ ಕವನಗಳು ಭೋರ್ಗರೆಯಲಾರಂಭಿಸುತ್ತವೆ.  ಅವೆಲ್ಲವೂ ಪಶ್ಚಿಮದ ಕಡೆಗೇ ಹರಿದುಹೋಗುವುದನ್ನು ತಲೆಬಾಗಿಸಿ ದಿಟ್ಟಿಸುತ್ತೇನೆ.  ನೀನಂತೂ ಬರಲೇ ಇಲ್ಲ.  ನಾನೇನು ಮಾಡಲಿನಿನ್ನನ್ನು ಹುಡುಕಲು ನನ್ನಲ್ಲಿ ಯಾವ ಸಾಧನವೂ ಇಲ್ಲ.  ನನ್ನ ನಾಯಿ ಇದ್ದಿದ್ದರೆ ನಿನ್ನನ್ನು ಹುಡುಕಲು ಕಳಿಸುತ್ತಿದ್ದೆ.  ನನ್ನ ಪಾರಿವಾಳವಿದ್ದಿದ್ದರೆ ನಿನಗೆ ಸುದ್ದಿ ಕಳಿಸುತ್ತಿದ್ದೆ.  ನನ್ನ ಕುದುರೆ ಇದ್ದಿದ್ದರೆ ನಾನೇ ನಿನ್ನ ಬಳಿಗೆ ಓಡೋಡಿ ಬರುತ್ತಿದ್ದೆ.  ಅವು ಮೂರೂ ಈಗ ನಿನ್ನ ಬಳಿಯೇ ಇವೆ.  ನನ್ನನ್ನು ಹುಡುಕಲು, ನನಗೆ ಸುದ್ದಿ ಕಳುಹಿಸಲು, ನನ್ನ ಬಳಿಗೆ ಓಡೋಡಿ ಬರಲು ನಿನಗೆ ಆಗುವುದಿಲ್ಲವೇಹಿಮಪಾತವನ್ನೂ ಮೀರಿಸಿದ ತಣ್ಣನೆಯ ಕಟುಕ ನೀನಾಗಬೇಕೆಅಂದು ಕಲ್ಲು ನೀರು ಕರಗುವ ವೇಳೆಯಲ್ಲಿ ಡ್ಯಾಡಿಯಿಂದ ತಪ್ಪಿಸಿಕೊಂಡು ನೀ ಮಾಯವಾದ ಮೇಲೆ ನಿನ್ನನ್ನು ನೋಡಲೇ ಆಗಿಲ್ಲ. ಕನಸು ಹರಿಯದಿದ್ದರೆ ನಾ ಖಂಡಿತಾ ನಿನ್ನ ಹಿಂದೆಯೇ ಬಂದುಬಿಡುತ್ತಿದ್ದೆ.  ಎಚ್ಚರವಾದಾಗ ನೀ ಎತ್ತ ಹೋದೆಯೆಂದು ಗೊತ್ತಾಗುವುದಿಲ್ಲ ನೋಡು.  ಕನಸ ಕಾಣುವ ವಯಸ್ಸಿನಲ್ಲಿ ನನಗೆ ಕವನ ಹೊಸೆಯುವುದನ್ನು ಕಲಿಸಿದವನು ನೀನು.  ನೀನು ಕೊಟ್ಟಕೊನೆಯ ಕಾಯಿ ನಡೆಸಿ ಸಾಲುಗೆರೆಯ ಹಿಂದೆ ನೆಲೆ ನಿಲ್ಲುವವರೆಗೆ ಅವು ಮುಕ್ತಾಯವಾಗುವುದಿಲ್ಲ.  ನಾನಿಲ್ಲದೇ ಅವುಗಳಿಗೆ ಅರ್ಥವಿಲ್ಲ.  ನೀನಿಲ್ಲದೇ ಅವುಗಳಿಗೆ ಬೆಲೆಯಿಲ್ಲ.  ನನ್ನ ಮಾತು ಕೇಳಿ ಅದರಂತೆ ನಡೆದುಕೋ.  ಸುಮ್ಮನೆ  ಹಟ ಮಾಡಬೇಡ.  ಇಲ್ಲದಿದ್ದರೆ ನಾನೆಂದೂ ಟ್ರಾನ್ಸಿಸ್ಟರ್ ಆನ್ ಮಾಡುವುದೇ ಇಲ್ಲ ನೋಡು!  ಓಲೈಸಿ ಕರೆದ ನನ್ನ ದನಿಯನ್ನು ಮರುಭೂಮಿಯ ಪಾಪಾಸುಕಳ್ಳಿಯ ಮೇಲೆ ಒಗೆದುಬಿಡಬೇಕೆಂದಿರುವಿಯೇನುಕಾಗೆಯ ಗೂಡಿನಲ್ಲಿ ನನ್ನ ಬಸಿರನ್ನು ಹೂತುಬಿಡಬೇಕೆಂದು ಮನಸು ಮಾಡಿರುವಿಯೇನುನಿನ್ನನ್ನು ಕಾದು ಕಾದು ಸಾಕಾಗಿ ನನಗೀಗ ಎಷ್ಟು ಕೋಪ ಬಂದಿದೆ ಗೊತ್ತೇನಿನಗೊಂದೇ ಒಂದು ಮಾತು ಹೇಳಿ ನನ್ನನ್ನು, ನಿನ್ನನ್ನು, ಡ್ಯಾಡಿಯನ್ನು, ಬೀದಿಯನ್ನು, ಕಾಲೇಜನ್ನು, ಈ ಜಗತ್ತನ್ನೂ ಉಳಿಸುವ ಬಯಕೆ ನನಗೆ.  ಒಂದೇ ಒಂದು ಸಲ ನನ್ನ ಬಳಿಗೆ ಬಾ.  ನನ್ನ ಮಾತು ಕೇಳಿ ಹೊರಟುಹೋಗುವೆಯಂತೆ.  ಹಗಲಲ್ಲಿ ಯಾರಾದರೂ ನೋಡಿಬಿಡುತ್ತಾರೆಂದು ಭಯವಾದರೆ ರಾತ್ರಿ ಕನಸಲ್ಲಿ ಬಾ.  ಕೋಳಿ ಕೂಗುವ ಮೊದಲೇ ಕಳಿಸಿಕೊಡುತ್ತೇನೆ.  ನಿನಗೆಂದೂ ನಾ ಕೇಡು ಬಯಸಿದವಳಲ್ಲವೆಂದು ನಿನಗೇ ಗೊತ್ತು.  ನಿನ್ನನ್ನು ಕೊಲ್ಲಬೇಕೆಂಬ ಬಯಕೆ ನನಗಿದ್ದುದೇ ಆಗಿದ್ದರೆ ನಿನ್ನನ್ನು ಆವತ್ತೇ ನನ್ನ ಬಸಿರಿನೊಳಗೆ ಹೂತುಬಿಡುತ್ತಿದ್ದೆ. 
ನನಗಾದರೂ ಸಾವು ಯಾಕೆ ಬರಬೇಕಿತ್ತು ಹೇಳುಅದೂ ಮೊಟ್ಟ ಮೊದಲ ಸಾವು!  ಅದರಲ್ಲೂ ಋತುಮತಿಯಾದ ಐದೇ ವರ್ಷಗಳಲ್ಲಿ!  ನೀ ನನ್ನನ್ನು ಪ್ರೀತಿಸುವುದು ನಿಂತ ಕ್ಷಣ ನನಗೆ ಸಾವುಂಟಾಗುತ್ತದೆಯೆಂದು ನಿನಗೆ ಯಾರೂ ಹೇಳಿರಲೇ ಇಲ್ಲವೇನಾ ನಿನ್ನನ್ನು ಪ್ರೀತಿಸುವುದು ನಿಂತ ಕ್ಷಣವೇ ನಿನಗೆ ಸಾವು ಬರುತ್ತದೆಂದು ನನಗಂತೂ ಚೆನ್ನಾಗಿಯೇ ಗೊತ್ತು.  ಹೀಗಾಗಿಯೇ ನಿನ್ನನ್ನು ಉಳಿಸುವ ಬಯಕೆಯಿಂದ ನಿನ್ನನ್ನು ಪ್ರೀತಿಸುವುದನ್ನು ನಾ ನಿಲ್ಲಿಸಲೇ ಇಲ್ಲ.  ಪ್ರೀತಿಗೆ ಆಗಾಗ ಗೆರೆ ಎಳೆದು ನಿನ್ನನ್ನು ಅದೆಷ್ಟೋ ಬಾರಿ ಕೊಲ್ಲುವ ಅವಕಾಶಗಳು ನನ್ನ ಮಡಿಲಲ್ಲಿ ತುಂಬಿದ್ದವು.  ಆದರೆ ನಾ ಹಾಗೆ ಮಾಡಲಿಲ್ಲ.  ಇಲ್ಲದಿದ್ದರೆ ನಾ ಕಾಣುವ ಕನಸುಗಳಲ್ಲೆಲ್ಲಾ ನೀನೇ ಯಾಕೆ ಬರಬೇಕಿತ್ತುಬರಿದಾಗಿಹೋಗಿದ್ದ ನನ್ನ ಉಡಿಗೆ ಕವನಗಳನ್ನು ತುಂಬುವ ಆಟ ಆಡಲು ನಿನಗೆ ಮನಸ್ಸಾದರೂ ಹೇಗೆ ಬಂತು
ನಾ ನಿನ್ನನ್ನು ಪ್ರೀತಿಸಿದೆ.
ನಿಜ.
ಅದು ನನ್ನ ತಪ್ಪೇ?
ಈಗಲೂ ಹೇಳುತ್ತಿದ್ದೇನೆ- ನಿನ್ನ ಮೇಲಿನ ನನ್ನ ಪ್ರೀತಿ ಇನಿತೂ ಮಾಸಿಲ್ಲ.
ಅದೂ ನನ್ನ ತಪ್ಪೇ

ಕಾಲೇಜಿಗೆ ಹೋಗುವ ದಾರಿಯುದ್ದಕ್ಕೂ ಜನ ನನ್ನನ್ನೇ ನೋಡುತ್ತಾರೆ.  ಬಹುಷಃ ಅವರೆಂದೂ ಯಾರನ್ನೂ ಪ್ರೀತಿಸಿರಲಾರರು.  ಹೀಗಾಗಿಯೇ ಅವರಿಗೊಂದು ಸತ್ಯ ತಿಳಿದಿರಲಾರದು- ಬದುಕಿನಲ್ಲಿ ಆಗಾಗ ಪವಾಡಗಳು ಬೆಳೆದು ವೃಕ್ಷಗಳಾಗಿ ನಿಂತು ಹಣ್ಣು ಬಿಡುತ್ತವೆ.  ಆಗಲೇ ಜಗತ್ತಿಗೆ ಮುಟ್ಟು ನಿಲ್ಲುವುದು. ಆಗ ಆ ಹಣ್ಣುಗಳೊಳಗೆಲ್ಲಾ ಧರ್ಮಾಧರ್ಮಪಿಂಡಗಳು ಸೇರಿಕೊಂಡುಬಿಡುತ್ತವೆ.  ಅಂತಹ ಹಣ್ಣುಗಳನ್ನು ತಿಂದವರಿಗೆಲ್ಲಾ ಆನರರಿ ಡಾಕ್ಟರೇಟ್ ಡಿಗ್ರಿ ದೊರೆಯುತ್ತದೆ.
ಅಂತಹ ಒಂದು ಘಟಕೋತ್ಸವದಲ್ಲೇ ಅಲ್ಲವೇ ನಾವಿಬ್ಬರೂ ಮೊಟ್ಟಮೊದಲು ಭೇಟಿಯಾದದ್ದುಅದಲ್ಲದೇ ಬೇರಿನ್ನಾವ ತಿರುವಿನಲ್ಲಾದರೂ ನನ್ನ ನಿನ್ನ ಹೆಜ್ಜೆಗಳು ನಿಂತಿದ್ದುದೇ ಆಗಿದ್ದರೆ ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟೋಂದು ಗಾಢವಾಗಿ ಹಚ್ಚಿಕೊಳ್ಳುತ್ತಿರಲಿಲ್ಲ- ಎಂದು ನೀನೇ ಒಂದು ಸಲ ನನ್ನ ಎದೆಯಾಳದಲ್ಲಿ ಉಸಿರಿದ್ದೆ ಅಲ್ಲವೇ? ನೀನು ಮರೆತಿರಬಹುದು.  ಮರೆಯುವುದು ನಿನಗೆ ಸುಲಭ.  ಹಳೆಯದನ್ನು ಒಳತುರುಕಿ ಹೊಸಬರು ಮಾತಾಡಲು ಮೊದಲು ಮಾಡಿದರೆ ಹೊಸದು ಅಂಟಿಕೊಳ್ಳುತ್ತದೆ.  ಹಳೆಯದು ಹಳತಾಗಿ ಹುಳು ತಿಂದು ಹೋಗುತ್ತದೆ- ಎಂಬ ಜಾಗತಿಕ ಸತ್ಯವನ್ನು "ರೇಡಿಯೋ ಕಶ್ಮೀರ್"ನಲ್ಲಿ ಅನೇಕ ಬಾರಿ ಕೇಳಿದ್ದೇನೆ.  ಅಂದು ನೀನಂದ ಆ ಮಾತುಗಳೇ ನನ್ನನ್ನಿಂದು ಈ ಸ್ಥಿತಿಗೆ ತಂದು ನಿಲ್ಲಿಸಿದಂಥವು.  ನೀ ಅಂದದ್ದೇನುನನಗೆ ಚೆನ್ನಾಗಿ ನೆನಪಿದೆ.  ವಿಂಧ್ಯದ ಮೇಲೆ ಕೆಳಗೆ ನೋಡು.  ಬೇರೆ ಬೇರೆ ಚರಿತ್ರೆ, ಸಂಸ್ಕೃತಿ ಸಂಪ್ರದಾಯ.  ಮಣ್ಣು ಬೇರೆ, ಮಣ್ಣಿನ ಮಕ್ಕಳ ಮೈನ ಬಣ್ಣ ಬೇರೆ.  ಉಡುಗೆತೊಡುಗೆ ಬೇರೆ, ಊಟ ತಿಂಡಿ ಬೇರೆ.  ಸಂಗೀತ ಬೇರೆ, ಶಿಲ್ಪ ಬೇರೆ, ನೃತ್ಯ ಬೇರೆ.  ಭಾಷೆಯಂತೂ ಬೇರೆಯೇ ಬೇರೆ.  ಆದರೆ ದೇವದೇವತೆಗಳು ಮಾತ್ರ ಅವರೇ.  ಅಲ್ಲಿ ಬೇರೆತನವಿಲ್ಲ.  ಅದೇ ಥಾರ್‌ನ ಆಕಡೆ ಈಕಡೆ ನೋಡು.  ಅದೇ ನೆಲ, ಅದೇ ಜಲ. ಜನರಂತೂ ಅವರೇ. ಅದೇ ಚರಿತ್ರೆ, ಅದೇ ಸಂಸ್ಕೃತಿ.  ಒಂದೇ ಊಟ, ಒಂದೇ ಬಟ್ಟೆ.  ಹಾಡೊಂದೇ, ನಾಟ್ಯವೂ ಒಂದೇ.  ನುಡಿಯಂತೂ ಒಂದರ ಪಡಿಯಚ್ಚು ಇನ್ನೊಂದು.  ಎಲ್ಲವೂ ಅದೇ.  ಆದರೆ ಪರಮಾತ್ಮ ಮಾತ್ರ ಬೇರೆ.  ಆಕಡೆ ಅಲ್ಲಾ.  ಈಕಡೆ ಅವನಿಲ್ಲ.  ಈ ಪುರಾತನ ಸತ್ಯವನ್ನು ನೀನಂದು ಅರುಹಿದಾಗಲೇ ಅಲ್ಲವೇ ನನ್ನಲ್ಲಿ ಈಗಿನ ದ್ವಂದ್ವ ಆರಂಭವಾದದ್ದುನಾ ಯಾರೆಂದು ನಾ ಯೋಚಿಸಹತ್ತಿದ್ದುನಿನ್ನ ಆ ಞeಥಿಟಿoe ಚಿಜಜಡಿessನ ಪ್ರತಿಯೊಂದು ನನ್ನೆದೆಯಲ್ಲಿ ಯಾವಾಗಲೂ ಪುಟ ತೆರೆದು ಮಲಗಿರುತ್ತದೆ.  "ಹಿಂದೆ ಹೋಗು, ಹಿಂದೆ ಹೋಗು.  ಸರಿದಾರಿಗೆ ತಿರುಗು" ಎಂದು ನನ್ನನ್ನು ಪುಸಲಾಯಿಸುತ್ತಿರುತ್ತದೆ.  ನಿಜ ಹೇಳುತ್ತಿದ್ದೇನೆ ಕೇಳು- ಡ್ಯಾಡಿ ನನಗೆಂದೂ ಯಾವ ಗಂಡನ್ನೂ ನೋಡಿರಲಿಲ್ಲ.  ಆದರೆ ನಾನು ಬೇರೊಂದು ನಂಬಿಕೆಯ ಕೂಸನ್ನು ಹೆರುವುದು ಅವರಿಗೆ ಅಧರ್ಮವೆಂದು ಕಂಡಿತ್ತು.  ಅವರನ್ನು ಬೈಯಬೇಡ.  ಡ್ಯಾಡಿ ವಿಶ್ವಮಾನವ.  ಬಿಡಿ ಹೃದಯಗಳಲ್ಲಿ ಕ್ರಾಂತಿಯಾಗುವುದು ಅವರಿಗೆ ಬೇಕಿರಲಿಲ್ಲ.  ಬೀದಿಯಲ್ಲಿ, ಸಂತೆಯಲ್ಲಿ, ದೇಶದಲ್ಲಿ, ಯುನೈಟೆಡ್ ನೇಷನ್ಸ್‌ನಲ್ಲಿ ಕ್ರಾಂತಿಯಾಗಬೇಕೆಂದು ಅವರು ಹಪಹಪಿಸುತ್ತಿದ್ದರು.  ಆದರೂ ಅವರು ಒಂದು ಮೆಟ್ಟಲು ಕೆಳಗಿಳಿದು ನಿಂತು ಮತ್ತೂ ಒಂದು ಆಸೆ ತೋರಿಸಿದ್ದರು.  ನಾಡಿನಲ್ಲಿರುವ ನನ್ನಂಥಾ ಮುಸ್ಲಿಮ್ ಹೆಣ್ಣುಹುಡುಗಿಯರೆಲ್ಲರೂ ಹಿಂದೂ ಹುಡುಗರನ್ನು ಸಾಮೂಹಿಕ ವಿವಾಹವಾಗಬೇಕುಹಿಂದೂ ಹುಡುಗಿಯರೆಲ್ಲ ಮುಸ್ಲಿಮ್ ಹುಡುಗರನ್ನು ನಿಕಾ ಮಾಡಿಕೊಳ್ಳಬೇಕು.   ಹೀಗೆಂದು ಕಾನೂನಾಗಲಿ.  ಸಂವಿಧಾನದ ಠಿಡಿeಚಿmbeನಲ್ಲಿ "We he Peoಠಿಟe oಜಿ Iಟಿಜiಚಿ... " ಎನ್ನುವುದರ ಮುಂದೆ ಬ್ರ್ಯಾಕೆಟ್‌ನಲ್ಲಿ ಈ ಎಲ್ಲಾ ಹುಡುಗ ಹುಡುಗಿಯರ ಹೆಸರುಗಳನ್ನು ಸುವರ್ಣಾಕ್ಷರಗಳಲ್ಲಿ ಕೊರೆಯಿಸಬೇಕು.  ಒಂದುವೇಳೆ ಮುಸ್ಲಿಮ್ ಹುಡುಗ ಹುಡುಗಿಯರ ಕೊರತೆ ಕಂಡುಬಂದರೆ ರ‍್ಯಾಡ್‌ಕ್ಲಿಫ್‌ನ ಪೆನ್ಸಿಲಿನ ಮೊನೆಯನ್ನು ಮುರಿದುಹಾಕಿ ಆಚೆಬದಿಯಿಂದ ಅವರನ್ನು ಆಮದು ಮಾಡಿಸುತ್ತೇನೆ ಎಂದು ನೀನು ವಾಗ್ದಾನ ಕೊಡಬಲ್ಲೆಯಾ?- ಎಂದು ಕೇಳಿದ್ದರು!  ಡ್ಯಾಡಿಯ ಈ ಸವಾಲಿಗೆ ನಾನು ಯಾವ ಮುಖ ಎತ್ತಿಕೊಂಡು ಉತ್ತರಿಸಲಿಪ್ರತಿರಾತ್ರಿ ನನ್ನ ಟ್ರ್ಯಾನ್ಸಿಸ್ಟರ್‌ನಲ್ಲಿ "ಪಾಕಿಸ್ತಾನ್ ಸ್ಟ್ಯಾಂಡರ್ಡ್ ಟೈಂ" ಎಂದು ಕಿವಿಯಾನಿಸಿ ಕೇಳುವುದನ್ನು ಹೇಗೆ ತಾನೆ ನಿಲ್ಲಿಸಲಿ?
ಹೀಗೆ ನನ್ನ ಕಥೆಯನ್ನು, ನನ್ನೊಳಗಿನ ದ್ವಂದ್ವದ ವ್ಯಥೆಯನ್ನು, ನನ್ನ ನಿನ್ನ ಪ್ರೇಮದ ಪರಸಂಗವನ್ನು ಒಂದೊಂದು ಅಧ್ಯಾಯದಲ್ಲೂ ಇಂತಿಷ್ಟು ಅಂತ ಹೇಳುತ್ತಾ ಹೋಗುತ್ತೇನೆ.  ಬೆಳಗಾಗುವವರೆಗೆ...
ನೀ ಕೇಳುತ್ತಾ ನಡೆ.
*     *     *

೪.  ಸುಂಟರಗಾಳಿ
ಪತ್ರವನ್ನು ಬರೆದು ಮುಗಿಸಿ ಅವನಿಗೆ ತಲುಪಿಸಲು ಸ್ಯಾಮ್‌ನ ಕೈಗೆ ಕೊಟ್ಟೆ.  "ಇದ್ಯಾವ ಪೂರ್ವ ಜನ್ಮದ ಕರ್ಮವೋ ಅಕಟಾ" ಎನ್ನುತ್ತಾ ಸ್ಯಾಮ್ ಅದನ್ನು ತೆಗೆದುಕೊಂಡ.  ಆಕಾಶ ನೋಡುತ್ತಾ ಜೇಬಿಗೆ ಸೇರಿಸಿದ.  "ನೀನೊಮ್ಮೆ ಅದನ್ನು ಓದಬಾರದೇ?" ಎಂದು ಆಕ್ಷೇಪಿಸಿದೆ.  ಅವನು ಸಿಡಸಿಡ ಅಂದ.  ನನಗೆ ಬಿಕ್ಕಿಬಿಕ್ಕಿ ಅಳುವಂತಾಯಿತು.  ಅದೆಷ್ಟೋ ಹೊತ್ತಿನ ಮೇಲೆ ಸ್ಯಾಮ್ ಟ್ರ್ಯಾನ್ಸಿಸ್ಟರಿನ ಕೊರಳು ಹಿಂಡಿದಾಗ ಹೃದಯ ತುಂಬುವಂಥಾ ನೀರವ ನಾಲಿಗೆ ಚಾಚುತ್ತಾ ಬಾಗಿಲಲ್ಲಿ ಬಿದ್ದುಕೊಂಡಿತು. 
    
ಬಿಡಿಬಿಡಿಯಾದ ನೆನಪುಗಳು ಒಂದರ ಬೆನ್ನಟ್ಟಿ ಇನ್ನೊಂದು ಬರಲಾರಂಭಿಸಿದಾಗ ಯಾವುದನ್ನು ಬಿಟ್ಟು ಮತ್ತಾವುದನ್ನು ತಬ್ಬಿ ಮುತ್ತಿಕ್ಕಲಿ ಎಂದು ಕನವರಿಸುತ್ತಾ ನಾ ನಡೆದೆ. 
ನಡೆಯುತ್ತಾ ನಡೆಯುತ್ತಾ ಕಾಲೇಜಿನ ಹತ್ತಿರ ಬಂದುಬಿಟ್ಟಿದ್ದೆ.  ಕೈಯಲ್ಲಿ ಪುಸ್ತಕಗಳಿರಲಿಲ್ಲ.  ಪರ್ಸಿತ್ತು.  ಅದರೊಳಗೆ ಬಾವುಟ ಕೊಳ್ಳಲೆಂದು ಬ್ಯಾಬಿಲೋನಿಯನ್ ಆಂಟಿ ಕೊಟ್ಟಿದ್ದ ಚಿಲ್ಲರೆ ಕಾಸುಗಳಿದ್ದವು.  ಕಾಲೇಜಿನ ಮುಂದಿದ್ದ ಹಲ್ಲು ಕಿರಿಯುವ ಅಂಗಡಿಗೆ ಹೋಗಿ ನಲವತ್ತೇಳು ತಾಳೆ ಗರಿಗಳ ಒಂದು ಕಟ್ಟನ್ನೂ, ಒಂದು ಹಸಿರು ರಿಫಿಲ್‌ನ ಪೆನ್ನನ್ನೂ ಕೊಂಡು ಕಾಲೇಜಿನ ಆವರಣದೊಳಗೆ ಹೆಜ್ಜೆ ಹಾಕಿದೆ. 
ಪ್ರಿನ್ಸಿಪಾಲರ ಕೋಣೆಯ ಮುಂದೆ "ನಾಯಿಗಳಿವೆ ಎಚ್ಚರಿಕೆ" ಎಂಬ ಬೋರ್ಡನ್ನು ತೂಗುಹಾಕಿದ್ದರು.  ಅದೇ ಬೋರ್ಡಿನಲ್ಲಿ ಕೆಳಗೆ ಮೂಲೆಯಲ್ಲಿ ಸಣ್ಣಗೆ "ಹಂದಿಗಳಿಗೆ ಪ್ರವೇಶವಿಲ್ಲ" ಎಂದೂ ಬರೆದಿತ್ತು.  ನಾನು ತಲೆತಗ್ಗಿಸಿ ನನ್ನ ಕ್ಲಾಸ್‌ರೂಮಿನ ಕಡೆ ಸರಸರನೆ ಜೆಜ್ಜೆ ಹಾಕಿದಾಗ ಯಾರೋ ಬಂದು ನನ್ನ ಎರಡೂ ಕೈಗಳಿಗೆ ಹಗ್ಗ ಕಟ್ಟಿದರು.  ನೋಡುನೋಡುತ್ತಿರುವಂತೆಯೇ ನನ್ನ ಮೈ ಸುತ್ತ ನೂರಾರು, ಸಾವಿರಾರು ಕೈಗಳು, ಹಗ್ಗಗಳು ನುಲಿದುಕೊಂಡವು.  ಕೈಬೆರಳುಗಳೇ ಉದ್ದೋಉದ್ದಕ್ಕೆ ಬೆಳೆದು ಹಗ್ಗಗಳಾಗಿ ಹೆಣೆಯಲ್ಪಟ್ಟಿರುವುವೇನೋ ಎಂಬ ಅನುಮಾನ ನನಗಾಯಿತು.  ಇದೇನಾಗುತ್ತಿದೆಯೆಂದು ನನ್ನ ಅರಿವಿಗೆ ಬರುವಷ್ಟರಲ್ಲಿ ಯಾವನೋ ಒಬ್ಬ ಚೂಪಾದ ಕೊಕ್ಕೆಯಂತಿದ್ದ ಎಂಥದೋ ಒಂದನ್ನು ನನ್ನ ಎದೆಗೆ ಕಚಕ್ಕನೆ ಚುಚ್ಚಿ ಒಳಗಿನಿಂದ ಏನನ್ನೋ ಸೆಳೆದುಕೊಂಡ.  ಅದೇನೆಂದು ತೋರಿಸು ಎಂದರೆ ತೋರಿಸಲಿಲ್ಲ.  ಇಷ್ಟೆಲ್ಲಾ ಒಂದೆರಡು ಕ್ಷಣಗಳಲ್ಲಿ ನಡೆದುಹೋಯಿತು.  ನಾನು ಬೆಕ್ಕಸಬೆರಗಾಗಿ ನಿಂದೆ. 
"ನಡೆನಡೆ ಹರಾಮಿ.  ಹೋದೆಯಾ ಪ್ರೇಯಸೀ ಅಂದರೆ ಬಂದೆ ಕನಸಲ್ಲಿ ಎಂಬಂತೆ ಮತ್ತೆ ಇಂದೂ ಬಂದೆಯಾ" ಎಂದು ನನ್ನನ್ನೋ ಅಥವಾ ಇನ್ನಾರನ್ನೋ ಗಟ್ಟಿಯಾಗಿ ಬೈಯುತ್ತಾ ಯಾರೋ ನನ್ನನ್ನು ದೂಡಿಕೊಂಡು ಪ್ರಿನ್ಸಿಪಾಲರ ಕೊಟಡಿಯೊಳಗೆ ನಡೆಸಿದರು.  ಹಿಂದೆ ಒಂದೇ ಒಂದು ಬಾರಿ ನಾನು ಅಲ್ಲಿಗೆ ಹೋಗಿದ್ದೆ, ಐಡೆಂಟಿಟಿ ಕಾರ್ಡ್‌ಗೆ ಸಹಿ ಹಾಕಿಸಿಕೊಳ್ಳಲು.  ಪ್ರಿನ್ಸಿಪಾಲರನ್ನು ಹಲಬಾರಿ ನೋಡಿದ್ದೆ, ಕ್ಲಾಸಿನಲ್ಲಿ.  ಅವರೇ ನಮಗೆ "ಮಧ್ಯಯುಗೀನ ಧಾರ್ಮಿಕ ಇತಿಹಾಸ"ವನ್ನು ಬೋಧಿಸುತ್ತಿದ್ದವರು.  ಆಗಾಗ ಬೇಕೆನಿಸಿದಾಗ ಕನಸಿನಲ್ಲಿ ಬಂದು ಅಂಜಿಸುತ್ತಿದ್ದರು.  ಹೀಗಾಗಿ ಅವರ ಪರಿಚಯ ನನಗೆ ಚೆನ್ನಾಗಿಯೇ ಉಂಟು.
ಹೀಗಾಗಿಯೇ ನಾನು ಅವರನ್ನು ಧೈರ್ಯದಿಂದ ತಲೆಯೆತ್ತಿ ನೋಡುವಂತಾಯಿತು. 
ಅವರು ಎತ್ತರವಾದುದೊಂದು ಆಸನದಲ್ಲಿ ಕುಳಿತುಕೊಂಡಿದ್ದರು.  ಅವರ ಕುರ್ಚಿಗೆ ಮೇಲುಮೇಲಕ್ಕೆ ಹೋದಂತೆ ಕಿರಿದಾಗುತ್ತಿದ್ದ ಇಪ್ಪತ್ತೊಂದು ಮೆಟ್ಟಲುಗಳಿದ್ದವು.  ನಾನು ಮತ್ತೊಮ್ಮೆ ಗಮನವಿಟ್ಟು ಲೆಕ್ಕ ಹಾಕಿದೆ.
ಸರಿಯಾಗಿ ಇಪ್ಪತ್ತೊಂದು!
ಅರೆ!  ನಿನ್ನೆಯಷ್ಟೇ ನನಗೆ ಇಪ್ಪತ್ತೊಂದು ತುಂಬಿತು ಎಂಬ ಸತ್ಯ ತಟಕ್ಕನೆ ನೆನಪಿಗೆ ಬಂದಿತು.  ನನ್ನ ಹುಟ್ಟುಹಬ್ಬದ ವಿಚಾರವನ್ನು ಇಲ್ಲಿ ನೆನಪಿಸಿಕೊಳ್ಳುವುದರ ಔಚಿತ್ಯವೇನೆಂದು ತಿಳಿಯಲಿಲ್ಲ.  ಈ ಪ್ರಿನ್ಸಿಪಾಲರು ನನ್ನ ಬರ್ತ್‌ಡೇ ಪಾರ್ಟಿಗೆ ಬಂದಿದ್ದರೂ ಯಾವ ಉಡುಗೊರೆಯನ್ನೂ ತಂದಿರಲಿಲ್ಲ.  ಸರಿ, ಅದು ನಿನ್ನೆಗಾಯಿತು.
ಪ್ರಿನ್ಸಿಪಾಲರು ಒಂದು ಕಾಲನ್ನು ಗದ್ದಿಗೆಯ ಮೇಲಿಟ್ಟುಕೊಂಡು ಇನ್ನೊಂದನ್ನು ಕೆಳಗೆ ಬಿಟ್ಟುಕೊಂಡು ನೇತಾಡಿಸುತ್ತಿದ್ದರು.  ಆ ಕಾಲಿನಲ್ಲಿ ಗೆಜ್ಜೆಗಳಿದ್ದವು.  ಕಾಲು ಅಲುಗಿದಂತೆಲ್ಲಾ ಅವು ಝಿಲ್‌ಝಿಲ್‌ಝಿಲಕ್ಕೆಂದು ನಿನಾದಗೈಯ್ಯುತ್ತಿದ್ದವು.  ಯೂನಿಯನ್ ಡೇ ದಿನ ಸರಯೂ ಕಥಕ್ ಮಾಡುವಾಗ ಇಂಥಾದ್ದೇ ನಿನಾದ ಕೇಳಿ ಮೈಮರೆತಿದ್ದೆ. 
ಆ ಗೆಜ್ಜೆಯೊಂದನ್ನು ಬಿಟ್ಟರೆ ಪ್ರಿನ್ಸಿಪಾಲರು ಪೂರ್ತಿ ಬೆತ್ತಲಾಗಿದ್ದರು.  ನಾನು ಕಣ್ಣು ಮುಚ್ಚಿಕೊಂಡೆ.  ಅವರು ಯಾರಿಗೋ ಸನ್ನೆ ಮಾಡಿ ಒಂದು ಅರಿವೆಯ ತುಂಡನ್ನು ತರಿಸಿಕೊಂಡು ನಡುವಿನಷ್ಟಕ್ಕೆ ಸುತ್ತಿಕೊಂಡು "ಕಣ್ಣು ಬಿಡು ಮಗಳೇ" ಅಂದರು.  ಈಗ ನಾನು ಧೈರ್ಯದಿಂದ ಕಣ್ಣು ತೆರೆದು ನೋಡುವಂತಾಯಿತು. 
ನೋಡಿದೆ.
ಅವರು ಸುತ್ತಿಕೊಂಡದ್ದು ಜನುಮ ಜನುಮದ ಹಿಂದೆ ನಾನು ಮುಟ್ಟಾಗಿ ಉಕ್ಕಿದ ರಕ್ತವನ್ನು ಒರೆಸಿ ಎಸೆದ ವಸ್ತ್ರವಾಗಿತ್ತು!
ಚೀನಾದಲ್ಲಿ ತಯಾರಾದ ಆ ರೇಶಿಮೆಯ ವಸ್ತ್ರವು ನಯವಾದುದಾಗಿತ್ತು.  ಮಿರಮಿರನೆ ಮಿಂಚುಳ್ಳದ್ದಾಗಿತ್ತು.  ಅದರ ಬಣ್ಣವೋ ಏಳುಲೋಕಗಳಲ್ಲಿ ಸಾಟಿಯಿಲ್ಲದ್ದು.  ಅದರ ಅಂಚಿನಲ್ಲಿದ್ದ ಚಂದದ ಗೊಂಡೆಗಳು ಇನ್ನೂ ಹಾಗೆಯೇ ಜೋತಾಡುತ್ತಿವೆ.  ಅದರ ಒಡಲಲ್ಲಿದ್ದ ಕಸೂತಿಯ ಅಂದವನ್ನೆಂತು ಬಣ್ಣಿಸಲಿಓಹ್!  ಸುಮ್ಮನಿರುವುದೇ ಲೇಸು. 
ಅಂತಹ ನಯನಮನೋಹರವಾದ ಅದೆಷ್ಟೋ ರೇಶಿಮೆ ಅರಿವೆಗಳನ್ನು ತಿಂಗಳು ತಿಂಗಳೂ ಮುಟ್ಟಿನ ರಕ್ತ ಒರೆಸಿ ನಾ ಎಸೆದಿದ್ದೆ.  ಅವೆಲ್ಲವೂ ಅದೆಲ್ಲಿ ಹಾರಿಹೋದವೋ.  ಇದೊಂದು ಮಾತ್ರ ಪ್ರಿನ್ಸಿಪಾಲರ ಕೈಗೆ ಅದೆಲ್ಲಿ ಸಿಕ್ಕಿತೋ.  ಸೋಜಿಗ ಪಟ್ಟುಕೊಂಡೆ.  ನನ್ನ ಮುಟ್ಟಿನ ರಕ್ತವಿನ್ನೂ ಅದರಲ್ಲಿ ಹಾಗೇ ಮೆತ್ತಿಕೊಂಡಿದೆ. 
ಪ್ರಿನ್ಸಿಪಾಲರ ಮುಖದ ಬಣ್ಣ ಕಡುಗಪ್ಪಾಗಿತ್ತು.  ಯಾರೋ ಒಂದು ನಯನಮನೋಹರವಾದ, ವಜ್ರ ವೈಢೂರ್ಯಖಚಿತವಾದ ಚಿನ್ನದ ಕಿರೀಟವೊಂದನ್ನು ತಂದು ಅವರ ತಲೆಯ ಮೇಲೆ ಕೂರಿಸಿದರು.  ಸೂರ್ಯನಂತೆ ಹೊಳೆಯುತ್ತಿದ್ದ ಅದು ಅಲ್ಲಿ ಶೋಭಾಯಮಾನವಾಗಿ ಕಂಗೊಳಿಸತೊಡಗಿತು. 
ಮನುಷ್ಯಸ್ತ್ರೀಗೆ ದೇವಕುಮಾರನಿಂದ ಹುಟ್ಟಿದ ಪುತ್ರಿಯಂತಿದ್ದ ಒಬ್ಬಳು ಪ್ರಿನ್ಸಿಪಾಲರ ಎಡಕ್ಕಿದ್ದ ಸ್ವಲ್ಪ ಕಡಿಮೆ ಎತ್ತರದ ಆಸನದಲ್ಲಿ ಕುಳಿತುಕೊಂಡಿದ್ದಳು.  ಅವಳು ಸರ್ವಾಲಂಕಾರಭೂಷಿತೆಯಾಗಿದ್ದಳು.  ಅವಳ ಮೈಮೇಲಿದ್ದ ಒಂದೊಂದು ಅರಿವೆ ಆಭರಣವೂ ಎಲ್ಲೆಲ್ಲಿಂದ ಬಂತೆಂದೂ ಅವುಗಳ ಬೆಲೆಯೆಷ್ಟೆಂದೂ ನನಗೆ ಚೆನ್ನಾಗಿ ನೆನಪಿದೆ.  ಚಿನ್ನದ ಎಳೆಗಳ ಹೂಗಳಿಂದಲಂಕರಿಸಲ್ಪಟ್ಟ ಅವಳ ಸಲ್ವಾರ್‌ನ ಬಟ್ಟೆಯನ್ನು ದಮಾಸ್ಕಸ್‌ನ ವ್ಯಾಪಾರಿಯೊಬ್ಬನಿಂದ ಕೊಂಡುಕೊಳ್ಳಲಾಗಿತ್ತು.  ಕಸೂತಿಯಿಂದ ಅಲಂಕೃತವಾಗಿದ್ದ ಅವಳ ಕಮೀಜ್ ಸಮರ್‌ಖಂದ್‌ನಿಂದ ತಂದುದಾಗಿತ್ತು.  ಅವಳ ಮುಖಕ್ಕೆ ಮುಚ್ಚಿದ್ದ ತೆಳುವಾದ ವಸ್ತ್ರವನ್ನು ಬಂಗಾಳದ ನೇಕಾರರಿಗೆ ವಿಶೇಷ ಆರ್ಡರು ಕೊಟ್ಟು ನೇಯಿಸಿ ತರಲಾಗಿತ್ತು.  ಅವಳ ಕೊರಳಿನಲ್ಲಿದ್ದ ಸರದ ಮುತ್ತುಗಳನ್ನು ಸಿಂಹಳದಿಂದ ಕೊಂಡು ತರಲಾಗಿತ್ತು.  ಅವಳ ಕೈಗಳಲ್ಲಿದ್ದ ಮುತ್ತಿನ ಕಡಗಗಳು ಹಾಗೂ ಕಿವಿಗಳಲ್ಲಿ ಜೋತಾಡುತ್ತಿದ್ದ ವಜ್ರಖಚಿತ ಲೋಲಾಕುಗಳು ಬಾಗ್ದಾದಿನ ಸುಲ್ತಾನನಿಂದ ಬಂದ ಉಡುಗೊರೆಗಳಾಗಿದ್ದವು. 
ಒಂದು ಕಾಲದಲ್ಲಿ ಅವೆಲ್ಲವೂ ನನ್ನವಾಗಿದ್ದವು.
ಮಸ್ಲಿನ್ ಅರಿವೆಯ ಮರೆಯಲ್ಲಿದ್ದ ಅವಳ ಮುಖವು ತೆಳುಮೋಡದ ಪರದೆಯ ಹಿಂದಿನಿಂದ ನಗುವ ಪೂರ್ಣಿಮೆಯ ಚಂದಿರನಂತೆ ಮೋಹಕವಾಗಿತ್ತು.  ಅವಳು ಮುಗುಳ್ನಗುತ್ತಿದ್ದಳು.  ನನ್ನ ಕಡೆ ನೋಡಿ ಪರಿಚಯದವಳಂತೆ "ಹಾಯ್" ಅಂದಳು.
ನಾನು ಪ್ರತಿಯಾಗಿ ಹಾಯ್‌ಗುಟ್ಟಲಿಲ್ಲ. 
ಯಾಕಂದರೆ ಆ ಸಮಯದಲ್ಲಿ ನಾನು ಅವಳ ಆಸನಕ್ಕಿದ್ದ ಮೆಟ್ಟಲುಗಳನ್ನು ಲೆಕ್ಕ ಹಾಕುವುದರಲ್ಲಿ ತನ್ಮಯಳಾಗಿಹೋಗಿದ್ದೆ.  ಅವು ಸರಿಯಾಗಿ ಹದಿನಾರಿದ್ದವು.
ಮೈಗಾಡ್!
ನಾನು ಋತುಮತಿಯಾದದ್ದು ಸರಿಯಾಗಿ ಹದಿನಾರು ವರ್ಷಗಳು ಕಳೆದು ಒಂದು ದಿನಕ್ಕೆ!
    
ವಿಶೇಷ ರೀತಿಯಲ್ಲಿ ಅಲಂಕರಿಸಿಕೊಂಡಿದ್ದ ಸುಂದರಿಯರಾದ ಈರ್ವರು ಅಪ್ಸರೆಯರು ನವಿಲುಗರಿಗಳಿಂದ ಮಾಡಿದ್ದ ಬೃಹದಾಕಾರದ ಮೊರಗಳಂತಹ ಬೀಸಣಿಗೆಗಳಿಂದ ಪ್ರಿನ್ಸಿಪಾಲರಿಗೂ ನನಗೆ ಹಾಯ್‌ಗರೆದವಳಿಗೂ ಗಾಳಿ ಹಾಕುತ್ತಿದ್ದರು. 
ನನಗೆ ನಿಂತೂ ನಿಂತೂ ಸಾಕಾಯಿತು.
"ಏನಾದರೂ ಮಾತಾಡೀ" ಎಂದು ಕೂಗಿದೆ.
ಏನೋ ಹೇಳಬೇಕೆಂದು ಪ್ರಿನ್ಸಿಪಾಲರು ಬಾಯಿ ತೆರೆಯುವಷ್ಟರಲ್ಲಿ ಕಾಲೇಜಿನ ಏಕೈಕ ಜವಾನ ಬಿರುಗಾಳಿಯಂತೆ ಒಳನುಗ್ಗಿದ. 
ಏನು ಏನಾಯಿತೆಂದು ಎಲ್ಲರೂ ಆತಂಕದಿಂದ ವಿಚಾರಿಸಿಕೊಳ್ಳುತ್ತಿದ್ದಂತೇ ಅವನು ಬೆಳ್ಳಗಿನ ಹಾಳೆಯೊಂದನ್ನು ಪ್ರಿನ್ಸಿಪಾಲರ ಮುಖಕ್ಕೆ ಹಿಡಿದು ಸುಮ್ಮನೆ ನಿಂತುಕೊಂಡ.  ಪ್ರಿನ್ಸಿಪಾಲರು ತಮ್ಮ ಕನ್ನಡಕಕ್ಕಾಗಿ ತಡಕಾಡಿದರು.  ಬದಿಯಲ್ಲಿದ್ದ ಗೂನುಬೆನ್ನಿನವನೊಬ್ಬ ಚಿನ್ನದ ಹರಿವಾಣದಲ್ಲಿ ಅವರ ಚಾಳೀಸನ್ನಿರಿಸಿ ಅವರ ಮುಂದೆ ಹಿಡಿದು ನಡುಬಾಗಿಸಿ ನಿಂತುಕೊಂಡ. 
ಕನ್ನಡಕವನ್ನು ಹಾಕಿಕೊಳ್ಳಬೇಕಾದರೆ ಪ್ರಿನ್ಸಿಪಾಲರು ತಮ್ಮ ತಲೆಯ ಮೇಲೆ ಕೂತುಕೊಂಡಿದ್ದ ಕಿರೀಟವನ್ನು ತೆಗೆಯಬೇಕಾಯಿತು. 
ಕನ್ನಡಕ ಹಾಕಿಕೊಂಡು ಪ್ರಿನ್ಸಿಪಾಲರು ಆ ಹಾಳೆಯನ್ನು ಓದಿದರು.   ಅವರ ಮುಖದಲ್ಲಿ ಅಚ್ಚರಿ, ದಿಗ್ಭ್ರಮೆ, ಆತಂಕ, ಬೇಸರ, ಅಸಹಾಯಕತೆ- ಹೀಗೆ ಹಲವಾರು ಬಣ್ಣಗಳು ಮಿನುಗಿ ಮಾಯವಾದವು.  ಕೊನೆಯಲ್ಲಿ ಗಟ್ಟಿಯಾಗಿ ಉಳಿದದ್ದು ಒಂದು ಪ್ರಶ್ನೆ ಮಾತ್ರ. 
"ಇಡೀ ಕಾಲೇಜಿನಲ್ಲಿ ಇರುವವನು ನೀನೊಬ್ಬನೇ ಜವಾನ ಎಂದು ಯುನೈಟೆಡ್ ನೇಷನ್ಸ್‌ನ ರಿಜಿಸ್ಟರಿನಲ್ಲಿ ನಮೂದಾಗಿದೆ.  ಅಲ್ಲದೇ ಇಲ್ಲಿಯವರೆಗಿನ ಬೆಳವಣಿಗೆಗಳಲ್ಲಿ ನಿನ್ನ ಪಾತ್ರ ಬಹಳ ದೊಡ್ಡದು, ಗುರುತರವಾದದ್ದು.   ಈಗ ಈ ಗಳಿಗೆಯಲ್ಲಿ ನೀನು ಹೀಗೆ ಇದ್ದಕ್ಕಿದ್ದಂತೆ ರಾಜೀನಾಮೆ ಕೊಟ್ಟು ಹೊರಟುಹೋದರೆ ಹೇಗೆ?" ಪ್ರಿನ್ಸಿಪಾಲರು ಪ್ರಶ್ನಿಸಿದರು.
ಅವನು ಉಸಿರು ಬಿಡಲಿಲ್ಲ.  ನನ್ನ ಕಾಲುಗಳು ನೋಯತೊಡಗಿದವು. 
"ನೀ ಏಕೆ ಉತ್ತರಿಸಲೊಲ್ಲೆ?" ಪ್ರಿನ್ಸಿಪಾಲರು ದನಿ ಎತ್ತರಿಸಿದರು.
ಆದರೂ ಅವನು ಮಾತಾಡಲಿಲ್ಲ.  ನನಗೆ ಎಷ್ಟೊತ್ತಿಗೆ ಕುಳಿತೇನೋ ಅನಿಸತೊಡಗಿತು.
ಹೀಗೆ ಅಲ್ಲಿ ಬಹಳ ಹೊತ್ತಿನವರೆಗೆ ಮೌನವಿತ್ತು. 
ಕೊನೆಗೆ ಒಂದು ಧೀರ್ಘ ನಿಟ್ಟುಸಿರಿಟ್ಟು "ಸರಿ ನೀನು ಹೋಗು" ಅಂದರು ಪ್ರಿನ್ಸಿಪಾಲರು. 
ಅವನು ನಿಧಾನವಾಗಿ ಒಂದೊಂದೇ ಹೆಜ್ಜೆ ಹಿಂದೆ ನಡೆದು ಬಾಗಿಲ ಬಳಿ ಹೋಗಿ ಒಂದು ಹೆಜ್ಜೆಯನ್ನು ಹೊಸ್ತಿಲ ಹೊರಗಿಟ್ಟು ನಮ್ಮತ್ತ ತಿರುಗಿ ಸಿಡಿಲಿನಂಥಾ ದನಿಯಲ್ಲಿ ಗುಡುಗಿದ.
"ಮಧ್ಯದ ಬಿಳಿಯ ನೆರಳನ್ನು ಕರಗಿಸಿ ಆಚೀಚೆಗಿನ ಹಸಿರು ಕೇಸರಿಗಳನ್ನು ಕೆರಳಿಸುವ ಹೆಣ್ಣುಹಂದಿಗಳು ಪರೀಕ್ಷೆ ಬರೆಯುವ ನಾಡಿನಲ್ಲಿ ಜವಾನನಾಗಿ ಮುಂದುವರೆಯುವುದು ಸೂರ್ಯ ಮುಳುಗದ ಸಾಮ್ರಾಜ್ಯದ ಪ್ರತಿನಿಧಿಯಾದ ನನ್ನಂಥವನ ಮರ್ಯಾದೆಗೆ ಕುಂದು.  ಇನ್ನೊಂದು ಗಳಿಗೆಯೂ ಇಲ್ಲಿ ಉಳಿಯುವ ಮನಸ್ಸು ನನಗೆ ಸುತರಾಂ ಇಲ್ಲ."
ಹಾಗೆ ಕೂಗುತ್ತಲೇ ಚಿಗರೆ ಮರಿಯಂತೆ ಜಿಗಿಜಿಗಿದು ಓಡಿಹೋದ.  ಅವನ "ಇಲ್ಲ"ಗಳು ಅದೆಷ್ಟೋ ಹೊತ್ತಿನವರೆಗೆ ಕೇಳಿಬರುತ್ತಿದ್ದವು.
ನನ್ನನ್ನು ಇರಿಯುತ್ತಿದ್ದವು.
ಅವು ದೂರದ ಚರ್ಚಿನ ಗಂಟೆಯ ಸದ್ದಿನೊಡನೆ ಸೇರಿ ಅಸ್ತಿತ್ವ ಕಳೆದುಕೊಂಡಾಗ ಎಲ್ಲರೂ ಒಟ್ಟಿಗೆ "ಇಟ್ ಈಸ್ ಟೂ ಬ್ಯಾಡ್" ಅಂದರು.
ನನಗೆ ಇನ್ನು ನಿಂತಿರುವುದು ಸಾಧ್ಯವೇ ಇಲ್ಲ ಅನಿಸಿಬಿಟ್ಟಿತು. 
"ಹೌದು, ಇದು ನಿಜವಾಗಿಯೂ ಕೆಟ್ಟದ್ದೇ.  ಈ ಹುಡುಗಿಯ ಬಗ್ಗೆ ಯಾವುದಾದರೊಂದು ನಿರ್ಣಯವನ್ನು ನಾವು ಆದಷ್ಟು ಬೇಗನೆ ತೆಗೆದುಕೊಳ್ಳಬೇಕು.  ಇಲ್ಲದಿದ್ದರೆ ಹೀಗೆ ಎಲ್ಲರೂ ಒಬ್ಬೊಬ್ಬರಾಗಿ ಬಿಟ್ಟುಹೋದರೆ ಮಾಡುವುದೇನು?" ಎಂದರು ಪ್ರಿನ್ಸಿಪಾಲರು ಭಾರವಾಗಿ.
"ವಿಚಾರಣೆ ಆರಂಭವಾಗಲಿ" ಒಕ್ಕೊರಲಿನಿಂದ ಕೂಗಿತು ಜನಸ್ತೋಮ.
ಸರಿಯೆನ್ನುತ್ತಾ ಪ್ರಿನ್ಸಿಪಾಲರು ಕನ್ನಡಕವನ್ನು ತೆಗೆದಿಟ್ಟು ಕಿರೀಟವನ್ನು ತಲೆಗೇರಿಸಿದರು.  ಆದರೆ ಈಗ ಅದು ಮೊದಲಿನಂತೆ ಸುಂದರವಾಗಿ ಕಂಗೊಳಿಸಲಿಲ್ಲ.  ಬರೆಯುವ ಮೇಜಿನ ಮೇಲೆ ಕಾಗೆ ಕೂತಂತೆ ಕಾಣತೊಡಗಿತು. 
ನಾನು ಕಿಸಕ್ಕನೆ ನಕ್ಕುಬಿಟ್ಟೆ.
"ಮಾಡಬಾರದ್ದನ್ನು ಮಾಡಿ ಈಗ ಹಲ್ಲು ಕಿಸಿಯುವುದ ನೋಡು.  ಹಾದರಗಿತ್ತಿ" ಎಂದು ಯಾರೋ ಕೊಂಕಿದರು.
"ಹುಷ್" ಎಂದು ಎಲ್ಲರನ್ನೂ ಸುಮ್ಮನಿರಿಸಿದರು ಪ್ರಿನ್ಸಿಪಾಲರು.
ಈಗ ಅಲ್ಲಿ ನೆಲೆಸಿದ ರುದ್ರಮೌನದಲ್ಲಿ ಗಗನದಿಂದ ಕೇಳಿಬಂದಂತೆ ಪ್ರಿನ್ಸಿಪಾಲರ ದನಿ ಮೊಳಗಿತು.
"ಚಿತ್ರಗುಪ್ತ"
"ಜೀ ಹುಜೂರ್."  ಕತ್ತಲ ಮೂಲೆಯಲ್ಲಿದ್ದವನೊಬ್ಬ ಇದ್ದಕ್ಕಿದ್ದಂತೆ ಅವತರಿಸಿ ಅಲ್ಲಿದ್ದ ಮೇಜೊಂದರ ಬಳಿಗೆ ಕುರ್ಚಿಯೊಂದನ್ನು ಸದ್ದಾಗುವಂತೆ ಎಳೆದುಕೊಂಡು ಕುಳಿತು ನಿಟ್ಟುಸಿರಿಟ್ಟ.
ಅವನು ನಮ್ಮ ಕಾಲೇಜಿನ ಹೆಡ್‌ಕ್ಲಾರ್ಕು.  ಹಿಂದಿನ ಹಾಗೇ ಮೈಕೈ ಇತ್ತು.  ಒಂದೇ ಒಂದು ಬದಲಾವಣೆಯೆಂದರೆ ಕಣ್ಣುಗಳು ಮತ್ತು ಕಿವಿಗಳು ಮಾತ್ರ ಬೇರೆ ಇನ್ಯಾರವೋ ಅಗಿದ್ದವು.  ಅಲ್ಲದೇ ಅದ್ಯಾವ ಮಾಯದಲ್ಲೋ ಅವನ ತಲೆಯ ಮೇಲೆ ಎರಡು ಕೊಂಬುಗಳು ಮೂಡಿಬಿಟ್ಟಿದ್ದವು.  ತಲೆಗೇ ಅಂಟಿಕೊಂಡಿರಬೇಕಾಗಿದ್ದ ಕಿರೀಟವನ್ನು ಅವು ತಲೆಯ ಮೇಲೆ ಮೊಳದುದ್ದಕ್ಕೆ ಎತ್ತಿ ಹಿಡಿದಿದ್ದವು.
ಅವನು ಗಂಡೂ ಅಲ್ಲ ಹೆಣ್ಣೂ ಅಲ್ಲ ಅಂತಹ ಒಂದು ಮೈನಾರಿಟಿ ಕಮ್ಯೂನಿಟಿಗೆ ಸೇರಿದವನು ಎಂದು ಕಾಲೇಜಿನ ಹುಡುಗಿಯರು ಮಾತಾಡಿಕೊಳ್ಳುತ್ತಿದ್ದರು.  ಅವನು ಒಂದು ರೀತಿಯಲ್ಲಿ ಬೀಜ ಒಡೆದ ಟಗರಿನಂತೆ ಎಂದು ತಸ್ಲೀಮಾ ನಸ್ರೀನ್ ಸೆಮಿನಾರೊಂದರಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ವಿವರಣೆ ಕೊಟ್ಟಿದ್ದಳು. 
"ಈ ಹುಡುಗಿಯ ಪಾಪಪುಣ್ಯಗಳ ಫೈಲ್ ತಯಾರಾಗಿದೆಯೇ?" ಪ್ರಿನ್ಸಿಪಾಲರು ಪ್ರಶ್ನಿಸಿದರು.
"ಇಲ್ಲ ಜಹಾಂಪನಾ."
ಪ್ರಿನ್ಸಿಪಾಲರು ಸಿಡಿದೆದ್ದರು.
"ಚಿತ್ರಗುಪ್ತರೇ ಏನು ನೀವು ಹೇಳುತ್ತಿರುವುದು?  ಕೊನೆಯ ಕೆಲವು ಪುಟಗಳು ಅಡಿಗೆಮನೆಯಿಂದ ಈ ಬೆಳಿಗ್ಗೆಯಷ್ಟೇ ನಿಮ್ಮ ಕೈಸೇರಿದವು ಎಂದು ನನಗೆ ತಿಳಿದುಹೋಗಿದೆ.  ಹುಡುಗಾಟವಾಡುವಿರೇನುನಿಜ ಹೇಳಿರಿ.  ಇಲ್ಲದಿದ್ದರೆ ಕೊಂಬು ಮುರಿದು ಕೈಗೆ ಕೊಟ್ಟೇನು."  ಅವರು ಅಬ್ಬರಿಸಿದರು. 
ಅಲ್ಲಿದ್ದ ಯಾವುದೋ ಒಂದು ದಪ್ಪದ ಪುರಾತನ ಕಡತವನ್ನು ಕೈಗೆತ್ತಿಕೊಂಡು ಅದರ ಮೇಲೆ ಬಲಗೈಯ್ಯನ್ನಿಟ್ಟು ಚಿತ್ರಗುಪ್ತ ಹೇಳಿದ.
"ಸತ್ಯವನ್ನೇ ಹೇಳುತ್ತೇನೆ.  ಸತ್ಯವನ್ನು ಬಿಟ್ಟು ಬೇರೇನನ್ನೂ ಹೇಳುವುದಿಲ್ಲ."
"ಸರಿ ಬೊಗಳಿರಿ ಮತ್ತೆ."
ಪ್ರಿನ್ಸಿಪಾಲರ ಕೊಠಡಿಯ ಹೊರಗೆ "ನಾಯಿಗಳಿವೆ ಎಚ್ಚರಿಕೆ" ಎಂಬ ಬೋರ್ಡು ಯಾಕಿದೆಯೆಂದು ನನಗೆ ಏಕಾಏಕಿ ಹೊಳೆದುಬಿಟ್ಟಿತು. 
"ನೀವು ಹೇಳುವುದು ನಿಜ ಜಹಾಂಪನಾ.  ಕೊನೆಯ ಕೆಲವು ಪುಟಗಳು, ಕೆಲವು ದೈವನಿಂದೆಯ ಆಪಾದನೆಗಳಿದ್ದ ಪುಟಗಳು ಈ ಬೆಳಿಗ್ಗೆಯಷ್ಟೇ ನನ್ನ ಕೈ ಸೇರಿದ್ದು ನಿಜ.  ನಿಮಗೆ ನಾ ಯಾಕೆ ಸುಳ್ಳು ಹೇಳಲಿಸುಳ್ಳು ಹೇಳಿ ಯಾವ ನರಕಕ್ಕೆ ಹೋಗಲಿವಿಷಯವೇನೆಂದರೆ ಈಗಷ್ಟೇ ಬಂದ ನಮ್ಮ ತನಿಖಾದಳದಲ್ಲಿನ ಮನುಷ್ಯರುಗಳ ವರದಿಯ ಪ್ರಕಾರ ಆ ಪುಟಗಳು ಈ ಹೆಣ್ಣುಮಗಳಿಗೆ ಸಂಬಂಧಿಸಿದವಲ್ಲ."
ಅವನು ಸ್ವಲ್ಪ ತಡೆದು ಮುಂದುವರೆಸಿದ. 
"ಈ ಹೊಸ ಆಧಾರಗಳ ಮೇಲೆ ಹೇಳುವುದಾದರೆ ಈ ಹುಡುಗಿಯನ್ನು ಇಲ್ಲಿಯವರೆಗೆ ಕರೆತರಲೇಬಾರದಾಗಿತ್ತು.  ಅನುಚಿತವೊಂದು ಘಟಿಸಿಹೊಗಿದೆ ಜಹಾಂಪನಾ."
ಸಭೆಯಲ್ಲಿ ಗುಜುಗುಜು ಸದ್ದೆದ್ದಿತು.  ಯಾರೊ ಒಂದಿಬ್ಬರು ಚಿತ್ರಗುಪ್ತನಿಗೆ ಹೊಡೆಯಲು ಮುಂದೆ ನುಗ್ಗಿದರು.  ಅವನು ಪಕ್ಷಪಾತಿಯಂತೆ ವರ್ತಿಸುತ್ತಿದ್ದಾನೆಂದು ಅವರೆಲ್ಲರೂ ದೂರುತ್ತಿದ್ದರು.  ಅವನನ್ನು ಆ ಕೆಲಸದಿಂದ ಒದ್ದೋಡಿಸಿ ಎಂದು ಎಲ್ಲರೂ ಅರಚಿದರು.
ಆದರೆ ಸೃಷ್ಟಿಯಾದಂದಿನಿಂದಲೂ ಆ ಕೆಲಸವನ್ನು ಅವನೇ ಮಾಡುತ್ತಾ ಬಂದಿದ್ದುದರಿಂದ ಸೀನಿಯಾರಿಟಿಯ ಪ್ರಕಾರ ಮೊದಲ ಸ್ಥಾನದಲ್ಲಿರುವ ಅವನನ್ನು ಆ ಕೆಲಸದಿಂದ ತೆಗೆದುಹಾಕುವುದು  ಸಂವಿಧಾನವಿರೋಧೀ ಕೃತ್ಯವಾಗುತ್ತದೆ ಎಂಬ ಅರಿವು ಬಂದೊಡನೇ ಅವರೆಲ್ಲರೂ ಕೈಕೈ ಹಿಸುಕಿಕೊಂಡರು.  ಅವರೆಲ್ಲರೂ ಅವನಿಗಿಂತ ಅದೆಷ್ಟೋ ಯುಗಗಳು ಜ್ಯೂನಿಯರ್ ಆಗಿದ್ದರು.
ಪ್ರಿನ್ಸಿಪಾಲರು ಗುಡುಗಿದರು.
"ಈಕೆ ಇಲ್ಲಿಗೆ ಬರಬೇಕೋ ಬೇಡವೋ ಎಂದು ನಿರ್ಧರಿಸುವವನು ನಾನು.  ನಾನು ಕೇಳಿದಾಗ ಇವಳ ಪಾಪಪುಣ್ಯಗಳ ವಿವರಗಳನ್ನು ಹೇಳುವುದು ಮಾತ್ರ ನಿಮ್ಮ ಕೆಲಸ ತಿಳೀಯಿತೇಕರ್ಮಕ್ಕನುಸಾರವಾಗಿ ಇವಳನ್ನು ಹೃದಯಕ್ಕೋ ಅಥವಾ ನಾಲಿಗೆಗೋ ಕಳುಹಿಸಬೇಕಾದ ಗುರುತರ ಜವಾಬ್ದಾರಿ ನನ್ನ ತಲೆಯ ಮೇಲಿರುವಾಗ ಇವಳನ್ನು ಇಲ್ಲಿಗೆ ಕರೆತರಲೇಬಾರದಾಗಿತ್ತು ಅನ್ನುತ್ತಿದ್ದಾನೆ ಇವನು!  ಮೂರ್ಖ.  ಪೆಟ್ಟು ಕೊಟ್ಟು ರಟ್ಟೆ ಮುರಿದುಬಿಟ್ಟೇನು ಜೋಕೆ!"
ನನಗೆ ಚಿತ್ರಗುಪ್ತನ ಮೇಲೆ ನಿಜಕ್ಕೂ ಮರುಕವಾಯಿತು.  ಅವನು ಪ್ರತಿವಾದಿಸುವ ಪ್ರಯತ್ನವನ್ನೇ ಮಾಡಲಿಲ್ಲ.  ಮಿಲಿಯಾಂತರ ಶೋಷಿತ ಜನಸಮೂಹದ ಪ್ರತೀಕದಂತಿದ್ದ ಅವನು.  ಅವನಂಥವರಿಗೆ ಆತ್ಮತೃಪ್ತಿ ಎನ್ನುವುದು ಕನಸಿನೊಳಗಿನ ಗಂಟು.  ಆದರೂ ಅವನು ಒಮ್ಮೆಯಾದರೂ ಮದುವೆಯಾಗಿರಲಿಲ್ಲ.  ಮುಸಲಧಾರೆಯಾಗಿ ಮಳೆ ಹುಯ್ಯುವಾಗ ಉಕ್ಕಿ ಹರಿಯುವ ಗಟಾರದ ರಾಡಿ ನೀರನ್ನು ಆಗಾಗ ಕುಡಿಯುತ್ತಿದ್ದ.
ಬಡಪಾಯಿ, ಪಂಚವರ್ಣದ ಗಿಳಿ ಹೇಳಿದ್ದನ್ನೂ ಬರೆದುಕೊಳ್ಳುತ್ತಿದ್ದ, ಹಾಳೂರ ಹದ್ದು ಹೇತದ್ದನ್ನೂ ಕೆದಕುತ್ತಿದ್ದ.  ಹೀಗಾಗಿಯೇ ಅವನ ಮೇಜಿನ ಮೇಲೆ, ಬೀರುವಿನಲ್ಲಿ, ಅಟ್ಟದ ಮೇಲೆ, ಅವನ ಶರಟಿನ ಜೇಬಿನಲ್ಲಿ, ಹೊಕ್ಕುಳ ತೂತಿನಲ್ಲಿ- ಎಲ್ಲ ಕಡೆ ಭಾರಿ ಭಾರಿ ಫೈಲುಗಳು ಅಡಕಿ ಕೂತಿದ್ದವು.  ಅಲ್ಲಿ ತಿರುಗಾಡುವಾಗ ಫೈಲುಗಳನ್ನು ತುಳಿದುಕೊಂಡೇ, ಅವುಗಳ ಅಡ್ಡಾದಿಡ್ಡಿ ರಾಶಿಯ ಮೇಲೆ ಸರ್ಕಸ್ ಮಾಡುತ್ತಲೇ ನಡೆಯಬೇಕಾಗಿತ್ತು.  ಇದು ಅಲ್ಲಿಯ ವಿಶಿಷ್ಟ ಪುರಾತನ ಸಂಪ್ರದಾಯ.
ಕಡತಯಜ್ಞ ಮಾಡಿಸುವ ಕುಕೋಬ್ರಾ ಗುಂಡುಮುನಿಯೊಬ್ಬರು ಮೊನ್ನೆಮೊನ್ನೆಯಷ್ಟೇ ತನ್ನ ಮುಂದೆ ನಿಂತದ್ದನ್ನು ಅವನು ಮರೆತೇಬಿಟ್ಟಿದ್ದ.  ನಾನಾದರೂ ನೆನಪಿಸಬಹುದಾಗಿತ್ತು.  ಆದರೆ ಹಾಗೆ ಮಾಡಬಾರದೆಂದು ನನಗೆ ಆಜ್ಞೆಯಾಗಿತ್ತು.
ಕ್ಷಣಗಳು ಉರುಳಲು ಮುಂದೆ ಸಾಗಿದ ಕಾಲದ ಚಕ್ರದಡಿಯಲ್ಲಿ ನನ್ನ ಬದುಕು ನರಳಲು ಮೊದಲು ಮಾಡಿತು.  ನನ್ನ ಕಣ್ಣುಗಳಲ್ಲಿ ನೀರಿರಲಿಲ್ಲ.  ಹೃದಯದಲ್ಲಿ ಮುಳ್ಳುಗಳೂ ಇರಲಿಲ್ಲ.  ಹಾಗೆ ನಾ ಕಲ್ಲುಕಂಬದಂತೆ ನಿಂತುಕೊಂಡಿರಲು...
ಪ್ರಿನ್ಸಿಪಾಲರು ಮಾತಾಡಿದರು.
"ಇವಳಿಗೆ ಎಲ್ಲವೂ ಸರಿಯಾಗಿ ನೆನಪಿದೆಯೋ ವಿಚಾರಿಸಿ."
ಅವರು ನನ್ನನ್ನೇ ನೇರವಾಗಿ ಕೇಳಬಹುದಾಗಿತ್ತು.  ಹಾಗೆ ಮಾಡಿದರೆ ನಾನು ಉತ್ತರಿಸಲಾರೆನೇನೋ ಎಂಬ ಭಯ ಅವರಿಗಿದ್ದಿರಬೇಕು.  ನಾನು ಹಾಗೆ ಮಾಡುತ್ತೇನೆಯೇನನಗೆ ಗೊತ್ತಿಲ್ಲ.  ಅವರಿಗೆ ತಿಳಿದಿರಬಹುದು.  ನನ್ನ ಬಗ್ಗೆ ನನಗಿಂತಲೂ ಅವರಿವರಿಗೇ ಹೆಚ್ಚು ತಿಳಿದಿರುವುದು ನನ್ನ ಅರಿವಿಗೆ ಬಂದಿದೆ.
"ನಿನಗೆ ಎಲ್ಲವೂ ಅಂದರೆ ಎಲ್ಲವೂ ನೆನಪಿದೆಯೇ?"  ಚಿತ್ರಗುಪ್ತ ನನ್ನೆಡೆ ತಿರುಗಿ ಮೃದುದನಿಯಲ್ಲಿ ಪ್ರಶ್ನಿಸಿದ.  ಆಗಿನ ಅವನ ಮುಖಭಾವ ನನಗೆ ಮೆಚ್ಚಿಕೆಯಾಗಿ ಅವನನ್ನು ಅಪ್ಪಿ ಮುದ್ದಿಸಬೇಕೆಂಬ ಬಯಕೆ ನನಗಾಯಿತು.
"ಹೌದು" ಎಂದು ಗೋಣು ಆಡಿಸಿದೆ.
"ಹಾಗಿದ್ದರೆ ವಿಚಾರಣೆಯನ್ನು ಮುಂದುವರಿಸಬಹುದು"  ಪ್ರಿನ್ಸಿಪಾಲರು ಹೇಳಿದರು.
ಅಲ್ಲಲ್ಲಿ ಅರಳಿದ್ದ ಗುಜುಗುಜು ಪೂರ್ಣವಾಗಿ ಅಡಗಿಹೋಯಿತು.  ಎಲ್ಲರೂ ಪ್ರಿನ್ಸಿಪಾಲರ ಮುಂದಿನ ಮಾತುಗಳಿಗಾಗಿ ಕಿವಿಗೊಟ್ಟು ಕಾದರು.
"ನಾವು ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದಿಗೆ ವರ್ಗಾಯಿಸಿರುವುದು ನಿನಗೆ ಗೊತ್ತೇ?"
ಈ ಸಲ ಅವರು ನನ್ನನ್ನೇ ನೇರವಾಗಿ ಪ್ರಶ್ನಿಸಿದರು.  ಮೊದಲಿನಂತೆ ಚಿತ್ರಗುಪ್ತನ ಮೂಲಕ ಕೇಳಲಿಲ್ಲ.  ಅವನ ಕಡೆ ಗಮನವನ್ನೇ ಕೊಡಲಿಲ್ಲ.  ಏನೋಪ್ಪ, ಇವರ ರೀತಿನೀತಿಯೇ ನನಗೆ ಅರ್ಥವಾಗುವುದಿಲ್ಲ. 
"ಹೌದು ಜಹಾಂಪನಾ" ಎಂದು ನಾನು ತಲೆಯಾಡಿಸಿದೆ.  ಆ ವಿಷಯ ನನಗೆ ತಿಳಿದಿತ್ತು.  ನಾನದನ್ನು ಚರಿತ್ರೆಯ ಪಠ್ಯಪುಸ್ತಕದಲ್ಲಿ ಓದಿದ್ದೆ.
"ಹಾಗಾದರೆ ದಿಲ್ಲಿಯ ಜನರೆಲ್ಲರೂ ಗಂಟುಮೂಟೆ ಸಹಿತ ದೌಲತಾಬಾದಿಗೆ ಹೊರಡಬೇಕೆಂದು ಆಜ್ಞೆಯಾಗಿರುವುದೂ ನಿನಗೆ ತಿಳಿದಿರಬೇಕಲ್ಲ?"
"ತಿಳಿದಿದೆ ಸರ್."  ಆತ್ಮವಿಶ್ವಾಸದಿಂದ ಹೇಳಿದೆ.
"ದೌಲತಾಬಾದ್ ತಲುಪಲು ಕೇವಲ ಐವತ್ತು ಓವರ್‌ಗಳ ಸಮಯ ನಿಗದಿಯಾಗಿರುವುದೂ ನಿನಗೆ ಗೊತ್ತಿರಬೇಕಲ್ಲ?"
"ಗೊತ್ತು ಕಣಯ್ಯ."
"ಸರಿ, ಜಾಣಮರಿ ನೀನು.  ಎಲ್ಲವನ್ನೂ ತಿಳಿದಿರುವೆ.  ಹೊರಡುವ ತಯಾರಿ ಮಾಡಿರುವಿಯೇನು?"
"ಇಲ್ಲ."
"ಅಂ!  ಇನ್ನೂ ಯಾಕಿಲ್ಲ?"
"ಮನಸ್ಸಿಲ್ಲ."
"ಅಂದರೇನುಹೋಗಲು ಮನಸ್ಸಿಲ್ಲವೋ ಅಥವಾ ಹೊರಡುವ ತಯಾರಿ ಮಾಡಲು ಮನಸ್ಸಿಲ್ಲವೋಬಿಡಿಸಿ ಹೇಳು.  ಒಗಟಿನಂತೆ ಮಾತಾಡಿದರೆ ನನಗೆ ಅರ್ಥವಾಗುವುದಿಲ್ಲ.  ನಾನೆಂದೂ ಯಾರನ್ನೂ ಪ್ರೀತಿಸಿದವನಲ್ಲ."
"ಹೋಗುವ ಮನಸ್ಸಿಲ್ಲ."
ನನ್ನ ದನಿ ಸಿಡಿಲಿನಂತೆ ಭವನದಲ್ಲಿ ಗುಡುಗಾಡಿತು.  ಒಂದುಕ್ಷಣ ಎಲ್ಲರೂ ತಂತಮ್ಮ ಕಿವಿಗಳನ್ನು ಮುಚ್ಚಿಕೊಂಡರು.  ಮರುಕ್ಷಣ ಏಕಾಏಕಿ ಬಾಯಿ ತೆರೆದು ಮಾತಾಡತೊಡಗಿದರು.  ಅವರೆಲ್ಲರೂ ನನ್ನನ್ನು ಬೈಯುತ್ತಿರುವರೆಂದು ನನಗೆ ಸಂವೇದನೆಯಾಯಿತು. 
"ಇದೊಳ್ಳೇ ಫಜೀತಿಗಿಟ್ಟುಕೊಂಡಿತಲ್ಲ."  ಪ್ರಿನ್ಸಿಪಾಲರು ತಲೆಯ ಮೇಲೆ ಕೈಹೊತ್ತು ಕುಳಿತರು.
"ನಾನಾಗಲೇ ಹೇಳಿರಲಿಲ್ಲವೇ ಇವಳನ್ನು ಇಲ್ಲಿಗೆ ಕರೆತರಲೇಬಾರದಾಗಿತ್ತು ಅಂತ?"  ಚಿತ್ರಗುಪ್ತ ವಿಜಯದ ನಗೆ ಹಾಕಿದ.
"ನೀ ಸುಮ್ಮನಿರಯ್ಯ.  ತಿಕವೆಲ್ಲ ಹರಟಬೇಡ."  ಪ್ರಿನ್ಸಿಪಾಲರು ಅವನನ್ನು ಗದರಿ ನನ್ನ ಕಡೆ ತಿರುಗಿದರು.
"ನೀನು ಹೊರಡದಿರಲು ಕಾರಣವೇನು?"
"ಉಹ್ಞುಂ ನಾ ಹೇಳಲಾರೆ."
"ನೀನು ಹೇಳದಿದ್ದರೆ ಮತ್ತಾರು ಹೇಳಬೇಕು?"
"ಗಿಣಿ"
ನನ್ನ ದನಿ ಮುಗಿದದ್ದೇ ತಡ, ನೆರೆದಿದ್ದ ಜನಸ್ತೋಮ ಗಿಣಿಯನ್ನು ಹುಡುಕಲೆಂದು ದಿಕ್ಕುದಿಕ್ಕಿಗೆ ಚದುರಿಹೋಯಿತು.
*     *     *

೫.  ಬಣ್ಣದ ಗರಿ
ಆಗಷ್ಟೇ ಒಳಗೆ ಬಂದಿದ್ದ ಸ್ಯಾಮ್ "ಎದ್ದುಬಿಟ್ಟೆಯಾನಾನೇನಾದರೂ ಸದ್ದುಗಿದ್ದು ಮಾಡಿದೆನೇನು?" ಅಂದ.  "ಇಲ್ಲದ ಅವಾಂತರಗಳಿಗೆ ನಿನ್ನನ್ನು ನೀನು ತೊಡಕಿಸಿಕೊಳ್ಳಬೇಡ" ಎಂದವನಿಗೆ ಬುದ್ಧಿವಾದ ಹೇಳಿದೆ.
ಅಂಕಲ್ ಸ್ಯಾಮ್ ಬಲು ಭೋಳೇ ಸ್ವಭಾವದವನು.  ಅವನಷ್ಟು ಚಾಲಾಕಿಯಲ್ಲ.  ನನ್ನ ಯಾವುದೇ ಸಮಸ್ಯೆಯನ್ನು ಇವನೊಡನೆ ಮನಬಿಚ್ಚಿ ಚರ್ಚಿಸಬಹುದು.  ಇವನೊಂದು ತಳ ಕಾಣದ ಗುಡಾಣದಂತೆ.  ಎಷ್ಟು ಸುರಿದರೂ "ಇನ್ನೂ ಇನ್ನೂ" ಅನ್ನುತ್ತಿರುತ್ತಾನೆ, ಅಂಬಾಸಿಡರ್ ಕಾರಿನ ಹಾಗೆ. 
ಅವನೆಡೆ ತಿರುಗಿ ನಾ ಹೇಳತೊಡಗಿದೆ.
"ಸ್ಯಾಮ್, ನಾನೊಂದು ಕನಸ ಕಂಡೆ.  ಸುಂದರ, ಸುಮಧುರ, ಚಿರಕಾಲ ನೆನಪಿನಲ್ಲುಳಿಯುವಂತಹದು."
"ಬಿಡಿಸಿ ಹೇಳು."  ಅವನು ಆತುರ ತೋರಿದ.
"ಅರ್ಥ ಹೇಳುವಿಯೇನು?"  ಸವಾಲೆಸೆದೆ.
"ಖಂಡಿತ."
ನಾನು ಸೋಜಿಗ ಪಟ್ಟುಕೊಂಡೆ.  ಇವನಿಗೆಷ್ಟು ಆತ್ಮವಿಶ್ವಾಸ!  ಇವನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿರಬಹುದು. 
ನಾನು ಹೇಳತೊಡಗಿದೆ.
"ನಿದಿರೆಯಾವರಿಸಿದೊಡನೆ ಕಣ್ಣತುಂಬ ಕನಸುಗಳು ತುಂಬಿಕೊಳ್ಳುತ್ತವೆ.  ನಿನ್ನೆ... ಇಂದು... ಎಂದೆಂದೂ...  ಈಗಷ್ಟೇ ನನ್ನೆದೆಯಲ್ಲಿ ಭೋರ್ಗರೆದು ಉಕ್ಕಿದ ಸ್ವಪ್ನವ ವರ್ಣಿಸಿ ಪೇಳುವೆ.  ಆಲಿಸು.
ಕಣ್ಣಿನಾಚೆಗೆ ಸಹಸ್ರ ಯೋಜನಗಳ ದೂರದಲ್ಲಿ ಕ್ಷಿತಿಜ.  ರೆಪ್ಪೆಗಳ ಪರಿಧಿಯೊಳಗೆ ಹಸಿರು ಕಾನನ.  ಹಸಿರೋ ಹಸಿರು.  ಹಸಿರು ಸಮುದ್ರ ಅದು. 
ದಟ್ಟ ಹಸಿರಿನ ನಡುವೆ ಒಂದು ಮರ.  ಮಾಮರ ಅದು.  ಹಸಿರುಟ್ಟು ಮೈದುಂಬಿತ್ತು.  ನಾನದರ ನೆರಳಲ್ಲಿ ನಿಂತೆ.  ನೆರಳೂ ಹಸಿರಾಗಿತ್ತು, ಅವನ ನೆನಪಿನ ಹಾಗೆ.  ಹಸಿರು ಎಲೆಗಳ ನಡುವೆ ಒಂದು ಕೋಗಿಲೆ.  ಹಚ್ಚ ಹಸಿರಿನ ಮುದ್ದೆ.
ಅದೊಮ್ಮೆ "ಕುಹೂ" ಅಂದಿತು.
ದನಿಗಳಿಗೂ ಬಣ್ಣವಿರುತ್ತಿದ್ದರೆ ಅದರ ಉಲಿತಕ್ಕೆ ಖಂಡಿತಾ ಹಸಿರು ಬಣ್ಣವಿರುತ್ತಿತ್ತು.
ಅದರ ಉಲಿತ ಗಾಳಿಯಲ್ಲಿ ಬೆರೆತಾಗ ಬೀಸುವ ಗಾಳಿ ಹಸಿರಾಯಿತು.  ಉಛ್ವಾಸಿಸಿದ ಮನಗಳಿಗೆ ಮಳೆಗಾಲದ ಚಿಗುರು ಹುಲ್ಲಿನ ಕಂಪು ಅಂಟಿಕೊಂಡಿತು. 
ಅದೆಷ್ಟೋ ಹೊತ್ತಿನ ನಂತರ ನಾನೊಮ್ಮೆ ಕಣ್ಣಗಲಿಸಿ ನನ್ನ ಸೀರೆಯತ್ತ ಕಣ್ಣು ಹಾಯಿಸಿದೆ.
ಮೈಗಾಡ್!
ಅದು ಹಸಿರಾಗಿತ್ತು!  ಹಸಿರು ಕಾನನದ ಒಂದಂಚು ಥಟ್ಟನೆ ಮೇಲೆದ್ದು ಬಂದು ನನ್ನ ತನುವನ್ನು ಅಪ್ಪಿ ಹಿಡಿದಂತಿತ್ತು.
ಓಹ್ ಇದು ಹೇಗಾಯಿತುಸೀರೆಯಲ್ಲಿ ಅಂಟಿಕೊಂಡಿದ್ದ ಕೆಂಪು ಅದೆಲ್ಲಿ ಕರಗಿಹೋಯಿತುಬಿಡಿಸಿ ಹೇಳು ಸ್ಯಾಮ್.  ಅರ್ಥ ಹೇಳು."
ಅವನು ಮೌನವಾದ.  ಗುಹಾಲಯದ ನಿಶಾಚರಿಯಂಥ ಮೌನ ಅದು.  ನಾ ಕನಸು ಕಾಣುವಾಗೆಲ್ಲ ಅಂತಹ ಮಂಜುಮೌನ ನನ್ನೆದೆಯಲ್ಲಿ ಮಡುಗಟ್ಟಿ ನಿಂತಿರುತ್ತದೆ.
ಅದೆಷ್ಟೋ ಹೊತ್ತಿನ ನಂತರ ಅವನು ಹೇಳತೊಡಗಿದ. 
"ಹಸಿರ ಬಗ್ಗೆ ನಿನಗೇಕಿಷ್ಟು ಮೋಹ ಮೂಡಿತುನಾ ಕಂಡಂದಿನಿಂದಲೂ ನೀನೆಂದೂ ಹಸಿರುಡುಗೆ ಉಟ್ಟವಳಲ್ಲ.  ಏನೋಪ್ಪ, ಇತ್ತೀಚೆಗೆ ನಿನಗೇನಾಗಿದೆಯೋ ನನಗೆ ಅರ್ಥವೇ ಆಗುತ್ತಿಲ್ಲ.  ಇರಲಿ, ಹಸಿರು ಉಸಿರಿನ ಸಂಕೇತ, ಬದುಕಿನ ಆಸೆಯ ಕುರುಹು.  ನಿನ್ನ ಕನಸೆಲ್ಲ ಹಸಿರಾದಂತೆ ನಿನ್ನ ಬದುಕೂ ಹಸಿರಾಗಲಿ.  ಆ ಹಸಿರು ಕಾನನದಲ್ಲಿ ನಾನೊಂದು ಹಸಿರು ಮಾಮರವಾಗಿ ನಿಲ್ಲುತ್ತೇನೆ..."
ಅವನೇನೋ ಹೇಳುವುದರೊಳಗೆ ನಾ ಬಾಯಿ ಹಾಕಿದೆ.
"ಅವನು ಹಸಿರು ಕೋಗಿಲೆಯಾಗಿ ಹಾಡುತ್ತಾನೆ."
ಎತ್ತಿಕುಕ್ಕಿದಂತಾಗಿರಬೇಕು ಸ್ಯಾಮ್‌ಗೆ.  ನನ್ನನ್ನೊಮ್ಮೆ ದುರುಗುಟ್ಟಿ ನೋಡಿದ.  ನಾನು ಪಕಪಕನೆ ನಗಲಾರಂಭಿಸಿದೆ.  ಸ್ಯಾಮ್‌ನ ಬಗ್ಗೆ ಮರುಕವೆನಿಸಿತು.  ಆಸೆಗೊಂದು ಮಿತಿಯಿರಬೇಕು.  ಇಲ್ಲದೇಹೋದರೆ ಹೀಗೆ ಕುಂಡೆಗೆ ಬರೆ ಹಾಕಿಸಿಕೊಂಡು ಕೆಳಗುರುಳಬೇಕಾಗುತ್ತದೆ.
ಅವನು ಹೊರಟುಹೋದ.
ಜಗತ್ತು ಹೀಗೆಯೇ.  ಆಸೆ ಇರುವವರೆಗಷ್ಟೇ ಬದುಕು.  ಅದಿಲ್ಲವಾದ ಕ್ಷಣ ಹೀಗೇ ಹೊರಟುಹೋಗಬೇಕು.  ಇಲ್ಲದಿದ್ದರೆ ಅಸ್ತಿತ್ವಕ್ಕೆ ಯಾವ ಅರ್ಥವೂ ಇರುವುದಿಲ್ಲ.  ಮೂರುಕಾಸಿನ ಬೆಲೆಯೂ ಇರುವುದಿಲ್ಲ.
*     *     *

೬.  ಆಜಾದೀ! ಆಜಾದೀ!
ಅಸ್ತಿತ್ವದ ಅರ್ಥ, ಬದುಕಿನ ಬೆಲೆ ಕಳೆದುಕೊಂಡ ಸಿಂಧೂ ಹಾಸಿಗೆಯ ಮೇಲೆ ಬೋರಲಾಗಿ ಮಲಗಿಕೊಂಡಿದ್ದಳು.  ಹಸಿರು ಸೀರೆಯಡಿಯಲ್ಲಿ ಬೆಳ್ಳಗಿನ ಕಾಲುಗಳು ಹೊಳೆಯುತ್ತಿದ್ದವು. 
ನಾನು ಕಣ್ಣು ಮುಚ್ಚಿಕೊಂಡೆ.
"ನಿಮ್ಮಣ್ಣನಿಗೆ ಬಸುರಾಗಿದ್ದಳು ಅವಳು"  ಯಾರೋ ಚುಚ್ಚಿದರು.
"ಅವಳ ಕಣ್ಣುಗಳ ತುಂಬ ನಿಮ್ಮಣ್ಣನ ಗಡ್ಡದ ಕೂದಲುಗಳು ಕಳೆಯಂತೆ ಹರಡಿಹೋಗಿವೆ."  ಅವರೋ ಅಥವಾ ಇನ್ನಾರೋ ಮತ್ತೆ ಕೆಣಕಿದರು. 
"ಅವಳ ಮೊಲೆಗಳ ತುಂಬಾ ನಿಮ್ಮಣ್ಣನ ಬೆಳಗಿನ ಮೈಕ್ ಉಕ್ತಿಗಳು ಕೀವಾಗಿ ಉಕ್ಕಿ ಹರಿಯುತ್ತಿವೆ.  ಬೇಕಾದರೆ ಒತ್ತಿನೋಡು."  ಅದ್ಯಾರೋ ಸಿಂಧೂಳ ಮೊಲೆಗಳನ್ನು ಮೃದುವಾಗಿ ಒತ್ತಿದರು.
ಚಿಮ್ಮಿದ ನೂರಾರು ಕನಸುಗಳು ನನಗೆ "ಸಲಾಂ ಆಲೈಕುಂ" ಅಂದವು.
"ಆಲೈಕುಂ ಸಲಾಂ" ಅಂತ ಹೇಳು ಎಂದು ಯಾರೋ ನನ್ನನ್ನು ಒತ್ತಾಯಿಸಿ ಹಿಂಸಿಸಿದರು.
ನಾ ಹೇಳಲಿಲ್ಲ.
ಓಡಿದೆ.
ಓಡುತ್ತಲೇ ಇದ್ದೆ, ಶತಮಾನಗಳವರೆಗೆ.
ನಾನು ಏದುಸಿರು ಬಿಡುತ್ತಾ ನಿಂತಾಗ ನಾಲ್ವರು ಸಿಂಧೂಳನ್ನು ಹೊತ್ತುಕೊಂಡು ನನ್ನನ್ನು ದಾಟಿ ಬಿರಬಿರನೆ ನಡೆದುಹೋದರು.
ಬೆಂಕಿಯ ಕೆನ್ನಾಲಿಗೆಗಳು ನೆಕ್ಕಿದರೂ ಸಿಂಧೂಗೆ ಎಚ್ಚರವಾಗಲೇ ಇಲ್ಲ!  ಸಿಂಧೂ ಹಿಂದೂ ಆಗಿ ಇಂಡಿಯಾ ಆಗಿ  ಕೊನೆಗೆ ಇಂಡಿಯಾವೋ ಪಾಕಿಸ್ತಾನವೋ ಎಂಬ ಪ್ರಶ್ನೆಯಾಗಿ ಬೆಳೆದು ನಿಂತಳು.
ನನಗೆ ಭೋರಿಟ್ಟು ಅಳುವಂತಾಯಿತು.
ಯಾಕೆ ಹೀಗಾಯಿತು?
ಈಗ ನಾನೇನಾದರೂ ಮಾಡಬೇಕು.  ಸುಮ್ಮನೆ ಕೂರುವ ಹಾಗಿಲ್ಲ.  ನನ್ನ ಹೆಗಲ ಮೇಲಿರುವುದು ಐತಿಹಾಸಿಕ ಜವಾಬ್ದಾರಿ.
ಚಿತೆಯ ಬೂದಿಯನ್ನು ಬಾಚಿಬಾಚಿ ಕೆದಕಿದೆ.  ಹುಡಿಬೂದಿಯಲ್ಲಿ ಕೊಂಕದೇ ನಿಂತದ್ದು ಒಂದು ಸುಂದರ ಕೂದಲು ಮಾತ್ರ.
ಎತ್ತಿಕೊಂಡೆ.
ನಡೆದೆ.
ಓಯಸಿಸ್‌ನ ಅಂಚಿನ ಖರ್ಜೂರದ ತನಿನೆರಳಲ್ಲಿ ಹಿಮದಂಥಾ ನಿಟ್ಟುಸಿರು.
ಒಂಟಿ ಪಯಣಿಗನ ಕಣ್ಣತುಂಬಾ "ಲೂ" ನಿದ್ದೆ.  ಓಯಸಿಸ್‌ನ ತಂಪಿನಲ್ಲಿ ಸೊಂಪಾಗಿ ಹರಡಿ ನಿಂತ ಬಯಕೆಗಳ ನೇತ್ರಗಳಲ್ಲಿ ಫಳಕ್ಕೆಂದು ಮಿಂಚಿದ ಆಹ್ವಾನವನ್ನು ಮನ್ನಿಸಿ ಬೆರಳಿನಂಚಿನಲ್ಲಿದ್ದ ಕನಸನ್ನು ನಿಧಾನವಾಗಿ ಅವನ ಅರಿವಿನ ಪರಿಧಿಯೊಳಗೆ ಒತ್ತಿದೆ.  ಅಂದು ಕಾಲೇಜಿನ ಮುಂದಿನ ಅಂಗಡಿಯಲ್ಲಿ ಕೊಂಡಿದ್ದ ಹಸಿರು ರಿಫಿಲ್‌ನ ಪೆನ್ನು ಈಗ ಉಪಯೋಗಕ್ಕೆ ಬಂತು. 
ಮುಂದೆ ನಡೆದದ್ದು ಇತಿಹಾಸ.
ದೇವರ ವಾಕ್ಯವನ್ನು ದಿಕ್ಕುದಿಕ್ಕಿಗೆ ಹರಡಲು ಹೊರಟ ಸೈನಿಕರು ಹಗಲೆಲ್ಲಾ ನಡೆಸಿದ ನರಮೇಧಕ್ಕೆ ಸಾಕ್ಷಿಯಾಗದೇ, ರಾತ್ರಿ ವಿರಮಿಸಿದ ಅವರ ನಿಷ್ಕಳಂಕ ಕೈ, ಮುಗ್ಧ ಮುಖಗಳನ್ನು ಚುಂಬಿಸಲು ಬಂದ ಚಂದಿರ...
ಓಹ್ ನಿನ್ನಲ್ಲಿ ಬೆಳಕಿರುವರೆಗೆ, ನಿನ್ನ ಮೌನವನ್ನು ಭೂಮಿ ಅರ್ಥೈಸಿಕೊಳ್ಳುವವರೆಗೆ ನೀ ಸಾಕ್ಷಿಯಾಗಿ ನಿಲ್ಲು.  ಇದು ಕಟ್ಟಳೆ.  ಅಗ್ನಿಪರೀಕ್ಷೆಯಲ್ಲಿ ಗೆದ್ದುಬಂದ ಈ ಕೂದಲನ್ನು ಮುತ್ತಿನ ಚಿಪ್ಪಿನೊಳಗೆ ಭದ್ರವಾಗಿರಿಸಿ ಅದನ್ನು ಹಸಿರು ರೇಶಿಮೆ ವಸ್ತ್ರದಲ್ಲಿ ಸುತ್ತಿ ಮೂವತ್ತಮೂರು ಗಂಟು ಹಾಕಿ ಬಿಳೀ ಅಮೃತಶಿಲೆಯ ಪೆಟ್ಟಿಗೆಯೊಳಗಿಟ್ಟು ಬೀಗ ಹಾಕಬೇಕು.  ಆ ಪೆಟ್ಟಿಗೆಯನ್ನು ವಿಶ್ವಾಸಿಗಳ ಹೃದಯದಲ್ಲಿ ಅಡಗಿಸಿಡಬೇಕು.  ಯಾವ ಸರ್ಕಾರವೂ ಅದನ್ನು ಮುಟ್ಟುವ ಧೈರ್ಯ ಮಾಡುವುದಿಲ್ಲ.  ದೇಶ ಇಬ್ಬಾಗವಾಗಿ ಪಂಚನದಿಗಳಿಗೆ ಮುಟ್ಟಾಗಿ ಉಕ್ಕಿದ ಕೆಂಪುಪ್ರವಾಹದಲ್ಲಿ ಜನಜಾತ್ರೆ ಪೂರ್ವಪಶ್ಚಿಮಗಳಿಗೆ ಸಾಲುಸಾಲು ಹರಿದು ಹೋಗಿ... ನೆಲೆನಿಂತಮೇಲೂ...
ಸರ್ಕಾರಗಳೆರಡಕ್ಕೂ ಭಯವಿರುತ್ತದೆ.
ಈ ಕೂದಲನ್ನು ಕೊಂಕಿಸುವ ಹುಚ್ಚು ಸಾಹಸಕ್ಕೆ ಅವು ಇಳಿಯುವುದಿಲ್ಲ.  ಚಿನಾರ್ ವೃಕ್ಷದ ನಿಲುವಿಗೆ ಆತುನಿಂತಂತೆ ಈ ಕೂದಲು ಅಜರಾಮರವಾಗಿ ನಿಲ್ಲುತ್ತದೆ.  ಈ ಕೂದಲು ನೆಲೆನಿಂತ ಸ್ಥಳ ಭೂಲೋಕದ ಸ್ವರ್ಗವೆನಿಸಿಕೊಳ್ಳುತ್ತದೆ.  ಈ ಸ್ವರ್ಗಕ್ಕಾಗಿ ಮರ್ತ್ಯಗಣಗಳೆರಡರ ನಡುವೆ ಘನಘೋರ ಕಾಳಗ ನಡೆಯುತ್ತದೆ.  ಒಂಧು ಗಣ ಕೂದಲನ್ನು ತನ್ನ ಹೃದಯದಲ್ಲೂ ಇನ್ನೊಂದು ಗಣ ಅದನ್ನು ತನ್ನ ನಾಲಿಗೆಯಲ್ಲೂ ಇರಿಸಿಕೊಳ್ಳಲು ಹೋರಾಡುತ್ತವೆ.  ಕೂದಲು ಈ ಯಾದವೀ ಕಲಹಕ್ಕೆ ಮೂಕಸಾಕ್ಷಿಯಾಗಿ ನಿಲ್ಲುತ್ತದೆ.  ಪ್ರತೀ ಶುಕ್ರವಾರದ ನಟ್ಟ ನಡುಮಧ್ಯಾಹ್ನ ಕಣ್ಣು ತೆರೆದು ಮುಂದೆ ನಿಂತ ಶುಭ್ರಶ್ವೇತ ಸಮುದ್ರವನ್ನು ಪ್ರಶ್ನೆ ಮಾಡುತ್ತದೆ.
          ನಾ ಉಳಿದರೆ ಅಳಿಯುವವರಾರು?
          ನಾ ಅಳಿದರೆ ಉಳಿಯುವವರಾರು?
ಉತ್ತರಿಸಲು ಬಾಯಿ ತೆರೆದ ಜನಸಮೂಹದ ಕೊರಳಿಗೆ ಕಲ್ಲು ಸಿಲುಕಿಕೊಂಡು ಭಾರಕ್ಕೆ ಇಡೀ ಶ್ವೇತಸಾಗರ ನಡುಬಾಗಿ ನಿಲ್ಲುತ್ತದೆ.
ಯುಗಯುಗಗಳವರೆಗೆ ಇದರ ಪುನರಾವರ್ತನೆಯಾಗುತ್ತದೆ.
ಒಂದುದಿನ...
ಮುತ್ತಿನ ಚಿಪ್ಪಿನ ಮುಚ್ಚಳವನ್ನು ಸೀಳಿ, ರೇಶಿಮೆಯ ಗಂಟನ್ನು ಕಿತ್ತೊಗೆದು, ಸಂದೂಕದ ಬೀಗವನ್ನು ಆಸ್ಫೋಟಿಸಿ ಕೂದಲು ಹೊರಬಂದು ಬಾಗಿದ ನಡುಗಳ ಮೇಲೆ ರಪರಪನೆ ಬಾರಿಸುತ್ತದೆ.  ಪೂರ್ವ ಪಶ್ಚಿಮಗಳು ಒಂದಾಗುವಂತೆ ಭಯಂಕರ ನರ್ತನ ಮಾಡುತ್ತದೆ.  ಬಾಗಿದ ನಡುಗಳು ಆತ್ಮವಿಶ್ವಾಸದಿಂದ ನೆಟ್ಟಗೆ ನಿಲ್ಲುತ್ತವೆ. 
ಕೂದಲು ಉದ್ಗರಿಸುತ್ತದೆ:
          "ಆಜಾದೀ ಆಜಾದೀ"
ನೆರೆದ ಜನಸ್ತೋಮ ಒಕ್ಕೊರಲಿನಿಂದ ಮಾರ್ದನಿ ನೀಡುತ್ತದೆ:
          ಆಜಾದೀ! ಆಜಾದೀ!
*     *     *

೭.  ಇತಿಹಾಸಕ್ಕೊಂದು ಮುನ್ನುಡಿ
ಟ್ರಾನ್ಸಿಸ್ಟರ್ ಆನ್ ಮಾಡಿದೆ.  ಸಂಜೆಯ ವಾರ್ತೆಗಳ ಸಮಯ.  ಸುದ್ದಿ ಬಿತ್ತರಗೊಳ್ಳುತ್ತಿತ್ತು. 
"...ಇಂದು ಸಂಜೆ ರಾಷ್ಟ್ರಪತಿಗಳು ಹೊರಡಿಸಿದ ಸುಗ್ರೀವಾಜ್ಞೆಯ ಪ್ರಕಾರ ಚುನಾವಣಾ ಆಯೋಗವನ್ನು ಪುನರ್ರಚಿಸಲಾಗಿದೆ.  ಶ್ರೀ ರವೀಂದ್ರನಾಥ ಟ್ಯಾಗೋರ್ ಅವರನ್ನು ಮುಖ್ಯ ಚುನಾವಣಾಧಿಕಾರಿಯನ್ನಾಗಿಯೂ, ಶ್ರೀ ಬಂಕಿಮಚಂದ್ರ ಚಟರ್ಜಿ ಹಾಗು ಜನಾಬ್ ಮಹಮದ್ ಇಕ್ಬಾಲ್ ಅವರುಗಳನ್ನು ಉಪಚುನಾವಣಾಧಿಕಾರಿಗಳನ್ನಾಗಿಯೂ ನೇಮಕ ಮಾಡಲಾಗಿದೆ..."
ತಟ್ಟೆಗೆ ಇಡ್ಲಿ ಹಾಕುತ್ತಿದ್ದ ಮಮ್ಮಿ ಹೇಳಿದಳು. "ಇಂಥಾದ್ದು ನಿನ್ನ ಗರ್ಭದಲ್ಲಿ ಮತ್ತೆಮತ್ತೆ ಮೊಳೆಯುತ್ತಿರುತ್ತದೆ ಮಗಳೇ.  ಅಂದು ಹಾಗೆ.  ಇಂದು ಹೀಗೆ.  ನಾಳೆ ಇನ್ಹೇಗೋ.  ಯಾವುದೂ ಶಾಶ್ವತವಲ್ಲ.  ನೀನು ಜೋಪಾನವಾಗಿರು.  ರಸ್ತೆಯಲ್ಲಿ, ಕಾಲೇಜಿನಲ್ಲಿ, ಲೈಬ್ರರಿಯಲ್ಲಿ, ಟಾಯ್ಲೆಟ್ಟಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕು.  ಕಾಲ ಹೇಗೋ ಏನೋ.  ನಿನ್ನ ಬುದ್ದಿಬೆಳಕು ನಿನ್ನ ಕೈಯಲ್ಲಿರಲಿ." 
"ಸರಿ ಮಮ್ಮಿ.  ನಾನು ಎಚ್ಚರಿಕೆಯಿಂದಲೇ ಇರುತ್ತೇನೆ.  ಎಲೆಕ್ಷನ್ ಕಮೀಷನ್‌ನಲ್ಲಿ ಯಾರಿದ್ದರೇನುನಾನಂತೂ ಅವನಿಗೇ ಓಟು ಹಾಕುತ್ತೇನೆ.  ನೀನೇನೂ ತಲೆ ಕೆಡಿಸಿಕೊಳ್ಳಬೇಡ."
"ಅವನದು ಯಾವ ಗುರುತು ಮಗಳೇಕುದುರೆಯೋ, ನಾಯಿಯೋ ಅಥವಾ ಪಾರಿವಾಳವೋ?"
ಮೈಗಾಡ್!  ಮಮ್ಮಿಗೆ ಗೊತ್ತಾಗಿಹೋಗಿದೆ!
"ಸ್ಯಾಮ್ ಬಂದಿದ್ದನೇ?"  ಕೇಳಿದೆ.
"ಹೌದು, ಸಂಜೆ ಗೋಧೂಳಿಯ ಸಮಯದಲ್ಲಿ."
ಅಂದು ಅವನ ಹಸಿರು ಮಾಮರದಾಸೆಯನ್ನು ನಾನು ಬೇರು ಸಹಿತ ಕಿತ್ತು ಕೊಂಬೆರೆಂಬೆಗಳನ್ನು ತರಿದೊಗೆದ ದಿನ ಬೇಸರ ಪಟ್ಟುಕೊಂಡು ಎದ್ದುಹೋದವನು ಮತ್ತೆ ನನ್ನ ಹತ್ತಿರ ಬಂದಿರಲಿಲ್ಲ.  ಈ ಸಂಜೆ ಸ್ಮಶಾನದಲ್ಲಿ ನಾನು ಸಿಂಧೂಳ ಬೂದಿಯನ್ನು ಕೆದಕುತ್ತಿದ್ದ ಸಮಯ ನೋಡಿ ಇಲ್ಲಿಗೆ ಬಂದು ಮಮ್ಮಿಗೆ ಚುಚ್ಚಿಬಿಟ್ಟಿದ್ದಾನೆ.  ಮಮ್ಮಿಗೆ ಎಲ್ಲವೂ ಗೊತ್ತಾಗಿಹೋಗಿದೆ.  ಇನ್ನು ಅವಳು ಮಾಂಸ ತರಲು ಅಂಗಡಿಗೆ ಹೋಗುವುದಿಲ್ಲ.  ಇಲ್ಲೇ ಮನೆಯ ಹಜಾರದಲ್ಲೇ ಕಸಾಯಿಖಾನೆ ತೆರೆಯುತ್ತಾಳೆ.  ನಾನು ಆದಷ್ಟು ಬೇಗ ಎತ್ತಲಾದರೂ ಓಡಿಹೋಗಬೇಕು.
ಓಡಲೆಂದು ಗಡಬಡಿಸಿ ಎದ್ದೆ.
ಎದ್ದವಳು ಹಿಂದಿನಿಂದ ಜಗ್ಗಿದಂತಾಗಿ ಉರುಳಿಬಿದ್ದೆ. 
ಡ್ಯಾಡಿಯ ಕೊರಳಲ್ಲಿದ್ದ ಹೂವಿನ ಹಾರದ ಒಂದು ತುದಿ ಹಂಬಿನಂತೆ ಹಾರಿಬಂದು ನನ್ನ ಕೊರಳಿಗೆ ಉರುಳಿನಂತೆ ಬಿಗಿದುಕೊಂಡಿತ್ತು. 
ನಿಸ್ಸಹಾಯಕಳಾಗಿ ಮಮ್ಮಿಯ ಕಡೆಗೊಮ್ಮೆ, ಡ್ಯಾಡಿಯ ಫೋಟೋದ ಕಡೆಗೊಮ್ಮೆ ನೋಡಿದೆ.  ಡ್ಯಾಡಿಯ ಮುಖದ ನಿರಿಗೆಗಳು ಗೋಜಲುಗೋಜಲಾಗಿ ಹರಡಿಕೊಂಡವು.  ಕಣ್ಣುಗಳಲ್ಲಿ ಕೆಂಪು ಗೋಲಿಗಳು ಹೊರಳಿದವು.  ಅವರು ಮಮ್ಮಿಯ ಕಡೆ ತಿರುಗಿ ಹೂಂಕರಿಸಿದರು. 
"ನಾನು ಹೇಳಿದ್ದು ನೆನಪಿದೆಯಾ?"
ಮಮ್ಮಿ "ಹ್ಞೂಂ" ಎಂದು ತಲೆಯಾಡಿಸಿದಳು.
"ಮತ್ತೇಕೆ ನೋಡುತ್ತಾ ನಿಂತೆಹೇಳಿದಂತೆ ಮಾಡಬಾರದೇ?"
ಮಮ್ಮಿ ತಲೆತಗ್ಗಿಸಿ ಮೂಲೆಯತ್ತ ನಡೆದು "ಕೊರ್ ಕೊರ್" ಎಂದು ಗುನುಗುತ್ತಿದ್ದ ಭಾರೀ ಗಾತ್ರದ ಕೋಳೀಹುಂಜವೊಂದನ್ನು ಹಿಡಿದುಕೊಂಡು ಬಂದು ನನ್ನ ಮುಂದೆ ನಿಂತಳು.  
ಡ್ಯಾಡಿ ಗಂಭೀರ ದನಿಯಲ್ಲಿ ಆಜ್ಞಾಪಿಸಿದರು.
"ಈ ಹುಂಜವನ್ನು ದೌಲತಾಬಾದಿಗೆ ತೆಗೆದುಕೊಂಡುಹೋಗಿ ಮಸೀದಿಯಲ್ಲಿ ಹಲಾಲ್ ಮಾಡಿಸಿಕೊಂಡು ಬಾ, ಈಗಲೇ."
ಅವರ ದನಿ ನಿರ್ಭಾವುಕವಾಗಿತ್ತು.  ಆದರೆ ಸ್ಫುಟವಾಗಿತ್ತು.
"ದೌಲತಾಬಾದಿಗೆ ಹೋಗುವುದಿಲ್ಲ ಎಂದು ಆಗಲೇ ಹೇಳಿದೆನಲ್ಲವೇ?" ಜೋರಾಗಿಯೇ ಹೇಳಿದೆ.  ಇನ್ನು  ನನಗ್ಯಾವ ಅಂಜಿಕೆಹೇಗೂ ಡ್ಯಾಡಿ ಸೇರಿರುವುದು ಫೋಟೋ ಫ್ರೇಮಿನೊಳಗೆ.
ಡ್ಯಾಡಿ ಗಪ್‌ಚಿಪ್!
ಅಷ್ಟರಲ್ಲಿ ಬುಸಬುಸನೆ ಏದುತ್ತಾ ಪ್ರಿನ್ಸಿಪಾಲರು ಒಳಗೆ ಓಡೋಡಿ ಬಂದರು.  ಅವರ ಹಿಂದೆಯೇ ಭಾರೀ ಜನಸ್ತೋಮ ಬಿರುಗಾಳಿಯಂತೆ ಒಳನುಗ್ಗಿತು.
ನಾನು ದಢಕ್ಕನೆ ಎದ್ದುನಿಂತೆ.
"ಉಸ್ಸಪ್ಪಾ, ಕೊನೆಗೂ ಹಿಡಿದುಬಿಟ್ಟೆವು" ಎನ್ನುತ್ತಾ ಪ್ರಿನ್ಸಿಪಾಲರು ಕುಸಿದುಕುಳಿತರು.
ಅವರು ಗಿಣಿಯನ್ನು ಹಿಡಿಯಲು ಸಾಕಷ್ಟು ಅಲೆದಾಡಿರಬೇಕು.  ಪೂರ್ತಿ ಬಸವಳಿದವರಂತೆ ಕಾಣುತ್ತಿದ್ದರು.  ಒಂದೆರಡು ಕಡೆ ಬಿದ್ದು ಎದ್ದಿದ್ದರೇನೋ, ಕಿರೀಟ ಹಲವು ಕಡೆ ನೆಗ್ಗಿಹೋಗಿತ್ತು. ಅವರು ನಡುವಿಗೆ ಸುತ್ತಿಕೊಂಡಿದ್ದ ವಸ್ತ್ರ ಹರಿದು ಜೂಲಾಗಿತ್ತು.  ಅವರ ತಿಕ ಬೆತ್ತಲಾಗಿತ್ತು, ನಾಯಿ ತಿಕದ ಹಾಗೆ.
"ನಾನು ಮಾಡಬೇಕಾದುದನ್ನು ಮಾಡಿದ್ದೇನೆ.  ಇನ್ನು ನಿಮ್ಮ ಸರದಿ" ಎಂದು ಪ್ರಿನ್ಸಿಪಾಲರು ಮಮ್ಮಿಯ ಕಡೆ ತಿರುಗಿ ಹೇಳಿ ಸೋಫಾದಲ್ಲಿ ಆರಾಮವಾಗಿ ಒರಗಿದರು.
ಮಮ್ಮಿ ಅವರ ಬಳಿಸಾರಿ ಕಿರೀಟವನ್ನು ಮೇಲೆತ್ತಿದಳು.  ಅದರೊಳಗಿನಿಂದ ಗಿಳಿ ಪುರ್ರನೆ ಹಾರಿಹೋಗಿ ಡ್ಯಾಡಿಯ ಭುಜದ ಮೇಲೆ ಕೂತುಕೊಂಡು ಅವರ ಗಡ್ಡದ ಕೂದಲುಗಳಿಂದ ಹೇನು ಹೆಕ್ಕತೊಡಗಿತು.
"ಅದನ್ನು ಕರೆ."  ಮಮ್ಮಿ ಹೇಳಿದಳು.
ನಾನದನ್ನು ಒಲುಮೆಯಿಂದ ರಮಿಸಿ ಕರೆದೆ.
          ಚಿನ್ನಾ ಬಾ  ರನ್ನಾ ಬಾ
          ಮುದ್ದಿನ ಗಿಣಿಯೇ ಬಾ ಬಾ ಬಾ
ಅದು ಪುರ್ರನೆ ಹಾರಿಬಂದು ನನ್ನ ಮುಂಗೈ ಮೇಲೆ ಕುಳಿತುಕೊಂಡಿತು.
"ವಿಚಾರಣೆ ಆರಂಭವಾಗಲಿ.  ಆದಷ್ಟು ಬೇಗೆ ಪ್ಲೆಬಿಸೈಟ್ ಮುಗಿಸಿಬಿಡಬೇಕು."
ಡ್ಯಾಡಿಯ ದನಿ ಮೊಳಗಿತು.  ಪ್ರಿನ್ಸಿಪಾಲರಿಂದ ವಿಚಾರಣೆಯ ಅಧಿಕಾರವನ್ನು ಡ್ಯಾಡಿ ಯಾವಾಗ ವಹಿಸಿಕೊಂಡರೋ ತಿಳಿಯಲಿಲ್ಲ.  ಅಲ್ಲದೇ ಅದೇನೋ ಪ್ಲೆಬಿಸೈಟ್ ಗಿಬಿಸೈಟ್ ಎಂದು ಬೇರೆ ಹೇಳತೊಡಗಿದ್ದಾರೆ.  ಏನೋಪ್ಪ ನನಗೆ ಈ ನಾಡಿನ ರೀತಿನೀತಿಯೇ ಅರ್ಥವಾಗುವುದಿಲ್ಲ.  ಜನ ತಾವು ತಾವೇ ಆಗಿ ಉಳಿದು ಬೆಳೆದು ಅಳಿಯುವುದರ ಬದಲು ಇನ್ನಾರೋ ಆಗಿ ಅಳಿದು ನಂತರ ಬೆಳೆದು ಉಳಿಯಲು ನೋಡುತ್ತಾರೆ.  ಹುಚ್ಚಾಟ, ಬರೀ ಹುಚ್ಚಾಟ.
ಮಮ್ಮಿ ಮೆಲ್ಲಗೆ ಹತ್ತಿರ ಬಂದು ನನ್ನ ತಲೆ ಸವರಿದಳು.
"ಈಗ ಹಠ ಮಾಡಬೇಡ ಮಗಳೇ.  ಎಲ್ಲವನ್ನೂ ಹೇಳಿಬಿಡು.  ಇಲ್ಲದಿದ್ದರೆ ನನಗೆ ಬರುತ್ತದೆ ಕುತ್ತು.  ನನ್ನ ಯೌವನದ ಪಕಳೆಗಳು ಹೌಸ್ ಆಫ್ ಕಾಮನ್ಸ್‌ನಲ್ಲಿ ಹರಾಜಿಗೆ ಬರುತ್ತವೆ.  ಹಾಗಾಗುವುದು ಬೇಡ ಮಗಳೇ.  ನಿನ್ನ ಡ್ಯಾಡಿ ಬರೀ ಪ್ರಿನ್ಸಿಪಾಲರಾಗಿಯೇ ಉಳಿಯಲಿ.  ಅವರು ಬೇರೇನೂ ಆಗುವುದು ನನಗೆ ಬೇಕಾಗಿಲ್ಲ.  ಇಡೀ ಜಗತ್ತಿನ ಹಿತದ ದೃಷ್ಟಿಯಿಂದ ಅವರು ಫೋಟೋ ಫ್ರೇಮಿನೊಳಗೇ ಉಳಿಯುವ ಅಗತ್ಯವಿದೆ."
ನಾನು ನಿರ್ಧರಿಸಿದೆ.
          ಹೇಳಿಬಿಡಬೇಕು
          ಎಲ್ಲವನ್ನೂ ಹೇಳಿಬಿಡಬೇಕು
          ಕನಸನ್ನೂ ಕನವರಿಕೆಯನ್ನೂ
          ನನಸನ್ನೂ ನೆನಕೆಯನ್ನೂ
          ಬಯಲಿಗಟ್ಟಿಬಿಡಬೇಕು
ಮೃದುವಾಗಿ ಗಿಣಿಯ ತಲೆಸವರಿ ಮುದ್ದಿಸಿದೆ.  "ಹೇಳಿಬಿಡು" ಪಿಸುಗಿದೆ.
ಗಿಣಿ ಕೊರಳು ಕೊಂಕಿಸಿ, ಕಣ್ಣು ಮಿಟುಕಿಸಿ, ಬಾಯಿ ತೆರೆದು...
*     *     *

೮.  ಬಿರುಕು ಬಿಟ್ಟ ಕಾಲ
...ಹೇಳಲು ಮೊದಲುಮಾಡಿತು. 
ಯೆಹ್ ಆಲ್ ಇಂಡಿಯಾ ರೇಡಿಯೋ ಕೀ ಉರ್ದು ಸರ್ವೀಸ್ ಹೈ.  ಆಪ್ ಕೀ ಪಸಂದ್ ಕೇ ಫಿಲ್ಮೀ ನಗ್ಮೋಂಕೋ ಸುನ್‌ನೇ ಕೆ ಬಾದ್ ಅಬ್ ಸುನೀಯೇ ರಜಿಯಾ ಸುಲ್ತಾನಾ ಸೇ ಖಬ್ರೆ...
...ಅಟ್ಲಾಂಟಿಸ್ ಬಾಳಿ ಅಳಿದು ಶತಶತಮಾನಗಳು ಕಳೆದ ಮೇಲೂ ಸಾಲ್ಮನ್ ಮೀನುಗಳಿಗೆ ಮರೆಯಲಾಗದ ದಾರಿ ಅದು.  ಯೂರೋಪ್ ಅಮೆರಿಕಾಗಳ ನದೀ ಹಳ್ಳ ತೊರೆಗಳಿಂದ ಹೊರಟು ಅಟ್ಲಾಂಟಿಕ್‌ನತ್ತ ಪಯಣ ಬದುಕಿನ ಅಂತಿಮ ಗುರಿ.  ಬೀಜ ಬಿತ್ತಿ ಮೊಳಕೆಯೊಡೆದ ಮೇಲೆ ಅಳಿದುಹೋಗುವ ಸನಾತನ ಸಂಪ್ರದಾಯ.  ಮೊಳಕೆ ಚಿಗುರಿ ಮರಿಸಾಲ್ಮನ್ ಆಗಿ ಮತ್ತೆ ಯೂರೋಪ್ ಅಮೆರಿಕಾಗಳತ್ತ ಪ್ರವಾಹದ ಪ್ರಯಾಣ.  ಮತ್ತೆ... 
ಇದು ಯುಗಯುಗಗಳಿಂದ ಹರಿದುಬಂದ ರಿವಾಜಿನ ಪ್ರವಾಹ.
ಮರಳುಗಾಡಿನ ದಾರಿ ಹಿಡಿದ ಸಾಲ್ಮನ್ ಒಂದು ಹೊಸ ಯುಗದ ಹರಿಕಾರನಾಗಿ ಶರಣಾಗತಿಯ ಕರೆ ನೀಡಿದ್ದು ಈಗ ಇತಿಹಾಸ.  ದಿಕ್ಕುದಿಕ್ಕಿಗೆ ಚದುರಿದ ಹರಿತನಾಲಿಗೆಗಳ ಕರೆಗೆ ಓಗೊಟ್ಟ ಯೂಫ್ರಟೀಸ್ ಹಾಗೂ ಟೈಗ್ರಿಸ್‌ಗಳು ಹಸಿರುಪ್ರವಾಹವಾಗಿ ಉಕ್ಕಿ ಹರಿದವು.  ಸಹಾರಾ ಬೆಂಗಾಡಿನಲ್ಲಿ ಎಲ್ಲೆಲ್ಲೂ ಚಿಗುರಿದ ಹಸಿರು ಪತಾಕೆ ನೀಲನದಿಯಲ್ಲಿ ಮುಖ ನೋಡಿಕೊಂಡು ನಲಿಯಿತು.  ಸಿಂಧೂನದಿ ಹಸಿರುಗಟ್ಟಿ ಹರಿಯಿತು. 
ಸಾಲ್ಮನ್ ಮೀನು ಅದರಲ್ಲಿ ಈಜಿತು.
ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಡುತ್ತದೆ.  ಇದು ಸಾರ್ವಕಾಲಿಕ ಸತ್ಯ.  ಒಂದು ತಂಟೆಕೋರ ಮರಿಸಾಲ್ಮನ್ ನಡುರಾತ್ರಿಯ ಮಕ್ಕಳಿಗೆ ನಾಚಿಕೆಯಿಲ್ಲದೇ ಸೈತಾನನ ಕವಿತೆಗಳನ್ನು ಓದಿ ಹೇಳುವ ಹುಚ್ಚುಸಾಹಸಕ್ಕೆ ಕೈ ಹಚ್ಚಿದಾಗ ಪಾರಸೀಕ ಹೊಕ್ಕುಳಿನಲ್ಲಿ ಮೂಡಿ ಮೈಲುದೂರಕ್ಕೆ ಕಾಣುವಂತೆ ಸೊಕ್ಕಿ ನಿಂತಿದ್ದ ಇಮಾರತಿನ ಉನ್ನತ ಮಿನಾರು ಅದರ ಮೇಲೆ ಎರಗಿ ಗಢಾರಿಯಂತೆ ಘಟ್ಟಿಸಿತು.   ದಿಕ್ಕುಗೆಟ್ಟ ಮರಿಸಾಲ್ಮನ್ ಹೆದರಿ ಹೇತುಕೊಂಡು ಸುಯೆಜ್‌ನಲ್ಲಿ ಸುಂಯ್ಯನೆ ಸಾಗಿ, ಜಿಬ್ರಾಲ್ಟರ್‌ನಲ್ಲಿ ಜಾರಿ, ಡೋವರ್ ದಾಟಿ ಮಮ್ಮಿಯ ಸೆರಗಿನಾಳದ ಪೊಟರೆಯೊಳಗೆ ಅವಿತು ಕೂತಿತು.
ಅದು ಹೊರಬಂದು ಕೊಟ್ಟಕೊನೆಯ ನಗೆಯ ಹನಿಯನ್ನು ಚಿಮುಕಿಸಿದಾಗ ಕಾಲ ಮಾಗಿತ್ತು.  ಇಮಾರತು ಮುರಿದು ಮಿನಾರಿನ ಮೊನೆ ಮೊಂಡಾಗಿತ್ತು.  ಮೀನು ಮತ್ತೆ ಅಟ್ಲಾಂಟಿಕ್‌ನ ಆಚೆ ಈಚೆ ಈಜಾಡಲು ಮೊದಲುಮಾಡಿತು.
ಕಾಲ ನಿಜವಾಗಿಯೂ ಬದಲಾಗಿತ್ತು.
"ಹೌದೇ?"  ನನ್ನನ್ನೇ ಕೇಳಿಕೊಂಡೆ.
ಏನೇನೋ ಗೋಜಲುಗಳು. 
ಕಾಲ ಬದಲಾಗುವುದಿಲ್ಲ.  ಬದಲಾಗುವುದು, ಬದಲಾಯಿಸಲ್ಪಡುವುದು ಇತಿಹಾಸ, ನಮ್ಮ ಮೈನ ಚರ್ಮ, ಉಟ್ಟ ಬಟ್ಟೆ, ಮೀನಿನ ಹುರುಪೆಗಳು...
ಚಿತ್ರಗುಪ್ತ ನನ್ನ ಹತ್ತಿರ ಸರಿದು ಕಿವಿಯಲ್ಲಿ ಪಿಸುಗಿದ: "ಏನು ಮಾತು ಅಂತ ಆಡ್ತೀಯವ್ವ ನೀನುಯಾಕೆ ಬದಲಾಗಿಲ್ಲ?..." ಅವನಿನ್ನೂ ಮಾತು ಮುಗಿಸಿರಲಿಲ್ಲ, ಪ್ರಿನ್ಸಿಪಾಲರು ಮುಖ ಸಿಂಡರಿಸಿ ಅರಚಿದರು.
"ಅಯ್ ಸುಮ್ನಿರಯ್ಯ.  ಏನು ಬದಲಾದದ್ದುನಿನ್ನಜ್ಜಿ ತಲೆ" ಎಂದು ಅವನನ್ನು ಬೈದು ನನ್ನತ್ತ ತಿರುಗಿ ಹೇಳಿದರು:  ನಿನಗೆ ಗೊತ್ತೇ ಅಮ್ಮಣ್ಣೀಹಳೆಯದೇ ಮತ್ತೆಮತ್ತೆ ಹೊಸದಾಗಿ ಹುಟ್ಟುತ್ತಿರುತ್ತದೆ.  ಬದಲಾವಣೆ ಎಂದರೆ ಹಳೆಯದು ಹೊಸರೂಪ ತಾಳಿ ಮತ್ತೆ ಎದುರಿಗೆ ನಿಲ್ಲುವುದು ಅಷ್ಟೇ.  ಬೇಕಾದರೆ ಬಾಮಿಯನ್‌ಗೆ ಬೆಳಗಿನ ವಾಕಿಂಗ್ ಹೋಗಿ ನೋಡು.  ಐದು ಶತಮಾನಗಳ ಹಿಂದೆ ತೊಟ್ಟು ಕಳಚಿ ಕೆಳಗುದುರಿದ್ದೇ ಈಗ ಸಾಗರದಾಚೆಯ ಸ್ಯಾಮ್‌ನ ಜೋಡಿಕನಸುಗಳಿಂದ ಉದುರಿದ ಮಣ್ಣು, ಮೂಳೆ, ಗಾರೆ, ರಕ್ತಗಳಾಗಿ ಕಾಣಿಸಿಕೊಂಡಿದೆ.  ಇಂಥಾದ್ದೇ ಮತ್ತೆಮತ್ತೆ ನಡೆಯುತ್ತದೆ.  ಸುಮ್ಮನೆ ಬುದ್ಧಿಗೆಟ್ಟವಳಂತೆ ಹಲುಬಬೇಡ."  ಬೇಸರದಿಂದ ಹೇಳಿ ಅಂಡನ್ನು ಒಂದುಕಡೆ ಮೇಲೆತ್ತಿ "ಡರ್ರರ್ರೋ" ಎಂದು ಹೂಸು ಬಿಟ್ಟರು.
ಎಲ್ಲಿಂದಲೋ ಓಡಿಬಂದ ಸ್ಯಾಮ್ ಎಲ್ಲರ ಮೂಗಿನ ಮುಂದೆಯೂ ಒಂದೊಂದು ಗ್ಯಾಸ್‌ಮಾಸ್ಕ್ ಅಲ್ಲಾಡಿಸಿ ನನ್ನ ಹತ್ತಿರ ಬಂದು ಮೆಲುದನಿಯಲ್ಲಿ ಆತುರಾತುರವಾಗಿ ಒದರಿದ: "ಇದು ಆಂಥ್ರಾಕ್ಸ್.  ಈ ಮುದಿಯ ಹೀಗೆ ಮಾಡುತ್ತಾನೆ ಎಂದು ನನಗೆ ಗೊತ್ತಿತ್ತು.  ಪಾಕಡಾ ಆಸಾಮಿ."
ನಂತರ ಪ್ರಿನ್ಸಿಪಾಲರತ್ತ ತಿರುಗಿ ಗುಡುಗಿದ.
"ಏಯ್ ಮುದುಕಪ್ಪ, ಇನ್ನೊಂದ್ಸಲ ಹೂಸುಗೀಸು ಬಿಟ್ಟು ಈ ಹುಡುಗಿಯನ್ನು ಹೆದರಿಸಿ ತೊಂದರೆ ಕೊಟ್ಟೀಯೇ ಜೋಕೆ!  ಹುಟ್ಟಿಲ್ಲಾ ಅನ್ನಿಸಿಬಿಡ್ತೀನಿ."
ನನಗೆ ಸಮಾಧಾನವಾಯಿತು.  ಸಧ್ಯ ನನ್ನ ಕಡೆಯಲ್ಲೂ ಜನ ಇದ್ದಾರೆ.  ಹೆಣ್ಣುಹೆಂಗಸೆಂದು ಇವರೆಲ್ಲರೂ ಹಿಂಸಿಸುವುದು ಎಲ್ಲಾ ಕಾಲಕ್ಕೂ ನಡೆಯುವುದಿಲ್ಲ.  ಹಿಂಸಕರಿಗೆ ಪಾಠ ಕಲಿಸುವವರು ಮತ್ತೆಮತ್ತೆ ಹುಟ್ಟಿಬರುತ್ತಿರುತ್ತಾರೆ.
ಅಂದು ಇದೇ ಪ್ರಿನ್ಸಿಪಾಲರು ನನ್ನ ಸೀರೆಯನ್ನು ಸೆಳೆದಾಗ... 
ಓಹ್ ಅಂದೂ ನಾನು ಮುಟ್ಟಾಗಿದ್ದೆ.  ನನ್ನನ್ನು ಇದೇ ಸ್ಟ್ಯಾಫ್ ರೂಮಿಗೆ ಎಳೆದುಕೊಂಡು ಬಂದಿದ್ದರು.  ತಲೆಬಲಿತ ಮುದಿ ಪ್ರೊಫೆಸರುಗಳಿಂದ ಹಿಡಿದು ಮೊಲೆ ಮೀಸೆ ಮೂಡದ ಮರಿಟೈಪಿಸ್ಟುಗಳವರೆಗೆ ಎಲ್ಲರೂ ತುಂಬಿದ್ದ ಒಡ್ಡೋಲಗ ಅದು.  ಇದೇ ಈ ಪ್ರಿನ್ಸಿಪಾಲರು ಛೀಫ್ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್‌ನ ಮಾತು ಕೇಳಿ ನನ್ನ ಉಡಿಗೆ ಕೈಹಾಕಿದ್ದರು.  ನನ್ನ ಮೈಮುಚ್ಚಿದ್ದು ಒಂಟಿ ಅರಿವೆ, ಬಹಿಷ್ಠೆಯಾಗಿದ್ದುದರ ಕುರುಹು. 
ನಾನು ಅರ್ತಳಾಗಿ ಬೇಡಿದೆ.
ನನ್ನ ಐವರು ರೂಮ್‌ಮೇಟ್‌ಗಳಲ್ಲಿ ಒಬ್ಬ ಸುಪ್ರೀಮ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶ.  ಇನ್ನೊಬ್ಬ ಹೆವಿವೈಟ್ ಬಾಕ್ಸಿಂಗ್ ವಿಶ್ವಛಾಂಪಿಯನ್.  ಇನ್ನೊಬ್ಬ ಮೊನ್ನೆ ತಾನೇ ನಡೆದ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಐದು ಸ್ವರ್ಣ ಪದಕಗಳನ್ನು ಗೆದ್ದವನು.  ನಾಲ್ಕನೆಯವನು ಸುರಸುಂದರಾಂಗ, ಮಿಸ್ಟರ್ ಯೂನಿವರ್ಸ್ ಕಿರೀಟ ತೊಟ್ಟವನು.  ಕೊನೆಯವನು ಹಾರ್ವರ್ಡ್‌ನಲ್ಲಿ ಪ್ರೊಫೆಸರ್, ಮೇಧಾವಿ.  ಐವರೂ ಬಿಳೀ ಹಾಳೆಗಳನ್ನು ಹೊದ್ದುಕೊಂಡು ಗೊರಕೆ ಹೊಡೆಯುತ್ತಿದ್ದರು.  ನಾನು ಎಷ್ಟು ಕರೆದರೂ ಅವರಿಗೆ ಎಚ್ಚರವಾಗಲೇ ಇಲ್ಲ.
ನಾನು ದಿಕ್ಕೆಟ್ಟು ಅತ್ತೆ.
ಪ್ರಿನ್ಸಿಪಾಲರು ನನ್ನ ಸೀರೆಯನ್ನು ಜಗ್ಗಿ ಎಳೆದಾಡಿದರು.
ಆಗ...
ಎಲ್ಲಿಂದಲೋ ಅವತರಿಸಿಬಂದ ಆ ಮೋಡಿಗಾರ.  ಕಪ್ಪುಮೈನ ದನಗಾಹೀ ಮಸಾಯಿ ಜಾತಿಯವನು.  ಆಫ್ರಿಕಾ ಶಂಖದ್ವೀಪದ ಸೀಳಿನ ಪೂರ್ವದಂಚಿನ ನಿವಾಸಿ.  ಕೊಳಲನೂದುವ ಗಾರುಡಿಗ.  ಸ್ವಾಹಿಲಿಯಲ್ಲಿ ಉದ್ದಾಮ ಪಂಡಿತ.  ಕಪ್ಪುಕಣ್ಣುಗಳಲ್ಲಿ ತುಂಟತನ ಚಿಮ್ಮಿಸುತ್ತಾ ಕೈಎತ್ತಿದ...
ಪ್ರಿನ್ಸಿಪಾಲರು ಸೋತು ಸುಸ್ತಾಗಿ ಸೀರೆಯ ಗುಪ್ಪೆಯ ಮೇಲೆ ಕುಸಿದುಬಿದ್ದರು.
ಮತ್ತೆ...
ನಾನು ವೇಶ್ಯೆಯಂತೆ.
ಹಾಗೆಂದು ಹೀಯಾಳಿಸಿ ನನ್ನತ್ತ ಕಲ್ಲು ತೂರಿದ್ದರು ಇದೇ ಪ್ರಿನ್ಸಿಪಾಲರು ಮತ್ತವರ ವಿದ್ಯಾರ್ಥಿಗಳು.  ನಾನು ನಿಸ್ಸಹಾಯಕಳಾಗಿ ದಿಕ್ಕೆಟ್ಟು ಓಡಿದೆ.  ಅವರೆಲ್ಲಾ ಸೀಳುನಾಯಿಗಳಂತೆ ನನ್ನ ಹಿಂದೆ ಬಂದರು.
ಆಗ...
ಎದುರು ನಿಂತ ಅವನು.  ಆರಡಿಗೂ ಮೀರಿದ ಅಜಾನುಬಾಹು.  ಸದೃಢ ಮೈಕಟ್ಟಿನ, ಬಿಳುಪು ಮೈನ, ಸ್ಫುರದ್ರೂಪೀ ಯುವಕ.  ಕರುಣೆಯೇ ಸ್ನಿಗ್ಧಗೊಂಡು ಅವನ ಕಣ್ಣುಗಳಾಗಿದ್ದಂತಿತ್ತು.  ಅಂತಹ ಕರುಣೆಯ ಹೆಪ್ಪನ್ನು ಅವನು ಹಿಮಾಲಯದಿಂದ ಬಳುವಳಿಯಾಗಿ ಪಡೆದುಕೊಂಡಿದ್ದನಂತೆ. 
ಸುಂದರ ಪುಟ್ಟಗಡ್ಡದ ಅವನು ಇದೇ ಪ್ರಿನ್ಸಿಪಾಲರು ಮತ್ತವರ ವಿದ್ಯಾರ್ಥಿಗಳೆದುರು ನಿಂತು ಗಂಭೀರ ದನಿಯಲ್ಲಿ ಹೇಳಿದ್ದ:
"ನಿಮ್ಮಲ್ಲಿ ಯಾರು ಪಾಪ ಮಾಡಿಲ್ಲವೋ ಅವರು ಇವಳಿಗೆ ಮೊದಲು ಕಲ್ಲು ಹೊಡೆಯಲಿ."
ಅವರೆಲ್ಲರೂ ನಾಚಿಕೆಯಿಂದ ಮುಖ ಮುಚ್ಚಿಕೊಂಡು ಓಡಿಹೋಗಿದ್ದರು.
ಅವನ ಗಾಂಭೀರ್ಯಕ್ಕೆ ನಾನು ಮನಸೋತುಹೋಗಿದ್ದೆ.  ನನ್ನೊಳಗಿನ ಬಯಕೆಯ ಚಿಗುರು ನಿಕೋಸ್ ಕಝಾನ್‌ತ್ಸಾಕಿಸ್‌ಗೆ ಹೇಗೋ ತಿಳಿದುಹೋಗಿ ಅದನ್ನವನು ಜಗಜ್ಜಾಹೀರು ಮಾಡಿಬಿಟ್ಟ... 
ಅವನ ಜತೆ ನಾನೂ ಅಜರಾಮರಳಾದೆ, ಹೂವಿನ ಜತೆ ನಾರೂ ಸ್ವರ್ಗ ಸೇರಿದಂತೆ.
ಹೀಗೆ ಪ್ರಿನ್ಸಿಪಾಲರು ಮತ್ತವರ ಶಿಷ್ಯರುಗಳಿಂದ ನನಗೆ ಯಾವಾಗ ತೊಂದರೆಯಾದರೂ ಅವನು ಬಂದು ನನ್ನನ್ನು ಕಾಪಾಡಿದ್ದ.
ಹಾಗೆಯೇ ಈಗ ಸ್ಯಾಮ್ ಅವತರಿಸಿದ್ದಾನೆ.  ನಾನವನ ಮಗ್ಗುಲಿಗೆ ಸರಿದೆ.
"ಅವನ ಸಹಾಯ ತೆಗೆದುಕೊಳ್ಳಬೇಡ ಮಗಳೇ.  ಅದರಿಂದ ಅನಾಹುತವಾಗುತ್ತದೆ."  ಮಮ್ಮಿ ಎಚ್ಚರಿಸಿದಳು.
"ಯಾಕೆ?"  ಕೇಳಿದೆ.
"ನೋಡು ಮಗಳೇ, ಹಿಂದಿನ ಆ ಕಪ್ಪು ಮಸಾಯಿಯ ಹಾಗೆ, ಆ ಪುಟ್ಟ ಕಂದುಗಪ್ಪು ಗಡ್ಡದ ಸುಂದರಾಂಗನ ಹಾಗೆ ಈ ಸ್ಯಾಮ್ ಇಲ್ಲ.  ಅವರಿಬ್ಬರಲ್ಲಿ ಒಬ್ಬ ದೇವರು.  ಇನ್ನೊಬ್ಬ ದೇವಕುಮಾರ.  ಇವನೋ ಹುಳಿ ಉಪ್ಪು ತುಂಬಿದ ಮೈನ ನರಮನುಷ್ಯ.  ಇವನು ಅವರಷ್ಟು ಜ್ಞಾನಿಯೂ ಅಲ್ಲ, ಪರೋಪಕಾರಿಯೂ ಅಲ್ಲ.  ಒಂದುರೀತಿಯಲ್ಲಿ ಹುಟ್ಟಾ ಸ್ವಾರ್ಥಸಾಧಕ.  ತನ್ನ ಬೇಳೆ ಬೇಯಿಸಿಕೊಳ್ಳಲು ಇಲ್ಲಿಗೆ ಓಡಿಬಂದಿದ್ದಾನೆ ಅಷ್ಟೇ.  ಅದಕ್ಕೆ ಅವಕಾಶ ಕೊಡಬೇಡ.  ಇದು ನಿನ್ನೊಳಗಿನ ದ್ವಂದ್ವ.  ನಿನ್ನ ಅಂತರಾಳದ ಸಮಸ್ಯೆ.  ನೀನೇ ಬಗೆಹರಿಸಿಕೊಳ್ಳಬೇಕು.  ಇವನ ಸಹಾಯ ತೆಗೆದುಕೊಂಡರೆ ಸರ್ವನಾಶ ಖಂಡಿತ.  ಎಲ್ಲ ಮುಗಿದು ಇವನು ಹೊರಡುವ ಕಾಲಕ್ಕೆ ನೀನು ಬಟಾಬಯಲಿನಲ್ಲಿ ಬೆತ್ತಲೆಯಾಗಿ ನಿಂತಿರುತ್ತೀ.  ನಿನಗೆ ನಂಬಿಕೆಯಾಗದಿದ್ದರೆ ಅಲ್ಲಿ ನೋಡು."  ಬಾಗಿಲಿನಾಚೆ ಕೈಮಾಡಿದಳು ಮಮ್ಮಿ.
ಅತ್ತ ನೋಡಿದೆ.
ಅಲ್ಲಿ...
ಸ್ಯಾಮ್‌ನ ಶಿಶ್ನ ಗಗನದೆತ್ತರಕ್ಕೆ ಬೆಳೆದು ನಿಂತಿತ್ತು.  ತನ್ನನ್ನು ಅಡಗಿಸಲು ಪ್ರಯತ್ನಿಸುತ್ತಿದ್ದ ಕೆಂಪು, ಹಳದೀ ಮತ್ತು ಹಸಿರು ಪೊದೆಗಳಿಗೆ ಸವಾಲೆಸೆಯುವಂತೆ ಮಲೆತು ತೊನೆದಾಡುತ್ತಿತ್ತು.
"ಅದನ್ನು ಸಂಭಾಳಿಸಲು ನನ್ನಿಂದಲೇ ಆಗಲಿಲ್ಲ.  ಇನ್ನು ನೀನು ಏನುತಾನೆ ಮಾಡೀಯೆನನ್ನ ಮಾತು ಕೇಳಿ ಇವನನ್ನು ಅಟ್ಟು.  ನಾನು ಇವನನ್ನು ನಿನಗಿಂತಾ ಚೆನ್ನಾಗಿ ಬಲ್ಲೆ."
ನನ್ನ ಕಣ್ಣಮುಂದೆ ಭೂತ-ಭವಿಷ್ಯದ ಸ್ಪಟಿಕ ಅಲ್ಲಾಡಿಸಿದ ಮಮ್ಮಿ ಸ್ಯಾಮ್‌ನ ಬೃಹದಾಕಾರದ ಶಿಶ್ನದತ್ತ ಬೆರಳು ಮಾಡಿ ಹೇಳಿದಳು: "ಸ್ವಲ್ಪ ಒಳಸೇರಲು ಇದಕ್ಕೆ ಅವಕಾಶ ಕೊಟ್ಟರೆ ಸಾಕು ಇದು ಹಿಮಾಲಯಕ್ಕೇ ಭೈರಿಗೆ ಹೊಡೆಯುತ್ತದೆ.  ನೀನು ನೋಡುನೋಡುತ್ತಿರುವಂತೇ ಈ ಕಡೆಯ ಗುಡಿಗುಂಡಾರ ಮಸೀದಿಗಳಲ್ಲೆಲ್ಲಾ ಇದು ಪಟ್ಟಾಗಿ ಕುಳಿತುಬಿಡುತ್ತದೆ.  ಭಾನುವಾರದ ಬೆಳಗುಗಳಲ್ಲಿ ಬಿಳಿಯುಡುಗೆಯ ಜಗದ್ಗುರುಗಳೆಲ್ಲರೂ ಆದಿಯಲ್ಲಿ ಶಿವಲಿಂಗವಿತ್ತು.  ಮೊದಮೊದಲು ಅದು ಜಗಮಗ ಹೊಳೆಯುತ್ತಿತ್ತು.  ಆಮೇಲೆ ಮೂಡಿದ ಅರ್ಧಚಂದ್ರನ ಮಾಸಲು ಬೆಳಕಿನಲ್ಲಿ ಅದು ಮಂಕಾಗಿ ಕಾಣತೊಡಗಿತು.  ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಲಾಭ ಎಂಬಂತೆ ಸ್ಯಾಮ್‌ನ ಲಿಂಗ ಧುತ್ತನೆ ಎದ್ದುಬಂದು ನೆಲಮುಗಿಲುಗಳಿಗೆ ಸೇತುವೆಯಾಗಿ ನಿಂತಿತು ಎಂದು ಬೋಧಿಸುತ್ತಾರೆ.  ಮಕ್ಕಳೆಲ್ಲರೂ ಶಿವಲಿಂಗ ಹೋಗಿ ಸ್ಯಾಮ್‌ಲಿಂಗ ಬಂತು ಡುಂ ಡುಂ ಡುಂ ಎಂದು ಹಾಡತೊಡಗುತ್ತಾರೆ.  ಮುಂದೊಂದು ದಿನ ಅದೇ ಈ ನಾಡಿನ ರಾಷ್ಟ್ರಗೀತೆಯಾಗುತ್ತದೆ."
ನನಗೆ ಏನು ಮಾಡಲೂ ತೋಚಲಿಲ್ಲ.
ಅಷ್ಟರಲ್ಲಿ ನನ್ನ ಸಮಸ್ಯೆಗೆ ಮಂಗಳ ಹಾಡುವಂತೆ ನೆರೆದಿದ್ದ ಜನಸಮೂಹದಲ್ಲಿ ಅರ್ಧ ಪ್ರಿನ್ಸಿಪಾಲರ ಕಡೆಗೂ ಇನ್ನರ್ಧ ಸ್ಯಾಮ್‌ನ ಕಡೆಗೂ ಸೇರಿ ಹೊಡೆದಾಡತೊಡಗಿದರು.  ಅವನ ಗಡ್ಡವನ್ನು ಇವನು ಕಿತ್ತ.  ಇವನ ಟೋಪಿಯನ್ನು ಅವನು ಹರಿದ.
"ಥತ್ ನನಗೆ ಮೊದಲೇ ಗೊತ್ತಿತ್ತು ಇವಳಿಂದಾಗಿ ಹೀಗೆಲ್ಲಾ ಆಗುತ್ತದೆ ಅಂತ."  ಡ್ಯಾಡಿ ನಿರಾಶೆಯಿಂದ ಹೇಳಿ ಕಣ್ಣು ಮುಚ್ಚಿದರು.

*     *     *

೯.  ಒಂದು ಹೊಚ್ಚಹೊಸ ಒಡಂಬಡಿಕೆ
ನಾನು ಓಡತೊಡಗಿದೆ.
ಕಾಲೇಜಿನ ಗೇಟನ್ನು ಧಢಾರನೆ ನೂಕಿ ಒಳನುಗ್ಗಿದೆ.  ನನ್ನ ಕ್ಲಾಸ್‌ರೂಮಿನ ಬಾಗಿಲು ವಿಶಾಲವಾಗಿ ತೆರೆದಿತ್ತು.  ಎಡವಿ ಬೀಳುವುದನ್ನೂ ಲೆಕ್ಕಿಸದೇ ಹೊಸ್ತಿಲು ದಾಟಿದೆ.
ಬೋರ್ಡಿನ ಮೇಲೆ ಏನೋ ಬರೆಯುತ್ತಿದ್ದ ಗಿಣಿ ನನ್ನ ಕಡೆ ತಿರುಗಿ ನಸುನಕ್ಕಿತು.  "ಬಾ ನಿನ್ನನ್ನೇ ಕಾಯುತ್ತಿದ್ದೆವು" ಅಂದಿತು.
ನಾನು ನಸುನಾಚಿ ನನ್ನ ಸ್ಥಳದಲ್ಲಿ ಹೋಗಿ ಕುಳಿತೆ.
ಗಿಣಿ ರಾಜಕಾರಣಿಯ ಥರಾ ಡ್ರೆಸ್ ಮಾಡಿಕೊಂಡಿತ್ತು.  ಬಿಳೀ ಧೋತರ ಉಟ್ಟುಕೊಂಡಿತ್ತು.  ಬಿಳಿಯದೇ ಶರ್ಟು.  ಮೇಲೆ ನೆಹರೂ ಕೋಟು.  ತಲೆಯಲ್ಲಿ ನೆಹರೂದೋ ಗಾಂಧಿಯದೋ ಒಂದು ಟೋಪಿ.
ಬೋರ್ಡಿನ ಮೇಲೆ ಏನೇನೋ ಸಮೀಕರಣಗಳನ್ನು ಬರೆದು ಗಿಣಿ ನಮ್ಮ ಕಡೆ ತಿರುಗಿ ಪಾಠ ಹೇಳತೊಡಗಿತು.
"ನೋಡ್ರೆಪಾ, ಮೇಲಿನ ಕೇಸರಿಗೂ ಕೆಳಗಿನ ಹಸಿರಿಗೂ ಘರ್ಷಣೆ ತಪ್ಪಿಸಲು ನಡುವಿನ ಬಿಳಿ ಸದಾ ಶ್ರಮಿಸುತ್ತಿರುತ್ತದೆ.  ಆದರೆ ತೊಂದರೆ ಇರುವುದು ಈ ಚಕ್ರದಲ್ಲೇ.  ಚಕ್ರ ಸದಾ ಸುತ್ತುತ್ತಿರುತ್ತದೆ.  ಏನನ್ನೂ ಇದ್ದಹಾಗೇ ಇರಗೊಡುವುದಿಲ್ಲ.  ಮೇಲಿನದನ್ನು ಕೆಳಕ್ಕೆ ತಳ್ಳಿ, ಕೆಳಗಿನದನ್ನು ಮೇಲಕ್ಕೆತ್ತಿ ನಿರಂತರವಾಗಿ ಗೊಂದಲಗಳನ್ನು ಸೃಷ್ಟಿಸುತ್ತಿರುತ್ತದೆ.  ಎಲ್ಲವನ್ನೂ ಕಲಸುಮೇಲೋಗರ ಮಾಡಿಬಿಡುತ್ತದೆ.  ಇದೇ ಬಂದಿರೋದು ತಾಪತ್ರಯ ನೋಡಿ..."
"ಚಕ್ರವನ್ನು ಮುರಿಯಿರಿ."  ಎಲ್ಲರೂ ಸಾಮೂಹಿಕವಾಗಿ ಧ್ವನಿ-ಪ್ರತಿಧ್ವನಿಸಿದರು.  ಮುಷ್ಠಿಗಳನ್ನು ಮೇಲೆತ್ತಿ ಬೀದಿಬೀದಿಗಳಲ್ಲಿ ಕುಣಿದರು. 
ಹದಿನೆಂಟು ದಿನಗಳವರೆಗೆ ಘನಘೋರ ಕಾಳಗ ನಡೆಯಿತು.  ಅದು ಮುಗಿದು ಹನ್ನೊಂದು ಪ್ಲಸ್ ಏಳು ಆಕ್ಷೋಹಿಣಿ ಭೇಧಮೂಲ ನಂಬಿಕೆಗಳು ಸತ್ತು ಮಲಗಿದಾಗ ನಾನೂ ನನ್ನ ಐವರು ರೂಮ್‌ಮೇಟ್‌ಗಳೂ ಗರಬಡಿದವರಂತೆ ನಿಂತೆವು.  ನಾವು ಕಾಣುತ್ತಿರುವುದು ಸತ್ಯವೋ ಮಿಥ್ಯವೋ ನನಗಾಕ್ಷಣ ತಿಳಿಯಲೇ ಇಲ್ಲ.  ನನ್ನ ಕಣ್ಣುಗಳು ತೇವಗೊಂಡಿದ್ದವು.
ನಾನು ಅಳತೊಡಗಿದೆ...
ಅಳುತ್ತಲೇ ಇದ್ದೆ, ನಲವತ್ತು ದಿನಗಳು ನಲವತ್ತು ರಾತ್ರಿಗಳು ಪೂರ್ಣಗೊಳ್ಳುವವರೆಗೆ.  ಕಣ್ಣ ತುಂಬಾ ನೀರು.  ಎಲ್ಲೆಲ್ಲೂ ಪ್ರವಾಹ.
ಹಳೆಯದೆಲ್ಲಾ ತೊಳೆದುಹೋಗಿ ಇತಿಹಾಸಪೂರ್ವದ ಕತೆಯಾಯಿತು. 
ಎಲ್ಲೆಲ್ಲೂ ಹೊಸನೀರು.
ತ್ರಿವರ್ಣಧ್ವಜ ದಿಕ್ಕೆಟ್ಟು ತೇಲುತ್ತಿತ್ತು.  ಉಳಿದಿದ್ದ ಜೀವಜೋಡಿಗಳಲ್ಲೊಂದೊಂದನ್ನು ಮಡಿಲಿಗೆ ತುಂಬಿಕೊಂಡು ತ್ರಿವರ್ಣಧ್ವಜದ ಮೇಲೆ ಕುಳಿತೆ.  ಬಂದಬಂದವರಿಗೆಲ್ಲಾ ಜಾಗ ಮಾಡಿಕೊಡುತ್ತಾ ಅದು ಪಶ್ಚಿಮೋತ್ತರದ ಪರ್ವತಗೋಡೆಯವರೆಗೆ ಆವರಿಸಿಕೊಂಡುಬಿಟ್ಟಿತು.
ನಲವತ್ತೊಂದನೆಯ ರಾತ್ರಿ ಮಳೆ ನಿಂತಿತು.
ಸ್ವಚ್ಚ ಆಗಸದಲ್ಲಿ ಚಂದ್ರ ನಗುತ್ತಿದ್ದ.
ನಮ್ಮ ನಡುವೆ ಕತ್ತಲಿತ್ತು. 
"ಬೆಳಕ ಕೊಡು."  ಚಂದ್ರನನ್ನು ಕೇಳಿದೆ.  ಸೆರಗೊಡ್ಡಿ ಬೇಡಿದೆ.  ಅವನು ಕಿಲಿಕಿಲಿ ನಗುತ್ತಾ ಓಡಿಬಂದು ಕೇಸರಿಗೂ ಹಸಿರಿಗೂ ನಡುವೆ ಇದ್ದ ಖಾಲೀ ಬಿಳಿಯಲ್ಲಿ ಪಟ್ಟಾಗಿ ಕೂತುಬಿಟ್ಟ.
ನನಗೆ ಸಮಾಧಾನವಾಯಿತು.
ಈಗ ಮೇಲೆತ್ತಿ ಕೆಳಗೊಗೆದು ಗೋಜಲುಗಟ್ಟಿಸುವ ಚಕ್ರ ಇರಲಿಲ್ಲ.  ಅದರ ಜಾಗದಲ್ಲಿ ಚಂದ್ರ- ನಿಶ್ಚಲ, ಪ್ರಶಾಂತ.
ಇನ್ನು ಯಾವ ತೊಂದರೆಯೂ ಇಲ್ಲ.
ಬಾವುಟವನ್ನು ಮೇಲೆತ್ತಿ ಹಿಡಿದು ಬಲೂಚಿಸ್ತಾನದಿಂದ ಬರ್ಮಾದವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕುಣಿಕುಣಿದಾಡುತ್ತಾ ಒಡಾಡಿದೆ.
ಎಲ್ಲೆಲ್ಲಿಯೂ ಬಾವುಟವೋ ಬಾವುಟ.
ಹಾಲುಗಲ್ಲದ ಪುಟ್ಟ ಮಕ್ಕಳು ಶಾಲೆಯಲ್ಲಿ ಪುಸ್ತಕಗಳನ್ನು ತೆರೆದು ಓದಲಾರಂಭಿಸಿದರು: "ನಮ್ಮ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳಾಗಿ ವಿಭಾಗಿಸಬಹುದು.  ಮೊದಲನೆಯದು ಹಿಂದೂಕುಷ್, ಕಾರಾಕೊರಂ, ಹಿಮಾಲಯ ಪರ್ವತಶ್ರೇಣಿ; ಎರಡನೆಯದು ಸಿಂಧೂ ಗಂಗಾ ನದಿಗಳ ಬಯಲು; ಮೂ..."
*     *     *

೧೦.  ಅಗೋ... ಅಲ್ಲಿ ಓಯಸಿಸ್!
"ನಿನಗೀಗ ಪೂರ್ತಿ ಗುಣವಾಗಿದೆ ಮಗಳೇ.  ನಾಳೆಯಿಂದ ನೀನು ಆರಾಮವಾಗಿ ಕಾಲೇಜಿಗೆ ಹೋಗಿಬರಬಹುದು.  ಪ್ರಿನ್ಸಿಪಾಲರಿಗೆ ಹೆದರುವಂತಹದೇನೂ ಇಲ್ಲ.  ಅವರಿಗೆ ಹೊಸಬಟ್ಟೆಗಳನ್ನು ಹೊಲಿಸಿಕೊಟ್ಟಿದ್ದೇನೆ.  ಈಗವರು ಮೈತುಂಬ ಬಟ್ಟೆ ಹಾಕಿಕೊಳ್ಳುತ್ತಾರೆ."  ಮಮ್ಮಿ ಪ್ರೀತಿಯಿಂದ ನುಡಿದು ತಲೆ ಸವರಿದಳು.
ನಾನು ನಿಡಿದಾಗಿ ಉಸಿರ್ಗರೆದೆ.
ಮಮ್ಮಿ ಟ್ರಾನ್ಸಿಸ್ಟರ್ ಆನ್ ಮಾಡಿದಳು.  ಬೆಳಗಿನ ವಾರ್ತೆಗಳು ಹರಿದುಬರುತ್ತಿದ್ದವು.
"...ನಿನ್ನೆ ಸಂಜೆ ಪ್ರಧಾನ ಮಂತ್ರಿ ಶ್ರೀರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ರಕ್ಷಣಾ ಮಂತ್ರಿ ಜನರಲ್ ಜಹರುದ್ದೀನ್ ಬಾಬರ್ ಅವರ ಉಪಾಧ್ಯಕ್ಷತೆಯಲ್ಲಿ ನಡೆದ ಮಹತ್ವದ ಮಂತ್ರಿಮಂಡಳದ ಸಭೆಯಲ್ಲಿ ಐತಿಹಾಸಿಕ ನಿರ್ಣಯವೊಂದನ್ನು ಕೈಗೊಳ್ಳಲಾಯಿತು.  ಅದರಂತೆ ರಾಜಧಾನಿಯನ್ನು ದಿಲ್ಲಿಯಿಂದ ದೌಲತಾಬಾದಿಗೆ ಬದಲಾಯಿಸುವುದರ ಬಗೆಗಿನ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ ಮತ್ತು ರಾಜಧಾನಿಯನ್ನು ಅಯೋಧ್ಯೆಗೆ ವರ್ಗಾಯಿಸುವ ಹೊಸ ತೀರ್ಮಾನವನ್ನು ಕೈಗೊಳ್ಳಲಾಗಿದೆ.  ನೂತನ ರಾಜಧಾನಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಸಂಸತ್ ಭವನಕ್ಕೆ ಮೂರು ಗುಮ್ಮಟಗಳಿರುತ್ತವೆ..."
"ನಿನಗೆ ಇನ್ನೂ ಒಂದು ವಿಷಯ ಗೊತ್ತೇ?"  ಮಮ್ಮಿ ಹತ್ತಿರ ಸರಿದು ಹೇಳಿದಳು: "ಮುಂದಿನ ತಿಂಗಳು ನ್ಯೂಯಾರ್ಕ್ ಮತ್ತು ಜಿನೀವಾಗಳಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ರಿಪಬ್ಲಿಕ್ ಆಫ್ ಸೌತ್ ಏಶಿಯಾದ ತಂಡವನ್ನು ಪ್ರಕಟಿಸಲಾಗಿದೆ.  ನಾಯಕ ಅಶೋಕ, ಉಪನಾಯಕ ಅಕ್ಬರ್, ವಿಕೆಟ್ ಕೀಪರ್ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹದಿನಾಲ್ಕು ಆಟಗಾರರ ಪಟ್ಟಿ ಈ ರೀತಿ ಇದೆ..."
"ಟೀಮ್ ಮ್ಯಾನೇಜರ್ ಯಾರು ಮಮ್ಮಿ?" ಕೇಳಿದೆ.
"ಮಹಮದ್ ಆಲಿ ಜಿನ್ನಾ."  ಮಮ್ಮಿ ಹೇಳಿದಳು.
"ಡಾಕ್ಟರ್?"
"ಓ ಅದು ಡಾ. ಎಂ. ಕೆ. ಗಾಂಧಿ.  ಈ ವಿಷನ್ ೨೦೨೦ ಪುಸ್ತಕದಲ್ಲಿ ಎಲ್ಲ ವಿವರಗಳೂ ಇವೆ.  ಓದಿಕೋ" ಎನ್ನುತ್ತಾ ಮಮ್ಮಿ ಪುಸ್ತಕವೊಂದನ್ನು ನನ್ನ ಕೈಲಿತ್ತು ನಸುನಕ್ಕಳು.
ಅವಳ ಮುಖದಲ್ಲಿ ಅಂತಹ ಸಂತೃಪ್ತಿಯ ಮಂದಹಾಸವನ್ನು ಕಂಡು ಶತಮಾನಗಳೇ ಕಳೆದುಹೋಗಿದ್ದವು.

--***೦೦೦***--
ಫೆಬ್ರವರಿ ೧೯೮೭ - ಜುಲೈ ೨೦೦೨


No comments:

Post a Comment